ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಬೋಲಾ ತಡೆ ಹೇಗೆ?

ಅಕ್ಷರ ಗಾತ್ರ

ಪಶ್ಚಿಮ ಆಫ್ರಿಕಾದ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಎಬೋಲಾ ಸೋಂಕು ಅಮೆರಿಕಗೆ ಯಾವ ಪರಿ ದಿಗಿಲು ಹುಟ್ಟಿಸಿದೆ ಎಂದರೆ, ಅಮೆರಿಕನ್ನರು ಭಾವಾತಿರೇಕಕ್ಕೆ ಒಳಗಾಗುವುದರೊಂದಿಗೆ ತಾವು ಕಠಿಣ ಹೃದಯಿಗಳಾಗುವಷ್ಟರ ಮಟ್ಟಿಗೆ ಭಯಗೊಂಡಿದ್ದಾರೆ.

ನ್ಯೂಜೆರ್ಸಿ ನಗರದಲ್ಲಿರುವ ರುವಾಂಡದ ಇಬ್ಬರು ವಿದ್ಯಾರ್ಥಿಗಳಿಗೆ ಮನೆಯಿಂದ ಹೊರಗೆ ಬಾರದಂತೆ ಸೂಚಿಸಲಾಗಿದೆ. ಪಶ್ಚಿಮ ಆಫ್ರಿಕಾದ  ರಾಷ್ಟ್ರಗಳಿಂದ 2,800 ಮೈಲುಗಳಷ್ಟು ದೂರದಲ್ಲಿರುವ ರುವಾಂಡದಲ್ಲಿ ಎಬೋಲಾ ಸೋಂಕಿನ ಲವಲೇಶ ಇಲ್ಲದಿದ್ದರೂ ಆ ದೇಶದ ವಿದ್ಯಾರ್ಥಿಗಳು ಅಮೆರಿಕದಲ್ಲಿ ಬಲವಂತದ ಗೃಹಬಂಧನಕ್ಕೆ ಒಳಗಾಗಿದ್ದಾರೆ. ಮತ್ತೊಂದೆಡೆ ನೈಜೀರಿಯಾದ ವಿದ್ಯಾರ್ಥಿಗಳಿಗೆ ಟೆಕ್ಸಾಸ್‌ನ ನವಾರೊ ಕಾಲೇಜು ಪ್ರವೇಶ ನಿರಾಕರಿಸಿದೆ. ಇದಕ್ಕೆ ಕಾಲೇಜು ನೀಡಿರುವ ಕಾರಣ: ಎಬೋಲಾ ಸೋಂಕು ಪಸರಿಸಿರುವ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದರೆ, ಅಮೆರಿಕದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ ಎಂದು.

ಎಬೋಲಾ ಸೋಂಕು ದೃಢಪಟ್ಟವರನ್ನು ‘ಮಾನವೀಯವಾಗಿ ದಮನಮಾಡುವುದು’ ಈ ಸೋಂಕಿನ ತಡೆಗೆ ಇರುವ ಮಾರ್ಗ ಎಂದು ದಕ್ಷಿಣ ಕ್ಯಾಲಿಫೋರ್ನಿಯಾ ರಿಪಬ್ಲಿಕನ್‌ ಪಕ್ಷದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಟೊಡ್‌ ಕಿನ್‌ಕೆನಾನ್‌ (ಸ್ವಲ್ಪ ವ್ಯಂಗ್ಯವಾಗಿ) ನೀಡಿರುವ ಸಲಹೆ ಬೆಚ್ಚಿಬೀಳಿಸುವಂತಿದೆ.

ರಿಪಬ್ಲಿಕನ್‌ ಪಕ್ಷದ ಅನೇಕರು ಮತ್ತು ಡೆಮಾಕ್ರೆಟಿಕ್‌ ಪಕ್ಷದ ಕೆಲವರು ಎಬೋಲಾ ಸೋಂಕು ಹಬ್ಬಿರುವ ಪಶ್ಚಿಮ ಆಫ್ರಿಕಾದ ರಾಷ್ಟ್ರಗಳಿಗೆ ವಿಮಾನ ಹಾರಾಟ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಅಂಶವನ್ನೇ ಇರಿಸಿಕೊಂಡು ರಾಯಿಟರ್ಸ್‌ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಮುಕ್ಕಾಲು ಪಾಲು ಅಮೆರಿಕ ನಿವಾಸಿಗಳು ಇದಕ್ಕೆ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ.

ಮೇಲ್ನೋಟಕ್ಕೆ ಇದು ವಿಚಿತ್ರ ಪರಿಕಲ್ಪನೆ ಅನಿಸಿದರೂ, ನಾವು ನಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ಕುರಿತ ಅಮೆರಿಕದ ಜನರ ಸಮ್ಮಿಶ್ರ ಗ್ರಹಿಕೆಯನ್ನು ಸೂಚಿಸುತ್ತದೆ. ಸತ್ಯ ಏನೆಂದರೆ ಎಬೋಲಾ ಸೋಂಕು ಗಂಭೀರವಲ್ಲ ಮತ್ತು ಅದು ಗಂಭೀರವೂ ಹೌದು. ಈ ಸೋಂಕು ಗಂಭೀರ ಅಲ್ಲ ಏಕೆಂದರೆ ನೈಜೀರಿಯಾ ಮತ್ತು ಸೆನಗಲ್‌ಗಳಂತಹ ರಾಷ್ಟ್ರಗಳೇ ಎಬೋಲಾವನ್ನು ಯಶಸ್ವಿಯಾಗಿ ತಡೆಗಟ್ಟಿವೆ ಎಂದ ಮೇಲೆ ಅತ್ಯಾಧುನಿಕ ವೈದ್ಯಕೀಯ ವ್ಯವಸ್ಥೆಗಳಿರುವ ಅಮೆರಿಕಗೂ ಈ ಸೋಂಕನ್ನು ತಡೆಯಲು ಸಾಧ್ಯ. ಡಲ್ಲಾಸ್‌ ಆಸ್ಪತ್ರೆ ಎಬೋಲಾ ಸೋಂಕು ತಪಾಸಣೆಯನ್ನು ಕೌಶಲದಿಂದ ನಡೆಸದಿರುವುದು, ಈ ಸೋಂಕು ಗಂಭೀರವೂ ಆಗಬಹುದು ಎಂಬುದಕ್ಕೆ ನಿರ್ದಶನ.

ಆದರೆ, ಎಬೋಲಾ ಮೇಲೆ ಚರ್ಚಿಸಿದಷ್ಟು ಸರಳವಾದ ಸೋಂಕಲ್ಲ. ಪಶ್ಚಿಮ ಆಫ್ರಿಕಾದಲ್ಲಿ ಇದು ಸಾಂಕ್ರಾಮಿಕವಾಗಿದೆ ಮತ್ತು ಆ ಪ್ರದೇಶದ ಇತರ ರಾಷ್ಟ್ರಗಳಿಗೂ ಪಸರಿಸುತ್ತಿದೆ. ಇದು ಭಾರತ, ಬಾಂಗ್ಲಾದೇಶ, ಚೀನಾದತ್ತ ಹಬ್ಬಬಹುದು. ಎಬೋಲಾ ಭಾರತಕ್ಕೆ ಏನಾದರೂ ತೀವ್ರವಾಗಿ ಹಬ್ಬಿದರೆ ಪರಿಣಾಮ ಭೀಕರವಾಗಿರುತ್ತದೆ.

ಎಬೋಲಾ ಸೋಂಕು ‘ಈ ತಲೆಮಾರಿನ ಮಾನವ ನಿರ್ಮಿತ ದೊಡ್ಡ ದುರಂತ’ ಆಗಬಾರದು ಎಂದಿದ್ದರೆ ಇದನ್ನು ತಡೆಯಲು ಹೆಚ್ಚಿನ ಸಂಪನ್ಮೂಲದ ಅಗತ್ಯ ಇದೆ ಎಂದು ‘ಆಕ್ಸ್‌ಫ್ಯಾಮ್‌’ (ಆಕ್ಸ್‌ಫರ್ಡ್‌ನ ಕ್ಷಾಮ ಪರಿಹಾರ ಸಮಿತಿ) ಸೂಕ್ತವಾಗಿ ಎಚ್ಚರಿಕೆ ನೀಡಿದೆ. ಸೋಂಕು ಏನಾದರೂ ಬಡ ರಾಷ್ಟ್ರಗಳಿಗೆ ಹಬ್ಬಿದರೆ ಅದು ಕಾಲಾನುಕ್ರಮೇಣ ಅಮೆರಿಕೆಗೂ ಕಾಲಿಡುತ್ತದೆ. ಜಾಗತೀಕರಣದ ಸಂದರ್ಭದಲ್ಲಿ ಎಬೋಲಾ ಸೋಂಕು ಎಲ್ಲಿದ್ದರೂ ಅದು ವಿಶ್ವದೆಲ್ಲೆಡೆ ಇರುವವರಿಗೆಲ್ಲಾ ಆತಂಕಕಾರಿ ಸೋಂಕು.

ಈ ಸೋಂಕು ದೇಶಗಳ ಸುರಕ್ಷತೆ ಮತ್ತು ಭದ್ರತೆಗೂ ಆತಂಕ ತಂದೊಡ್ಡಿದೆ. ಉಗ್ರರ ಕೈಗೇನಾದರೂ ಈ ಸೋಂಕು ಸಿಕ್ಕಿದರೆ ಇದನ್ನು ಅವರು ತಮ್ಮ ಶತ್ರುಗಳ ಮೇಲೆ ಪ್ರಯೋಗಿಸುವ ಎಲ್ಲಾ ಸಾಧ್ಯತೆಗಳೂ ಇವೆ. ಬಾಂಬ್‌ ದಾಳಿಗಿಂತ ಸಹಸ್ರಾರು ಜನರನ್ನು ಬಲಿ ತೆಗೆದುಕೊಳ್ಳುವ ಜೈವಿಕ ಅಸ್ತ್ರಗಳು ಉಗ್ರರಿಗೆ ಅನುಕೂಲವೇ ಆಗುತ್ತವೆ.

1992ರಲ್ಲಿ ಜಪಾನ್‌ ಉಗ್ರರ ಗುಂಪಾದ ಅಯುಮ್‌ ಶಿನ್ರಿಕ್‌ಯೊ ಕಾಂಗೊದಲ್ಲಿ ಎಬೋಲಾ ಸೋಂಕಿನ ಮಾದರಿಗಳನ್ನು ಒಂದು ಜೈವಿಕ ಭಯೋತ್ಪಾದನಾ ಅಸ್ತ್ರವಾಗಿ ಬಳಸಲು ಸಂಗ್ರಹಿಸುವ ಪ್ರಯತ್ನಕ್ಕೆ ಕೈಹಾಕಿತ್ತು. ಆದರೆ, ಯಶಸ್ವಿಯಾಗಲಿಲ್ಲ. ಆದರೆ, ಈಗ ಇಂತಹ ಮಾದರಿಗಳನ್ನು ವಿಧ್ವಂಸಕರು ಸಂಗ್ರಹಿಸುವುದು ಸುಲಭವಾಗಿದೆ. ಆತ್ಮಾಹುತಿ ದಾಳಿ ನಡೆಸುವವರು ಈ ಸೋಂಕಿನ ಮಾದರಿ  ಸಂಗ್ರಹಿಸಿಕೊಂಡು ಅಮೆರಿಕ ಮತ್ತಿತರ ದೇಶಗಳಿಗೆ ಹರಡಬಹುದು.

ಜಾಗತಿಕ ಆರೋಗ್ಯ ಎನ್ನುವುದು ಉಪೇಕ್ಷಿಸುವ ತಮಾಷೆಯ ವಿಷಯವಲ್ಲ. ಇದರಲ್ಲಿ ಪ್ರತಿಯೊಬ್ಬರ ಹಿತಾಸಕ್ತಿಯೂ ಅಡಗಿದೆ. ಜತೆಗೆ ಇದರಲ್ಲಿ ರಾಷ್ಟ್ರೀಯ ಭದ್ರತೆಯ ವಿಷಯವೂ ಸೇರಿದೆ. ಆದ್ದರಿಂದ ಎಬೋಲಾವನ್ನು ಅದರ ಮೂಲದಲ್ಲೇ ನಿವಾರಿಸಬೇಕು.  ವಿಮಾನ ಸಂಚಾರ ರದ್ದು ಮಾಡುವಂತಹ ಕ್ರಮಕ್ಕೆ ಮುಂದಾದರೆ ಗಿನಿ, ಲೈಬೀರಿಯಾ ಮುಂತಾದ ಪಶ್ಚಿಮ ಆಫ್ರಿಕಾ ದೇಶಗಳಿಗೆ ಆರೋಗ್ಯ ಕಾರ್ಯಕರ್ತರ ಸಂಪರ್ಕ ಮತ್ತು ಔಷಧಗಳ ರವಾನೆಗೆ ಅಡಚಣೆ ಆಗುತ್ತದೆ.

‘ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಪ್ರಯತ್ನದಲ್ಲಿ ವಿಮಾನ ಹಾರಾಟಗಳನ್ನು ರದ್ದು ಮಾಡಿದರೆ ಅದರಿಂದ ಸೋಂಕು ತಡೆಗೆ ಹಿನ್ನಡೆಯಾಗುತ್ತದೆ ಮತ್ತು ತಡೆಗಟ್ಟುವ ಪ್ರಯತ್ನ ಮತ್ತಷ್ಟು ದುಬಾರಿಯಾಗುತ್ತದೆ’ ಎಂದು 1976ರಲ್ಲಿ ಎಬೋಲಾ ಸೋಂಕನ್ನು ಪತ್ತೆ ಹಚ್ಚಲು ಶ್ರಮಿಸಿದ ಡಾ. ಪೀಟರ್‌ ಪಿಯೊಟ್‌ ಅಭಿಪ್ರಾಯಪಡುತ್ತಾರೆ.

‘ವಿಮಾನ ಹಾರಾಟ ರದ್ದು ಮಾಡುವ ನಿರ್ಧಾರ ಎಬೋಲಾ ಸೋಂಕು ತಡೆಯುವ ಪ್ರಯತ್ನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ’ ಎಂಬುದು ಈ ಸೋಂಕು ತಡೆಯುವ ಪ್ರಯತ್ನದಲ್ಲಿರುವ ಗುಂಪಿನ ವೈದ್ಯ ಪೌಲ ಅವರ ಖಚಿತ ನುಡಿ. ವಿಮಾನ ನಿಲ್ದಾಣಗಳಲ್ಲಿ ಎಬೋಲಾ ಸೋಂಕು ತಪಾಸಣೆ ಮಾಡುತ್ತಿರುವುದು ಗೊಂದಲ ಸೃಷ್ಟಿಸುವ ಕಾರ್ಯ ಎಂದು ವೈದ್ಯಕೀಯ ನಿಯತಕಾಲಿಕೆ ‘ಬಿಎಂಜೆ’ ತನ್ನ ಸಂಪಾದಕೀಯದಲ್ಲಿ ಬರೆದಿದೆ. ಕೆನಡಾದ ವಿಮಾನ ನಿಲ್ದಾಣಗಳಲ್ಲಿ ತೀವ್ರ ಉಸಿರಾಟ ತೊಂದರೆಗೆ ಒಳಗಾದವರನ್ನು ಪರೀಕ್ಷಿಸಲು ಸಾಧನ ಸಲಕರಣೆಗಳನ್ನು ಅಳವಡಿಸಲಾಗಿದೆ. ಈ ಸೋಂಕು ತಗುಲಿದೆ ಎಂದು ಶಂಕಿಸಲಾದ ಪ್ರಯಾಣಿಕರು ಪ್ರಶ್ನಾವಳಿಯ ಸರಮಾಲೆ ಜೊತೆಗೆ ಥರ್ಮಲ್ ಸ್ಕ್ಯಾನಿಂಗ್‌ಗೂ ಒಳಗಾಗಬೇಕಾಯಿತು. ಇದಕ್ಕಾಗಿ 1.50 ಕೋಟಿ ಡಾಲರ್‌ ವೆಚ್ಚ ಮಾಡಲಾಯಿತು. ಇಷ್ಟಾದರೂ ಎಬೋಲಾ ಸೋಂಕು ತಗುಲಿದ ಒಬ್ಬ ವ್ಯಕ್ತಿಯೂ ಪತ್ತೆಯಾಗಲಿಲ್ಲ. ವಿಮಾನ ನಿಲ್ದಾಣಗಳಲ್ಲಿ ನಡೆಯುತ್ತಿರುವ ಈ ಕಾರ್ಯದಿಂದ ಯಾವುದೇ ಉಪಯೋಗ ಇಲ್ಲ. ಬದಲಿಗೆ ಈ ಸಂಪನ್ಮೂಲವನ್ನು ಸೋಂಕು ಪೀಡಿತ ಪಶ್ಚಿಮ ಆಫ್ರಿಕಾದ ದೇಶಗಳಲ್ಲಿ ಬಳಕೆ ಮಾಡಿದ್ದರೆ ಎಷ್ಟೋ ಉಪಯೋಗವಾಗುತ್ತಿತ್ತು ಎಂದು ‘ಬಿಎಂಜೆ’ ಹೇಳಿದೆ.

ನಮ್ಮ ಗಡಿಗಳನ್ನು ಕುರಿತು ಆರೋಪ, ಪ್ರತ್ಯಾರೋಪ ಮಾಡುವುದರ ಅರ್ಧದಷ್ಟು ಶ್ರಮವನ್ನು, ಸೋಂಕು ಪ್ರಬಲವಾಗಿರುವ ಪಶ್ಚಿಮ ಆಫ್ರಿಕಾದತ್ತ ವಿನಿಯೋಗಿಸಿದ್ದರೆ ಅದರಿಂದ ನಿಜಕ್ಕೂ ಪ್ರಯೋಜನವಾಗುತ್ತಿತ್ತು. ಎಬೋಲಾ ಸೋಂಕನ್ನು ಸದೆಬಡೆಯ ಬೇಕಿದ್ದರೆ ಅಮೆರಿಕ ಮತ್ತು ಇತರ ರಾಷ್ಟ್ರಗಳು ಸೋಂಕು ಪೀಡಿತ ದೇಶಗಳತ್ತ ಮೊದಲು ಚಿತ್ತ ಹರಿಸಬೇಕು. ಅಧ್ಯಕ್ಷ ಬರಾಕ್‌ ಒಬಾಮ ಅವರು ತಮ್ಮ ನಾಲ್ಕು ಸಾವಿರ ಯೋಧರನ್ನು ಪಶ್ಚಿಮ ಆಫ್ರಿಕಾದ ಕಡೆಗೆ ಕಳುಹಿಸಿದರೆ ಅವರಿಗೆ ಭೇಷ್‌ ಎನ್ನಬಹುದು. ಆದರೆ ಅಮೆರಿಕ ಮತ್ತು ಇನ್ನಿತರ ದೇಶಗಳು ಈ ಕುರಿತು ಇನ್ನಷ್ಟು ಚುರುಕಾಗಿ ಕ್ರಮ ಕೈಗೊಳ್ಳಬೇಕು.
ಎರಡರಿಂದ ನಾಲ್ಕು ವಾರಗಳ ಅವಧಿಯಲ್ಲಿ ಎಬೋಲಾ ಪೀಡಿತರ ಸಂಖ್ಯೆ ದ್ವಿಗುಣವಾಗುತ್ತಿರುವ ದೇಶಗಳು ಈ ಸೋಂಕಿನ ವಿರುದ್ಧ ಏಕಾಂಗಿಯಾಗಿ ಹೋರಾಡಲು ಸಾಧ್ಯವಿಲ್ಲ. ಲೈಬೀರಿಯಾದಲ್ಲಿ ವೈದ್ಯೋಪಚಾರ ನೀಡುವಂತಹ 50 ವೈದ್ಯರು ಮಾತ್ರ ಇದ್ದಾರೆ. ಆದರೆ, ಅಮೆರಿಕದಲ್ಲಿ ಲೈಬೀರಿಯಾದ ಮೂಲದ ವೈದ್ಯರ ಸಂಖ್ಯೆ ಲೈಬೀರಿಯಾದಲ್ಲಿರುವುದಕ್ಕಿಂತ ಹಲವು ಪಟ್ಟು ಹೆಚ್ಚಿದೆ ಎಂದು ರಾಯಿಟರ್ಸ್‌ ಮೂಲಗಳು ತಿಳಿಸಿವೆ. ಈ ಬೌದ್ಧಿಕ ವಲಸೆಯ ಅರ್ಥವೆಂದರೆ, ಲೈಬೀರಿಯಾ ದೇಶ ಅಮೆರಿಕಗೆ ವೈದ್ಯಕೀಯ ವಿದೇಶೀ ನೆರವು ನೀಡುತ್ತಿದೆ ಎಂದು.

ಉತ್ತಮ ದೇಶ, ಸ್ನೇಹಪರ ಜನರು ಆದರೆ ಹೃದಯಹೀನ ವೈದ್ಯೋಪಚಾರಕರು. ರಸ್ತೆ, ವಿದ್ಯುತ್‌ ಮತ್ತು ಮೂಲಸೌಕರ್ಯಗಳು ನಿಕೃಷ್ಟ– ಇದು ಲೈಬೀರಿಯಾದ ಸ್ಥೂಲ ಸ್ಥಿತಿಗತಿ. ಡಲ್ಲಾಸ್‌ನ ಕೌಬಾಯ್ಸ್‌ ಫುಟ್‌ಬಾಲ್‌ ಮೈದಾನದಲ್ಲಿ ಬಳಕೆ ಯಾಗುವ ಮೂರನೇ ಒಂದು ಭಾಗದಷ್ಟು ವಿದ್ಯುಚ್ಛಕ್ತಿ ಯನ್ನೂ ಲೈಬೀರಿಯಾ ಉತ್ಪಾದನೆ ಮಾಡುತ್ತಿಲ್ಲ. ಈ ಕಾರಣಗಳಿಂದಲೇ ಪಶ್ಚಿಮ ಆಫ್ರಿಕಾದ ದೇಶಗಳಿಗೆ ಅಮೆರಿಕದ ಸೇನೆ ನೀಡುತ್ತಿರುವ ನೆರವು ಮಹತ್ವದ್ದಾಗಿದೆ. ವಿಶ್ವಸಂಸ್ಥೆಯ ಎಬೋಲಾ ಪರಿಹಾರ ನಿಧಿ ಈ ರಾಷ್ಟ್ರಗಳಿಗೆ ನೆರವಿನ ಮೊತ್ತದ ಮಿತಿಯನ್ನು ಹೆಚ್ಚಿಸಿದೆ. ಎಬೋಲಾ ಸೋಂಕು ತಡೆಯಬೇಕು ಎಂಬುದು ಎಲ್ಲರ ಕಳಕಳಿ. ಈ ನಿಟ್ಟಿನಲ್ಲಿ ಅಮೆರಿಕನ್ನರು ಸಹನೆಯಿಂದ ವರ್ತಿಸಿ, ಅವರ ದೇಶಕ್ಕೆ ಈ ಸೋಂಕು ಕಾಲಿಡದಂತೆ ತಡೆಯಲು ಅದನ್ನು ಅದರ ಮೂಲ ದಲ್ಲೇ ನಿವಾರಿಸುವ ಪ್ರಯತ್ನಕ್ಕೆ ಕೈ ಜೋಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT