ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ: ನೀರಸ ಮತದಾನ

Last Updated 21 ಆಗಸ್ಟ್ 2013, 11:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಿಗ್ಗೆಯಿಂದ ಪ್ರಾರಂಭವಾಗಿರುವ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೊಕಸಭಾ ಉಪಚುನಾವಣೆಯ ಮತದಾನದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದೊಡ್ಡ ಆಲಹಳ್ಳಿ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ ಹಾಗೂ ಅವರ ಸಹೋದರ ಡಿ.ಕೆ. ಶಿವಕುಮಾರ್‌ ದಂಪತಿ ಮತದಾನ ಮಾಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್ ಈ ಚುನಾವಣೆ ಕಾಂಗ್ರೆಸ್ ಪಕ್ಷದ ಪ್ರತಿಷ್ಠೆಯೇ ವಿನಃ ನನ್ನ ಕುಟುಂಬದ ಪ್ರತಿಷ್ಠೆಯಲ್ಲ ಎಂದು ಹೇಳಿದರು.

ರಾಮನಗರ ಜಿಲ್ಲೆಯ ಕೇತಿಗಾನಹಳ್ಳಿಯಲ್ಲಿ ಪತ್ನಿ ಅನಿತಾ ಜತೆಗೆ ಬಂದು ಮತದಾನ ಮಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 2014 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಾನವನ್ನು ಕೆಳಕ್ಕಿಳಿಸುವುದೇ ನಮ್ಮ ಮುಂದಿನ ಗುರಿ ಎಂದು ಹೇಳಿದರು.

ಮಂಡ್ಯದ ದೊಡ್ಡ ಅರಸಿಕೆರೆ ಮತಗಟ್ಟೆಯಲ್ಲಿ ಮತ ಚಲಾಯಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ವಸತಿ ಸಚಿವ ಅಂಬರಿಷ್ ಮೋದಿಯನ್ನು ಹೊಗಳುವ ಪ್ರಶ್ನೆಯೇ ಇಲ್ಲ, ಗುಜರಾತಿಗೆ ನರೇಂದ್ರ ಮೋದಿ ಹೇಗೋ ಕರ್ನಾಟಕಕ್ಕೆ ಸಿದ್ದರಾಮಯ್ಯ ಹಾಗೆಯೇ ಎಂದಿದ್ದೆ ಅಷ್ಷೇ ಎಂದು ಹೇಳಿದರು.

ಸೋಮನಹಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮತ ಚಲಾಯಿಸಿದರು.

ಸುಗಮ ಚುನಾವಣೆಗೆ ಸಕಲ ಸಿದ್ಧತೆ ಮಾಡಲಾಗಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ವಿಧಾನಸಭೆ ಚುನಾವಣೆ ಬಳಿಕ ನಡೆಯುತ್ತಿರುವ ಮೊದಲ ಉಪ ಚುನಾವಣೆ ಇದು. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೂ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಜೆಡಿಎಸ್ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವ ತವಕದಲ್ಲಿದೆ.

ಎಚ್.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಅವರ ಪತ್ನಿ ಅನಿತಾ ಅವರನ್ನು ಕಣಕ್ಕೆ ಇಳಿಸಲಾಗಿದೆ. ಕಾಂಗ್ರೆಸ್ ವತಿಯಿಂದ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ ಸ್ಪರ್ಧಿಸಿದ್ದಾರೆ. ಇವರಲ್ಲದೆ, 11 ಮಂದಿ ಪಕ್ಷೇತರರುಕಣದಲ್ಲಿದ್ದಾರೆ.

ಮಂಡ್ಯ ಕೂಡ ಜೆಡಿಎಸ್‌ನ ಭದ್ರಕೋಟೆ. ಎನ್.ಚೆಲುವರಾಯಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಪಾಂಡವಪುರದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರನ್ನು ಕಣಕ್ಕೆ ಇಳಿಸಲಾಗಿದೆ. ಇವರಿಗೆ ಪೈಪೋಟಿ ನೀಡಲು ನಟಿ ರಮ್ಯಾ ಅವರನ್ನು ಕಾಂಗ್ರೆಸ್ ಅಖಾಡಕ್ಕೆ ಇಳಿಸಿದೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಇದ್ದು ಬುಧವಾರ ಮತದಾರರು ತೀರ್ಪು ನೀಡಲಿದ್ದಾರೆ.

ಮಂಡ್ಯ ವರದಿ:
ಮಳವಳ್ಳಿ : ಬುಧವಾರ ನಡೆದ ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಬಹುತೇಕ ಶಾಂತಿಯುತ ಮತದಾನ ನಡೆಯಿತು. ತಾಲ್ಲೂಕಿನ ಗುಂಡಾಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಕೆಲ ಸಮಯ ಬಹಿಷ್ಕಾರ, ಕೊನ್ನಾಪುರದಲ್ಲಿ ಮತಯಂತ್ರ ದೋಷದಿಂದ ಕೆಲ ಸಮಯ ಮತದಾನ ಸ್ಥಗಿತಗೊಂಡಿದ್ದು ಉಳಿದಂತೆ ಮಂದಗತಿಯಲ್ಲಿ ಶಾಂತಿಯುತ ಮತದಾನ ನಡೆಯಿತು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ನೀರಸ ಮತದಾನ ನಡೆದು ಮಧ್ಯಾಹ್ನದ ನಂತರ ಚುರುಕಾಗಿ ಮತದಾನ ನಡೆಯಿತು.

ಗಣ್ಯರ ಮತದಾನ: ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಾಲ್ಲೂಕಿನ ಪೂರಿಗಾಲಿಯಲ್ಲಿ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಪಟ್ಟಣದ ಪೇಟೆ ಬೀದಿಯಲ್ಲಿರುವ ಮತಗಟ್ಟೆಯಲ್ಲಿ, ಮಾಜಿ ಶಾಸಕ ಬಿ.ಸೋಮಶೇಖರ್ ಹೊಸಹಳ್ಳಿಯಲ್ಲಿ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹುಸ್ಕೂರು ಗ್ರಾಮದಲ್ಲಿ. ಕೆಪಿಸಿಸಿ ಸದಸ್ಯ ವೈ.ಎಸ್. ಸಿದ್ದರಾಜು ತಾಲ್ಲೂಕಿನ ಯಮದೂರು ಗ್ರಾಮದ ಮತಗಟ್ಟೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT