ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಕಾಂ ಅಧಿಕಾರಿಗಳ ಬಗ್ಗೆ ಅಸಮಾಧಾನ

‘ನಿರ್ವಹಣಾ ವ್ಯವಸ್ಥಾ ಘಟಕ ನಿರ್ವಹಣೆಯ ಮಾಹಿತಿ ತಿಳಿದಿಲ್ಲ’
Last Updated 1 ಡಿಸೆಂಬರ್ 2015, 19:40 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆಲವು ರಾಜ್ಯಗಳ ಎಸ್ಕಾಂಗಳಲ್ಲಿ ಬೇಡಿಕೆಗೆ ಅನುಗುಣವಾಗಿ ನಿರ್ವಹಣಾ ವ್ಯವಸ್ಥೆಯ (ಡಿಎಸ್‌ಎಂ) ಘಟಕ ಇದೆ. ಬಹುತೇಕ ಎಸ್ಕಾಂಗಳ ಹಿರಿಯ ಅಧಿಕಾರಿಗಳಿಗೆ ಡಿಎಸ್‌ಎಂ ಬಗ್ಗೆ ಇನ್ನೂ ಮನವರಿಕೆ ಆಗಿಲ್ಲ’ ಎಂದು ಯುಎಸ್‌ ಏಜೆನ್ಸಿ ಫಾರ್‌ ಇಂಟರ್‌ನ್ಯಾಷನಲ್‌ ಡೆವಲಪ್‌ಮೆಂಟ್‌ನ (ಯುಎಸ್‌ಎಐಡಿ) ಡಾ. ಭಾಸ್ಕರ್‌ ನಟರಾಜನ್‌ ಅವರು ಬೇಸರ ವ್ಯಕ್ತಪಡಿಸಿದರು. ಎನ್‌ಜೆನ್‌ ಸಂಸ್ಥೆಯ ವತಿಯಿಂದ ನಗರದಲ್ಲಿ ಮಂಗಳವಾರ ನಡೆದ ‘ವಿದ್ಯುಚ್ಛಕ್ತಿಯ ಭವಿಷ್ಯ’ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘ಎಸ್ಕಾಂಗಳಲ್ಲಿ ಡಿಎಸ್‌ಎಂ ಚಟುವಟಿಕೆಗಾಗಿ ಕಳೆದ ನಾಲ್ಕೈದು ವರ್ಷಗಳಲ್ಲಿ ₹5 ಕೋಟಿಯಿಂದ ₹10 ಕೋಟಿವರೆಗೆ ಮಾತ್ರ ಖರ್ಚಾಗಿದೆ. ಇದು ಅಧಿಕಾರಿಗಳಿಗೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಡಿಎಸ್‌ಎಂ ಅನುಷ್ಠಾನಕ್ಕೆ ಸಿಬ್ಬಂದಿ ಕೊರತೆ ಇದೆ ಎಂಬ ಸಬೂಬನ್ನು ಹೇಳುತ್ತಾರೆ’ ಎಂದರು.

ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಮಾತನಾಡಿ, ‘ವರ್ಷದಿಂದ ವರ್ಷಕ್ಕೆ ವಿದ್ಯುತ್‌ ಬೇಡಿಕೆ ಹೆಚ್ಚುತ್ತಿದೆ. ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಹಾಗೂ ಆವಿಷ್ಕಾರದ ಮೂಲಕ ವಿದ್ಯುತ್‌ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಿದೆ’ ಎಂದರು. 

‘ಹೊಸ ವಿದ್ಯುತ್‌ ಮಾರ್ಗಗಳನ್ನು ಅಳವಡಿಸುವ ಬದಲು ಈಗಿರುವ ಮಾರ್ಗಗಳನ್ನೇ ಮೇಲ್ದರ್ಜೆಗೆ ಏರಿಸಲು ಒತ್ತು ನೀಡಬೇಕಿದೆ. ಸ್ಮಾರ್ಟ್‌ ಗ್ರಿಡ್‌ಗಳ ಬಗ್ಗೆ ನಮಗೆ ಸಮಗ್ರ ಪರಿಕಲ್ಪನೆ ಇಲ್ಲ. ಆಸ್ಟೇಲಿಯಾದಂತಹ ಕೆಲವು ರಾಷ್ಟ್ರಗಳನ್ನು ಹೊರತುಪಡಿಸಿದರೆ ನಾವೆಲ್ಲ ಸ್ಮಾರ್ಟ್ ಗ್ರಿಡ್‌ಗಳ ಅಳವಡಿಕೆಯಲ್ಲಿ ಪ್ರಾಯೋಗಿಕ ಹಂತದಲ್ಲಿದ್ದೇವೆ’ ಎಂದರು.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಕುಮಾರ್‌ ಪಾಂಡೆ ಅವರು ಮಾತನಾಡಿ, ‘ರೈತರ ಜಮೀನುಗಳಲ್ಲಿ ಸೌರ ವಿದ್ಯುತ್‌ ಉತ್ಪಾದಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ರೈತರು ಹೆಚ್ಚುವರಿ ವಿದ್ಯುತ್ತನ್ನು ಗ್ರಿಡ್‌ಗೆ ಮಾರಾಟ ಮಾಡಬಹುದು. ರೈತರ ಸಹಕಾರದಲ್ಲಿ ರಾಜ್ಯದಲ್ಲಿ 300 ಮೆಗಾವಾಟ್‌ ಸೌರ ವಿದ್ಯುತ್‌ ಉತ್ಪಾದಿಸುವ ಗುರಿ ಇರಿಸಿಕೊಳ್ಳಲಾಗಿದೆ. ಅನಧಿಕೃತ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲು ಇಲಾಖೆ ಈಗಾಗಲೇ ಸಹಕಾರ ಸಂಘ ರಚಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT