ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ರಾಜ್ಯ: ಒಂದೇ ಹಂತದ ಚುನಾವಣೆ

ಮಹಾರಾಷ್ಟ್ರ– ಹರಿಯಾಣ ವಿಧಾನಸಭೆಗಳಿಗೆ ಅ.15ರಂದು ಮತದಾನ
Last Updated 12 ಸೆಪ್ಟೆಂಬರ್ 2014, 19:40 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಾಂಗ್ರೆಸ್‌ ಆಡಳಿತದ ಮಹಾ­ರಾಷ್ಟ್ರ ಹಾಗೂ ಹರಿಯಾಣ  ವಿಧಾನಸಭೆ­ಗಳಿಗೆ ಅ.15ರಂದು ಚುನಾವಣೆ ನಡೆಯಲಿದೆ. ಲೋಕಸಭಾ ಚುನಾವಣೆಯ ನಂತರ ನಡೆಯಲಿ­ರುವ ಈ ಮೊದಲ ಪ್ರಮುಖ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಎದುರಿಸಿ ಮತ್ತೆ ಅಧಿಕಾರ­ಕ್ಕೇರುವ ಸವಾಲು ಕಾಂಗ್ರೆಸ್‌ ಮುಂದಿದೆ. ಹಾಗೆಯೇ ರಾಜ್ಯ ವಿಧಾನಸಭೆಗಳ ಮೇಲೆ ಹಿಡಿತ ಸಾಧಿಸುವ ಉತ್ಸಾಹದಲ್ಲಿ ಬಿಜೆಪಿ ಇದೆ.

ಮಹಾರಾಷ್ಟ್ರದಲ್ಲಿ 288 ಕ್ಷೇತ್ರಗಳು ಹಾಗೂ ಹರಿಯಾಣದಲ್ಲಿ 90 ಕ್ಷೇತ್ರ­ಗಳಿಗೆ ನಡೆಯುವ ಚುನಾವಣೆಯ ಫಲಿತಾಂಶ  ಅ.19ರಂದು ಹೊರ­ಬೀಳ­ಲಿದೆ. ಹರಿಯಾಣದಲ್ಲಿ ಸರ್ಕಾರದ ಅವಧಿ ಅ. 27ರಂದು ಹಾಗೂ ಮಹಾರಾಷ್ಟ್ರದಲ್ಲಿ ನ.8ರಂದು ಕೊನೆಯಾಗಲಿದೆ. ಚುನಾವಣೆ ಪ್ರಕ­ಟಿಸ­ಲಾಗಿರುವ ಎಲ್ಲ ಕ್ಷೇತ್ರ­ಗಳಲ್ಲೂ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ.

ಕೆಲವು ತಿಂಗಳುಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮಹಾ­ರಾಷ್ಟ್ರದ 48 ಕ್ಷೇತ್ರಗಳ ಪೈಕಿ 23ರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ, ಅದರ ಮಿತ್ರ ಪಕ್ಷವಾದ ಶಿವಸೇನೆಯು 18ರಲ್ಲಿ ಜಯ­ಭೇರಿ ಬಾರಿಸಿತ್ತು. ಸೊರಗಿ ಹೋಗಿರುವ ಕಾಂಗ್ರೆಸ್‌ ಪಕ್ಷವು ಕೇವಲ ಎರಡು ಸ್ಥಾನಗಳಲ್ಲಷ್ಟೇ ಗೆದ್ದಿತ್ತು.
ಈ ರಾಜ್ಯದಲ್ಲಿ 15 ವರ್ಷಗಳಿಂದ ಅಧಿಕಾರ­ದಲ್ಲಿರುವ ಕಾಂಗ್ರೆಸ್‌ ಹಾಗೂ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಮೈತ್ರಿಕೂಟವನ್ನು ಅಧಿಕಾರ­ದಿಂದ ಕೆಳಕ್ಕಿಳಿ­ಸಿದರೆ ಬಿಜೆಪಿಯ ಶಕ್ತಿ ಇನ್ನಷ್ಟು ವೃದ್ಧಿಸಲಿದೆ. ಹಾಗೆಯೇ ಒಂದೊಮ್ಮೆ ಈಗಿನ ಮೈತ್ರಿಕೂಟವೇ ಅಧಿಕಾರ ಉಳಿಸಿ­ಕೊಳ್ಳುವಲ್ಲಿ ಯಶಸ್ವಿ­ಯಾದರೆ ರಾಷ್ಟ್ರ­ಮಟ್ಟ­ದಲ್ಲಿ ನೆಲಕಚ್ಚಿರುವ ಕಾಂಗ್ರೆಸ್‌ಗೆ ಅದು ಪುನಶ್ಚೇತನ ನೀಡಲಿದೆ.

ಹರಿಯಾಣದಲ್ಲಿ: ಹರಿಯಾಣದಲ್ಲಿ ಓಂ ಪ್ರಕಾಶ್‌ ಚೌತಾಲಾ ಅವರ ಐಎನ್‌ಎಲ್‌ಡಿ ಪಕ್ಷವು ಪ್ರಮುಖ ಪ್ರತಿಪಕ್ಷವಾಗಿದೆ. ಮಾಜಿ ಮುಖ್ಯಮಂತ್ರಿ

ಭಜನ್‌ಲಾಲ್‌ ಮತ್ತು ಅವರ ಪುತ್ರ ಕುಲದೀಪ್‌ ಬಿಷ್ಣೋಯ್‌ ನೇತೃತ್ವದ ಜನಹಿತ ಕಾಂಗ್ರೆಸ್‌ ಪಕ್ಷವು ಮತ್ತೊಂದು ಪ್ರಮುಖ ಪ್ರಾದೇಶಿಕ ಪಕ್ಷವಾಗಿದೆ.
ಏಪ್ರಿಲ್‌ನಲ್ಲಿ ನಡೆದ ಲೋಕಸಭಾ ಚುನಾವಣೆ­ಯಲ್ಲಿ ಹರಿಯಾಣದ 10 ಕ್ಷೇತ್ರಗಳ ಪೈಕಿ ಬಿಜೆಪಿ 7ರಲ್ಲಿ ಗೆಲುವಿನ ನಗೆ ಬೀರಿದ್ದರೆ, ಐಎನ್‌ಎಲ್‌ಡಿ 2 ಸ್ಥಾನಗಳಲ್ಲಿ ಗೆಲುವು ಕಂಡಿತು. ಆಡಳಿತಾ­ರೂಢ ಕಾಂಗ್ರೆಸ್‌ ಒಂದರಲ್ಲಿ ಮಾತ್ರ ಗೆಲುವು ಕಂಡಿತು.

ರಾಹುಲ್‌ಗೆ ಸತ್ವ ಪರೀಕ್ಷೆ: ಲೋಕಸಭಾ ಚುನಾವಣೆಯ ಶೋಚ­ನೀಯ ಕುಸಿತದ ನಂತರ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಮುಂದಾಳತ್ವದ ವೈಖರಿ ಬಗ್ಗೆ ಈಗಾ­ಗಲೇ ಪಕ್ಷ­ದೊಳಗೇ ಅಪಸ್ವರದ ಧ್ವನಿ ಕೇಳಿಬರುತ್ತಿದೆ. ಒಂದೊಮ್ಮೆ ಈ ಎರಡು ರಾಜ್ಯಗಳ ವಿಧಾನಸಭಾ ಚುನಾವಣೆ­ಯಲ್ಲಿ ಕಾಂಗ್ರೆಸ್‌ಗೆ ಸೋಲುಂಟಾದರೆ ರಾಹುಲ್‌ ವಿರುದ್ಧದ ಧ್ವನಿ ಇನ್ನಷ್ಟು ಗಟ್ಟಿ­ಗೊಳ್ಳುವ ಸಾಧ್ಯತೆಯೂ ಇದೆ.

ಜಮ್ಮು ಮತ್ತು ಕಾಶ್ಮೀರ: ನಂತರದಲ್ಲಿ ನಿರ್ಧಾರ
ಅತ್ಯಂತ ಭೀಕರ ಪ್ರವಾಹಕ್ಕೆ ಸಿಲುಕಿ­ರುವ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಆಯೋಗವು ಕೂಲಂಕಷವಾಗಿ ಅವ­ಲೋಕಿ­ಸುತ್ತಿದೆ.  ಪರಿಸ್ಥಿತಿ ತಹ­ಬಂದಿಗೆ ಬಂದ ಮೇಲೆ ನಿರ್ಧಾರ ತೆಗೆದು­ಕೊಳ್ಳಲಾಗುವುದು’
– ಮುಖ್ಯ ಚುನಾವಣಾ ಆಯುಕ್ತ ವಿ.ಎಸ್‌.ಸಂಪತ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT