ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನ್ಯಾಸಕರ ಆಯ್ಕೆ ಪಟ್ಟಿ ವಜಾ

ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗ
Last Updated 24 ನವೆಂಬರ್ 2014, 19:45 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವ­ವಿದ್ಯಾಲ­ಯದ ಮಹಿಳಾ ಅಧ್ಯಯನ ವಿಭಾಗಕ್ಕೆ ಆಯ್ಕೆ ಮಾಡಲಾಗಿದ್ದ ಮೂವರು ಉಪನ್ಯಾಸಕರ ಪಟ್ಟಿ­ಯನ್ನು ಹೈಕೋರ್ಟ್ ರದ್ದುಗೊಳಿಸಿದೆ.

ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಅವರಿದ್ದ ಏಕ­ಸದಸ್ಯ ಪೀಠವು ಈ ಆದೇಶ ನೀಡಿದ್ದು, ಮೂರು ತಿಂಗಳ ಒಳಗಾಗಿ ಹೊಸ ಆಯ್ಕೆ ನಡೆಸುವಂತೆ ವಿಶ್ವ­ವಿದ್ಯಾಲ­ಯಕ್ಕೆ ನಿರ್ದೇಶಿಸಿದೆ. ಸಾಮಾನ್ಯ ವಿಭಾಗದಲ್ಲಿ ಸುದೇಷ್ಣಾ ಮುಖರ್ಜಿ, ಎಸ್ಸಿ ವಿಭಾಗದಲ್ಲಿ ಡಾ.ಸಿ.ಡಿ.­ವೆಂಕಟೇಶ್ ಮತ್ತು ಎಸ್ಟಿ ವಿಭಾಗದಲ್ಲಿ ಡಾ.ಎಂ.ಸಿದ್ದಪ್ಪ ಅನೂರ್ಜಿತ­ಗೊಂಡ ಉಪನ್ಯಾಸಕರಾ­ಗಿದ್ದಾರೆ. ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಡಾ.ಪ್ರಕಾಶ್ ಭೀಮರಾಯ ಹುಗ್ಗಿ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದ ಪೀಠವು ಈ ಆದೇಶ ನೀಡಿದೆ.

ಬೆಂಗಳೂರು ವಿಶ್ವವಿದ್ಯಾಲಯವು 2006ರ ಅಕ್ಟೋಬರ್ 14ರಂದು ಮಹಿಳಾ ಅಧ್ಯಯನ ವಿಭಾಗದಲ್ಲಿ ಮೂವರು   ಉಪನ್ಯಾಸಕರ ಹುದ್ದೆ ಭರ್ತಿ­­ಗಾಗಿ ಅರ್ಜಿ ಆಹ್ವಾನಿಸಿತ್ತು.  ಎಸ್ಸಿ, ಎಸ್ಟಿ ಮತ್ತು ಸಾಮಾನ್ಯ ವಿಭಾ­ಗದಲ್ಲಿ ತಲಾ ಒಂದೊಂದು ಹುದ್ದೆ ಖಾಲಿ ಇದ್ದವು. ‘ಮಹಿಳಾ ಅಧ್ಯಯನ ವಿಭಾಗದ ಸ್ನಾತಕೋತ್ತರ ಪದವಿ­ಯಲ್ಲಿ ಶೇಕಡ 55 ಅಂಕ ಹಾಗೂ ಕಡ್ಡಾಯವಾಗಿ ಎನ್ಇಟಿ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಉತ್ತೀರ್ಣರಾ­ದವರು ಅರ್ಜಿ ಸಲ್ಲಿಸಲು ಅರ್ಹರು’ ಎಂದು ಅಧಿಸೂ­ಚ­ನೆ­ಯಲ್ಲಿ   ತಿಳಿಸಲಾ­ಗಿತ್ತು.

ಆದರೆ, ಆಯ್ಕೆ ಸಮಿತಿಯು ಈ ನಿಯಮ­ ಉಲ್ಲಂಘಿಸಿ  ಎಸ್ಸಿ ಮೀಸಲು ವಿಭಾಗ­ದಲ್ಲಿ ಸಮಾಜಶಾಸ್ತ ಅಧ್ಯ­ಯನ  ಮಾಡಿದವರನ್ನು,  ಎಸ್ಟಿ ವಿಭಾಗದಲ್ಲಿ ಕನ್ನಡ ಮತ್ತು ಸಾಮಾನ್ಯ ವಿಭಾಗದಲ್ಲಿ ಸಮಾಜ ಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಮಾಡಿದ­ವರನ್ನು  ಆಯ್ಕೆ ಮಾಡಿದೆ. ಇದು ಕಾನೂನು ಬಾಹಿರ. ಈ ಆಯ್ಕೆ ರದ್ದುಗೊಳಿಸಬೇಕು’ ಎಂದು ಅರ್ಜಿ ದಾರರು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT