ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಇಇಟಿ ರದ್ದತಿ: `ಸುಪ್ರೀಂ'ಗೆ ಮೊರೆ

Last Updated 15 ಜನವರಿ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವೈದ್ಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ನಡೆಸುವ ಭಾರತೀಯ ವೈದ್ಯಕೀಯ ಮಂಡಳಿಯ (ಎಂಸಿಐ) ಅಧಿಸೂಚನೆ ರದ್ದುಪಡಿಸುವಂತೆ ಕರ್ನಾಟಕದ ಪಿಯು ವಿದ್ಯಾರ್ಥಿಗಳ ಗುಂಪು ಸುಪ್ರೀಂಕೋರ್ಟ್ ಮೊರೆ ಹೋಗಿದೆ.

`ರಾಷ್ಟ್ರಾದಾದ್ಯಂತ ಒಂದೇ ಪ್ರವೇಶ ಪರೀಕ್ಷೆ ನಡೆಸುವ ಉದ್ದೇಶದಿಂದ ಎಂಸಿಐ, ಪರೀಕ್ಷೆಯ ಜವಾಬ್ದಾರಿಯನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ವಹಿಸಿದೆ. ಇದರಿಂದ ರಾಜ್ಯ ಪಠ್ಯಕ್ರಮ ಓದಿದ ವಿದ್ಯಾರ್ಥಿಗಳು ಈ ಪ್ರವೇಶ ಪರೀಕ್ಷೆಗಾಗಿ `ಸಿಬಿಎಸ್‌ಇ' ಪಠ್ಯಕ್ರಮವನ್ನೂ ಅಧ್ಯಯನ ಮಾಡಬೇಕಾದ ಅನಿವಾರ್ಯತೆ ಉದ್ಭವಿಸಿದೆ. ಆದ್ದರಿಂದ, ಎಂಸಿಐ ಕಳೆದ ಫೆಬ್ರುವರಿ 15ರಂದು ಹೊರಡಿಸಿದ ಅಧಿಸೂಚನೆಯನ್ನು ರದ್ದುಪಡಿಸಬೇಕು' ಎಂದು ವಕೀಲ ಜಿ. ಎಸ್. ಕಣ್ಣೂರ್ ಅವರ ಮೂಲಕ ಸಲ್ಲಿಸಲಾದ ರಿಟ್ ಅರ್ಜಿಯಲ್ಲಿ ವಿದ್ಯಾರ್ಥಿಗಳು ಕೋರಿದ್ದಾರೆ.

`ಎಂಸಿಐ ಅಧಿಸೂಚನೆಯು ಕರ್ನಾಟಕ ವೃತ್ತಿಪರ ಶೈಕ್ಷಣಿಕ ಸಂಸ್ಥೆಗಳ ಕಾಯ್ದೆ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿಯ ವಿಶೇಷ ಕಾಯ್ದೆ) 2011ಕ್ಕೆ ವಿರುದ್ಧವಾಗಿದೆ. ಆದ್ದರಿಂದ ಎನ್‌ಇಇಟಿ ಪರೀಕ್ಷೆ ಬದಲಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನೇ ಮುಂದುವರಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡುವಂತೆ' ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

`ರಾಷ್ಟ್ರೀಯ ಪ್ರವೇಶ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಡೆಸಲಾಗುತ್ತಿದ್ದು ಕನ್ನಡ ಸೇರಿದಂತೆ ತಮ್ಮ ಮಾತೃಭಾಷಾ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಇದರಿಂದ ಸಂಕಷ್ಟಕ್ಕೆ ಒಳಗಾಗಲಿದ್ದಾರೆ'  ಎಂದು ವಿದ್ಯಾರ್ಥಿಗಳಾದ ರಕ್ಷಿತ್ ಉತ್ತಪ್ಪ, ಅಂಕಿತಾ ಸಿ. ಮತ್ತು ಸುಮನಾ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.

`ಸಿಬಿಎಸ್‌ಇ ಸೂಚನೆಯ ಹೆಚ್ಚುವರಿ ಪಠ್ಯಕ್ರಮವನ್ನು ದೂರದರ್ಶನದ ಚಂದನ ವಾಹಿನಿ ಮೂಲಕ ವಿದ್ಯಾರ್ಥಿಗಳಿಗೆ ಕಲಿಸುವ ರಾಜ್ಯ ಸರ್ಕಾರದ ಕ್ರಮವು ಅತಾರ್ಕಿಕವಾಗ್ದ್ದಿದು ವಿದ್ಯುತ್ ಸಮಸ್ಯೆಯಿಂದಾಗಿ  ಟಿವಿ ವೀಕ್ಷಣೆಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಜೊತೆಗೆ ಅಂತರ್ಜಾಲ ಸಂಪರ್ಕದ ಕೊರತೆಯೂ ವಿದ್ಯಾರ್ಥಿಗಳನ್ನು ಕಾಡಲಿದೆ' ಎಂದು ಅರ್ಜಿಯಲ್ಲಿ  ಹೇಳಲಾಗಿದೆ.`ಎನ್‌ಇಇಟಿ' ಪರೀಕ್ಷೆ ಪ್ರಶ್ನಿಸಿ ವಿವಿಧ  ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವರ್ಗಾಯಿಸಲು ಆದೇಶ ನೀಡುವಂತೆ ಎಂಸಿಐ ಸುಪ್ರೀಂಕೋರ್ಟ್ ಮೊರೆ ಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT