ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಪಕ್ಷೀಯ ನಿರ್ಧಾರ

Last Updated 30 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಭಾರತದ ಅಲ್ಫಾನ್ಸೊ ಮಾವು, ಕೆಸುವಿನಗೆಡ್ಡೆ, ಹಾಗಲಕಾಯಿ, ಪಡು­ವಲಕಾಯಿ ಮತ್ತು ಬದನೆಕಾಯಿ ಆಮದು ನಿಷೇಧಿಸುವ 28 ಸದಸ್ಯ ದೇಶಗಳ ಐರೋಪ್ಯ ಒಕ್ಕೂಟದ ನಿರ್ಧಾರ ‘ಏಕಪಕ್ಷೀಯ ಮತ್ತು ಅವಸರದಿಂದ ಕೂಡಿದ್ದು’. ಆದರೆ, ಇದರಿಂದ ನಮ್ಮ ಹಣ್ಣು, ತರಕಾರಿ ರಫ್ತಿನ ಮೇಲೆ ಅಷ್ಟೇನೂ ಪರಿಣಾಮ ಆಗದು ಎಂದು ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಅಪೆಡಾ) ಹೇಳುತ್ತಿದ್ದರೂ ರೈತರು ಮತ್ತು ರಫ್ತುದಾರರಲ್ಲಿ ಆತಂಕ ದೂರವಾಗಿಲ್ಲ. ವಿಶೇಷವಾಗಿ ಅಲ್ಫಾನ್ಸೊ ಮಾವು ಬೆಳೆಯುವ ಮಹಾರಾಷ್ಟ್ರದ ರೈತರು ಹೆಚ್ಚು ತಳಮಳ­ಗೊಂಡಿದ್ದಾರೆ. ಐರೋಪ್ಯ ಒಕ್ಕೂಟದ ತೀರ್ಮಾನದಿಂದ ದೇಶಿ ಮಾರುಕಟ್ಟೆ­ಯಲ್ಲಿ ಮಾವಿನ ಬೆಲೆ ಮತ್ತಷ್ಟು ಇಳಿದು ನಷ್ಟವಾಗಬಹುದು ಎಂಬ ಭೀತಿ ಬೆಳೆಗಾರರಲ್ಲಿದೆ.

ನಿಷೇಧ ತೆಗೆದುಹಾಕುವಂತೆ ಕೇಂದ್ರ ವಾಣಿಜ್ಯ ಸಚಿವರು ಐರೋಪ್ಯ ಒಕ್ಕೂಟದ ವಾಣಿಜ್ಯ ಆಯುಕ್ತರಿಗೆ ಶೀಘ್ರವೇ ಪತ್ರ ಬರೆಯಲಿ­ದ್ದಾರೆ. ‘ಈ ನಿಷೇಧ ಮೂರ್ಖತನದ್ದು’ ಎಂದು ಬ್ರಿಟಿಷ್‌ ಪಾರ್ಲಿಮೆಂಟ್‌ ಸದಸ್ಯರಾಗಿರುವ   ಭಾರತೀಯ ಮೂಲದ ಕೀತ್‌ ವಾಜ್‌ ಹೇಳಿ ಭಾರತಕ್ಕೆ ನೈತಿಕ ಬೆಂಬಲ ಕೊಟ್ಟಿದ್ದಾರೆ. ನಿಷೇಧದಿಂದ ಭಾರತದ ಬೆಳೆಗಾರರಿಗೆ ನಷ್ಟ ಮಾತ್ರವಲ್ಲದೆ ಬ್ರಿಟನ್‌ನ ಆದಾಯಕ್ಕೂ ಕತ್ತರಿ ಬೀಳಲಿದೆ ಎಂದು ಅವರು ತಮ್ಮ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.  ಅಪೆಡಾದ ಅಂಕಿಅಂಶಗಳ ಪ್ರಕಾರ  ನಮ್ಮ ಮಾವಿನ ಶೇ 60ರಷ್ಟು ಭಾಗ ಅರಬ್‌, ಕೊಲ್ಲಿ ದೇಶಗಳಿಗೆ ಹೋಗು­ತ್ತದೆ. ನಂತರ  ಆಗ್ನೇಯ ಏಷ್ಯದ ದೇಶಗಳು, ಕೆನಡಾ, ನ್ಯೂಜಿಲೆಂಡ್‌ ಮತ್ತು ಅಮೆರಿಕ ನಮ್ಮ ಅತಿ ದೊಡ್ಡ ಗ್ರಾಹಕ ದೇಶಗಳು. 2012–13ರಲ್ಲಿ ₨ 265 ಕೋಟಿ ಮೊತ್ತದ 55 ಸಾವಿರ ಟನ್‌ ಮಾವು ರಫ್ತಾಗಿತ್ತು.

ಯೂರೋಪ್‌ಗೆ ರಫ್ತಾಗುವ ಹಣ್ಣು, ತರಕಾರಿಗಳಲ್ಲಿ ಈಗ ನಿಷೇಧ­ಗೊಂಡಿ­ರುವ ಮಾವು, ತರಕಾರಿ ಪ್ರಮಾಣ ಶೇ 5 ಮಾತ್ರ. ಹೀಗಾಗಿ ಇದೊಂದು ಸಣ್ಣ ವಿಷಯ ಎಂದು ತಳ್ಳಿಹಾಕುವುದು ಸಾಧ್ಯವಿಲ್ಲ. ಅದೇ ಕಾಲಕ್ಕೆ, ಐರೋಪ್ಯ ಒಕ್ಕೂಟದ ನಿಷೇಧದಿಂದ ನಮಗೆ ತುಂಬ ಕಷ್ಟ ಕಾದಿದೆ ಎಂದು ಎದೆಗುಂದುವ ಅಗತ್ಯವೂ ಇಲ್ಲ. ಏಕೆಂದರೆ ಹಿಂದೆ ಅಮೆರಿಕ ಕೂಡ 1989ರಿಂದ ನಮ್ಮ ದೇಶದ ಮಾವಿನ ಆಮದನ್ನು ನಿಷೇಧಿಸಿತ್ತು. ಆದರೆ 2007ರಲ್ಲಿ ತೆಗೆದು ಹಾಕಿತು. ಐರೋಪ್ಯ ಒಕ್ಕೂಟ ಕೂಡ 2015 ಅಂತ್ಯದ ವರೆಗೆ ಮಾತ್ರ ಈ ನಿಷೇಧ ಎಂದು ತಿಳಿಸಿದೆ. 

ನಮ್ಮ ರೈತರು, ಕೃಷಿ ವಿಜ್ಞಾನಿ­ಗಳು ಈ ನಿಷೇಧವನ್ನು ಸವಾಲಾಗಿ ಸ್ವೀಕರಿಸಬೇಕು. ನಮ್ಮ ಮಾವು, ತರಕಾರಿ­ಯಲ್ಲಿ ಕೀಟಾಣು, ಕೀಟನಾಶಕ ಹೆಚ್ಚು ಎಂಬ ಕಾರಣಕ್ಕಾಗಿ ನಿಷೇಧದ ತೂಗು­ಕತ್ತಿ ಸದಾ ನಮ್ಮ ಮೇಲೆ ತೂಗುತ್ತಿರುತ್ತದೆ. ಆದ್ದರಿಂದ ರಾಸಾಯನಿಕ ಬಳಕೆ ಕಡಿಮೆ ಮಾಡಿ ನೈಸರ್ಗಿಕ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ಅಂತರ ರಾಷ್ಟ್ರೀಯ ಮಾನದಂಡಕ್ಕೆ ಪೂರಕವಾದ ಬೆಳೆ ಮತ್ತು  ಸಂಸ್ಕರಣಾ ವಿಧಾನ­ಗಳನ್ನು ರೂಢಿಸಿಕೊಳ್ಳಬೇಕು. ಹಣ್ಣು, ತರಕಾರಿ ರಫ್ತು ಮಾಡುವಾಗ ನಿರ್ದಿಷ್ಟ ಮಾನದಂಡ, ಗುಣಮಟ್ಟ ಕಾಪಾಡಿಕೊಳ್ಳಬೇಕು. ಏಕೆಂದರೆ ಮಾವು ರಫ್ತು ಕ್ಷೇತ್ರದಲ್ಲಿ ನಮ್ಮ ಸ್ಥಾನವನ್ನು ತುಂಬಲು ಚೀನಾ, ಕೀನ್ಯಾ, ದಕ್ಷಿಣ ಆಫ್ರಿಕಾ, ಬ್ರೆಜಿಲ್‌, ಆಸ್ಟ್ರೇಲಿಯಾ ಕಾದು ಕುಳಿತಿವೆ. ಅದು ಸದಾ ನಮ್ಮ ಗಮನದಲ್ಲಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT