ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದಡಗಳ ಸಾಂಗತ್ಯ ತೋರಿದ ಕವಿ ಕಣವಿ

Last Updated 22 ಜೂನ್ 2013, 19:59 IST
ಅಕ್ಷರ ಗಾತ್ರ

ಕನ್ನಡ ಭಾವಗೀತೆ ಕಾವ್ಯ ಪರಂಪರೆಯ ಶ್ರೇಷ್ಠ ಕವಿಗಳಲ್ಲೊಬ್ಬರಾದ ಚೆನ್ನವೀರ ಕಣವಿ (ಜ: ಜೂನ್ 28, 1928) ಅವರಿಗೀಗ ಎಂಬತ್ತೈದು. ಇಪ್ಪತ್ತರ ಹರಯದಲ್ಲಿ ಕಣವಿಯವರ ಮೊದಲ ಕವನ ಸಂಕಲನ `ಕಾವ್ಯಾಕ್ಷಿ' ಪ್ರಕಟವಾಯಿತು. ಅದಕ್ಕೆ ಮುನ್ನುಡಿ ಬರೆದದ್ದು ಬೇಂದ್ರೆಯವರು. “ಅವರ ಕವನದಲ್ಲಿ ಜೀವಂತಗತಿಯಿದೆ, ಮಾತಿಗೆ ಅಚ್ಚುಕಟ್ಟು ಇದೆ. ಅಲ್ಪ ಸಂತುಷ್ಟಿ ಇಲ್ಲ. ಮಹತ್ತಿನ ಕಡೆಯ ಎಳೆತವಿದೆ.

ಅವರ ಬೆಳೆವ ಮನಸ್ಸೂ, ಅಂತಃಕರಣವೂ ವಿಕೃತ ಕ್ಷೋಭದಿಂದ ಮುದುಡಿಕೊಂಡಿಲ್ಲ; ವಿಪರೀತ ವಿಕಾರಗಳಿಂದ ಹರಿತವಾಗಿಲ್ಲ” ಎಂದು ಬೇಂದ್ರೆಯವರು ಹೊಸಕವಿಯ ಅನೇಕ ಮುಖ್ಯ ಲಕ್ಷಣಗಳನ್ನು ಆಗಲೇ ಗುರುತಿಸಿದರು. ಮುಂದೆ ಪುತಿನ ಅವರೂ ಕಣವಿಯವರ ಕಾವ್ಯದಲ್ಲಿ ಲೋಕೋತ್ತರ ಸ್ಫುರಿತಗಳನ್ನು ಕಂಡರು.

`ಕಾವ್ಯಾಕ್ಷಿ'ಯ ಕವಿತೆಯಲ್ಲಿ ಕಣವಿಯವರು ಕವಿಯಾಗಿ ಕಣ್ತೆರೆವ ಕುರಿತು ಒಂದು ಸುಂದರ ಕಥೆ ಇದೆ. ಮೋಡಗಳ ನಾಡಿನಿಂದ ಯಕ್ಷಕನ್ನಿಕೆಯೊಬ್ಬಳು ಇಂದ್ರಚಾಪವನ್ನು ಕರಗಿಸಿ ಹನಿಯಾಗಿ ಸುರಿಸಿದಳು. ಆಗ ಈ ಎಳೆಯ ಕವಿಯ ಕಣ್ಣುಗಳು ತೆರೆದುಕೊಂಡವು. “ತನಗೆ ತಾನೆ ತಿಳಿಯದಂತೆ ತುಳುಕಿತಹಹ ಭಾವನಾ”. ಕವಿಯ ಆತ್ಮವೃತ್ತದಂತಿರುವ `ಭಾವಜೀವಿ' ಎಂಬ ಮುಂದಿನ ನೀಳ್ಗವಿತಾ ಸಂಕಲನ ಇದೇ ಕಥೆಯನ್ನು ಮುಂದುವರಿಸಿದೆ. ಕವಿ `ಭಾವಜೀವಿಯು ನಾನು' ಎಂದು ಘೋಷಿಸುತ್ತಾರೆ.

ಅವರ ಅರವತ್ತು ವರ್ಷಕ್ಕೂ ಮಿಕ್ಕಿದ ಕಾವ್ಯ ವ್ಯವಸಾಯದಲ್ಲಿ ಈ ಭಾವಜೀವನದ ವಿಕಾಸ, ವಿಲಾಸ ನಡೆದೇ ಇದೆ. ಕಾವ್ಯದ ಕುರಿತು, ಕಾವ್ಯ ಚಿಂತನೆಯ ಕುರಿತು ಉದಾರ ಮಾನವತಾವಾದಿ ಧೋರಣೆಯನ್ನೇ ಹೊಂದಿರುವ ಕವಿ ಹೊರಗಿನಿಂದ ಬಂದ ಅನೇಕ ಹಕ್ಕೊತ್ತಾಯಗಳನ್ನು ತಾಳ್ಮೆಯಿಂದಲೇ ಕೇಳಿಸಿಕೊಂಡು, ತನ್ನ ಸಂವೇದನೆಯ ಭಾಗವಾಗಿಸಿಕೊಳ್ಳಲು ಪರೀಕ್ಷೆಗೊಡ್ಡಿಕೊಂಡು ಕಾವ್ಯರಚನೆಯಲ್ಲಿ ವಿಶಿಷ್ಟ ಹದವನ್ನು ಸಾಧಿಸಿಕೊಂಡಿದ್ದಾರೆ. ನೆಲ-ಮುಗಿಲು, ಎರಡು ದಡ ಕಣವಿಯವರಲ್ಲಿ ಮರುಕಳಿಸುವ ರೂಪಕಗಳು, ಮೊದಲಿಗೆ ಅವರ ಸುಪ್ರಸಿದ್ಧ ಸುನೀತ (ಸಾನೆಟ್) `ನೆಲ-ಮುಗಿಲು' ಗಮನಿಸಬಹುದು.

ಕಣಕಣದ ಗತಿ-ಮತಿಯ ಗುರುತಿಸು, ಆದರೀಗಲೆ
ಅದರ ಇತಿವೃತ್ತವನು ಬರೆಯದಿರು
ಎಂದು ಆರಂಭವಾಗುವ ಈ ಕವಿತೆ ಕಣದ ಚಲನೆಗೆ `ವಿಶ್ವವೆಲ್ಲವು ತೆರೆದ ಬಾಗಿಲೆ' ಆದುದರಿಂದ `ಕೊರೆಯದಿರು ದಾರಿಯನು' ಎಂದು ಕೋರುತ್ತದೆ.
ಆಕಾಶ ಕೈ ಹಿಡಿದು ಎತ್ತುವದು, ಮುತ್ತಿಕ್ಕಿ
ಭೂಮಿಗಿಳಿಸುವದು, ತೊಡೆಯ ಮೇಲಾಡುವದು ಮಗು
ತಾಯ ಮೊಗ ಸೂರ್ಯಪಾನವು ಹೊರಳೆ ಹೊಂಬೆಳಗು;
... ... .... ...
ಗುರುತ್ವಾಕರ್ಷಣ ಕರುಣೆ - ಕೇಂದ್ರ ನೆಲದೊಡಲು
ಬಾನತೀಂದ್ರಿಯ ಸ್ಪರ್ಶ - ತುಂಬಿ ತೇಲಿವೆ ಮುಗಿಲು

ನೆಲ ಮುಗಿಲುಗಳ ನಡುವೆ ನೀರಕಣಗಳ ಚಲನೆ ನಡೆದೇ ಇದೆ. ಭೂಮಿಯ ಬದುಕಿಗೆ ಅತೀಂದ್ರಿಯದ ನೆರೆ, ನೆರವು ಇಷ್ಟು ಸರಳ, ಇಷ್ಟು ಸಹಜ ಎಂಬೀ ಕವಿತೆಯ ನಿಲುವು ಒಟ್ಟಾರೆಯಾಗಿ ಕಣವಿಯವರ ಸಮಗ್ರ ಕಾವ್ಯದ ಮನೋಧರ್ಮವನ್ನೂ ಹೇಳುವಂತಿದೆ. ಅದು ವಿರೋಧಗಳ ಸಮನ್ವಯವಲ್ಲ, ಅವೆರಡರ ನಿರಂತರ ಸಾಂಗತ್ಯ. ಇದನ್ನೇ ಅವರ `ಎರಡು ದಡ' ಎಂಬ ಇನ್ನೊಂದು ಕವಿತೆಯೂ ಸೂಚಿಸುತ್ತದೆ.

ಕವಿ ನಿಂತ ದಡವೊಂದು, ಮುಂದೆ ಆಚೆದಡ, ನಡುವೆ ನದಿ ದೂರದಲ್ಲಿ ಮಂಜಿನಂಚಿಗೆ ಜಡೆಗಟ್ಟಿ ಕುಳಿತ ಬೆಟ್ಟ. ಕವಿ ಕೇಳಿಕೊಳ್ಳುತ್ತಾರೆ- “ನಿಂತಿರುವ ದಂಡೆ ವಾಸ್ತವವೆನಲು ಆಚೆ ದಡ ಕಲ್ಪನೆಯೆ?” (ಖಂಡಿತ ಇಲ್ಲ, ನದಿಗಿನ್ನೊಂದು ದಡ ಇರಲೇಬೇಕು!). ಈಸು ಬಂದರೂ ಸಲೀಸು ತಲುಪಬಹುದೇ ಆಚೆ ದಂಡೆಯನ್ನು? ನಿಂತವನ ಕಾಲುಗಳು ಕುಸಿಯಹತ್ತಿವೆ. ಆದರೆ,
ಎರಡು ದಡಗಳ ನಡುವೆ ಹಾಯಿಬಿಚ್ಚಿವೆ ದೋಣಿ,
ಮುಳುಗಿ ಮಿನುಗಾಡುತಿವೆ ಮೀನು, ದೂರ ನೀಲಶ್ರೇಣಿ

ಬದುಕಿನ ಎಲ್ಲ ದ್ವಂದ್ವಗಳನ್ನೂ (ಹಾಗೆ ಕಾಣುವ ಚಿಂತನಾಕ್ರಮವನ್ನೂ) ಮೀರುವ ಉಪಾಯಗಳು ಅಲ್ಲೇ ಇವೆ ಎಂಬುದನ್ನು ಮುಳುಗಿ ಮಿನುಗಾಡುತಿರುವ ಮೀನುಗಳ ಮೂಲಕ, ತೇಲಿ ಚಲಿಸುತ್ತಿರುವ ದೋಣಿಯ ಮೂಲಕ, ದೂರ ನೀಲಶ್ರೇಣಿಯ ಗಮ್ಯದ ಮೂಲಕ ತೋರುತ್ತಿರುವ ಈ ಕವಿತೆ ಕಣವಿಯವರ ಮಹತ್ವದ ಸೃಷ್ಟಿಗಳಲ್ಲಿ ಒಂದಾಗಿದೆ.

`ನಂಬಿಕೆ' ಈ ಕವಿಯ ಇನ್ನೊಂದು ಸಂಕೀರ್ಣವಾದ ಕವಿತೆ. ನಿಗೂಢವಾದದ್ದನ್ನು, ಅನಂತವಾದುದನ್ನು ಒಂದು ಬಗೆಯಲ್ಲಿ ಅಗಮ್ಯವೆಂದೇ ಹೇಳಬಹುದಾದ್ದನ್ನು ಅರಿವಿಗೆ, ಅನುಭವಕ್ಕೆ ತಂದುಕೊಳ್ಳಬಹುದಾದ ಸಾಧನಗಳಲ್ಲಿ ನಂಬಿಕೆಯೂ ಒಂದಾಗಿದೆ. ನಿರಾಕಾರವಾದುದನ್ನು ನಂಬಿಕೆ ಒಂದು ಆಕೃತಿಗೆ ತಂದುಕೊಂಡೇ ಅದರ ಅಸಾಧಾರಣ ಸ್ವರೂಪವನ್ನು ಅರಿಯಲೆತ್ನಿಸುತ್ತದೆ. `ಅನಂತವೆಂದರೂ ಆಕಾಶಕೊಂದು ಆಕೃತಿಯುಂಟು' ಇದು ಈ ಕವಿತೆಯ ಮೊದಲ ಸಾಲು.

ಕವಿತೆ ಮುಗಿಯುವ ಹಂತದಲ್ಲಿ `ನನ್ನ ನಂಬಿಕೆಯೊಂದು ಆಕಾಶ' ಎಂದು ಕವಿ ತನ್ನ ಕವಿತೆಯನ್ನು ಬೇರೆಯದೇ ನೆಲೆಗೆ ಕರೆದೊಯ್ಯುತ್ತಾನೆ. `ನಮ್ಮ ಬದುಕಿನಲ್ಲಿ ನಾವು ಮಗ್ನರಾದರೆ ಸಾಕು'. ಆಗಸದಲ್ಲಿ ಲೆಕ್ಕವಿಲ್ಲದೆ ಹೊಳೆವ ನಕ್ಷತ್ರಗಳು ಬುವಿಯ ಬಾಳಿಗೆ ಬೆಳಕು ಸುರಿಸುತ್ತಿವೆ. ನಮ್ಮನ್ನು ಬಾನಿನ ಕರುಣೆ ಅನೂಹ್ಯ ಬಗೆಗಳಲ್ಲಿ ಸಲಹುತ್ತಿದೆ. ಕಡ ತಂದ ಎಲ್ಲ ವಿಚಾರಗಳ ಬೆಳಕೂ ಆರಿ ಹೋದಾಗ ನಮ್ಮ ನಂಬಿಕೆಯೆಂಬ ಆಕಾಶದ ತಾರಾಪಥವೇ ನಮ್ಮನ್ನು ಮುನ್ನಡೆಸುವುದು, ಇದು ಈ ಕವಿತೆಯ ನಂಬಿಕೆ.

ಕವಿಯ ನಂಬಿಕೆಯೂ ಹೌದೆಂಬುದಕ್ಕೆ ಅವರ ಅನೇಕ ಗೀತೆಗಳನ್ನು ನಿದರ್ಶನವಾಗಿ ಉದಾಹರಿಸಬಹುದು. `ಹೂವು ಹೊರಳುವವು ಸೂರ್ಯನ ಕಡೆಗೆ, ನಮ್ಮ ದಾರಿ ಬರಿ ಚಂದ್ರನವರೆಗೆ' ಎಂದು ಆರಂಭವಾಗುವ ಅವರ ಸುಪ್ರಸಿದ್ಧ ಹಾಡು ಕೊನೆಯಾಗುವುದು-
ಸಹಜ ನಡೆದರೂ ಭೂಮಿಯ ಲಯದಲಿ
ಪದಗಳನಿರಿಸಿದ ಹಾಗೆ
ವಿಶ್ವದ ರಚನೆಯ ಹೊಳಹಿನಲ್ಲಿ
ಕಂಗೊಳಿಸಿತು ಕವಿತೆಯು ಹೀಗೆ

ಕಣವಿಯವರು ಪ್ರೀತಿ, ಶ್ರದ್ಧೆಯಿಂದ ನಡೆದುಕೊಂಡು ಬಂದಿರುವ ಕಾವ್ಯ ವ್ಯವಸಾಯ ಸಮಕಾಲೀನತೆ, ಸಾರ್ವಕಾಲಿಕತೆಗಳ ಸಮತೋಲನ. ಸಮಗ್ರದೃಷ್ಟಿ ಅವರ ಕಾವ್ಯದಲ್ಲಿ ಒಳಗೊಳ್ಳುವ, ಒಂದಾಗುವ ಬಗೆ ಚೇತೋಹಾರಿಯಾದುದು. ಅಂಬೆಗಾಲಿಡುವ ಮಗು, ಅದರ ನಗು ಬಾಳಿಗೆ ದೀಪವೂ ಹೌದು (ದೀಪಧಾರಿ). ಹಸುಳೆ ನಗು ಹೂ ಬಿಸಿಲೂ ಹೌದು (ರಂಜನಾ).

ಅಂಬಿಗರ ಚೌಡಯ್ಯ `ಹುಟ್ಟು ಹಾಕುವನು' ಎರಡೂ ದಡಕೆ ಎಂದು ಒಂದು ಸಂಸ್ಕೃತಿಯ ಚಲನಶೀಲತೆಯನ್ನು ಸ್ಥಾಯಿ ಪ್ರತಿಮೆಯಾಗಿ ಸೃಜಿಸುವ `ಚೈತನ್ಯ ತ್ರಿಕೂಟ' ಎಂಬ ಕಣವಿಯವರ ಅಷ್ಟೇನೂ ಪ್ರಸಿದ್ಧವಲ್ಲದ ಸಾನೆಟ್ ಅಂದಿನ ಅನುಭವವನ್ನು ಇಂದಿನದು ಮತ್ತು `ಎಂದಿನದೂ' ಆಗಿ ಕಟ್ಟಿಕೊಡುವ ಬಗೆ ಅಪೂರ್ವ ಸಂಭವವೆನ್ನಬೇಕು. `ಹಂಗರಹಳ್ಳಿ' ಜೀತದಾಳುಗಳ ದುಃಖ, ಭೂಮಾಲಿಕರ ಕ್ರೌರ್ಯದ ಚಿತ್ರವನ್ನು ತೋರುತ್ತಾ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಹೊತ್ತಿನಲ್ಲಿ ಬೇಗುದಿಯ ಉದ್ಗಾರ ಹೊರಡಿಸಿದೆ.

ದಾಟಿ ಹೋಗಿವೆ ನೂರು ಕೋಟಿಯಲಿ ಜನ ಸಂಖ್ಯೆ
ಉಳಿದದ್ದು ಮನುಷ್ಯರೆಲ್ಲಿದ್ದಾರೆನುವ ಶಂಕೆ
`ಕುಟಿಲ ರಾಜಕೀಯದಿಂದ ಬಗ್ಗಡಗೊಂಡ ಭ್ರಷ್ಟತೆಗೀಡಾಗುತ್ತಿರುವ ನಾಡಜೀವನ, ನಾವು ಬದುಕುತ್ತಿರುವ ಸಾಮಾಜಿಕ ಪರಿಸರ' ತನ್ನ ಕಾವ್ಯದ ಪ್ರೇರಣೆಗಳಲ್ಲಿ ಕೆಲವೆಂದು ಕವಿ ಹೇಳಿದ್ದಿದೆ. `ಜಗವ ತುಂಬಿದೆ ಬೆಳಕು ನಮಗೇಕೊ ಸಾಲದಿದೆ' ಎಂಬ ಅವರ ಕವಿತೆಯ (ಚಿರಂತರನ ದಾಹ') ಸಾಲನ್ನು ನೆನಪಿಸಿಕೊಳ್ಳಬೇಕು. ಮಾನವನೆದೆಯ ಕತ್ತಲಿನಾಳ ಎಷ್ಟು ದೊಡ್ಡದೆಂದರೆ ಎಷ್ಟು ಬೆಳಕು ಸುರಿದರೂ ಅದು ಇಂಗಿ ಹೋಗುತ್ತಲೆ ಇದೆ. `ಎಷ್ಟು ಸೆಲೆಯೊಡೆದರೂ ವಿಫಲ ವಿಫಲ...'.

ಅವರ `ಜೀವ ಧ್ವನಿ' ಕವನ ಸಂಕಲನದಲ್ಲಿ `ಧ್ವನಿ - ಧ್ವನಿ' ಎಂಬ ಕವಿತೆಯಿದೆ. `ಎಷ್ಟೋ ದನಿಗೆ ಕಿವುಡರು ನಾವು ಕಂಡೂ ಕಂಡು' ಎಂಬುದು ಈ ಕವಿತೆಯ ಒಂದು ಮುಖ್ಯ ಸಾಲು. ಅದರಿಂದ ನಾವು `ಮಹದನುಭವ' ಕಳೆದುಕೊಂಡ, ಕಳಚಿಕೊಂಡ ಸರಪಳಿ ತುಣುಕಾಗಿ ಬಿಟ್ಟಿದ್ದೇವೆ. ತನಿಗೊಂಡ ಮಕ್ಕಳುಲಿ - ಮಳೆ - ಗಾಳಿ ಹೊಯ್ಲು ಅಬ್ಬರಿಸುವ ತಡಸಲು, ಗುಬ್ಬಿಗುಟುರು, ಮರ ಮರವ ಹೊಕ್ಕು ತೀಡುವ ಗಾಳಿ, ಕೆರೆಯ ಪುಟ್ಟ ಅಲೆ, ಕಡಲಿನ ದೊಡ್ಡ ತೆರೆ... ಕವಿತೆ ನಾವು ಮರೆತ ಧ್ವನಿ ಲೋಕವನ್ನು ತೆರೆಯುತ್ತಾ ಥಟ್ಟನೆ `ಎಲ್ಲಿ ಏಕಾಂತದಲಿ ಮಿಡಿದು ಮಾರ್ದನಿಗೊಳ್ಳುವ ನನ್ನೊಳದನಿ?' ಎಂದು ಪ್ರಶ್ನಿಸಿಕೊಳ್ಳುತ್ತದೆ.

ದಿನಗಳ ಚೀರಾಟಗಳ ನಡುವೆ ಒಳದನಿಯನ್ನು ಕಾಪಾಡಿಕೊಳ್ಳುವುದು, ಕೇಳಿಸಿಕೊಳ್ಳುವುದು ಹೇಗೆಂಬುದೇ ಮುಖ್ಯ ಸವಾಲು. ಆ ಸವಾಲನ್ನು ಕಣವಿ ಯಶಸ್ವಿಯಾಗಿ ಎದುರುಗೊಳ್ಳುತ್ತಾ ಬಂದಿದ್ದಾರೆ. ಒಳದನಿಯನ್ನು ಕಾಪಾಡಿಕೊಂಡು ಕಾವ್ಯದ ನಿಜದನಿಯಾಗಿ ಬಾಳಿದ್ದಾರೆ. ಕಾವ್ಯದ ನಿಜಸ್ವರೂಪ ಕಾಪಾಡಿಕೊಳ್ಳಲು ಅವರು ನಡೆಸಿದ ನಿರಂತರ ಕಾವ್ಯ ಕೃಷಿಗಾಗಿ ಅವರಿಗೆ ಕಾವ್ಯಪ್ರೇಮಿಗಳ ಅಪಾರ ಕೃತಜ್ಞತೆ, ಅಭಿನಂದನೆಗಳು ಸಲ್ಲುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT