ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಾರ ಸಮುದಾಯದ ಅಭಿವೃದ್ಧಿಗೆ ಬದ್ಧ

ಭಗೀರಥ ಜಯಂತ್ಯುತ್ಸವದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಭರವಸೆ
Last Updated 31 ಮೇ 2016, 10:16 IST
ಅಕ್ಷರ ಗಾತ್ರ

ಚಿತ್ರದುರ್ಗ:  ‘ಉಪ್ಪಾರ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸುತ್ತೇನೆ. ಈ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಭರವಸೆ ನೀಡಿದರು.

ಗುರುಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಉಪ್ಪಾರ ಸಮುದಾಯದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಭಗೀರಥ ಮಹರ್ಷಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶೌಚಾಲಯ ನಿರ್ಮಿಸಿಕೊಳ್ಳಿ:  ‘ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಟಿ.ವಿ. ಮತ್ತು ಮೊಬೈಲ್ ಇರುತ್ತದೆ. ಆದರೆ, ಗ್ರಾಮೀಣ ಭಾಗದ ಬಹಳಷ್ಟು ಮನೆಗಳಲ್ಲಿ ಈಗಲೂ ಶೌಚಾಲಯ ಇಲ್ಲದಿರುವುದು ಅತ್ಯಂತ ನೋವಿನ ಸಂಗತಿ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗಬೇಕು. ಫಲಾನುಭವಿಗಳು ಸರ್ಕಾರದ ಅನುದಾನ ಬಳಸಿ ಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಶಿಕ್ಷಣಕ್ಕೆ ಆದ್ಯತೆ ನೀಡಿ:  ‘ನಮ್ಮನ್ನು ಇತರರು ಗುರುತಿಸಬೇಕಾದರೆ, ಮೊದಲು ಶಿಕ್ಷಿತರಾಗಬೇಕು. ಶಿಕ್ಷಣ ಇಂದಿನ ಅಗತ್ಯಗಳಲ್ಲೇ  ಬಹು ಮುಖ್ಯ. ಉಪ್ಪಾರ ಸಮುದಾಯದವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಹೆಣ್ಣು – ಗಂಡು ಎಂಬ ಭೇದವಿಲ್ಲದೆ, ಎಲ್ಲರೂ ಶಿಕ್ಷಿತರಾಗಬೇಕು’ ಎಂದು ಹೇಳಿದರು.

ಉಪ್ಪಿಗಿಂತ ರುಚಿಯಿಲ್ಲ: ‘ತಾಯಿಗಿಂತ ದೇವರಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂಬ ಗಾದೆ ಮಾತು ಸರ್ವ ಕಾಲಕ್ಕೂ ಪ್ರಸ್ತುತ. ಉಪ್ಪಾರ ಸಮುದಾಯದ ಕುಲಕಸುಬು ಉಪ್ಪು ತಯಾರಿಸುವುದು. ಅದರಂತೆ ಸ್ವತಂತ್ರ ಪೂರ್ವದಲ್ಲಿ ಸಮುದ್ರದ ದಂಡೆಯಲ್ಲಿ ಉಪ್ಪು ತಯಾರಿಸಿ ಅದನ್ನು ಮಾರಾಟ ಮಾಡುವ ಮೂಲಕ ಶ್ರಮದಿಂದ ಬದುಕು ನಡೆಸಿದ ಸಮುದಾಯವಿದು ಎಂದ ಅವರು, ಅಡುಗೆ ರುಚಿಯಾಗಿರಲು ಉಪ್ಪು ಅತ್ಯಗತ್ಯ.  ಈ ಹಿನ್ನೆಲೆಯಲ್ಲಿ ಈ ಸಮುದಾಯದ ಕೊಡುಗೆ ಅಪಾರ’ ಎಂದು ಶ್ಲಾಘಿಸಿದರು.

ಗಂಗೆಯನ್ನು ಭೂಮಿಗೆ ತಂದ ಮಹಾರಥ:  ನಿವೃತ್ತ ಡಿಐಜಿ ಜಿ.ರಮೇಶ್ ಮಾತನಾಡಿ, ‘ಭಗೀರಥ ತನ್ನ ತಪಸ್ಸಿನ ಮೂಲಕ ಭೂಮಿಗೆ ಗಂಗೆಯನ್ನು ತಂದ ಮಹಾರಥ. ಈ ಹಿನ್ನೆಲೆಯಲ್ಲಿ ಗಂಗಾನದಿಯನ್ನು ಭಾಗೀರಥಿ ಎಂಬುದಾಗಿ ಕರೆಯಲಾಗುತ್ತಿದೆ. ಅದು ಭಗೀರಥ ಆಗಬೇಕಿತ್ತು. ದೇಶದ ಉತ್ತರ ಭಾರತದ ಜನತೆಗೆ ನೀರು ದೊರೆತಿರುವುದು ಭಗೀರಥ ಮಹರ್ಷಿ ಅವರಿಂದ’ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣ ಮೂಲ ಮಂತ್ರವಾಗಲಿ: ‘ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಧಾರ್ಮಿಕವಾಗಿ ಉಪ್ಪಾರ ಸಮುದಾಯದವರು ಹಿಂದುಳಿಯಲು ಮುಖ್ಯ ಕಾರಣ.  ಸಮುದಾಯದ ಬಹುತೇಕರು ಶಿಕ್ಷಣ ಪಡೆಯದೇ ಇರುವುದು   ಆದ್ದರಿಂದ ಮುಂದಿನ ದಿನ ಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಲು ಸಮುದಾಯದ ಪ್ರತಿ ಯೊಬ್ಬರನ್ನು ಶಿಕ್ಷಣವಂತರನ್ನಾಗಿ ಮಾಡ ಬೇಕಿದೆ’ ಎಂದು ಸಲಹೆ ನೀಡಿದರು.

‘ಶತಮಾನಗಳಿಂದಲೂ ಉಪ್ಪು ತಯಾರಿಸಿಕೊಂಡು ಬರುತ್ತಿರುವ ಸಮುದಾಯ ನಮ್ಮದು. ಆದರೆ, ಪ್ರಸ್ತುತ ದಿನಗಳಲ್ಲಿ ಉಪ್ಪು ತಯಾರಿಕೆಯನ್ನು ಕೈಗಾರಿಕೆಗಳು ನಿರ್ವಹಿಸುತ್ತಿರುವ ಕಾರಣ ಉಪ್ಪಾರರು ಕುಲಕಸುಬಿನಿಂದ ದೂರ ಉಳಿದಿದ್ದಾರೆ’ ಎಂದು ತಿಳಿಸಿದರು.

ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ನೇತೃತ್ವ ವಹಿಸಿದ್ದರು.  ನಗರಸಭೆ ಅಧ್ಯಕ್ಷ ಮಂಜುನಾಥ ಗೊಪ್ಪೆ, ವಿಧಾನ ಪರಿಷತ್ ಸದಸ್ಯೆ ಜಯಮ್ಮ, ಜಿಲ್ಲಾ ಪಂಚಾಯ್ತಿ ಸದಸ್ಯೆ ವಿಶಾಲಾಕ್ಷಿ, ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ, ಉಪ್ಪಾರ ಸಮುದಾಯದ ಜಿಲ್ಲಾಧ್ಯಕ್ಷ ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಸವರಾಜ್, ತಾ.ಪಂ. ಅಧ್ಯಕ್ಷ ವೇಣುಗೋಪಾಲ್, ನಗರಸಭೆ ಸದಸ್ಯ ವೆಂಕಟೇಶ್, ತಹಶೀಲ್ದಾರ್ ಮಲ್ಲಿಕಾರ್ಜುನ್, ನಗರಸಭೆ ಪೌರಾಯುಕ್ತ ಚಂದ್ರಪ್ಪ  ಇದ್ದರು.

ಕೃಷಿ, ಪಶುಪಾಲನೆ, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಾಕಷ್ಟು ಸೌಲಭ್ಯಗಳಿವೆ. ಉಪ್ಪಾರ ಸಮುದಾಯ ಈ ಸೌಲಭ್ಯ ಬಳಸಿಕೊಳ್ಳಬೇಕು
– ಸೌಭಾಗ್ಯ ಬಸವರಾಜನ್ ಜಿ.ಪಂ.ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT