ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ರೀತಿಯ ಭಯ

Last Updated 30 ಜೂನ್ 2016, 19:30 IST
ಅಕ್ಷರ ಗಾತ್ರ

ಸಮ್ಯಕ್ ದರ್ಶನ, ಜ್ಞಾನ, ಚಾರಿತ್ರ - ಇವು ಮೂರು ಶ್ರೇಷ್ಠ ತತ್ವಗಳನ್ನು ಜೈನದರ್ಶನದಲ್ಲಿ ರತ್ನತ್ರಯವೆಂದಿದ್ದಾರೆ.  ಉತ್ತಮ ಜ್ಞಾನ, ದರ್ಶನ ಗಳಿಗೆ ಸಮ್ಯಗ್ದರ್ಶನವೇ ಬುನಾದಿ. ಚೆನ್ನಾಗಿ ಪರೀಕ್ಷಿಸಿದನಂತರ ಒಪ್ಪಿತವಾದ ದೇವ, ಗುರು, ತತ್ವದ ಬಗ್ಗೆ ಸರಿಯಾದ ಶ್ರದ್ಧೆ ಇಡುವುದೇ ಸಮ್ಯಗ್ದರ್ಶನ.

ಇದು ನಮ್ಮ ಅಂತರ್ ಜಗತ್ತಿನ ದರ್ಶನ ಮಾಡಿಸುವುದು, ಆತ್ಮಸ್ವರೂಪದ ತಿಳಿವಳಿಕೆ ನೀಡುವುದು, ಅಸಾಧಾರಣ ಕ್ಷಮತೆಯನ್ನು ನೀಡಿ, ಸಾಧಾರಣ ವ್ಯಕ್ತಿಯಲ್ಲೂ ಅಸಾಧಾರಣ ಪರಿವರ್ತನೆಯನ್ನು ತರುವುದು.  ಈ ಶ್ರದ್ಧೆ, ಭಾವನಾತ್ಮಕವೂ ಆಂತರಿಕವೂ ಆದುದು. ಇದು ಒಳಗಿನ ಕೊಳೆಯನ್ನು ತೊಳೆಯುವುದು. ಅಲ್ಲದೆ ಅಡಗಿರುವ ಅಹಂಕಾರವನ್ನು ಛಿದ್ರಗೊಳಿಸಿ, ಸಮರ್ಪಣ ಭಾವವನ್ನು ಉಂಟುಮಾಡುವುದು. ಸಮ್ಯಗ್ದರ್ಶನಕ್ಕೆ ವಿಶಿಷ್ಟ ಲಕ್ಷಣಗಳುಳ್ಳ ಎಂಟು ಅಂಗಗಳಿವೆ.

ಅವುಗಳಲ್ಲಿ ನಿಃಶಂಕಿತ ಅಂಗವೇ ಮೊದಲನೆಯದು. ನಿಃಶಂಕಿತ ಅಂದರೆ ಸಂದೇಹ ಇಲ್ಲದಿರುವುದು. ತಾನು ನಂಬುವ ದೇವ, ಗುರು, ತತ್ತ್ವದ ಬಗ್ಗೆ ರವೆಯಷ್ಟು ಸಂಶಯವಿರಬಾರದು. ಅನುಮಾನವಿದ್ದರೆ ಅಲ್ಲಿ ಧರ್ಮ ಅಂಕುರಿಸುವುದಿಲ್ಲ. ಶಂಕೆಯ ಅಭಾವದಲ್ಲಿ ವಿಶ್ವಾಸವಿರುವುದು. ವಿಶ್ವಾಸವಿದ್ದಲ್ಲಿ ನಿಶ್ಚಿಂತೆಯಿರುವುದು. ಆದರೆ ಸಂದೇಹವಿದ್ದಲ್ಲಿ ಭಯವಿರುವುದು. ಜೈನಧರ್ಮ ಶ್ರದ್ಧೆಗೆ ಬಾಧಕವಾಗುವ ಏಳು ರೀತಿಯ ಭಯಗಳನ್ನು ಗುರುತಿಸಿದೆ-

1. ಇಹಲೋಕ ಭಯ: ಈ ಲೋಕದಲ್ಲಿ ನಮಗೆ ಪ್ರಿಯರಾದ ಮಡದಿ-ಮಕ್ಕಳು, ಬಂಧು-ಮಿತ್ರರು, ಆಸ್ತಿ-ಪಾಸ್ತಿ ಮೊದಲಾದುವುಗಳ ಅಗಲಿಕೆ ಉಂಟಾದಾಗ ದುಃಖವಾಗುವುದು; ಹಾಗೆಯೇ ನಮಗೆ ಇಷ್ಟರಲ್ಲದ ಶತ್ರುಗಳು, ಘಟನೆಗಳು ಸಂಭವಿಸಿದಾಗ ದುಃಖವಾಗುವುದು. ಇಂಥ ದುಃಖಗಳಿಗೆ ಹೆದರುವುದೇ ಇಹಲೋಕ ಭಯ.  

2. ಪರಲೋಕ ಭಯ: ಸತ್ತನಂತರ ನಾಕಕ್ಕೆ ಹೋಗದೆ ನರಕಕ್ಕೆ ಹೋಗುವೆನೆಂಬ ಭಯ.  ಇಲ್ಲಿ ಒಳ್ಳೆಯ ಕಾರ್ಯಮಾಡಿದರೆ ಅಲ್ಲಿ ಸದ್ಗತಿ ಲಭಿಸುತ್ತದೆ ಎಂದು ಭಾವಿಸದೆ ಆತಂಕಪಡುವ ಭಯ.

3. ವೇದನಾ ಭಯ: ಶರೀರವು ಸರ್ವ ರೋಗಗಳ ಆಗರವೆಂದು ತಿಳಿದಿದ್ದರು, ವೇದನೆಯನ್ನು ಸಹಿಸುವ ಶಕ್ತಿಯನ್ನು ಹಾಗೂ ಉಪಾಯಗಳನ್ನು ಹಚ್ಚಿಸಿಕೊಳ್ಳದೆ ರೋಗಗಳಿಗೆ ಹೆದರುವುದು. 

4. ಆಕಸ್ಮಿಕ ಭಯ: ಏನಾದರು ಅಪಘಾತವಾದರೆ, ಭೂಕಂಪವಾದರೆ, ಜಲಪ್ರಳಯವಾದರೆ - ಹೀಗೆ ನಕಾರಾತ್ಮಕವಾಗಿ ಚಿಂತಿಸಿ ಚಿಂತಿಸಿ ಭೀತಿಗೊಳ್ಳುವುದು.

5. ಮರಣ ಭಯ: ಹುಟ್ಟಿದವರೆಲ್ಲ ಸಾಯಲೇ ಬೇಕು,  ಮರಣ ಅನಿವಾರ್ಯ ಹಾಗೂ ಅಪರಿಹಾರ್ಯ ಎಂದು ಗೊತ್ತಿದ್ದರು ಮೃತ್ಯುವಿನ ಬಗ್ಗೆ ಅತಿಯಾಗಿ ಭಯಗೊಳ್ಳುವುದು. 

6. ಅತ್ರಾಣ ಭಯ: ನನ್ನನ್ನು ಕಾಪಾಡುವವರು ಯಾರು ಇಲ್ಲ ಅಂತ ಅಂಜಿ ಅಂಜಿ ನರಳುವುದು. 

7. ಅಗುಪ್ತಿ ಭಯ: ಗುಪ್ತವಾಗಿರಿಸ ಬೇಕಾಗಿದ್ದ ಮನ-ವಚನ-ಕಾಯದ ಸಂಗತಿಗಳನ್ನು ಎಲ್ಲಿ ರಹಸ್ಯವಾಗಿ ಇರಿಸುವುದಿಲ್ಲವೋ ಎಂಬ ಭಯ.

ಮೇಲಿನ ಎಲ್ಲ ಏಳೂ ಭಯಗಳಿಂದ ವಿಮುಕ್ತನಾಗಿ ದೇವ-ಗುರು-ಧರ್ಮದಲ್ಲಿ ಶ್ರದ್ಧೆ ಇರಿಸುವುದೇ ನಿಃಶಂಕಿತ ಸಮ್ಯಗ್ದರ್ಶನ. ಇದೇ ರೀತಿ ಪ್ರತಿಯೊಬ್ಬ ಪ್ರಜೆಯು ನಿಃಶಂಕಿತನಾಗಿ ತನ್ನ ದೇಶ,  ತನ್ನ ಮಾರ್ಗದರ್ಶನ ಮುತ್ಸದ್ದಿ ಹಾಗೂ ಪವಿತ್ರ ಸಂವಿಧಾನದ ಬಗ್ಗೆ  ಶ್ರದ್ಧೆಯಿಡುವುದು ಅನಿವಾರ್ಯವಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT