ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿಗಳ ಕೈಯಲ್ಲಿ ದೇಶದ ಸಂಪತ್ತು

Last Updated 6 ಅಕ್ಟೋಬರ್ 2015, 9:54 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ
ತುಮಕೂರು: ಆರ್ಥಿಕ ಉದಾರೀಕರಣದಿಂದಾಗಿ ದೇಶದ ಸಂಪತ್ತು ಕೆಲವೇ ವ್ಯಕ್ತಿಗಳ ಕೈ ಸೇರಿದೆ ಎಂದು ಅಡ್ವೊಕೇಟ್‌ ಜನರಲ್‌ ಪ್ರೊ.ರವಿವರ್ಮ ಕುಮಾರ್‌ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕಲಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಸೋಮವಾರ ಆಯೋಜಿಸಿದ್ದ ‘ಗಾಂಧಿ ತತ್ವಗಳು ಮತ್ತು ಭಾರತದಲ್ಲಿ ಇತ್ತೀಚಿನ ಬೆಳೆವಣಿಗೆ’ ಕುರಿತ ಸಮ್ಮೇಳನದಲ್ಲಿ ಮಾತನಾಡಿದರು.

1991ರಲ್ಲಿ ಜಾರಿಗೆ ತಂದ ಆರ್ಥಿಕ ಉದಾರೀಕರಣ ದೇಶದ ಎಲ್ಲ ಆರ್ಥಿಕ ನೀತಿಗಳನ್ನು ಬುಡಮೇಲು ಮಾಡಿದೆ. ಅಂಬಾನಿ, ಅಜೀಂ ಪ್ರೇಮ್‌ಜೀ, ನಾರಾಯಣಮೂರ್ತಿ ಅವರಂಥ ಉದ್ಯಮಿಗಳ ಬಳಿ ದೇಶದ ಸಂಪತ್ತು ಸೇರಿಕೊಂಡಿದೆ ಎಂದು ಹೇಳಿದರು.

ದೇಶದಲ್ಲಿ ಖನಿಜ ಸಂಪತ್ತು ಲೂಟಿಯಾಗುತ್ತಿದೆ. ತೆರಿಗೆ, ರಾಜಧನ ರೂಪದಲ್ಲಿ ಕನಿಷ್ಠ ಹಣ ಪಾವತಿಸಿ, ಖನಿಜ ಸಂಪತ್ತು ಲೂಟಿ ಮಾಡಲಾಗುತ್ತಿದೆ. ರಾಜ್ಯದ ಖನಿಜ ಸಂಪತ್ತು ಬೇರೆ ರಾಜ್ಯಗಳಿಗೆ ಹೋಗದಂತೆ ತಡೆಯಬೇಕು. ತುಮಕೂರಿನಲ್ಲಿರುವ ಖನಿಜ ಸಂಪತ್ತನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಮುಂದಿನ 10 ವರ್ಷಗಳ ಕಾಲ ತೆರಿಗೆ ಪಾವತಿಸದೇ ಜೀವನ ನಡೆಸಬಹುದು. ಶಿಕ್ಷಣ ಸಂಸ್ಥೆಗಳೂ ಉಚಿತವಾಗಿ ಶಿಕ್ಷಣ ನೀಡಬಹುದು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಮಕ್ಕಳನ್ನು ಇಂಗ್ಲಿಷ್‌ ಶಾಲೆಗೆ ಕಳುಹಿಸುವ ಪರಿಪಾಠ ಬೆಳೆಯುತ್ತಿದೆ. ಬಂಡವಾಳಶಾಹಿಗಳು ಶಿಕ್ಷಣವನ್ನು ಖಾಸಗೀಕರಣ ಮಾಡಲು ವ್ಯವಸ್ಥಿತ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ದಲಿತರು, ಹಿಂದುಳಿದವರಿಗೆ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಕೇವಲ 10 ವರ್ಷ ಮಾತ್ರ ಮೀಸಲಾತಿ ಸೌಲಭ್ಯ ಒದಗಿಸಲಾಗಿತ್ತು. ಆದರೆ ಅದು ಇನ್ನೂ ಮುಂದುವರಿದಿದೆ ಎಂದು ಕೆಲವರು ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಿದ್ದಾರೆ. ಸಂವಿಧಾನದ 15(4) ಪರಿಚ್ಛೇದದಲ್ಲಿ ಶಿಕ್ಷಣ, ಪರಿಚ್ಛೇದ 14(4)ರಲ್ಲಿ ಉದ್ಯೋಗ ಕ್ಷೇತ್ರಕ್ಕೆ ಯಾವುದೇ ಕಾಲಮಿತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದ 27 ಸಾವಿರ ಗ್ರಾಮಗಳಲ್ಲಿ ಇಂದಿಗೂ ಅಸ್ಪೃಶ್ಯತೆ ತಾಂಡವವಾಡುತ್ತಿದೆ. 29 ಸಾವಿರ ಹಳ್ಳಿಗಳಲ್ಲಿ ದಲಿತರು ಪ್ರತ್ಯೇಕವಾಗಿ, ಊರಿನಿಂದ ಆಚೆ ವಾಸವಾಗಿದ್ದಾರೆ. ಸಂವಿಧಾನ ಜಾರಿಯಾಗಿ 65 ವರ್ಷವಾದರೂ ಅಸ್ಪೃಶ್ಯತೆ ಪೂರ್ಣ ಪ್ರಮಾಣದಲ್ಲಿ ನಿಷೇಧವಾಗಿಲ್ಲ. ಹೀಗಿರುವಾಗ ದಲಿತ, ಹಿಂದುಳಿದವರಿಗೆ ಮೀಸಲಾತಿ ನಿಲ್ಲಿಸಬೇಕು ಎಂಬ ಹೇಳಿಕೆಗಳು ಅರ್ಥಹೀನ ಎಂದರು.

ಅಪ್ರಬುದ್ಧ, ಅಸಂಬದ್ಧ ಶಿಕ್ಷಣ ಮಾಧ್ಯಮ ಅಳವಡಿಸಿಕೊಳ್ಳುವ ಮೂಲಕ ದೇಶಕ್ಕೆ ದ್ರೋಹ ಮಾಡುತ್ತಿದ್ದೇವೆ. ಗಾಂಧಿ ತತ್ವಗಳಿಗೆ ಅವಮಾನ ಮಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ವೃತ್ತಿಶಿಕ್ಷಣವೂ ವ್ಯಾಪಾರೀಕರಣವಾಗುತ್ತಿದೆ. ವೈದ್ಯಕೀಯ ಕಾಲೇಜು ಸ್ಥಾಪನೆ ಮೂಲಭೂತ ಹಕ್ಕು ಎಂದು ಪರಿಗಣಿಸಲಾಗಿದೆ. ಆದರೆ ಮೆಡಿಕಲ್‌ ಓದುವುದು ಮೂಲಭೂತ ಹಕ್ಕಾಗದಿರುವುದು ದುರಂತ. ವೃತ್ತಿಶಿಕ್ಷಣದ ವ್ಯಾಪಾರೀಕರಣದಿಂದ ಇಂದು ದೇಶದ ವೈದ್ಯರು ಹೊರದೇಶಗಳಿಗೆ ಹೋಗಿ ಸೇವೆ ಸಲ್ಲಿಸುವಂತಾಗಿದೆ ಎಂದರು.

ಗಾಂಧೀಜಿ ಹಿಂದೂ ಧರ್ಮ, ಜಾತೀಯತೆ ಪೋಷಕ ಎಂದು ಬಿಂಬಿಸಲಾಗಿದೆ. ಆದರೆ ಗಾಂಧೀಜಿ ಎಂದಿಗೂ ನಿರ್ದಿಷ್ಟ ಧರ್ಮಕ್ಕೆ ಅಂಟಿಕೊಂಡಿರಲಿಲ್ಲ. ಸೇವಾಶ್ರಮದಲ್ಲಿ ಅಂತರ್ಜಾತಿ ವಿವಾಹ ಮಾಡಿಸಿದ್ದರು. 1946ರಲ್ಲಿ ಸ್ವ ಧರ್ಮೀಯ ವಿವಾಹಕ್ಕೆ ಹೋಗುವುದಿಲ್ಲ ಎಂದು ಶಪಥ ಮಾಡಿದ್ದರು ಎಂಬ ಸತ್ಯವನ್ನು ಫ್ರೆಂಚ್‌ ಲೇಖಕ ಮಾರ್ಕ್‌ ಲಿಂಡ್ಲೆ ತಮ್ಮ ಪ್ರಬಂಧದಲ್ಲಿ ಉಲ್ಲೇಖಿಸಿದ್ದಾರೆ ಎಂದು ನೆನಪಿಸಿಕೊಂಡರು.

ಸಮ್ಮೇಳನ ಉದ್ಘಾಟಿಸಿದ ಶಾಸಕ ಕೆ.ಎನ್‌.ರಾಜಣ್ಣ, ವಿಶ್ವದಲ್ಲಿ ಆತಂಕ ಸೃಷ್ಟಿಸುತ್ತಿರುವ ನಾಗರಿಕ ಯುದ್ಧಗಳಿಗೆ ಗಾಂಧಿ ತತ್ವಗಳು ದಾರಿ ದೀಪವಾಗಿದೆ ಎಂದರು.

ಕುಲಸಚಿವ ಪ್ರೊ.ಡಿ.ಶಿವಲಿಂಗಯ್ಯ, ಕಲಾ ಕಾಲೇಜು ಪ್ರಾಂಶುಪಾಲ ಡಾ.ಎಂ.ಜಯರಾಮ್‌, ಉಪಪ್ರಾಂಶುಪಾಲ ಡಾ.ಕರಿಯಣ್ಣ, ರಾಜ್ಯಶಾಸ್ತ್ರ ವಿಭಾಗದ ಮೌನೇಶ್ವರ ಶ್ರೀನಿವಾಸರಾವ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT