ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಾಂಡ್ಲ ಎನ್ನುವ ನೆನಪಿನ ಬ್ರಹ್ಮಾಂಡ

ಕೋಲಾರ ಕಂಬಳಿಯ ಕೊನೆಯ ನೇಕಾರ
Last Updated 21 ಮೇ 2016, 19:51 IST
ಅಕ್ಷರ ಗಾತ್ರ

ಲಂಡನ್‌ನಲ್ಲಿ ನಡೆದ ವಸ್ತುಪ್ರದರ್ಶನದಲ್ಲಿ ಪ್ರದರ್ಶನಗೊಂಡು ಬಹುಮಾನ ಪಡೆದ ಖ್ಯಾತಿ ಕೋಲಾರ ಕಂಬಳಿಯದು. ಸುಂದರ ಸ್ವಪ್ನಗಳಂತೆ ಕಾಡುವ ‘ಕನ್ನಡನಾಡಿನ ಸ್ಮೃತಿ’ಗಳ ಸಾಲಿಗೆ ಕೋಲಾರದ ಏಕಾಂಡ್ಲ ಕಂಬಳಿಯೂ ಸೇರಿಹೋಗಿದೆ. ಈ ಕಂಬಳಿ ಪರಂಪರೆಯ ಕೊನೆಯ ನೇಕಾರ ಇಂದ್ರಪ್ಪ ಅವರ ಬದುಕಿನ ಕೆಲವು ಟಿಪ್ಪಣಿಗಳು.

ನೆನಪಿನ ಗಣಿ
ಕೋಲಾರದ ಗೌರಿಪೇಟೆ ನಾನು ಹುಟ್ಟಿಬೆಳೆದ ಪೇಟೆ. ನನ್ನ ತಂದೆ ಅಂಗಡಿ ಕೃಷ್ಣಪ್ಪ, ತಾಯಿ ಲಕ್ಷ್ಮಮ್ಮ. ನಮ್ಮ ತಂದೆಗೆ ನಾವು ಹತ್ತು ಮಕ್ಕಳು. ನಾಲ್ವರು ಹೆಣ್ಣುಮಕ್ಕಳು, ಆರು ಮಂದಿ ಹುಡುಗರು. ಗಂಡು ಮಕ್ಕಳಲ್ಲಿ ನಾನು ಎರಡನೆಯವನು.

ನಮ್ಮ ಕುಟುಂಬ ಎಲ್ಲದಕ್ಕೂ ಕಂಬಳಿ ನೇಯ್ಗೆಯನ್ನೇ ನಂಬಿಕೊಂಡಿತ್ತು. ನನ್ನ ತಾತ ಕೊಲಮಿ ಲಕ್ಷ್ಮಣಪ್ಪ ಸೈನಿಕರಾಗಿದ್ದರು, ಎರಡನೇ ಮಹಾಯುದ್ಧದಲ್ಲೂ ಪಾಲ್ಗೊಂಡಿದ್ದರು. ನಮ್ಮಪ್ಪ ಗಂಡುಮಕ್ಕಳಿಗೆ ನೇಯ್ಗೆ ಕಸುಬು ಕಲಿಸುವುದರೊಂದಿಗೆ ಶಾಲಾ ಶಿಕ್ಷಣವನ್ನು ಕೊಡಿಸುತ್ತಿದ್ದರು.

ನಾನು ಕೋಲಾರ ಮಿಷನ್‌ ಶಾಲೆಯಲ್ಲಿ ಓದುತ್ತಿದ್ದೆ. 1950ರಲ್ಲಿ ಎಲ್‌.ಎಸ್‌. ಪರೀಕ್ಷೆ ಬರೆಯಬೇಕಿತ್ತು. ಯಾಕೋ ಏನೋ ನನಗೆ ನೇಯ್ಗೆ ಕಡೆಗೆ ಜ್ಞಾನ, ಅದನ್ನು ಚೆನ್ನಾಗಿ ಕಲಿಯಬೇಕು. ಸಂಪಾದಿಸಬೇಕು ಎಂಬ ಆಸೆ.

ಸೈನ್ಯದಿಂದ ನಿವೃತ್ತರಾಗಿ ಬಂದಿದ್ದ ತಾತ ಕೊಲಮಿ ಲಕ್ಷ್ಮಣಪ್ಪನವರಲ್ಲಿ ನನ್ನ ಬಯಕೆ ತೋಡಿಕೊಂಡೆ. ಅವರು ನನಗೆ ಬೆಂಬಲವಾಗಿ ನಿಂತರು. ನಾನು ಶಾಲೆ ಬಿಟ್ಟೆ. ನೇಯ್ಗೆಯಲ್ಲಿ ಜೀವನ ಕಂಡುಕೊಳ್ಳಲು ನಿರ್ಧರಿಸಿದೆ.

ಕಠಾರಿಪಾಳ್ಯ – ಗೌರಿಪೇಟೆ, ಈ ಎರಡೂ ಪೇಟೆಗಳಲ್ಲಿ ಕಂಬಳಿ ಉದ್ಯಮ ಉತ್ತುಂಗದಲ್ಲಿದ್ದ ದಿನಗಳವು. ಕಠಾರಿಪಾಳ್ಯವೊಂದರಲ್ಲೇ ಎಂಬತ್ತಕ್ಕೂ ಹೆಚ್ಚು ಮಗ್ಗಗಳಿದ್ದವು. ಅಂದರೆ ಮನೆ ಮನೆಯಲ್ಲೂ ಮಗ್ಗ ನಡೆಯುತ್ತಿತ್ತು. ಮನೆಯವರೆಲ್ಲಾ ಕಂಬಳಿ ತಯಾರಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದದ್ದು ಆಗ ಸಾಮಾನ್ಯ.

ಗಂಡಸರು ನೇಯ್ಗೆ ಮಾಡುತ್ತಿದ್ದರೆ ಹೆಂಗಸರು ದಾರ ತೆಗೆಯುತ್ತಿದ್ದರು. ನೂಲುವುದು, ನೇಯುವುದು, ಗಂಜಿ ಹಾಕುವುದು, ಅಂಚು ಕಟ್ಟುವುದು– ಹೀಗೆ ಮನೆ ಮಂದಿಯೆಲ್ಲ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿರುತ್ತಿದ್ದರು.

ಕೋಲಾರ ಕಂಬಳಿ ಬಹಳ ಹೆಸರುವಾಸಿ. ಲಂಡನ್‌ನಲ್ಲಿ ನಡೆದ ವಸ್ತುಪ್ರದರ್ಶನದಲ್ಲೂ ಬಹುಮಾನ ಪಡೆದು ಖ್ಯಾತಿ ಸಂಪಾದಿಸಿತ್ತು. ಸರ್ಕಾರ ಕೂಡ ಇಲ್ಲಿ ಉಣ್ಣೆ ಕಾರ್ಖಾನೆ ಸ್ಥಾಪಿಸಿ ನೇಕಾರರಿಗೆ ಅನುಕೂಲ ಮಾಡಿಕೊಡುತ್ತಿತ್ತು. ಕೋಲಾರದ ಸುತ್ತಮುತ್ತಲ ಹಳ್ಳಿಗಳಲ್ಲಿ ಕುರಿ ಸಾಕಾಣಿಕೆ ಮನೆ ಮನೆಯ ಕಸಬಾಗಿತ್ತು.

ಕಠಾರಿಪಾಳ್ಯದ ಮಗ್ಗಗಳು ಸಣ್ಣವು. ಇಲ್ಲಿ ಚಿಕ್ಕ ಅಳತೆಯ ಕಂಬಳಿಗಳನ್ನು ನೇಯಲಾಗುತ್ತಿತ್ತು. ಇಬ್ಬರು ಹೊದ್ದುಕೊಳ್ಳಬಹುದಾದ ಈ ಕಂಬಳಿಗಳನ್ನು ಮಧ್ಯೆ ಹೊಲಿದು ಡಬಲ್‌ ಕಂಬಳಿಗಳನ್ನು ಸಿದ್ಧಪಡಿಸಲಾಗುತ್ತಿತ್ತು. ಆದರೆ ಗೌರಿಪೇಟೆಯಲ್ಲಿದ್ದ ಎಲ್ಲ ಹತ್ತು ಮಗ್ಗಗಳಲ್ಲೂ ಏಕಾಂಡ್ಲ ಕಂಬಳಿಗಳನ್ನೇ ನೇಯಲಾಗುತ್ತಿತ್ತು. ಏಕಾಂಡ್ಲ ಎಂದರೆ, ಐದು ಮೊಳ ಉದ್ದ – ಮೂರು ಮೊಳ ಅಗಲದ ಕಂಬಳಿಗಳು (ಅಂದಾಜು ಏಳೂವರೆ ಅಡಿ ಉದ್ದ ಹಾಗೂ ನಾಲ್ಕೂವರೆ ಅಡಿ ಅಗಲ).

ನನ್ನ ತಾತ ಕೊಲಮಿ  ಲಕ್ಷ್ಮಣಪ್ಪ ಕೇವಲ  ನೇಕಾರರಾಗಿರಲಿಲ್ಲ. ಅವರೊಬ್ಬ ಕಲಾತ್ಮಕ  ನೇಕಾರರಾಗಿದ್ದರು.  ಮೊದಲೇ ಮಿಲಿಟರಿ ಮನುಷ್ಯ. ಎಲ್ಲದರಲ್ಲೂ ಅಚ್ಚುಕಟ್ಟುತನಕ್ಕೆ ಆದ್ಯತೆ ಕೊಡುತ್ತಿದ್ದರು. ಅವರಿಂದ ನನಗೆ ‘ಏಕಾಂಡ್ಲ ನೇಯ್ಗೆ’ಯ ವಿಶೇಷಗಳೆಲ್ಲ ತಿಳಿಯಿತು.

ಈ ದೊಡ್ಡ ಕಂಬಳಿಯನ್ನು ನಿಂತು ನೇಯಬೇಕಾಗಿತ್ತು. ನಾನು ಕಂಬಳಿ ನೇಯ್ಗೆಯನ್ನು ಬದುಕಿಗಾಗಿ ಮಾತ್ರ ಮಾಡಲಿಲ್ಲ. ಅದೊಂದು ಬಗೆಯ ಧ್ಯಾನದಂತೆ ಮಾಡಿದೆ.

ನೇಯ್ಗೆಯನ್ನು 1950ರಲ್ಲಿ ಶುರು ಮಾಡಿದ ನಾನು 2010ರವರೆಗೆ ಅದನ್ನು ನಿಲ್ಲಿಸಲಿಲ್ಲ. ನೇಯ್ಗೆಯೇ ನನಗೆ ಸರ್ವಸ್ವವಾಗಿತ್ತು. ಏಕಾಂಡ್ಲ ಬಿಟ್ಟು ನಾನು ಬೇರೆ ಕಂಬಳಿ ನೇಯಲಿಲ್ಲ. ಏಕಾಂಡ್ಲ ನನಗೆ ಅನ್ನ ಕೊಡ್ತು. ಹೆಸರು ತಂದುಕೊಡ್ತು. ನನ್ನ ಜೀವನ ನಡೆಸಲು ನೆರವಾಯಿತು.

ಆಗ ಕೋಲಾರದಲ್ಲಿ ನೇಯ್ದ ಎಲ್ಲಾ ಕಂಬಳಿಗಳನ್ನು ‘ರೇವಣ್ಣ ಸಿದ್ದೇಶ್ವರ ನೇಕಾರರ ಸಂಘ’ ಖರೀದಿಸುತ್ತಿತ್ತು. ಕಂಬಳಿ ಉತ್ಪಾದನೆ ಜೋರಾಗಿದ್ದ ಆ ಸಮಯದಲ್ಲಿ ನಾನು ತಿಂಗಳಿಗೆ 20 ಕಂಬಳಿಗಳನ್ನು ನೇಯ್ಗೆ ಮಾಡುತ್ತಿದ್ದೆ. ಎಲ್ಲಾ ಖರ್ಚು ಹೋಗಿ ಒಂದು ಕಂಬಳಿಗೆ 20 ರೂಪಾಯಿ ಆದಾಯ ಸಿಗುತ್ತಿತ್ತು. ಅದು ನನ್ನ ಕುಟುಂಬಕ್ಕೆ ಸಾಕಾಗುತ್ತಿತ್ತು.

ಬೆಳಗ್ಗೆ 5 ಗಂಟೆಗೆ ಎದ್ದು ಸ್ನಾನ ಮಾಡಿ ನೇಯ್ಗೆಗೆ ಇಳಿದರೆ ಸಂಜೆವರೆಗೂ ಇದು ನಡೆಯುತ್ತಲೇ ಇತ್ತು. ಹೆಂಗಸರು ತೆಗೆದುಕೊಟ್ಟ ದಾರದಿಂದ ನೇಯ್ಗೆ ಕಂಬಳಿಗಳಿಗೆ ಗಂಜಿ ಹಾಕುವ ಕೆಲಸವನ್ನು ಗಂಡಸರೇ ಮಾಡುತ್ತಿದ್ದರು. ನಾನು ಗಂಜಿ ಹಾಕಿದ ಬ್ರಶ್‌ಗಳನ್ನು ಗುರಿಖಾನ್‌ ಕುಂಟೆಯಲ್ಲಿ ತೊಳೆಯುತ್ತಿದ್ದೆ.

ಆಗ ಗುರಿಖಾನ್‌ ಕುಂಟೆ, ದಶರಥ ಕುಂಟೆ, ನಾಗರ ಕುಂಟೆ ಮೊದಲಾದ ಕುಂಟೆಗಳು ನೀರಿನಿಂದ ಸದಾ ತುಂಬಿರುತ್ತಿದ್ದವು. ನೇಕಾರರು ಅಲ್ಲೆ ಕಂಬಳಿ ಬ್ರಷ್‌ ಶುಚಿ ಮಾಡುತ್ತಿದ್ದರು.

ಕುಂಟಪ್ಪನವರ ನಾರಾಯಣಪ್ಪ, ಭಜನೆ ಮುನಿಸ್ವಾಮಿ, ಜೋಕಾಲಿ ನಂಜಪ್ಪನವರ ನಾರಾಯಣಪ್ಪ– ಇವರೆಲ್ಲ ಏಕಾಂಡ್ಲ ನೇಯ್ಗೆಯಲ್ಲಿ ಹೆಸರು ಮಾಡಿದ್ದವರು. ಇವರಿಂದ ನಾನು ಸಲಹೆಗಳನ್ನು ಆಗಾಗ ಪಡೆಯುತ್ತಿದ್ದೆ. ನಮ್ಮ ತಾತ–ತಂದೆ ನನ್ನ ಬೆನ್ನಿಗಿದ್ದರು. ಹೀಗಾಗಿ ಏಕಾಂಡ್ಲ ಇಂದ್ರಪ್ಪ ಎಂಬ ಹೆಸರು ನನಗೆ ಬಿತ್ತು.

ವರ್ಷಕ್ಕೊಮ್ಮೆ ನಮ್ಮ ತಂದೆ ಹಾಗೂ ನಾನು ರೋಜರಪಲ್ಲಿ, ಗಾಂಡ್ಲಹಳ್ಳಿ, ಬಂಗವಾದಿ, ದೊಡ್ಡ ಹಸಾಳ, ತಮಕ, ನಡುಪಲ್ಲಿ, ಹೊನ್ನೇನಹಳ್ಳಿ ಮೊದಲಾದ ಹಳ್ಳಿಗಳಲ್ಲಿ ಒಂದು ತಿಂಗಳು ಸುತ್ತಿ ಕುರಿ ಉಣ್ಣೆ ಕತ್ತರಿಸುವುದನ್ನು ಮಾಡುತ್ತಿದ್ದೆವು. ಕುರಿ ಮಾಲಿಕರಿಗೆ ನೂರು ಕುರಿಗೆ ಒಂದು ಕಂಬಳಿ ಕೊಡುವ ರೂಢಿ ಇತ್ತು. ಕತ್ತರಿಸಿ ತಂದ ಉಣ್ಣೆಯನ್ನು ಶುಚಿ ಮಾಡಲು (ಕಾರ್ಡಿಂಗ್‌) ಕಠಾರಿಪಾಳ್ಯದ ಹನುಮಪ್ಪನವರ ಮಿಷನ್‌ಗೆ ಕೊಡುತ್ತಿದ್ದೆವು.

ಸರ್ಕಾರಿ ಉಣ್ಣೆ ಕೇಂದ್ರದಲ್ಲಿ ಒಂದು ಹಂಜಿ (ಕಾರ್ಡಿಂಗ್‌) ಮಾಡುವ ಯಂತ್ರ ಇತ್ತು. ಕುರಿಗಳಿಂದ ಕತ್ತರಿಸಿ ನೇರವಾಗಿ ತಂದ ಉಣ್ಣೆಯನ್ನು ಶುಭ್ರಗೊಳಿಸಿ ಹಂಜಿ ಮಾಡಲೇಬೇಕಿತ್ತು. ನಂತರದ ಹಂತ ನೂಲು (ದಾರ) ತೆಗೆಯುವುದು. ಇದರಲ್ಲಿ ಮಹಿಳೆಯರು ನಿಪುಣರು.

1980ರ ನಂತರ ಸಹಕಾರ ಸಂಘ ಹಾಗೂ ಕೇಂದ್ರ ಸಂಘದ ಜೊತೆ ವೈಮನಸ್ಸು ಬಂದಿದ್ದರಿಂದ ಕೋಲಾರದ ಕಂಬಳಿಗಳ ಮಾರಾಟ ಕಷ್ಟವಾಗತೊಡಗಿತು. ಒಂದು ಕಾಲಕ್ಕೆ ಕೋಲಾರದಲ್ಲಿ ಕಂಬಳಿಗಳನ್ನು ಮಾರಾಟ ಮಾಡಲು ವೆಂಕಟರಮಣಪ್ಪ (ನಮ್ಮ ಮಾವ) ‘ಕೋಲಾರ ಕಂಬಳಿ ಸ್ಟೋರ್‌್ಸ್’ ಅನ್ನು ಮಹಾತ್ಮ ಗಾಂಧಿ ರಸ್ತೆಯಲ್ಲಿ ಆರಂಭಿಸಿದ್ದರು.

ಆದರೆ ಉದ್ಯಮದ ಏರುಪೇರುಗಳಿಂದಾಗಿ ಕಸುಬು ಕ್ಷೀಣಿಸತೊಡಗಿತು. ಕೊನೆಗೊಂದು ದಿನ ‘ರೇವಣ್ಣ ಸಿದ್ದೇಶ್ವರ ಉಣ್ಣೆ ಸಂಘ’ ಮುಚ್ಚಿಹೊಯಿತು. ನೀಲಿ ಕೃಷ್ಣಪ್ಪ, ಅವರ ಮಗ ಜೈಶಂಕರಪ್ಪ ನಾಗಪ್ಪ ಇನ್ನೊಂದು ಕೈಮಗ್ಗ ನೇಕಾರರ ಸಂಘ ಸ್ಥಾಪಿಸಿ ಉದ್ಯಮ ಉಳಿಸುವ ಪ್ರಯತ್ನ ಮಾಡಿದರೂ ಯಶಸ್ಸು ಸಿಗಲಿಲ್ಲ.

ಉತ್ತಮ ಗುಣಮಟ್ಟದ ನೇಯ್ಗೆದಾರನೆಂದು ಹೆಸರು ಪಡೆದಿದ್ದ ನಾನು ಪರಿಸ್ಥಿತಿ ವಿಷಮವಾಗುತ್ತಿರುವುದನ್ನು ತಿಳಿದು ಮಕ್ಕಳಿಗೆ ಕಸುಬು ಕಲಿಸುವ ಧೈರ್ಯ ಮಾಡಲಿಲ್ಲ. ಅವರಿಗೆ ಶಿಕ್ಷಣ ಕೊಡಿಸುವುದರಲ್ಲಿ ಆಸಕ್ತಿ ತೋರಿಸಿದೆ.

ಮೂವತ್ತು ವರ್ಷಕಾಲ ಭರ್ಜರಿಯಾಗಿ ನಡೆದಿದ್ದ ಕಂಬಳಿ ನೇಯ್ಗೆ ಕೆಲಸ ಸೊಸೈಟಿಗಳ ಅವನತಿಯಿಂದ ನಿಧಾನವಾಗಿ ಹಿಂದೆ ಸರಿಯಿತು. ನೇಯ್ಗೆಗೆ ಅಗತ್ಯವಾದ ಹಂಜಿ ಮಾಡಿಕೊಡುತ್ತಿದ್ದ ಹನುಮಪ್ಪನವರ ಮಿಷನ್‌ ಕೂಡ ನಿಂತುಹೋದ ಮೇಲೆ, ದುಡಿಮೆ ಮಾಡಿ ಊಟ ಮಾಡುತ್ತಿದ್ದವರಿಗೆ ಸಂಕಷ್ಟ ಎದುರಾಯಿತು. ಒಂದೊಂದೇ ಮಗ್ಗಗಳು ನಿಂತುಹೋದವು.

ನೇಕಾರರ ಮಕ್ಕಳು ಅಲ್ಪಸ್ವಲ್ಪ ಓದಿಕೊಂಡು ಸಣ್ಣಪುಟ್ಟ ಸರ್ಕಾರಿ ಕೆಲಸಗಳಿಗೆ ಸೇರಿಕೊಂಡರು. ನೋಡ ನೋಡುತ್ತಿದ್ದಂತೆ ‘ಕೋಲಾರ ಕಂಬಳಿ ಸ್ಟೋರ್‌’ನಲ್ಲಿ ಕಂಬಳಿ ಜೊತೆ ಬೇರೆ ಬಟ್ಟೆಗಳೂ ಮಾರಾಟಕ್ಕೆ ಕಾಣಿಸಿಕೊಂಡವು.

ಗುಣಮಟ್ಟದ ಕಲಾತ್ಮಕ ಕಂಬಳಿಗಳನ್ನು ನೇಯುತ್ತಿದ್ದ ನನಗೆ ಒಳ್ಳೆಯ ಉಣ್ಣೆಯ ದಾರ ಸಿಗುವುದೂ ದುಸ್ತರವಾಯಿತು. ಆಗ ನೀಲಿ ಕೃಷ್ಣಪ್ಪ, ಜೈಶಂಕರಪ್ಪ ಉಲ್ಲನ್‌ದಾರ ತಂದುಕೊಟ್ಟರು. ಅದರಿಂದ ಹೆಚ್ಚು ಹಣವೂ ಗಿಟ್ಟುತ್ತಿತ್ತು (ಕಂಬಳಿಯೊಂದಕ್ಕೆ 500 ರೂ.) ಉದ್ಯಮದ ಏಳುಬೀಳು ಇದನ್ನು ಬಹಳ ದಿನ ಮುಂದುವರೆಯಲು ಬಿಡಲಿಲ್ಲ.

ದೇವರಾಜ ಅರಸರ ಆಡಳಿತದ ಕಾಲದಲ್ಲಿ ಸಹಕಾರ ಸಚಿವರಾಗಿದ್ದ ಆರ್‌.ಎಲ್‌. ಜಾಲಪ್ಪನವರು ಕಂಬಳಿ ಉದ್ಯಮದ ಪುನಶ್ಚೇತನಕ್ಕಾಗಿ ಕಾರ್ಯಕ್ರಮ ರೂಪಿಸಿದರು. ಹುಬ್ಬಳ್ಳಿಯಲ್ಲಿ ಕಂಬಳಿ ಪ್ರದರ್ಶನ ಏರ್ಪಡಿಸಿದರು. ಅಲ್ಲಿ ನಾನು ಭಾಗವಹಿಸಿದ್ದೆ. ನಮ್ಮ ಏಕಾಂಡ್ಲ ಕಂಬಳಿಗಳಿಗೆ ಅಲ್ಲಿ ಮೆಚ್ಚುಗೆ ವ್ಯಕ್ತವಾಯಿತು. ಆದರೆ ಕೋಲಾರ ಕಂಬಳಿ ಉದ್ಯಮಕ್ಕೆ ಮರುಜೀವ ಸಿಗಲಿಲ್ಲ.

ಕಠಾರಿಪಾಳ್ಯ, ಗೌರಿಪೇಟೆ, ವೀರಾಂಜನೇಯ ನಗರ, ಕೀಲು ಕುಂಟೆಗಳಲ್ಲಿ ಸದಾ ಕೇಳುತ್ತಿದ್ದ ಮಗ್ಗಗಳ ಸದ್ದು ಕ್ರಮೇಣ ನಿಂತುಹೋಗತೊಡಗಿತು, ಮಗ್ಗಗಳ ಜಾಗಗಳಲ್ಲಿ ಮನೆ, ಅಂಗಡಿಮುಂಗಟ್ಟುಗಳು ಬಂದವು, ಮಗ್ಗಗಳು ಮರ ಮುಟ್ಟುಗಳಾದವು. ನೇಕಾರರ ಮಕ್ಕಳು ಅನಿವಾರ್ಯವಾಗಿ ಕುಲಕಸುಬಿನಿಂದ ದೂರವಾದರು.

ಕಸುಬು ಜೋರಾಗಿದ್ದ ಸಮಯದಲ್ಲಿ ಊರಿನ ಮುಖಂಡರಾಗಿದ್ದ ಚಿಕ್ಕ ಚೆನ್ನಂಜಪ್ಪ ಶೆಟ್ಟರು ಆಗಷ್ಟೇ ಶುರುವಾಗಿದ್ದ ‘ಕಮಲಾ ನೆಹರೂ ಸ್ಯಾನಿಟೋರಿಯಂ’ನಲ್ಲಿ ಎಲ್‌.ಎಸ್‌. ಓದಿದ್ದ ನನಗೆ ಕೆಲಸ ಕೊಡಿಸಲು ಮುಂದಾಗಿದ್ದರು.

ಅಲ್ಲಿ ತಿಂಗಳಿಗೆ 20 ರೂಪಾಯಿ ಸಂಬಳ. ನಾನು ಕಂಬಳಿ ನೇಯ್ಗೆ ಮಾಡಿದರೆ ಮಾಹೆಗೆ 200 ರೂ. ಸಿಗುತ್ತಿತ್ತು. ನಾನು ಕೆಲಸಕ್ಕೆ ಹೋಗಲಿಲ್ಲ. ಬರುತ್ತಿದ್ದ ಆದಾಯದಲ್ಲಿ ಮನೆ ಚೆನ್ನಾಗಿ ನಡೆಯುತ್ತಿತ್ತು. ಮದುವೆ ಮುಂಜಿ ನಡೆದವು. ಮಕ್ಕಳು ಬೇರೆ ಬೇರೆ ನೌಕರಿ ಹಿಡಿದರು. 

ನಾನು ಕಸುಬು ಮುಂದುವರೆಸಿದ್ದರೂ ಆದಾಯ ಬಹಳ ಕಡಿಮೆಯಾಗುತ್ತಿತ್ತು. ಶ್ರಮಕ್ಕೆ ತಕ್ಕ ಲಾಭ ಇರಲಿಲ್ಲ. ದುಡಿಮೆಗೆ ತಕ್ಕ ಮಜೂರಿ
ಸಿಗದೇ ಹೋದ ಸಂದರ್ಭದಲ್ಲಿ ಪುಟ್ಟ ಅಪಘಾತದಿಂದ ಸೊಂಟಕ್ಕೆ ಪೆಟ್ಟಾಯಿತು. ಚಿಕಿತ್ಸೆ ನಂತರ ಕಸುಬು ಮುಂದುವರೆಸಬೇಕು ಎಂದಿದ್ದರೂ ಮಕ್ಕಳು ಬಿಡಲಿಲ್ಲ.

ನನ್ನ ಏಕಾಂಡ್ಲ ಕಂಬಳಿ ನೇಯ್ಗೆಯ ಕೆಲಸಕ್ಕೆ ‘ಆದಿಮ’ ಸಂಸ್ಥೆ ಗದ್ದುಗೆ ಗೌರವ ನೀಡಿ ಗೌರವಿಸಿತು. 2010ರಲ್ಲಿ ಕೋಲಾರ ಕಂಬಳಿ ನೇಯ್ಗೆಯನ್ನು ನಾನು ಬಿಟ್ಟುಕೊಟ್ಟೆ. ನೇಯ್ಗೆ ಹೋಯಿತು, ಕೋಲಾರ ಕಂಬಳಿಯ ಕೊನೆಯ ನೇಕಾರನಾಗಿ ನಾನು  ಉಳಿದುಬಿಟ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT