ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪವಾಸಕ್ಕೆ ಸಬ್ಬಕ್ಕಿ ಸವಿ

ನಮ್ಮೂರ ಊಟ
Last Updated 7 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಕಾಡಿನ ಮಧ್ಯದಲ್ಲಿರುವ ಸ್ಯಾಗೋಪಾಮ್ ಎಂದು ಕರೆಯುವ ಗಿಡದ ರಸದಿಂದ ಸಬ್ಬಕ್ಕಿಯನ್ನು ತಯಾರಿಸಲಾಗುತ್ತದೆ. ಇದರಲ್ಲಿರುವ ಪಿಷ್ಟ ಅಥವಾ ಕಾರ್ಬೋಹೈಡ್ರೇಟುಗಳು ಅದ್ಭುತವಾದ ಶಕ್ತಿ ಮತ್ತು ತ್ವರಿತ ವರ್ಧಕವನ್ನು ನೀಡುತ್ತವೆ. ಜೀರ್ಣಶಕ್ತಿ ಕಡಿಮೆ ಇರುವವರು ಇದರಲ್ಲಿ ತಯಾರಾದ ಆಹಾರ ಸೇವಿಸಿದರೆ ತ್ವರಿತ ಶಕ್ತಿ ಸಿಗುತ್ತದೆ. ಸಬ್ಬಕ್ಕಿ ಗಂಜಿ ಕೂಡ ಅದ್ಭುತವಾಗಿದೆ.  ಸಕ್ಕರೆ ಕಾಯಿಲೆ ಇರುವವರಿಗೆ ಇದು ಒಳ್ಳೆಯದು. ಇದನ್ನು ಹಿಟ್ಟು ಮಾಡಿಟ್ಟುಕೊಂಡು ಅಡಿಗೆಯಲ್ಲಿ ಗಟ್ಟಿ ಬರುವುದಕ್ಕೂ ಉಪಯೋಗಿಸಲಾಗುತ್ತದೆ.

ಇದರಲ್ಲಿ ಪ್ರೋಟಿನ್, ಮಿನರಲ್, ವಿಟಮಿನ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಪೈಬರ್ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಇದರಿಂದ ತೂಕ ಕಡಿಮೆಯಾಗುತ್ತದೆ. ದೇಹದ ಉಷ್ಣತೆಗೆ ಸಬ್ಬಕ್ಕಿಯಿಂದ ತಯಾರಾದ ಆಹಾರ ಉತ್ತಮ. ಇದರಿಂದ ದೇಹ ತಂಪಾಗುತ್ತದೆ ಹಾಗೂ ಪಿತ್ತರಸ ಹೊಂದಿದ್ದರೆ ಅದೂ ಕಡಿಮೆಯಾಗುತ್ತದೆ. ಭಾರತದಲ್ಲಿ ಧಾರ್ಮಿಕ ಹಬ್ಬಗಳಲ್ಲಿ ಸಬ್ಬಕ್ಕಿಯನ್ನು ಹೆಚ್ಚು ಉಪಯೋಗಿಸಲಾಗುತ್ತದೆ. ಬೇಸಿಗೆಯಲ್ಲಿ ಸಬ್ಬಕ್ಕಿಯಿಂದ ತಯಾರಾದ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೂ ಒಳ್ಳೆಯದು. ಇಲ್ಲಿವೆ ಅಂತಹ ಬಗೆ ಬಗೆ ಸಬ್ಬಕ್ಕಿ ರುಚಿಗಳು...

ಸಬ್ಬಕ್ಕಿ ಪಾಯಸ
ಸಾಮಗ್ರಿ:  ೧ ಕಪ್ ಸಬ್ಬಕ್ಕಿ, ಅರ್ಧ ಕಪ್ ಸಕ್ಕರೆ, ಏಲಕ್ಕಿ ಪುಡಿ ಸ್ವಲ್ಪ, ಒಣದ್ರಾಕ್ಷಿ ಹಾಗೂ ಗೋಡಂಬಿ ಒಂದು ಚಮಚ,  ಹಾಲು ಅರ್ಧ ಕಪ್ ಮತ್ತು ತುಪ್ಪ ಸ್ವಲ್ಪ.

ವಿಧಾನ: ಸಬ್ಬಕ್ಕಿಯನ್ನು ಸ್ವಲ್ಪ ಹುರಿದು ನೀರಿನಲ್ಲಿ ಬೇಯಿಸಿ, ಸಕ್ಕರೆ ಸೇರಿಸಿ, ತುಪ್ಪದಲ್ಲಿ ಗೋಡಂಬಿ ದ್ರಾಕ್ಷಿ ಹುರಿದು ಹಾಕಿ ಏಲಕ್ಕಿ ಪುಡಿ ಸೇರಿಸಿ ಕೊನೆಗೆ ಹಾಲು ಸೇರಿಸಿದರೆ ಸಬ್ಬಕ್ಕಿ ಪಾಯಸ ರೆಡಿ.

ಸಬ್ಬಕ್ಕಿ ಉಪ್ಪಿಟ್ಟು

ಸಾಮಗ್ರಿ: ಒಂದು ಕಪ್ ಸಬ್ಬಕ್ಕಿ, ಕಾಲು ಕಪ್ ಹೆಸರು ಬೇಳೆ. ಹಸಿರು ಮೆಣಸು ೬, ಕರೀಬೇವು ಒಂದು ಕಡ್ಡಿ, ಸಾಸಿವೆ  ಒಂದು ಚಮಚ, ಎಣ್ಣೆ ೪ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆಹಣ್ಣು ಅರ್ಧ ಹೋಳು, ಈರುಳ್ಳಿ ಚೂರು ಅರ್ಧ ಕಪ್,  ಕೊತ್ತಂಬರಿ ಸೊಪ್ಪಿನ ಚೂರು ಒಂದು ಚಮಚ ಮತ್ತು ಕಡ್ಲೇಬೇಳೆ ಹಾಗೂ ಉದ್ದಿನ ಬೇಳೆ ಅರ್ಧ ಚಮಚ.


ವಿಧಾನ: ಸಬ್ಬಕ್ಕಿಯನ್ನು ರಾತ್ರಿ ನೀರಿನಲ್ಲಿ ನೆನೆಸಬೇಕು, ಹೆಸರುಬೇಳೆಯನ್ನು ಸ್ವಲ್ಪ ಬಿಸಿ ಮಾಡಿ ನೀರಿನಲ್ಲಿ ಬೇಯಿಸಬೇಕು. ಸಣ್ಣ ಉರಿಯಲ್ಲಿ ದಪ್ಪ ತಳದ ಬಾಂಡ್ಲಿಗೆ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಸಾಸಿವೆ, ಉದ್ದಿನ ಬೇಳೆ, ಕಡ್ಲೆ ಬೇಳೆ, ಕರೀಬೇವು, ಈರುಳ್ಳಿಯನ್ನು ಒಂದರ ನಂತರ ಒಂದನ್ನು ಹಾಕಿ ಸ್ವಲ್ಪ ಹೊತ್ತು ಹುರಿದು, ನಂತರ ಬೆಂದ ಹೆಸರು ಬೇಳೆ ಮತ್ತು ಸಬ್ಬಕ್ಕಿಯಲ್ಲಿ ನೀರಿನಂಶ ತೆಗೆದು ಸೇರಿಸಿ ಹುರಿಯಬೇಕು. ಕೊನೆಗೆ ಉಪ್ಪು, ನಿಂಬೆರಸ ಹಾಕಿ ಹುರಿದು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾಗಿರುತ್ತದೆ.

ಸಬ್ಬಕ್ಕಿ ಇಡ್ಲಿ
ಸಾಮಗ್ರಿ: ಒಂದು ಕಪ್ ಅಕ್ಕಿ, ಕಾಲು  ಕಪ್ ಸಬ್ಬಕ್ಕಿ, ಮೊಸರು ಒಂದು ಕಪ್, ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಮಚ ಹಸಿರು ಮೆಣಸಿನ ಪೇಸ್ಟ್, ಸಬ್ಬಕ್ಕಿ ಸೊಪ್ಪು ಹಾಗೂ ಕೊತ್ತಂಬರಿ ಸೊಪ್ಪಿನ ಚೂರು ಒಂದು ಚಮಚ, ಚಿಟಿಕೆ ಅಡಿಗೆ ಸೋಡ, ಸ್ವಲ್ಪ ಎಣ್ಣೆ.
ವಿಧಾನ: ಅಕ್ಕಿ ತರಿ ಹಾಗೂ ಸಬ್ಬಕ್ಕಿಯನ್ನು ನೀರಿನಲ್ಲಿ ರಾತ್ರಿ ಬೇರೆ ಬೇರೆ ನೆನೆಸಬೇಕು. ಬೆಳಿಗ್ಗೆ ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ಸೇರಿಸಿ ಇಡ್ಲಿ ತಟ್ಟೆಗೆ ಸ್ವಲ್ಪ ಎಣ್ಣೆ ಸವರಿ ಹಿಟ್ಟನ್ನು ಹಾಕಿ ೧೦ರಿಂದ -೧೫ ನಿಮಿಷಗಳಲ್ಲಿ ಬೇಯಿಸಬೇಕು.



ಸಬ್ಬಕ್ಕಿ ವಡೆ
ಸಾಮಗ್ರಿ: ಸಬ್ಬಕ್ಕಿ ಅರ್ಧ ಕಪ್, ಅಕ್ಕಿಹಿಟ್ಟು ಸಾಕಷ್ಟು, ಹುಳಿ ಮೊಸರು ಮುಳುಗುವಷ್ಟು, ಹಸಿರು ಮೆಣಸಿನ ಪೇಸ್ಟ್ ಒಂದು ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಇಂಗು ಸ್ವಲ್ಪ, ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು ತಲಾ ೨ ಚಮಚ ಹಾಗೂ ಕರಿಯಲು ಸಾಕಷ್ಟು ಎಣ್ಣೆ.
ವಿಧಾನ: ಸಬ್ಬಕ್ಕಿಗೆ ರಾತ್ರಿ ಮೊಸರು ಹಾಕಬೇಕು. ಮಾರನೇ ದಿನ ನೆನೆದ ಅಕ್ಕಿಗೆ ಸಾಕಷ್ಟು ಅಕ್ಕಿಹಿಟ್ಟು ಮತ್ತು ಉಳಿದ ಪದಾರ್ಥಗಳನ್ನು ಸೇರಿಸಿ ವಡೆ ಹದಕ್ಕೆ ಕಲೆಸಿ ಎಣ್ಣೆ ಕಾದ ನಂತರ ಹಿಟ್ಟನ್ನು ತಟ್ಟಿ ಎಣ್ಣೆಯಲ್ಲಿ ಬಂಗಾರದ ಬಣ್ಣ ಬರುವ ಹಾಗೆ ಎರಡೂ ಬದಿ ಬೇಯಿಸಿದರೆ ಸಬ್ಬಕ್ಕಿ ವಡೆ ಗರಿಗರಿಯಾಗಿ ರುಚಿಯಾಗಿರುತ್ತದೆ.

ಸಬ್ಬಕ್ಕಿ ತೇಂಗೊಳೆ

ಸಾಮಗ್ರಿ: ಸಬ್ಬಕ್ಕಿ ಅರ್ಧ ಕಪ್. ಹುಳಿ-ಮೊಸರು ಸಾಕಷ್ಟು, ರುಚಿಗೆ ತಕ್ಕಷ್ಟು ಉಪ್ಪು, ಕೆಂಪು ಮೆಣಸಿನ ಪುಡಿ ಒಂದು ಚಮಚ, ಇಂಗು ಸ್ವಲ್ಪ, ಅಕ್ಕಿ ಹಿಟ್ಟು ಸಾಕಷ್ಟು, ಕರಿಯಲು ಎಣ್ಣೆ.

ವಿಧಾನ: ರಾತ್ರಿ ಸಬ್ಬಕ್ಕಿಗೆ ಮುಳುಗುವಷ್ಟು ಮೊಸರು ಹಾಕಿ ನೆನಸಬೇಕು. ಮಾರನೇ ದಿನ ನೆನೆದ ಅಕ್ಕಿಗೆ ಸಾಕಷ್ಟು ಅಕ್ಕಿಹಿಟ್ಟು, ಉಳಿದ ಸಾಮಗ್ರಿಗಳನ್ನು ಸೇರಿಸಿ ತೇಂಗೊಳೆ ಹಿಟ್ಟಿನ ಹದಕ್ಕೆ ಕಲೆಸಿ, ತೇಂಗೊಳೆ ಮಾಡುವ ಮಣೆಯಲ್ಲಿ ಪ್ಲಾಸ್ಟಿಕ್ ಪೇಪರ್ ಮೇಲೆ ಒತ್ತಿ ಎಣ್ಣೆಯಲ್ಲಿ ಬಿಟ್ಟು ಎರಡೂ ಬದಿ ಬೇಯಿಸಿ ತೆಗೆದರೆ ತೇಂಗೊಳೆ ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT