ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ನಗರಗಳಿಗೆ ‘ಪ್ರತ್ಯೇಕ ರೈಲು ಸೇವೆ’

ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ
Last Updated 4 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶ­­ದಿಂದ ಸುತ್ತಮುತ್ತಲಿನ ಉಪ ನಗರ­ಗಳಿಗೆ ‘ಪ್ರತ್ಯೇಕ ರೈಲು ಸೇವೆ’ ಆರಂಭಿ­ಸುವಂತೆ ರಾಜ್ಯ ಸರ್ಕಾರ ­ಕೇಂದ್ರಕ್ಕೆ ಮನವಿ ಮಾಡಿದೆ.

ಮೊದಲ ಹಂತದಲ್ಲಿ ಬೆಂಗಳೂರು– ತುಮಕೂರು ಮತ್ತು ಬೆಂಗಳೂರು– ಮಂಡ್ಯ ನಗರಗಳ ನಡುವೆ ಪ್ರತ್ಯೇಕ ರೈಲು ಸೇವೆ ಆರಂಭಿಸುವಂತೆ ರೈಲ್ವೆ ಸಚಿ­ವಾ­ಲ­ಯಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿ­­ಸಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ ಸೊರಕೆ ‘ಪ್ರಜಾವಾಣಿ’ಗೆ ತಿಳಿಸಿದರು.

ಮೊದಲ ಹಂತದಲ್ಲಿ ವಿಶೇಷ ರೈಲು­ಗಳನ್ನು ಓಡಿಸಲು ಒಂದು ಸಾವಿರ ಕೋಟಿ ವೆಚ್ಚವಾಗಲಿದ್ದು, ಬೆಂಗಳೂರು ನಗರದ ಒತ್ತಡ ಕಡಿಮೆ ಆಗಲಿದೆ. ಸುಮಾರು 25ಲಕ್ಷ ಜನ ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳಿಂದ ಓಡಾಡಲು ಅನುಕೂಲವಾಗಲಿದೆ. ಅವರ ಜೀವನ ನಿರ್ವಹಣೆ ವೆಚ್ವವೂ ಕಡಿಮೆ ಆಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಆಟೋ ಚಾಲಕರು, ತರಕಾರಿ ವ್ಯಾಪಾರಿ­ಗಳು, ಫುಟ್‌ಪಾತ್‌ ವ್ಯಾಪಾರಿ­ಗಳ ಬದುಕು ಬೆಂಗಳೂರಿನಲ್ಲಿ ದುಬಾರಿ­ಯಾ­ಗಿದೆ. ಈ ಹೊರೆಯಿಂದ ಅವರನ್ನು ಬಿಡುಗಡೆ ಮಾಡಬೇಕಿದೆ. ಉಪ ನಗರ ರೈಲು ಆರಂಭವಾದರೆ ಅವರವರ ಊರುಗಳಿಂದಲೇ ಕೆಲಸಕ್ಕೆ ಓಡಾಡು­ತ್ತಾರೆ. ಉಪ ನಗರ ರೈಲು ಸೇವೆಯನ್ನು ಎರಡನೇ ಹಂತದಲ್ಲಿ ಕೋಲಾರ ಮತ್ತಿ­ತರ ನಗರಗಳಿಗೂ ವಿಸ್ತರಿಸ­ಬಹುದು ಎಂದು ಸೊರಕೆ ಅಭಿ­ಪ್ರಾಯ­ಪಟ್ಟರು.

ರಾಜ್ಯ ಸರ್ಕಾರದ ಮನವಿಯನ್ನು ಗಂಭೀ­ರವಾಗಿ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ರೈಲ್ವೆ ಸಚಿವ ಸದಾನಂದಗೌಡರು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಹುಬ್ಬಳ್ಳಿ– ಧಾರವಾಡ ನಗರಗಳಲ್ಲಿ ಅಡೆತಡೆ ಇಲ್ಲದೆ ಬಸ್ಸುಗಳು ಓಡಾಡಲು ಅನುಕೂಲವಾಗುವಂತೆ ‘ಪ್ರತ್ಯೇಕ ಲೇನ್‌’ (ಬಿಆರ್‌ಟಿಎಸ್‌) ನಿರ್ಮಿಸಲಾ­ಗು­ವುದು. ಈ ಲೇನಿನಲ್ಲಿ ಬಸ್ಸುಗಳನ್ನು ಬಿಟ್ಟು ಬೇರೆ ವಾಹನಗಳು ಓಡಾಡಲು ಅವಕಾಶ ಇರುವುದಿಲ್ಲ. ಮೈಸೂರಿನಲ್ಲಿ ಸೈಕಲ್‌ ಸವಾರರಿಗೆ ‘ಪ್ರತ್ಯೇಕ ಪಥ’ ಮಾಡುವ ಚಿಂತನೆ ಇದೆ. ಪ್ರಮುಖ ಸ್ಥಳ­ಗ­ಳಲ್ಲಿ ಸೈಕಲ್‌ ಸ್ಟ್ಯಾಂಡ್‌ಗಳನ್ನು ಮಾಡ­ಲಾ­ಗುವುದು ಎಂದು ಸೊರಕೆ ಸ್ಪಷ್ಟಪಡಿಸಿದರು.

ನಗರಗಳಲ್ಲಿ ಯದ್ವಾತದ್ವಾ ಬಡಾ­ವ­ಣೆ­­ಗಳನ್ನು ಅಭಿವೃದ್ಧಿಪಡಿಸಲಾ­ಗು­ತ್ತಿದೆ. ನಾಗರಿಕ ಸೌಲಭ್ಯಗಳನ್ನು ಕಲ್ಪಿಸಲು ಗಮನ ಕೊಡುತ್ತಿಲ್ಲ. ನಾಗರಿಕ ಉದ್ದೇಶ­ಗಳಿಗೆ ಭೂಮಿ  ಒದಗಿಸುವ ಉದ್ದೇಶ­ದಿಂದ ಸರ್ಕಾರವೇ ‘ಲ್ಯಾಂಡ್‌ ಬ್ಯಾಂಕ್‌’ ತೆರೆಯುತ್ತಿದೆ. ಚರಂಡಿ ನೀರು ಶುದ್ಧೀ­ಕರಣ ಘಟಕ, ಕುಡಿಯುವ ನೀರು ಶುದ್ಧೀ­ಕರಣ ಘಟಕ, ಉದ್ಯಾನ ವನ, ಶಾಲೆ, ಆಸ್ಪತ್ರೆ, ಪೊಲೀಸ್‌ ಠಾಣೆ­ಯಂಥ ಸೌಲಭ್ಯಗಳಿಗೆ ಪಟ್ಟಣ ಅಥವಾ ನಗರ­ದೊಳಗೆ ಜಮೀನು ಒದಗಿಸು­ವುದು ಸರ್ಕಾರದ ಲ್ಯಾಂಡ್‌ ಬ್ಯಾಂಕ್‌ ಸ್ಥಾಪನೆ ಉದ್ದೇಶ ಎಂದು ಸಚಿವರು ಹೇಳಿದರು.
ಮುಂದಿನ 30 ವರ್ಷಗಳ ಬೇಡಿಕೆ ಮತ್ತು ಅಗತ್ಯಗಳನ್ನು ಗಮನದಲ್ಲಿಟ್ಟು­ಕೊಂಡು ಸರ್ಕಾರ ಲ್ಯಾಂಡ್‌ ಬ್ಯಾಂಕ್‌ ಮಾಡುತ್ತಿದೆ ಎಂದು ಸೊರಕೆ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT