ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಟಿ: ಕೇಂದ್ರ ತಂಡಕ್ಕೆ ಮಾಹಿತಿ

ರಾಯಚೂರು ಸಮೀಪ ವಿವಿಧ ಸ್ಥಳ ಪರಿಶೀಲಿಸಿದ ತಂಡ
Last Updated 29 ಆಗಸ್ಟ್ 2015, 7:05 IST
ಅಕ್ಷರ ಗಾತ್ರ

ರಾಯಚೂರು: ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸ್ಥಾಪನೆಗೆ ಸ್ಥಳ ಪರಿಶೀಲನೆಗೆ ಬಂದ ಕೇಂದ್ರ ಮೂವರು ಸದಸ್ಯರ ತಂಡವು ಮೊದಲು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಆವರಣದಲ್ಲಿ ಆಡಳಿತ ಕಚೇರಿಗಾಗಿ ನಿರ್ಮಿಸಲಾಗಿರುವ ನೂತನ ಕಟ್ಟಡವನ್ನು ಪರಿಶೀಲಿಸಿತು. ಈ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಐಐಟಿ ಕಚೇರಿ ಮತ್ತು ತರಗತಿ ನಡೆಸಲು ಯೋಗ್ಯವೇ ಎಂಬದನ್ನು ಅವಲೋಕಿಸಿತು.

ನಂತರ ವಿ.ವಿ.ಯ ಅಥಿತಿ ಗೃಹವನ್ನು ಹೊರಗಿನಂದಲೇ ನೋಡಿದ ತಂಡವು, ಹೊಸದಾಗಿ ಕಟ್ಟಲಾಗುತ್ತಿರುವ ವಿದ್ಯಾರ್ಥಿಗಳ ವಸತಿ ನಿಲಯದೊಳಗೆ ಭೇಟಿ ನೀಡಿ ಪರಿಶೀಲಿಸಿತು. ವಿ.ವಿ. ಕುಲಸಚಿವ ಡಾ.ಬಿ.ಎಂ. ಚಂದರಗಿ ಅವರು ತಂಡಕ್ಕೆ ಮಾಹಿತಿ ನೀಡಿದರು.

ಕೃಷಿ ವಿ.ವಿ.ಯಿಂದ ಯರಮರಸ್‌ ವೈಟಿಪಿಎಸ್ ಬಳಿ ಇರುವ ಜಮೀನನ್ನು ತಂಡ ಪರಿಶೀಲಿಸಿತು. ಇಲ್ಲಿ ಜಿಲ್ಲಾಧಿಕಾರಿ ಎಸ್‌.ಸಸಿಕಾಂತ ಸೆಂಥಿಲ್‌ ಮತ್ತು ಉಪವಿಭಾಗಾಧಿಕಾರಿ ಎಂ.ಪಿ.ಮಾರುತಿ ಅವರು ಮಾಹಿತಿ ನೀಡಿ, ಈಗ ಜಿಲ್ಲಾಡಳಿತದ ಬಳಿ 401 ಎಕರೆ ಜಮೀನು ಇದೆ. ಇದನ್ನು ಹೊರತುಪಡಿಸಿ ಈ ಪ್ರದೇಶದ ಆಜುಬಾಜಿನಲ್ಲಿ 311 ಎಕರೆ ಜಮೀನಿದ್ದು, ಇದನ್ನು ಸರ್ಕಾರಕ್ಕೆ ನೀಡಲು ರೈತರು ಒಪ್ಪಿದ್ದಾರೆ ಎಂದು ತಿಳಿಸಿದರು.

ನಂತರ, ತಂಡದ ಸದಸ್ಯರಾದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ತಾಂತ್ರಿಕ ಶಿಕ್ಷಣದ ಹೆಚ್ಚುವರಿ ಕಾರ್ಯದರ್ಶಿ ಆರ್‌. ಸುಬ್ರಮಣಿಯನ್‌, ಐಐಟಿ ಗಾಂಧಿ ನಗರದ ನಿರ್ದೇಶಕ ಪ್ರೊ. ಸುಧೀರ್‌ ಎಲ್‌. ಜೈನ್‌, ಕೇಂದ್ರ ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್‌ ರವಿಕಾಂತ್ ಸೋನಿ ಮತ್ತು ರಾಜ್ಯ ಉನ್ನತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭರತ್‌ಲಾಲ್‌ ಮೀನಾ ಅವರಿಗೆ ಪ್ರವಾಸಿ ಮಂದಿರದಲ್ಲಿ ಜಿಲ್ಲಾಡಳಿತ ವತಿಯಿಂದ ವಿದ್ಯುತ್‌, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಒಳಗೊಂಡ 60 ಅಂಶಗಳನ್ನು ಪವರ್‌ ಪಾಯಿಂಟ್‌ ಪ್ರದರ್ಶನದ ಮೂಲಕ ತಿಳಿಸಲಾಯಿತು.

ಬಳಿಕ ತಂಡವು ಯರಗೇರಾ ಬಳಿಯ ಗುಲ್ಬರ್ಗ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಕ್ಕೆ ಭೇಟಿ ನೀಡಿತು. ಸರ್ವೆ ಸಂಖ್ಯೆ 347ರಲ್ಲಿರುವ 627 ಎಕರೆ ಇದ್ದು, ಇದರಲ್ಲಿ 250 ಎಕರೆ ಜಾಗದಲ್ಲಿ ಸ್ನಾತಕೋತ್ತರ ಕೇಂದ್ರ ಇದೆ. 243 ಎಕರೆ ಅರಣ್ಯ ಇಲಾಖೆ ಭೂಮಿಯಾಗಿದ್ದು, 157 ಎಕರೆಯನ್ನು ಭೂರಹಿತರಿಗೆ ಹಂಚಲಾಗಿದೆ ಎಂಬ ಮಾಹಿತಿಯನ್ನು ಜಿಲ್ಲಾಡಳಿತ ನೀಡಿತು.

ಕೊಪ್ಪಳ ಲೋಕಸಭಾ ಕ್ಷೇತ್ರದ ಸದಸ್ಯ ಸಂಗಣ್ಣ ಕರಡಿ, ಶಾಸಕರಾದ ಎನ್‌.ಎಸ್.ಬೋಸರಾಜು, ಹಂಪಯ್ಯ ನಾಯಕ, ಡಾ.ಶಿವರಾಜ ಪಾಟೀಲ, ಮಾಜಿ ಶಾಸಕ ಸೈಯದ್‌ ಯಾಸೀನ್‌ ಅವರು ಕೇಂದ್ರ ತಂಡವನ್ನು ಭೇಟಿ ಮಾಡಿ, ಐಐಟಿ ಸ್ಥಾಪನೆಯ ರಾಯಚೂರು ಪ್ರಶಸ್ತವಾದ ಸ್ಥಳ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT