ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌1ಎನ್‌1: ನಗರದಲ್ಲಿ 10 ಸಾವು

Last Updated 27 ಫೆಬ್ರುವರಿ 2015, 19:40 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಇದುವರೆಗೆ 299 ಎಚ್‌1ಎನ್‌1 ಪ್ರಕರಣಗಳು ವರದಿಯಾಗಿದ್ದು, 10 ಜನ ಈ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಆದರೆ, ಕಳೆದ 15 ದಿನಗಳಿಂದ ಅದರ ತೀವ್ರತೆ ಕಡಿಮೆ ಯಾಗಿದ್ದು ಯಾವುದೇ ಸಾವು ಸಂಭವಿಸಿಲ್ಲ ಎಂದು ಬಿಬಿಎಂಪಿ ಆಯುಕ್ತರು ವಿವರಿಸಿದರು.

ಡಿ.ಜಿ. ಹಳ್ಳಿಯ ಆರ್‌. ಸಂಪತ್‌­ರಾಜ್‌ ಅವರ ಪ್ರಶ್ನೆಗೆ ಅವರು ಉತ್ತರಿ­ಸಿ­ದರು. ‘ಎಚ್‌1ಎನ್‌1ಗೆ ‘ಟ್ಯಾಮಿಫ್ಲ್ಯು’ ಮಾತ್ರೆಯನ್ನು ನೀಡಲಾಗುತ್ತಿದ್ದು, ಬಿಬಿಎಂಪಿಯ ಎಲ್ಲ ಆಸ್ಪತ್ರೆಗಳಲ್ಲಿ ಈ ಮಾತ್ರೆ ಲಭ್ಯವಿದೆ. ಆದರೆ, ಮುಂಜಾ­ಗ್ರತಾ ಕ್ರಮವಾಗಿ ವ್ಯಾಕ್ಸಿನ್‌ ಹಾಕುವ ಸೌಲಭ್ಯ ನಮ್ಮಲ್ಲಿಲ್ಲ’ ಎಂದರು.

‘ನಗರದಲ್ಲಿ ಈ ಕಾಯಿಲೆ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ’ ಎಂದು ಸಂಪತ್‌ರಾಜ್‌ ದೂರಿದರು. ‘ಹೌದು, ನಗರದಲ್ಲಿ ಎಚ್‌1ಎನ್‌1 ಕಾಯಿಲೆ ಗಂಭೀರ ಸ್ವರೂಪ ಪಡೆದಿದೆ. ರಾಜ್ಯ ಆರೋಗ್ಯ ಇಲಾಖೆಯೇ ಇದನ್ನು ನೋಡಿಕೊಳ್ಳಬೇಕು. ಹೊಣೆ ನಿಭಾಯಿ-­ಸುವಲ್ಲಿ ವಿಫಲರಾದ ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕು’ ಎಂದು ಕಾಚರಕನಹಳ್ಳಿ ವಾರ್ಡ್‌ನ ಪದ್ಮನಾಭ ರೆಡ್ಡಿ ತಿರಗೇಟು ನೀಡಿದರು.

ಎಚ್‌1ಎನ್‌1 ಕುರಿತು ಪ್ರಸ್ತಾಪಿಸಲು ಮುಖ ಗವಸು ಹಾಕಿಕೊಂಡು ಬಂದಿದ್ದರು ಸಂಪತ್‌ರಾಜ್‌. ಅವರನ್ನು ಹೊರಕ್ಕೆ ಕಳುಹಿಸಬೇಕು. ಇಲ್ಲದಿದ್ದರೆ ಎಲ್ಲರಿಗೂ ಕಾಯಿಲೆ ಹರಡುತ್ತದೆ ಎಂದು ಬಿಜೆಪಿ ಸದಸ್ಯರು ಛೇಡಿಸಿದರು.

ಜೆಡಿಎಸ್‌ಗೆ ಸುಭಾಷನಗರದ ನಿವೇಶನ
ಜೆಡಿಎಸ್‌ ಕಚೇರಿಗಾಗಿ ಸುಭಾಷನಗರದ ಕೃಷ್ಣ ಫ್ಲೋರ್‌ ಮಿಲ್‌ ಪಕ್ಕದಲ್ಲಿರುವ ಖಾಲಿ ನಿವೇಶನವನ್ನು ಮಾಸಿಕ ₨ 12 ಸಾವಿರ ಬಾಡಿಗೆ ಆಧಾರದ ಮೇಲೆ ಐದು ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಶುಕ್ರವಾರ ನಿರ್ಣಯ ಕೈಗೊಳ್ಳಲಾಗಿದೆ.
ಜೆಡಿಎಸ್‌ ಕಚೇರಿಗೆ ಈ ಹಿಂದೆ ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಸಭಾಂಗಣ ಪಕ್ಕದ ನಿವೇಶವನ್ನು ನೀಡಲು ಬಿಬಿಎಂಪಿ ನಿರ್ಧರಿಸಿತ್ತು. ಆದರೆ, ಆ ಸ್ಥಳ ವಿವಾದದಲ್ಲಿ ಇದ್ದುದರಿಂದ ಆ ಪಕ್ಷಕ್ಕೆ ಅಲ್ಲಿನ ನಿವೇಶನವನ್ನು ಪಡೆಯಲು ಸಾಧ್ಯವಾಗಿರಲಿಲ್ಲ.

ಆಡಳಿತ ವರದಿ ಮಂಡನೆಗೆ ಯತ್ನ
ಬಿಬಿಎಂಪಿ ಆಡಳಿತ ವೈಫಲ್ಯವನ್ನು ಎತ್ತಿ ತೋರುವ ಹಾಗೂ ಹಗರಣಗಳ ಮೇಲೆ ಬೆಳಕು ಚೆಲ್ಲುವ ಆಡಳಿತ ವರದಿ ಮಂಡನೆ ಮಾಡಬೇಕು ಎಂದು ಕೌನ್ಸಿಲ್‌ ಸಭೆಯಲ್ಲಿ ಶುಕ್ರವಾರ ಕಾಂಗ್ರೆಸ್‌ ಸದಸ್ಯರು ಆಗ್ರಹಿಸಿದರು. ಈ ಸಂಬಂಧ ಆಡಳಿತ ಹಾಗೂ ವಿರೋಧ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ಜಯಮಹಲ್‌ ವಾರ್ಡ್‌ನ ಎಂ.ಕೆ. ಗುಣಶೇಖರ್‌, ಆಡಳಿತ ವರದಿ ಮಂಡನೆ ಭರವಸೆ ಸಿಗುವವರೆಗೆ ಏಳುವುದಿಲ್ಲ ಎಂದು ಮೇಯರ್‌ ಪೀಠದ ಮುಂದೆ ಧರಣಿ ಕುಳಿತರು. ಆಗ ಮೇಯರ್‌ ಪೀಠದಲ್ಲಿದ್ದ ಉಪ ಮೇಯರ್‌ ಕೆ.ರಂಗಣ್ಣ, ‘ಆಡಳಿತ ವರದಿ ಮಂಡನೆಗೆ ನಾನೂ ಉತ್ಸುಕನಾಗಿದ್ದೇನೆ. ಕೌನ್ಸಿಲ್‌ ಅವಧಿ ಮುಗಿಯಲು ಇನ್ನೂ ಸಮಯವಿದ್ದು, ವರದಿ ಮಂಡ ನೆಗೆ ಯತ್ನಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT