ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಕ್ರೀಡಾಹಬ್ಬಕ್ಕೆ ತೆರೆ

Last Updated 5 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಏಷ್ಯಾದ ದೇಶಗಳೆಲ್ಲಾ ಒಂದು ಕುಟುಂಬ ಎಂಬ ಭಾವ ಸಂಭ್ರಮ­ದೊಂದಿಗೆ ನಡೆದ ಹದಿನೇಳನೇ ಏಷ್ಯನ್ ಕ್ರೀಡಾಕೂಟಕ್ಕೆ ತೆರೆ ಬಿದ್ದಿದೆ. ಈ ಕ್ರೀಡಾ ಮಹಾಹಬ್ಬದಲ್ಲಿ ಒಂಬತ್ತು ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ತಮ್ಮ ಸತ್ವ ಪರೀಕ್ಷೆ ನಡೆಸಿದರು. ಚೀನಾ ತಾನೇ ಹಿರಿಯಣ್ಣ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿತು.

ಅದು ಗೆದ್ದ 151 ಚಿನ್ನದ ಪದಕಗಳನ್ನು ಗಮ­ನಿಸಿದಾಗ ಆ ದೇಶ ಕ್ರೀಡೆಗೆ ನೀಡುವ ಉತ್ತೇಜನ ಇತರ ದೇಶಗಳಿಗೆ ಮಾದರಿ ಎನಿಸುವಂತಿದೆ. ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ಕ್ರೀಡಾ ಚಟುವಟಿಕೆಗಳಿಗೆ  ಪ್ರೋತ್ಸಾಹ ನೀಡಲೇಬೇಕಾದ ಅಗತ್ಯವನ್ನು ಚೀನಾ ಕಂಡುಕೊಂಡಿದೆ. ದಕ್ಷಿಣ ಕೊರಿಯ ಕೂಡಾ ಇದೇ ಆಶಯದ ದಿಕ್ಕಿನಲ್ಲಿ ದಾಪು­­ಗಾಲು ಇರಿಸಿದೆ. ಕೊರಿಯ ಈ ಕೂಟವನ್ನು ಇಂಚೆನ್‌ನಲ್ಲಿ ಅಚ್ಚು­ಕಟ್ಟಾಗಿ ಸಂಘಟಿಸಿ ಏಷ್ಯಾ ಸಮುದಾಯದ ಮನ ಗೆದ್ದಿದೆ.

ಉದ್ದೀಪನಾ ಮದ್ದು ಸೇವನೆಯ ಪ್ರಕರಣಗಳು ತೀರಾ ಕಡಿಮೆಯಾಗಿರುವುದು ಈ ಭೂ­ಖಂಡದ ಮಂದಿ ಹೆಮ್ಮೆ ಪಡುವಂತಹದ್ದೇ ಆಗಿದೆ. ಚೀನಾ, ಜಪಾನ್‌, ಕೊರಿಯ ದೇಶಗಳು ಕೆಲವು ದಶಕಗಳಿಂದ ಏಷ್ಯಾ ಕ್ರೀಡಾ ಶಕ್ತಿ ಕೇಂದ್ರ­ಗಳಾ­ಗಿವೆ. ಇರಾನ್‌ ಮತ್ತು ಕಜಕಸ್ತಾನಗಳೂ ಈಚೆಗೆ ಅತ್ಯುತ್ತಮ ಸಾಮರ್ಥ್ಯ ತೋರಿ­ರುವುದು ಶ್ಲಾಘನಾರ್ಹ.  ಆದರೆ ಭಾರತ ಇಲ್ಲಿ 11 ಚಿನ್ನವೂ ಸೇರಿ­ದಂತೆ 57 ಪದಕಗಳನ್ನು ಗಳಿಸಿದೆ. ಇದು ಕಳೆದ ಏಷ್ಯನ್‌ ಕೂಟದ ಸಾಧನೆಗೆ ಹೋಲಿಸಿದರೆ ಕಡಿಮೆಯೇ. ಆದರೆ ನಮ್ಮ  ಕೆಲವು ಕ್ರೀಡಾಪಟುಗಳು ತಮ್ಮ ಅಪೂರ್ವ  ಸಾಧನೆಗಳೊಂದಿಗೆ ಇತಿಹಾಸ ನಿರ್ಮಿಸಿದ್ದಾರೆ. ಇದು ಖುಷಿ ಕೊಡುವಂತಹದ್ದು.

ಹಾಕಿಯಲ್ಲಿ ಭಾರತ ಗಮನಾರ್ಹ ಸಾಮರ್ಥ್ಯ ಪ್ರದರ್ಶಿಸಿದೆ. ಏಷ್ಯನ್‌ ಕೂಟ­ದಲ್ಲಿ 16 ವರ್ಷಗಳ ನಂತರ ಹಾಕಿ ಚಿನ್ನ ನಮಗೆ ಬಂದಿದೆ.
ಯೋಗೇ­ಶ್ವರ ದತ್‌ ಕುಸ್ತಿಯಲ್ಲಿ 28 ವರ್ಷಗಳ ಚಿನ್ನದ ಬರವನ್ನು ನೀಗಿ­ಸಿ­ದರು. ಮೇರಿ­ಕೋಮ್‌ ಬಾಕ್ಸಿಂಗ್‌ನಲ್ಲಿ ಗೆದ್ದ ಬಂಗಾರ ಯುವಜನರಿಗೆ ಸ್ಫೂರ್ತಿಯ ಚೇತನ­ದಂತಿದೆ. ರಿಲೆ ಓಟದಲ್ಲಿ ಭಾರತೀಯ ವನಿತೆಯರು ತಮ್ಮ ಚಿನ್ನದ ಅನನ್ಯ ಪರಂಪರೆಯನ್ನು ಮುಂದುವರಿಸಿದ್ದಾರೆ. ಸ್ಕ್ವಾಷ್‌ನಲ್ಲಿ ಬಂದ ಪದಕಗಳು ಅನಿ­ರೀ­ಕ್ಷಿತ.

ಮುಂದಿನ ದಿನಗಳಲ್ಲಿ ಇದೇ ಕ್ರೀಡೆಯಲ್ಲಿ ನಾವು ಒಲಿಂಪಿಕ್ಸ್‌ ಎತ್ತರ­ದ­ಲ್ಲಿಯೂ ಮಿಂಚಬಹುದು ಎಂಬ ಆತ್ಮವಿಶ್ವಾಸವನ್ನು ದೀಪಿಕಾ ಪಳ್ಳಿಕಲ್‌, ಜೋಶ್ನಾ, ಸೌರವ್‌ ಘೋಷಾಲ್‌ ನೀಡಿದ್ದಾರೆ. ಕಬಡ್ಡಿ­ಯಲ್ಲಿ ನಿರೀಕ್ಷಿತ ಸಾಧನೆ ಮೂಡಿ ಬಂದಿದೆ. ಆದರೆ ಇರಾನ್‌ನಂತಹ ದೇಶ­ಗಳು ಮುಂದಿನ ದಿನಗಳಲ್ಲಿ ನಮ್ಮ  ಕಬಡ್ಡಿಯ ಏಕಸ್ವಾಮ್ಯಕ್ಕೆ ಧಕ್ಕೆ ತರುವ ಸೂಚನೆಗಳೂ ಸಿಕ್ಕಿವೆ. ಶೂಟಿಂಗ್‌ನಲ್ಲಿ ಪದಕಗಳು ಬಂದಿವೆಯಾದರೂ, ತೃಪ್ತಿಕರವಲ್ಲ. ಆದರೆ ಜಿತು ರಾಯ್‌ದು ಅದ್ಭುತ ಸಾಧನೆ.

ಬ್ಯಾಡ್ಮಿಂಟನ್‌ ತಂಡದ ಮೇಲಿ­ಟ್ಟಿದ್ದ ಅಪಾರ ಭರವಸೆ ಹುಸಿಯಾಗಿದೆ. ಮುಂದಿನ ದಿನ­ಗ­ಳಲ್ಲಿ ಭಾರತದ ಕ್ರೀಡಾ­ಪಟುಗಳು ತಪ್ಪುಗಳನ್ನು ತಿದ್ದಿಕೊಂಡು ಇನ್ನೂ ಎತ್ತರಕ್ಕೆ ಏರುವ ನಿಟ್ಟಿ­ನಲ್ಲಿ ಈ ಕೂಟ ಪಾಠವನ್ನೂ ಕಲಿಸಿದೆ. ದೇಶದ ಮೂಲೆ ಮೂಲೆ­ಯಲ್ಲೂ ಅವ­ಕಾಶಕ್ಕಾಗಿ ಕಾಯುತ್ತಿರುವ ಪ್ರತಿಭೆಗಳಿಗೆ ನೀರೆರೆಯಬೇಕು. ಕ್ರೀಡೆ ನಮ್ಮ ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕು,  ಅದು ಮನರಂಜನೆಗೆ ಸೀಮಿತ ಎಂಬ ಧೋರಣೆ ಬದಲಾಗಬೇಕು. ರಾಜಕಾರಣಿಗಳು ಕ್ರೀಡೆಯನ್ನು ಬೆಳೆ­ಸುವ ಬದಲು ತಮ್ಮ ಬೆಳವಣಿಗೆಗೆ ಅದನ್ನು ಬಳಸಿಕೊಳ್ಳುವ ಪರಿಪಾಠ ನಿಲ್ಲಬೇಕು. ಆಗ ಪದಕ ಪಟ್ಟಿಯಲ್ಲಿ ಮತ್ತಷ್ಟು ಎತ್ತರಕ್ಕೆ ಏರಲು ಸಾಧ್ಯವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT