ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಜಾತಿಯವರ ಹೊಣೆಯಲ್ಲವೇ?

Last Updated 16 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಈ ಬಾರಿಯ ಅಕ್ಟೋಬರ್ ೨ರ ಗಾಂಧಿ ಜಯಂತಿಯಂದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಕಸಪೊರಕೆ ಹಿಡಿದು ಕಸ ಗುಡಿಸಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿ­ದರು. ಹಾಗೆಯೇ ಮೋದಿಯವರ ಈ ಸ್ವಚ್ಛತಾ ಸೂತ್ರ ಅನುಸರಿಸಿದ ಬಹುತೇಕ
ಜನಪ್ರತಿ­ನಿಧಿಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರು, ಒಟ್ಟಾರೆ ಎಲ್ಲ ಜಾತಿಗಳ ಜನರು ಅಂದು ದೇಶದಾದ್ಯಂತ ಕಸ ಗುಡಿಸುವ ಮೂಲಕ ಸ್ವಚ್ಛತೆಯ ಈ ಕೈಂಕರ್ಯಕ್ಕೆ ತಮ್ಮ ಕೈಜೋಡಿಸಿದರು.

ದುರಂತವೆಂದರೆ ಅದರ ಮಾರನೇ ದಿನ, ‘ಬೇರೆ’ ಯಾರೂ ಕಸ ಗುಡಿಸಿದ ಸದ್ದು ಕೇಳಿಸಲಿಲ್ಲ! ಯಥಾಪ್ರಕಾರ ಪೌರ ಕಾರ್ಮಿಕರು ತಲೆತಗ್ಗಿಸಿ ದೂಳು ಕುಡಿಯುತ್ತಾ ಕೈಗೆ ಗವಸು ಇಲ್ಲದೆ ಸೂಕ್ತ ರಕ್ಷಣಾತ್ಮಕ ದಿರಿಸು ಇಲ್ಲದೆ ನಗರದ ಗಲೀಜು ಎತ್ತುತ್ತಿದ್ದರು! ಅಂದಹಾಗೆ ಆ ಪೌರ­ಕಾರ್ಮಿಕರಲ್ಲಿ ಬಹುತೇಕರು ದಲಿತರು ಎಂಬುದು ಇಲ್ಲಿ ಗಮನಾರ್ಹ.

ಪ್ರಧಾನಿ ಅವರ ‘ಸ್ವಚ್ಛ ಭಾರತ ಅಭಿಯಾನ’ ₨ 2 ಲಕ್ಷ ಕೋಟಿ ವೆಚ್ಚದ ಮಹತ್ವಾ­ಕಾಂಕ್ಷಿ ಯೋಜನೆ. ದೇಶದ ಸಾವಿರಾರು ಪಟ್ಟಣಗಳ, ಗ್ರಾಮಗಳ ಕಸ ಎತ್ತುವ ಯೋಜ­ನೆಗೆ ಬರಿ ದಲಿತ ಪೌರಕಾರ್ಮಿಕರ ದುಡಿತ ಮಾತ್ರ ಯಾಕೆ ಸೀಮಿತವಾಗಬೇಕು?  ಸ್ವತಃ ಮೋದಿ­­ಯವರು ಹೇಳಿ­ದಂತೆ ಮಹಾತ್ಮ ಗಾಂಧಿಯವರ ಕನಸು ನನಸು ಮಾಡುವ, ಈ ಯೋಜ­ನೆಗೆ ದೇಶದ ಉಳಿದ ಜಾತಿ–-ಜನಾಂಗಗಳೂ ಕೈಜೋಡಿಸುವುದು ಬೇಡವೇ? ದೇಶದ ಇತರೆ ಜನರು, ಸಾಮಾನ್ಯರು ದೇಶ ಶುಚಿಗೊಳಿಸುವ ಇಂತಹ ಪವಿತ್ರ ಕಾರ್ಯದಲ್ಲಿ ಪಾಲ್ಗೊ­ಳ್ಳು­ವುದು ಬೇಡವೇ?  ಜಾತಿ ಆಧಾರಿತ ಉದ್ಯೋಗದ ಭಾರತದ ಇಂತಹ ವ್ಯವಸ್ಥೆಯಲ್ಲಿ ಸಹಸ್ರಾರು ವರ್ಷಗಳಿಂದ ಕಸ ಗುಡಿಸಿ ಕಸ ಗುಡಿಸಿ ದಲಿತರು ಸಾಕು ಸಾಕಾಗಿ ಹೋಗಿದ್ದಾರೆ. ಪ್ರಶ್ನೆಯೇನೆಂದರೆ ೨೧ನೇ ಶತಮಾನದ ಈ ಆಧುನಿಕ ಯುಗದಲ್ಲೂ ಸ್ವಚ್ಛತೆಯ ಕೆಲಸವನ್ನು ದಲಿತರಿಗೆ ಮಾತ್ರ ಏಕೆ ಮೀಸಲಿರಿಸಲಾಗಿದೆ?

ಈ ದಿಸೆಯಲ್ಲಿ ಕಾಲ ಈಗಲೂ ಮಿಂಚಿಲ್ಲ. ಮುಂದಿನ ಐದು ವರ್ಷಗಳವರೆಗೆ ಸರ್ಕಾರ ಸ್ವಚ್ಛ ಭಾರತದ ತನ್ನ ಆ ಕನಸಿನ ಯೋಜನೆಯನ್ನು ಸಾಕಾರಗೊಳಿಸಲು ಬರಿ ದಲಿತ ಪೌರ­ಕಾರ್ಮಿಕರನ್ನು ಅವಲಂಬಿಸುವುದರ ಬದಲಿಗೆ ಎಲ್ಲ ಜಾತಿ-, ಜನಾಂಗದವರನ್ನು ಅವರವರ ಜನ­ಸಂಖ್ಯೆ ಆಧಾರದ ಮೇಲೆ ಸೂಕ್ತ ವೇತನ, ಸವಲತ್ತುಗಳನ್ನು ನೀಡುವ ಮೂಲಕ ನೇಮಿಸಿ­ಕೊಳ್ಳಲಿ. ಆ ಮೂಲಕ ಮಹಾತ್ಮರ ನೂರೈವತ್ತನೇ ಜನ್ಮದಿನದ ಅಪರೂಪದ ಸಂದರ್ಭ­ದಲ್ಲಾದರೂ ಸ್ವಚ್ಛಭಾರತ ಅಭಿಯಾನ ಜಾತಿ ನಿರ್ಮೂಲನೆಯ ಅಸ್ತ್ರವಾಗಲಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT