ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರುವ – ಜಾರುವ ದಾರಿಯಲ್ಲಿ ಬದುಕಿನ ಅರ್ಥದ ಹುಡುಕಾಟ

Last Updated 28 ಮೇ 2016, 19:30 IST
ಅಕ್ಷರ ಗಾತ್ರ

ಎವರೆಸ್ಟ್ 
(ಪರ್ವತಾರೋಹಣದ ದುರಂತ ಕಥನ)

ಲೇ: ಜಾನ್ ಕ್ರಾಕೌರ್; ಕನ್ನಡಕ್ಕೆ: ವಸುಧೇಂದ್ರ
ಪ್ರ: ಛಂದ ಪುಸ್ತಕ, ಬೆಂಗಳೂರು

ಇತ್ತೀಚೆಗೆ ಕರ್ನಾಟಕದ ಅರಣ್ಯಾಧಿಕಾರಿಯೊಬ್ಬರು ಎವರೆಸ್ಟ್ ಶಿಖರ ಮುಟ್ಟಿಬಂದ ಸುದ್ದಿ ಪತ್ರಿಕೆಗಳಲ್ಲಿ ಬಂದಿತು. ಇದರ ಜತೆಯಲ್ಲೇ ಅನೇಕರು ಪ್ರಾಣ ಕಳೆದುಕೊಂಡಿರುವ ಸುದ್ದಿಯೂ ಇತ್ತು. ಕೆಲವು ತಿಂಗಳ ಹಿಂದೆ ಸಿಯಾಚಿನ್ ಗ್ಲೇಶಿಯರ್‌ನಲ್ಲಿ ಭಾರತದ ಸೈನಿಕರು ಜೀವತೆತ್ತ ಪ್ರಕರಣವಿನ್ನೂ ನೆನಪಿನಿಂದ ಮಾಸಿಲ್ಲ. 


ಹಿಮ ಮತ್ತು ಹಿಮಪರ್ವತಗಳಿಗೆ ಸಾಹಸಿಗಳನ್ನು ಮೋಹಿಸಿ ಸೆಳೆಯುವ ಗುಣವಿರುವಂತೆ, ಕೊಲ್ಲುವ ಅಮಾನುಷತೆಯೂ ಇದೆ. ಅದರಲ್ಲೂ ಹಿಮಾಲಯದ ಉನ್ನತ ಶಿಖರವಾಗಿರುವ ಎವರೆಸ್ಟ್, ತನ್ನನೇರಲು ಬಂದು ಜೀವ ಕಳೆದುಕೊಂಡ ನತದೃಷ್ಟರ ದೊಡ್ಡ ದಾಖಲೆಯನ್ನೇ ಸೃಷ್ಟಿಸಿದೆ.

ಈ ಹಿನ್ನೆಲೆಯಲ್ಲಿ ಜಾನ್ ಕ್ರಾಕೌರ್ ಎಂಬ ಅಮೆರಿಕದ ಜನಪ್ರಿಯ ಲೇಖಕನ ‘ಇನ್‌ ಟು ಥಿನ್ ಏರ್’ ಎಂಬ ಕೃತಿಯ ಓದು ವಿಶಿಷ್ಟವಾದ ಅನುಭವ ಕೊಡುತ್ತದೆ. ಹಿಮಪರ್ವತಗಳನ್ನು ಏರುವಾಗ, ಎತ್ತರದ ಒಂದು ಘಟ್ಟ ದಾಟಿದ ಮೇಲೆ ಪ್ರಾಣವಾಯು ಕಡಿಮೆಯಾಗುತ್ತ ಹೋಗುತ್ತದೆ. ವಾತಾವರಣ ಮೈನಸ್ 70 ಡಿಗ್ರಿಯನ್ನು ಮುಟ್ಟುತ್ತದೆ. ಇದರಿಂದ ಉಸಿರಾಟ ಕಷ್ಟವಾಗುವುದು ಮಾತ್ರವಲ್ಲ, ಹಿಮವ್ರಣದಿಂದ ಕೈಬೆರಳು ಉದುರತೊಡಗುತ್ತವೆ.

ನೆನಪಿನ ಶಕ್ತಿ ಕಳೆದುಹೋಗುತ್ತದೆ. ಕೆಲವರಿಗೆ ಹುಚ್ಚು ಕೂಡ ಹಿಡಿಯುತ್ತದೆ. ‘ಥಿನ್‌ಏರ್’ ಎಂಬ ಸರಳವಾಗಿ ಕಾಣುವ ಈ ನುಡಿಗಟ್ಟು, ಈ ಎಲ್ಲ ಘೋರ ಸಂಗತಿಗಳನ್ನು ಒಳಗೊಂಡಿದೆ. ಈ ಕೃತಿಯನ್ನು ಕನ್ನಡದ ಕತೆಗಾರ ಹಾಗೂ ಹಿಮಪರ್ವತಗಳ ಚಾರಣಿಗ, ವಸುಧೇಂದ್ರ ಅವರು ಕನ್ನಡಕ್ಕೆ ತಂದಿದ್ದಾರೆ. ಅವರ ಸಹಜವಾದ ಕಥನಕುಶಲತೆಯ ಕಾರಣದಿಂದ ಇದರ ಅನುವಾದವು ಕನ್ನಡ ಮೂಲದಲ್ಲಿಯೇ ಹುಟ್ಟಿರುವಂತೆ ಆಪ್ತವಾಗಿದೆ.

ಹಿಮಾಲಯ ಕುರಿತ ಕಥನಗಳಲ್ಲಿ ಈ ಕೃತಿ ಎರಡು ಕಾರಣಗಳಿಂದ ವಿಶಿಷ್ಟವಾಗಿದೆ. ಮೊದಲನೆಯದಾಗಿ, ಇದು (ಇದೇ ಮೇ ತಿಂಗಳಿಗೆ ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ ಸಂಭವಿಸಿದ) ಭೀಕರ ಪರ್ವತಾರೋಹಣದ ದುರಂತ ಕಥನವನ್ನು ಒಳಗೊಂಡಿರುವುದು. ಕಾಡುವ ದುರಂತಸ್ಮೃತಿಗಳಿಂದ ಪಾರಾಗಲು ಈ ಕೃತಿಯನ್ನು ರಚಿಸಿರುವುದಾಗಿಯೂ, ಕೃತಿ ರಚನೆಯಾದ ಬಳಿಕವೂ ಆ ಸ್ಮೃತಿಗಳಿಂದ ಪಾರಾಗಲು ಸಾಧ್ಯವಾಗಿಲ್ಲವೆಂದೂ ಲೇಖಕ ಹೇಳಿಕೊಂಡಿದ್ದಾರೆ.

ಆತ ಈ ಪುಸ್ತಕ ಪ್ರಕಟಣೆಯಿಂದ ಸಿಕ್ಕ ಮಿಲಿಯಾಂತರ ಗೌರವ ಸಂಭಾವನೆಯನ್ನು ನೇಪಾಳದ ಹಿಮಾಲಯದ  ಸಂತ್ರಸ್ತರಾದ ಮಕ್ಕಳ – ಮಹಿಳೆಯರ – ವೃದ್ಧರ ಒಳಿತಿಗಾಗಿ ಕೊಟ್ಟು, ಈ ಕಾಡುವಿಕೆಯಿಂದ ಪಾರಾಗಲು ಸಹ ಯತ್ನಿಸಿದ್ದಾರೆ.

ಎರಡನೆಯದಾಗಿ– ನಿಸರ್ಗದ ಜತೆಗೆ ಮಾನವರು ಮಾಡುವ ಸೆಣಸಾಟಗಳನ್ನು ದಾರ್ಶನಿಕ ಕಾದಂಬರಿಗಳನ್ನಾಗಿಯೂ ರೋಚಕ ಕಥನಗಳನ್ನಾಗಿಯೂ ಜೈವಿಕ ಸಂವೇದನೆಯ ಚಿಂತನೆಗಳನ್ನಾಗಿಯೂ ಕಟ್ಟಿ ಕೊಡುತ್ತಿದ್ದ ಪೂರ್ಣಚಂದ್ರ ತೇಜಸ್ವಿಯವರ ಬರಹವನ್ನು ಇದು ತುಸು ನೆನಪಿಸುವಂತಿರುವುದು.

‘ಎವರೆಸ್ಟ್’, ಲೇಖಕನ ಪರ್ವತಾರೋಹರಣದ ಅದಮ್ಯ ತುಡಿತಗಳ ಮೊದಲ ಘಟ್ಟದ ಅನುಭವಗಳಿಂದ ಆರಂಭವಾಗುತ್ತದೆ. ಮುಂದೆ ಹಿಮಾಲಯ ಹತ್ತಿಳಿಯುವಲ್ಲಿ ಘಟಿಸಿದ ನಾಟಕೀಯವೂ ಭೀಷಣವೂ ಆದ ಘಟನೆಗಳಿಂದ ತುಂಬಿಹೋಗುತ್ತದೆ. ಕೊನೆಗೆ ಸಾವು ನೋವು ವಿಷಾದಗಳ ಶೋಕಜರ್ಝರಿತ ಭಾವದಿಂದ ಮುಗಿಯುತ್ತದೆ.

ವಿಶೇಷವೆಂದರೆ, ಇದು ಲೇಖಕನೊಬ್ಬನ ಅನುಭವಗಳ ದಾಖಲಾತಿಯಲ್ಲ. ದುರಂತದಲ್ಲಿ ಬದುಕುಳಿದು ಬಂದ ಇತರರ ಪ್ರತಿಕ್ರಿಯೆ–ಅನುಭವಗಳೂ ಇಲ್ಲಿ ಸೇರಿವೆ. ಇಲ್ಲಿನ ಕೆಲವು ಸನ್ನಿವೇಶಗಳನ್ನು ಓದುವಾಗ ಉಸಿರು ಕಟ್ಟಿದಂತಾಗುತ್ತದೆ. ಸೂಕ್ಷ್ಮ ವಿವರಗಳನ್ನು ದಾಖಲಿಸುವ (ಈ ದಾಖಲಾತಿ ಕೆಲವೊಮ್ಮೆ ಅತಿತಾಂತ್ರಿಕವೂ ವಿಪುಲವೂ ಆಗಿದೆ), ಮಾನವರ ಕೆಚ್ಚು, ಮಾನವೀಯ ಉದಾತ್ತತೆ, ಸಣ್ಣತನ ಮತ್ತು ವಿಕ್ಷಿಪ್ತ ಸ್ವಭಾವಗಳನ್ನು ಚಿತ್ರಿಸುವ ಈ ಕೃತಿ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ.

ಬದುಕುಳಿಯುವುದೇ ಕಷ್ಟವೆನ್ನುವ ಕಠಿಣ ಪರಿಸರದಲ್ಲಿ ಮಾನವರು ಸಹಮಾನವರ ಪಾಲಿಗೆ ಸಹಾನುಭೂತಿ ಕಳೆದುಕೊಂಡು ಕಠೋರರಾಗಬಲ್ಲರು ಎಂಬ ಸತ್ಯವನ್ನು, ಚಾಪ್ಲಿನ್ ತಮ್ಮ ‘ಗೋಲ್ಡ್ ರಶ್’ ಸಿನಿಮಾದಲ್ಲಿ ಉತ್ಪ್ರೇಕ್ಷಿತ ವ್ಯಂಗ್ಯದಲ್ಲಿ ಚಿತ್ರಿಸಿರುವುದುಂಟು.

ಆದರಂತೆ ಈ ಕೃತಿ ಕೂಡ, ಹಿಮಾಲಯದ ಮೃತ್ಯು ಕಠೋರ ಪರಿಸರದಲ್ಲಿ, ಮನುಷ್ಯರನ್ನು ಸಾವಿನಂಚಿಗೆ ದೂಡಿದಾಗ ಅವರ ಪ್ರಾಣ ಉಳಿಸುವ, ಹಾಗೆ ಉಳಿಸುವ ಯತ್ನದಲ್ಲಿ ಸ್ವಯಂ ಮರಣಕ್ಕೀಡಾಗುವ, ಕೊನೆ ಉಸಿರೆಳೆಯುತ್ತಿರುವ ಸಂಗಾತಿಗಳನ್ನು ಬಿಟ್ಟುಹೋಗಲಾಗದ ಅಸಹಾಯಕತೆಯ, ಬಿಟ್ಟು ಹೋಗಲೇಬೇಕಾದ ಅನಿವಾರ್ಯತೆಯ, ಬದುಕಿಬಂದ ಬಳಿಕ ವಿಷಾದದಲ್ಲಿ ಪರಿತಪಿಸುವ ವಿಭಿನ್ನ ಪಾತ್ರಗಳನ್ನು ಒಳಗೊಂಡಿದೆ.

ಮರುಭೂಮಿಯ ಪಯಣದಲ್ಲಿ ಬಿಸಿಲಿಗೆ ಸಾಯುವ ಸಂಗಾತಿಗಳನ್ನು ಬಿಟ್ಟುಹೋಗುವ ಇಂತಹವೇ ದಾರುಣ ಅನುಭವಗಳು ತೇಜಸ್ವಿಯವರ ‘ಮಹಾಪಲಾಯನ’ದಲ್ಲೂ ಇವೆ. ‘ಎವರೆಸ್ಟ್’ ಕೃತಿಯ ಕೊನೆಯಲ್ಲಿರುವ, ಲೇಖಕನ ತಂಡದಲ್ಲಿದ್ದು ಬದುಕುಳಿದು ಬಂದ ನೀಲ್ ಬೈಡಲ್‌ಮನ್ನನ ಮಾತುಗಳು, ಈ ದಾರುಣತೆಯನ್ನು ಹಿಡಿದುಕೊಡುತ್ತವೆ:

“ಆಕಾಶ ಸಾಕಷ್ಟು ತಿಳಿಯಾದ ತಕ್ಷಣ, ನನಗೆ ನಮ್ಮ ಕ್ಯಾಂಪ್ ಯಾವ ದಿಕ್ಕಿಗಿದೆ ಎಂದು ಅರ್ಥವಾಯ್ತು. ‘ಬಿರುಗಾಳಿಯ ಈ ವಿರಾಮ ಜಾಸ್ತಿ ಹೊತ್ತು ಇರಲ್ಲ. ತಕ್ಷಣ ಹೊರಡೋಣ ನಡೆಯಿರಿ’ ಎಂದು ಎಲ್ಲರಿಗೂ ಕೂಗಿ ಹೇಳತೊಡಗಿದೆ. ಆದರೆ ಕೆಲವೊಬ್ಬರಿಗೆ ನಡೆಯುವ ತ್ರಾಣವೇ ಇರಲಿಲ್ಲ. ನಿಲ್ಲಲೂ ಅವರಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದು ಸ್ಪಷ್ಟವಾಗತೊಡಗಿತು. ಜನ ಅಳಲಾರಂಭಿಸಿದರು. ಯಾರೋ ಒಬ್ಬರು ಭಯದಿಂದ ‘ನನ್ನ ಇಲ್ಲೇ ಸಾಯೋದಕ್ಕೆ ಬಿಡಬೇಡಿ ಪ್ಲೀಜ್’ ಎಂದು ಕೂಗಿದ್ದು  ಕೇಳಿಸಿತು.

ಈಗ ಹೊರಡದಿದ್ದರೆ ಮತ್ತೆ ಇಂತಹ ಅವಕಾಶ ದೊರೆಯುವುದಿಲ್ಲ ಎಂದು ಗೊತ್ತಾಯಿತು. ಯಸುಕಾಳಿಗೆ ಎದ್ದು ನಡೆಯುಲು ಬಲವಂತ ಮಾಡಿದೆ. ಆಕೆ ನನ್ನ ಕೈಯನ್ನು ಹಿಡಿದುಕೊಂಡಳು. ಆದರೆ ತನ್ನ ಕಾಲಮೇಲೆ ಎದ್ದು ನಿಲ್ಲುವ ಚೈತನ್ಯ ಆಕೆಗಿರಲಿಲ್ಲ. ನಾನು ನಡೆಯಲು ಆಕೆಯನ್ನು ಒಂದೆರಡು ಹೆಜ್ಜೆಗಳ ದೂರಕ್ಕೆ ಎಳೆದುಕೊಂಡು ಬಂದೆ.

ಅನಂತರ ಆಕೆಯ ಹಿಡಿತ ಸಡಿಲವಾಗಿ ಹಿಂದುಳಿದುಬಿಟ್ಟಳು. ನಾನಂತೂ ಮುಂದುವರೆಯಲೇಬೇಕಿತ್ತು... ಯಾಕೋ ಯಸುಕಾಳನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಆಕೆಯದು ಪುಟ್ಟ ದೇಹ. ಆಕೆಯ ಪುಟ್ಟ ಬೆರಳುಗಳು ನನ್ನ ಕೈಯಿಂದ ಜಾರಿ, ನನಗೆ ಮುಂದಕ್ಕೆ ನಡೆಯಲು ಬಿಟ್ಟುಕೊಟ್ಟಿದ್ದು ನೆನಪಿನಲ್ಲಿ ಹಸಿಯಾಗಿ ಉಳಿದಿದೆ. ನಾನು ಒಮ್ಮೆಯೂ ಆಕೆಯೆಡೆಗೆ ಹಿಂತಿರುಗಿ ನೋಡಲಿಲ್ಲ’’.

ಪರ್ವತಗಳ ಚಾರಣವು ಹೀಗೆ ಜೀವಘಾತುಕವಾಗಿದ್ದರೂ ಜನ ಅದನ್ನೇರುವ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಲೇ ಬಂದಿರುವುದು ವಿಸ್ಮಯ ಹುಟ್ಟಿಸುತ್ತದೆ. ಇದು ಬದುಕಿನ ದೈನಿಕಗಳಾಚೆ ತುಡಿಯುವ ಮನುಷ್ಯರೊಳಗಿನ ನಿಗೂಢ ಚೈತನ್ಯದ ಭಾಗವೂ ಆಗಿದೆ. ಆಫ್ರಿಕಾದ ನೈಲ್‌ನದಿಯ ಮೂಲವನ್ನು ಶೋಧಿಸುವ ಸಾಹಸದಲ್ಲಿ ತನ್ನ ಪ್ರಾಣವನ್ನೇ ಕೊಟ್ಟ ಲೀವಿಂಗ್‌ಸ್ಟೋನನ ಕಥನವನ್ನು ತೇಜಸ್ವಿಯವರು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.

ಆದರೆ ಇಂತಹ ಕೆಲವರ ಸಾಹಸಗಳಲ್ಲಿ, ಪರದೇಶಗಳನ್ನೂ ಅಲ್ಲಿನ ಸಂಪತ್ತನ್ನೂ ವಶಪಡಿಸಿಕೊಳ್ಳುವ ವಸಾಹತುವಾದಿ ಧೋರಣೆಯೂ ಕೆಲಸ ಮಾಡಿದೆ. ಅದಕ್ಕೆ ಹೋಲಿಸಿದರೆ, ಜಾನ್ ಕ್ರಾಕೌರ್ ಬರೆದಿರುವ ಪ್ರಸ್ತುತ ಪರ್ವತಾರೋಹಣದ ಕಥನವು ಯುವಕ ಯುವತಿಯರ ಸಾಹಸಲೀಲೆಯ ಭಾಗವಾಗಿದೆ. ಲೇಖಕ ಹಿಮಾಲಯವನ್ನೇರುವ ತನ್ನ ದುಡುಕನ್ನು, ಬದುಕಿನ ಅರ್ಥ ಹುಡುಕಾಟದ ಭಾಗವನ್ನಾಗಿಯೂ ಮಾಡಿಕೊಂಡಿರುವನು.

ಇದರಿಂದ ಇಡೀ ಕೃತಿಗೆ ಒಂದು ದಾರ್ಶನಿಕ ಆಯಾಮವೂ ದೊರಕಿದೆ. ಭಾರತದ ಅನೇಕ ಯೋಗಿಗಳು ತಮ್ಮ ಆಧ್ಯಾತ್ಮಿಕ ಹುಡುಕಾಟದ ಭಾಗವಾಗಿ ಹಿಮಾಲಯ ಕಥನಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಪ್ರಾಮಾಣಿಕ ಅನುಭವಗಳನ್ನು ದಾಖಲಿಸಿರುವವರು ಇದ್ದಾರೆ.

ಹಾಗೆಯೇ, ತಮ್ಮನ್ನು ಅತಿಮಾನುಷರಾಗಿ ಚಿತ್ರಿಸಿಕೊಳ್ಳುವ ವ್ಯಸನದವರೂ ಇದ್ದಾರೆ. ಇವರಿಗೆ ಹೋಲಿಸಿದರೆ, ಈ ಕೃತಿಯು ದೈಹಿಕವಾಗಿ ದೃಢರಾದ, ಮಾನಸಿಕವಾಗಿ ಎದೆಗಾರಿಕೆಯುಳ್ಳ, ಬಾಳಿನಲ್ಲಿ ವಿಶಿಷ್ಟ ಸಾಧನೆ ಮಾಡಬೇಕೆಂಬ ಛಲದ ಸಾಹಸಿಗರ ಗಾಥೆಯಾಗಿದೆ. ಜೀವವನ್ನು ಅಂಗೈಯಲ್ಲಿಟ್ಟು ಮಾಡುವ ಪರ್ವತಾರೋಹಣವೂ ಒಂದು ಬಗೆಯ ಆಧ್ಯಾತ್ಮಿಕ ಹುಡುಕಾಟವಾಗಬಲ್ಲದು ಎಂಬುದನ್ನು ಕಾಣಿಸುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT