ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಡಿಎಂಕೆ ಮುಖ್ಯಸ್ಥ ವೈಕೊ ವಶಕ್ಕೆ

ರಾಜಪಕ್ಸೆ ಭೇಟಿ ವಿರೋಧಿಸಿ ಪ್ರತಿಭಟನೆ
Last Updated 26 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಭೇಟಿ ವಿರೋಧಿಸಿ ಇಲ್ಲಿ ಸೋಮವಾರ ಪ್ರತಿಭಟನೆ ನಡೆಸುತ್ತಿದ್ದ ಎಂಡಿಎಂಕೆ ಮುಖ್ಯಸ್ಥ ವೈಕೊ ಮತ್ತು ಅವರ ಪಕ್ಷದ ಸುಮಾರು ನೂರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸಂಸತ್‌ ಭವನ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಎಂಡಿಎಂಕೆ ಕಾರ್ಯಕರ್ತರು ಶ್ರೀಲಂಕಾ ಧ್ವಜಕ್ಕೆ ಮತ್ತು ರಾಜಪಕ್ಸೆ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ವೈಕೊ, ‘ರಾಜಪಕ್ಸೆ ಅವರು ಮೋದಿ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸುವುದರಿಂದ ಸಮಾರಂಭದ ಪಾವಿತ್ರ್ಯ ಹಾಳಾಗುತ್ತದೆ’ ಎಂದರು.

‘ನಾವು ನಮ್ಮ ಸೋದರ– ಸೋದರಿಯರನ್ನು (ಶ್ರೀಲಂಕಾ ತಮಿಳರು) ಕಳೆದುಕೊಂಡಿದ್ದೇವೆ. ತಮಿಳರನ್ನು ನಿರ್ದಯವಾಗಿ ಹತ್ಯೆ ಮಾಡಲಾಗಿದೆ. ಇದಕ್ಕೆ ಕಾರಣರಾದವರನ್ನು (ರಾಜಪಕ್ಸೆ) ಇಲ್ಲಿಗೆ ಆಹ್ವಾನಿಸುವ ಅಗತ್ಯವಾದರೂ ಏನಿತ್ತು’ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

  ಶ್ರೀಲಂಕಾಕ್ಕೆ ಸಂಬಂಧಿಸಿದ ವಿಷಯದಲ್ಲಿ  ಯುಪಿಎ ಸರ್ಕಾರ ಅನುಸರಿಸಿದ ಮಾರ್ಗವನ್ನು ತುಳಿಯದಂತೆ ಎನ್‌ಡಿಎ ಸರ್ಕಾರಕ್ಕೆ ಮನವಿ ಮಾಡಿಕೊಂಡ ವೈಕೊ, ತಮ್ಮ ಪಕ್ಷ ಎನ್‌ಡಿಎ ಮೈತ್ರಿಕೂಟದಲ್ಲೇ ಇರುತ್ತದೆ ಎಂದು ಸ್ಪಷ್ಟ ಪಡಿಸಿದರು.

‘ಶ್ರೀಲಂಕಾ ಸರ್ಕಾರ ತಮಿಳರ ವಿರುದ್ಧ ಘೋರ ಅಪರಾಧ ಎಸಗಿದೆ. ಇದಕ್ಕೆ ಯುಪಿಎ ಸರ್ಕಾರ ಒತ್ತಾಸೆ ನೀಡಿತ್ತು. ಶ್ರೀಲಂಕಾದಲ್ಲಿ ತಮಿಳರ ವಿರುದ್ಧ ನಡೆದ ದೌರ್ಜನ್ಯದಿಂದ ನಮಗಾಗಿರುವ ನೋವು ಎಂತಹದ್ದು ಎಂಬುದನ್ನು ನರೇಂದ್ರ ಮೋದಿ ಅವರು ಅರ್ಥಮಾಡಿಕೊಳ್ಳುತ್ತಾರೆಂದು ಭಾವಿಸಿದ್ದೇವೆ’ ಎಂದರು.

‘ನಾವು ಇಲ್ಲಿಗೆ ಬಂದಿರುವುದು ಪ್ರಮಾಣವಚನ ಸಮಾರಂಭವನ್ನು ವಿರೋಧಿಸುವುದಕ್ಕೆ ಅಲ್ಲ. ಮೋದಿ ಅವರನ್ನು ಅಭಿನಂದಿಸುತ್ತೇವೆ. ಅವರ ಆಡಳಿತದಲ್ಲಿ ದೇಶಕ್ಕೆ ಉನ್ನತ ಮಟ್ಟದ ಶ್ರೇಯ ದೊರಕಲೆಂದು ಆಶಿಸುತ್ತೇವೆ’ ಎಂದರು.

ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸುತ್ತಿದ್ದ ವೈಕೊ ಮತ್ತವರ ಬೆಂಬಲಿಗರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ನರೇಂದ್ರ ಮೋದಿ ಅವರ ಪ್ರವಣವಚನ ಸ್ವೀಕಾರ ಸಮಾರಂಭಕ್ಕೆ ಶ್ರೀಲಂಕಾ ಅಧ್ಯಕ್ಷರಿಗೆ ಆಹ್ವಾನ ನೀಡಿದಾಗಲೇ  ಅದನ್ನು ವಿರೋಧಿಸಿ ವೈಕೊ ಅವರು ಮೋದಿ ಅವರಿಗೆ ಪತ್ರ ಬರೆದಿದ್ದರು.

ಅಟಲ್‌ ಬಿಹಾರಿ ವಾಜಪೇಯಿ, ಮನಮೋಹನ್‌ ಸಿಂಗ್ ಅವರ ಪ್ರಮಾಣವಚನ ಸಮಾರಂಭಕ್ಕೆ ಶ್ರೀಲಂಕಾದ ಅಧ್ಯಕ್ಷರಿಗೆ ಆಹ್ವಾನ ನೀಡಿರಲಿಲ್ಲ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದರು. ರಾಜಪಕ್ಸೆ ಅವರಿಗೆ ಆಹ್ವಾನ ನೀಡಿದ್ದನ್ನು ತಮಿಳುನಾಡು ಸರ್ಕಾರ ಮತ್ತು ಆ ರಾಜ್ಯದ ಪ್ರಾದೇಶಿಕ ಪಕ್ಷಗಳೂ ವಿರೋಧಿಸಿದ್ದವು.
ಈ ಮಧ್ಯೆ, ಶ್ರೀಲಂಕಾ ಅಧ್ಯಕ್ಷರು ಸೋಮವಾರ ಬೆಳಿಗ್ಗೆ ನವದೆಹಲಿಗೆ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT