ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೇಶ ಈಡೇರಲಿ

Last Updated 14 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಸರ್ಕಾರಿ ಸ್ವಾಮ್ಯದ ಪ್ರಮುಖ ಉದ್ದಿಮೆಗಳಾದ ಕೋಲ್‌ ಇಂಡಿಯಾ (ಸಿಐಎಲ್‌), ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಹಾಗೂ ರಾಷ್ಟ್ರೀಯ ಜಲ ವಿದ್ಯುತ್ ನಿಗಮ­ಗಳಲ್ಲಿನ (ಎನ್‌ಎಚ್‌ಪಿಸಿ) ತನ್ನ ಪಾಲು ಬಂಡವಾಳ ತಗ್ಗಿಸಲು ಆರ್ಥಿಕ ವ್ಯವ­ಹಾರಗಳ ಕೇಂದ್ರ ಸಚಿವ ಸಂಪುಟ ಸಮಿತಿ ಮಹತ್ವದ ನಿರ್ಧಾರ ಕೈಗೊಂಡಿದೆ. ಗರಿಷ್ಠ ಪ್ರಮಾಣದ ಬಂಡವಾಳ ಸಂಗ್ರ­ಹಿಸುವ ಷೇರು ವಿಕ್ರಯ ನಿರ್ಧಾರ ಇದಾಗಿದೆ. 

ಒಟ್ಟಾರೆ ₨ 43 ಸಾವಿರ ಕೋಟಿ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿದೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಷೇರು ವಿಕ್ರ­ಯದ ಮೂಲಕ ₨ 43,425 ಕೋಟಿ ಸಂಗ್ರಹಿಸುವ ಸರ್ಕಾರದ ಬಜೆಟ್‌ ಗುರಿಗೆ ಪೂರಕವಾಗಿರಲಿದೆ. ಸಂಗ್ರಹವಾಗುವ ಬಂಡ­ವಾ­ಳ­ವನ್ನು ಸರ್ಕಾರ ಯಾವ ಉದ್ದೇಶಕ್ಕೆ ಬಳಸಿ­ಕೊಳ್ಳ­ಲಿದೆ ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ. ಷೇರು ಮಾರಾಟದ ಮೂಲಕ ಬರುವ ಬಂಡ­ವಾಳ­ವನ್ನು ಈ ಕೇಂದ್ರೋ­ದ್ಯಮಗಳ ವಿಸ್ತರಣೆಗೆ, ಸಂಶೋಧನಾ ಅಗತ್ಯಗಳಿಗೆ ಬಳಸಿಕೊಳ್ಳಬೇಕು ಎನ್ನುವುದು ಅಪೇಕ್ಷ­ಣೀಯ. ಆದರೆ, ಅಂತಹ ಉದ್ದೇಶ ಸರ್ಕಾರಕ್ಕೆ ಇರುವಂತೆ ಕಾಣು­ವುದಿಲ್ಲ. ಈ ವರಮಾನವು ಕೇಂದ್ರ ಸರ್ಕಾರದ ವಿತ್ತೀಯ ಕೊರತೆ ಪ್ರಮಾಣ ತಗ್ಗಿಸಲು ಬಳಕೆಯಾಗುವ ಸಾಧ್ಯತೆಯೇ ಹೆಚ್ಚು.

ಆರ್ಥಿಕ ಸುಧಾರಣಾ ಕ್ರಮಗಳನ್ನು ಅರೆಮನಸ್ಸಿನಿಂದಲೇ ಜಾರಿಗೊಳಿ­ಸಲು ಕ್ರಮ ಕೈಗೊಂಡ ದಿನದಿಂದಲೇ ಅನೇಕ ಕಾರಣಗಳಿಗೆ ಷೇರು ವಿಕ್ರಯದ ಬಗ್ಗೆ ಅಪಸ್ವರ ಕೇಳಿ ಬರುತ್ತಲೇ ಇದೆ. ಸರ್ಕಾರದ ಈ ನಿರ್ಧಾರವನ್ನೂ ಎಡ ಮತ್ತು ಬಲಪಂಥೀಯ ಕಾರ್ಮಿಕ ಸಂಘ­ಟನೆಗಳು ಟೀಕಿಸಿವೆ. ಕೋಲ್‌ ಇಂಡಿಯಾ ಲಿಮಿಟೆಡ್‌ನ ಶೇ 10ರಷ್ಟು, ಎನ್‌ಎಚ್‌ಪಿಸಿಯ ಶೇ 11.6 ಮತ್ತು ಒಎನ್‌ಜಿಸಿಯ ಶೇ 5ರಷ್ಟು ಷೇರು ವಿಕ್ರಯದಿಂದ ಈ ಉದ್ದಿಮೆಗಳಲ್ಲಿನ ಸರ್ಕಾರದ ಪಾಲು ಬಂಡವಾಳವು ಕ್ರಮವಾಗಿ ಶೇ 74.60, ಶೇ 79.65 ಮತ್ತು ಶೇ 68.94ಕ್ಕೆ ಇಳಿಯಲಿದೆ. ಸರ್ಕಾರಿ ಸ್ವಾಮ್ಯದ ಉದ್ದಿಮೆ­­ಗಳಲ್ಲಿ ಸಾರ್ವಜನಿಕರ ಪಾಲು ಬಂಡ­ವಾಳವು ಶೇ 25ರಷ್ಟು ಇರಬೇಕು ಎನ್ನುವ ಭಾರ­ತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ನಿರ್ದೇ­ಶನಕ್ಕೆ ಈ ನಿರ್ಧಾರ ಪೂರಕ­ವಾಗಿಯೇ ಇದೆ. ಆದರೆ, ಸಾರ್ವಜನಿಕರು ಷೇರು ಖರೀ­ದಿಸಲು ಅವಕಾಶ ಇರುವ ಇಂತಹ ಕೊಡುಗೆಗಳಲ್ಲಿ ಜನಸಾಮಾನ್ಯರೂ ಭಾಗಿ­ಯಾದರೆ ಮಾತ್ರ ಸೆಬಿ ಆಶಯ ನಿಜವಾಗಲಿದೆ.

ಕೇಂದ್ರೋದ್ಯ­ಮಗಳ ಷೇರು ಮಾರಾಟ ಕೊಡು­ಗೆಯ  ಸಂದರ್ಭಗಳಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳೇ ಲಾಭ ಬಾಚಿ­ಕೊಳ್ಳುವ ಪ್ರವೃತ್ತಿಗೆ ಸರ್ಕಾರ ಪ್ರಾಮಾಣಿಕವಾಗಿ ಕಡಿವಾಣ ಹಾಕಿದರೆ ಮಾತ್ರ ಸೆಬಿ ಉದ್ದೇಶ ಈಡೇರಲಿದೆ. ಸತತ ಐದು ಹಣಕಾಸು ವರ್ಷಗಳಲ್ಲಿ ಷೇರು ವಿಕ್ರ­ಯದ ಗುರಿ ಈಡೇರಿಸಲು ಸಾಧ್ಯ­ವಾಗಿಲ್ಲ. ಈ ಬಾರಿಯೂ ಇತಿ­ಹಾಸ ಮರುಕಳಿಸ­ದಂತೆ ಸರ್ಕಾರ ಎಚ್ಚರ ­ವಹಿಸಿದರೆ ಮಾತ್ರ ಷೇರು ವಿಕ್ರ­ಯದ ನಿಜವಾದ ಉದ್ದೇಶ ಈಡೇರು­ವುದರ ಜತೆಗೆ, ವಿತ್ತೀಯ ಕೊರತೆಯ ಪ್ರಮಾಣವೂ ಗಮನಾರ್ಹ­ವಾಗಿ ತಗ್ಗೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT