ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಇಇಟಿ: ರಾಜ್ಯಗಳ ವಾದಕ್ಕೆ ಬಗ್ಗದ ‘ಸುಪ್ರೀಂ’

Last Updated 3 ಮೇ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ವೈದ್ಯಕೀಯ, ದಂತವೈದ್ಯ ಕೋರ್ಸ್‌ಗಳ ಶೇ 85ರಷ್ಟು ಸೀಟುಗಳಿಗೆ ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ಯ (ಎನ್‌ಇಇಟಿ) ಮೂಲಕ ಆಯಾ ರಾಜ್ಯಗಳ ವಿದ್ಯಾರ್ಥಿಗಳನ್ನು ಭರ್ತಿ ಮಾಡಿಕೊಳ್ಳಲು ಅವಕಾಶವಿದೆ. ಹಾಗಿದ್ದರೂ ಸಾಮಾನ್ಯ ಪರೀಕ್ಷೆ ವಿರೋಧಿಸಲು ಕಾರಣವೇನು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ವಿವಿಧ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಕಾಲೇಜುಗಳನ್ನು ಪ್ರಶ್ನಿಸಿತು.

ಎನ್‌ಇಇಟಿ ಸಂಬಂಧ ಕರ್ನಾಟಕ ಒಳಗೊಂಡಂತೆ ವಿವಿಧ ರಾಜ್ಯಗಳು ಮತ್ತು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಸಲ್ಲಿಸಿರುವ ಅರ್ಜಿಗಳಿಗೆ ಗುರುವಾರದೊಳಗೆ ಉತ್ತರಿಸುವಂತೆ ಕೇಂದ್ರ ಸರ್ಕಾರ, ಭಾರತ ವೈದ್ಯಕೀಯ ಮಂಡಳಿ, ಸಿಬಿಎಸ್‌ಇಗೆ ಸುಪ್ರೀಂ ಕೋರ್ಟ್‌ ಪೀಠ ಸೂಚಿಸಿತು.

ನ್ಯಾಯಮೂರ್ತಿ. ಎ. ಆರ್‌. ದವೆ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ಪ್ರಕರಣದ ವಿಚಾರಣೆ ನಡೆಸುತ್ತಿದೆ.

ಶೇ 85ರಷ್ಟು ಸೀಟುಗಳನ್ನು ನಿಮ್ಮ ಆಯ್ಕೆಗೆ ಅನುಗುಣವಾಗಿ ಭರ್ತಿ ಮಾಡಿಕೊಳ್ಳುವ ಅಧಿಕಾರ ನಿಮ್ಮ ಬಳಿಯೇ ಇದೆ. ಈವರೆಗೆ ಎನ್‌ಇಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳು ಜುಲೈ 24ರಂದು ಮುಂದಿನ ಹಂತದ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶವಿದೆ ಎಂದು ನ್ಯಾಯಪೀಠ ಕರ್ನಾಟಕದ ಅಡ್ವೊಕೇಟ್‌ ಜನರಲ್‌ ಮಧು ನಾಯಕ್‌ ಅವರಿಗೆ ಹೇಳಿತು.

ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಪರವಾಗಿ ವಾದಿಸಿದ ಹಿರಿಯ ವಕೀಲ ಕೆ.ಕೆ. ವೇಣುಗೋಪಾಲ್‌, ಇಂಗ್ಲಿಷ್‌ ಹಾಗೂ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆಗಳನ್ನು ನಡೆಸಲು ಕಾನೂನಿನಲ್ಲಿ ಅವಕಾಶವಿದ್ದು, ಈಗಾಗಲೇ ಸರ್ವ ಸಿದ್ಧತೆ ಮಾಡಲಾಗಿದೆ ಎಂದರು.

ಹದಿಮೂರು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ರಾಜ್ಯ ಸರ್ಕಾರ ತನ್ನದೇ ಪರೀಕ್ಷೆ ನಡೆಸುತ್ತದೆ. ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಂದ ಕೇವಲ ₹ 60 ಸಾವಿರ ಶುಲ್ಕ ಕಟ್ಟಿಸಿಕೊಳ್ಳಲಾಗುತ್ತದೆ ಎಂದು ಮಧು ನಾಯ್ಕ ವಿವರಿಸಿದರು.

ರಾಷ್ಟ್ರಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆ ಸಿದ್ಧತೆಗೆ ಸಮಯಾವಕಾಶ ಕಡಿಮೆ ಇರುವುದರಿಂದ ಗ್ರಾಮೀಣ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಲಿದ್ದಾರೆಂದು ವೇಣುಗೋಪಾಲ್‌ ವಾದಿಸಿದರು. ಇತ್ತೀಚೆಗೆ ಕೋಟಾದ ಐಐಟಿ– ಜೀ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸೂಕ್ತ ತರಬೇತಿ ಇಲ್ಲದೆ ನಿಮ್ಮ ಪರೀಕ್ಷೆಗಳನ್ನು ಪಾಸು ಮಾಡಲು ಸಾಧ್ಯವಿಲ್ಲ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿತು. ಕೆಲವು ಸಲ ಅತ್ಯಂತ ಹಿಂದುಳಿದ ಪ್ರದೇಶದಿಂದ ಅತ್ಯುತ್ತಮ ವಿದ್ಯಾರ್ಥಿಗಳು ಬರುತ್ತಾರೆ ಎನ್ನುವುದನ್ನು ಮರೆಯಬಾರದು ಎಂದೂ ಅದು ಹೇಳಿತು.

ಸಾಮಾನ್ಯ ಪ್ರವೇಶ ಪರೀಕ್ಷೆಯು ಪ್ರಾದೇಶಿಕ ಭಾಷೆಯಲ್ಲಿ ಕಲಿತಿರುವ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ ಎಂಬ ಖಾಸಗಿ ಕಾಲೇಜು ಆಡಳಿತ ಮಂಡಳಿಗಳ ವಾದವನ್ನು ನ್ಯಾಯಪೀಠ ಒಪ್ಪಿಕೊಳ್ಳಲಿಲ್ಲ. ಪ್ರಾದೇಶಿಕ ಭಾಷೆಯಲ್ಲೂ ವೈಜ್ಞಾನಿಕ ಶಬ್ದಗಳಿಗೆ ಇಂಗ್ಲಿಷ್‌ ಶಬ್ದಗಳೇ ಬಳಕೆ ಆಗುತ್ತವೆ ಎಂದು ಅಭಿಪ್ರಾಯಪಟ್ಟಿತು.

ಇಂಗ್ಲಿಷ್‌ ವೈಜ್ಞಾನಿಕ ಪದಗಳಿಗೆ ಗುಜರಾತಿಯಲ್ಲಿ ಬೇರೆ ಹೆಸರುಗಳೇ ಇವೆ ಎಂದು ಗುಜರಾತ್‌ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪ್ರತಿಪಾದಿಸಿದರು.


ಅಲ್ಪಸಂಖ್ಯಾತ ಸಮುದಾಯದ ಶೇ 85ರಷ್ಟು ವಿದ್ಯಾರ್ಥಿಗಳಿಗೆ ಪ್ರವೇಶ ಮೀಸಲಿಡುವ ತನ್ನ ಹಕ್ಕನ್ನು ಸರ್ಕಾರ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ವೆಲ್ಲೂರು ಮೂಲದ ಕ್ರಿಶ್ಚಿಯನ್‌ ಮೆಡಿಕಲ್‌ ಕಾಲೇಜಿನ ವಕೀಲ ಎಲ್‌.ಎನ್‌. ರಾವ್‌ ಪ್ರತಿಪಾದಿಸಿದರು.

ಅಖಿಲ ಭಾರತ ಮಟ್ಟದ ಪರೀಕ್ಷೆಯಲ್ಲಿ ನಿಮ್ಮ ಆಯ್ಕೆಗೆ ತಕ್ಕಂತೆ ವಿದ್ಯಾರ್ಥಿಗಳು ಸಿಗುವುದಿಲ್ಲ ಎಂಬ ವಾದ ಸರಿಯಲ್ಲ ಎಂದೂ ನ್ಯಾಯಪೀಠ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT