ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಸಾಧನೆ

Last Updated 24 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಭಾರತದ ಮಂಗಳಯಾನ ಯಶಸ್ವಿಯಾಗಿದೆ. 1,350 ಕೆ.ಜಿ. ತೂಕದ ‘ಮಾರ್ಸ್ ಆರ್ಬಿಟರ್’ ಗಗನ ನೌಕೆಯನ್ನು ಮಂಗಳನ ಕಕ್ಷೆಗೆ ಸೇರಿಸುವಲ್ಲಿ ಸಾಧಿಸಿದ ಯಶಸ್ಸು ಐತಿಹಾಸಿಕವಾದದ್ದು. ಭಾರತೀಯ ಬಾಹ್ಯಾ­­ಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮೊದಲ ಯತ್ನದಲ್ಲೇ ಈ  ಹತ್ತು ತಿಂಗಳ ಯಾನ ಫಲಪ್ರದವಾಗಿದೆ ಎಂಬುದು ದೊಡ್ಡ ಹೆಗ್ಗಳಿಕೆ. 

ಭಾರತದ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ  ಇದು ಹೊಸ ಭಾಷ್ಯ ಬರೆದಿದೆ.    ಮಂಗಳ ಗ್ರಹಕ್ಕೆ ಯಶಸ್ವಿಯಾಗಿ ನೌಕೆಗಳನ್ನು ಕಳಿಸಿರುವ  ಅಮೆರಿಕ, ರಷ್ಯಾ ಹಾಗೂ ಐರೋಪ್ಯ ಒಕ್ಕೂಟ ರಾಷ್ಟ್ರಗಳ ಸಾಲಿಗೆ ಭಾರತವೂ  ಈಗ ಸೇರ್ಪಡೆ­ಯಾಗಿದೆ. ಈ ಪ್ರತಿಷ್ಠೆಯ ಸ್ಥಾನ ಪಡೆದ ಮೊದಲ ಏಷ್ಯನ್  ರಾಷ್ಟ್ರ ಭಾರತ. ಏಕೆಂದರೆ, ಮಂಗಳಯಾನಕ್ಕಾಗಿ ಚೀನಾ ಹಾಗೂ ಜಪಾನ್ ನಡೆಸಿದ ಪ್ರಯತ್ನ­ಗಳು ಸಫಲವಾಗಿಲ್ಲ.

ಸಂಪೂರ್ಣ ಸ್ವದೇಶಿ ನಿರ್ಮಿತ ತಂತ್ರಜ್ಞಾನದ ಪಿ.ಎಸ್.­ಎಲ್‌.ವಿ  ಮೂಲಕವೇ ‘ಮಾರ್ಸ್ ಆರ್ಬಿಟರ್ ಮಿಷನ್’(ಮಾಮ್) ಗಳಿ­ಸಿ­­­ರುವ ಯಶಸ್ಸು ದೇಶಿ ತಾಂತ್ರಿಕ ಪರಿಣತಿಯನ್ನು ಎತ್ತಿ ಹಿಡಿದಿದೆ. ರಾಷ್ಟ್ರದ ಮುಂದಿನ ಹಲವು ಅಂತರಿಕ್ಷ ಯೋಜನೆಗಳಿಗೆ  ಇದು ಹೊಸ ಸಾಧ್ಯತೆಗಳ ಲೋಕ­ವನ್ನೇ ತೆರೆದಿಡುವಂತಹದ್ದು. ಮಂಗಳಯಾನದ ಯಶಸ್ಸಿಗಾಗಿ ದುಡಿದ ಇಸ್ರೊದ 300ಕ್ಕೂ ಹೆಚ್ಚು ವಿಜ್ಞಾನಿಗಳು ಅಭಿನಂದನೀಯರು.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಕಳಿಸಿದ ‘ಮೇವೆನ್’ ನೌಕೆ ಎರಡು ದಿನಗಳ ಹಿಂದೆಯಷ್ಟೇ ಮಂಗಳನ ಕಕ್ಷೆ ಸೇರಿದೆ. ‘ನಾಸಾ’ದ ಈ ಮಂಗಳ­­­ಯಾನದ ವೆಚ್ಚ ₨ 4026 ಕೋಟಿ.  ಆದರೆ ನಮ್ಮ ಮಂಗಳ­ಯಾನದ ವೆಚ್ಚ  ₨ 450 ಕೋಟಿ ಮಾತ್ರ.  ಈ ಕಡಿಮೆ ವೆಚ್ಚದಲ್ಲೂ  ಭಾರತ ದಾಖಲೆ ಬರೆದಿದೆ. ಸಂವಹನ ಸುಧಾರಿಸುವಂತಹ, ಹವಾಮಾನ ಮಾಹಿತಿ ಒದಗಿಸು­ವಂತಹ ಉಪಗ್ರಹಗಳ ಉಡಾವಣೆಗಳಲ್ಲಿ ಇಸ್ರೊ ಸಾಮರ್ಥ್ಯ ಎದ್ದು ಕಾಣು­ವಂತಹದ್ದು. ನಂತರ 2008ರಲ್ಲಿ ಕೈಗೊಂಡ  ‘ಚಂದ್ರಯಾನ–1’  ಕೂಡ ಜಗ­ತ್ತಿನ ಗಮನ ಸೆಳೆದಿತ್ತು.

ಈಗ ಅಂಗಾರಕನ ವಾತಾವರಣ, ಮೇಲ್ಮೈ ಲಕ್ಷಣ, ಗ್ರಹದ ವಿಕಾಸ ಹಾಗೂ ಜೀವ ಕುರುಹುಗಳ ಪತ್ತೆಗೆ ಈ ಮಂಗಳ-­ಯಾನ ಸಹಕಾರಿಯಾಗಬಹುದು. ಮಂಗಳನಲ್ಲಿ ಕೋಟ್ಯಂತರ ವರ್ಷಗಳ ಹಿಂದೆ ಜೀವಿಗಳು ಇದ್ದಿರಬಹುದಾದ ಸೂಚನೆ ನೀಡುವ ಮೀಥೇನ್ ಅನಿಲ­ವನ್ನು  ಪತ್ತೆ ಹಚ್ಚುವುದೂ ‘ಮಾರ್ಸ್ ಆರ್ಬಿಟರ್’ನ ಮುಖ್ಯ ಉದ್ದೇಶ.  ಈ ನಿಟ್ಟಿನಲ್ಲಿ ಯಶಸ್ವಿಯಾದಲ್ಲಿ ಅದು ಜ್ಞಾನದ ದಿಗಂತ­ಗಳನ್ನು ವಿಸ್ತರಿಸಲಿದೆ. ಈ ನೌಕೆ 6ರಿಂದ 10 ತಿಂಗಳು ಕಾರ್ಯ ನಿರ್ವಹಿಸುವ ಅಂದಾಜಿದೆ.

ಮಂಗ­ಳ­ಯಾನ ಯೋಜನೆ ಆರಂಭವಾದಾಗ ಅಪಸ್ವರಗಳು ಕೇಳಿಬಂದಿದ್ದವು. ಆಹಾರ, ವಸತಿಯಂತಹ ಮೂಲಭೂತ ಅವಶ್ಯಕತೆಗಳನ್ನೇ ಪೂರೈಸಲಾಗದ ರಾಷ್ಟ್ರಕ್ಕೆ ಇಂತಹ ಒಣಪ್ರತಿಷ್ಠೆಗಳ ಯೋಜನೆಗಳೇಕೆ ಎಂದು ಅನೇಕ ಮಂದಿ ಪ್ರಶ್ನಿಸಿದ್ದರು. ಆದರೆ ಭೌತಿಕ ಪ್ರಗತಿಯ ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಕಲೆ ಹೀಗೆ ಎಲ್ಲಾ  ಜ್ಞಾನಶಿಸ್ತುಗಳಲ್ಲಿ ಪ್ರಗತಿ ಸಾಧಿಸಿದಲ್ಲಿ ಮಾತ್ರ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂಬುದನ್ನು ಮರೆಯ­ಬಾ­ರದು.

ಈಗ, ಮಂಗಳಯಾನದ ಯಶಸ್ಸು ನಮ್ಮ ದೇಶಿ ತಾಂತ್ರಿಕ ಪ್ರಗತಿ­ಯನ್ನು ಎತ್ತಿ ಹಿಡಿದಿದೆ. ರಾಷ್ಟ್ರದ ಸಂವಹನ ತಾಂತ್ರಿಕತೆ, ನೂಕುಬಲ ತಾಂತ್ರಿ­ಕತೆ ಹಾಗೂ ನೌಕಾ ನಿರ್ದೇಶನ ತಾಂತ್ರಿಕತೆ ಉನ್ನತ ಸ್ತರಕ್ಕೇರಿರು­ವುದನ್ನು ಈ ಯಾನದ ಯಶಸ್ಸು ಸಾಬೀತುಪಡಿಸಿದೆ. ಮುಂದಿನ ಹೊಸ ಅನ್ವೇಷಣೆಗಳಿಗೆ ಇದು ನಾಂದಿಯಾಗಬೇಕು. ಮೂಲ ವಿಜ್ಞಾನ ಶಾಖೆಗಳಲ್ಲಿ ಆಸಕ್ತಿ ತಳೆದು ಸಂಶೋಧನಾ ಕ್ಷೇತ್ರಕ್ಕೆ ಹೊರಳಿಕೊಳ್ಳುವಂತಾಗಲು ಭಾರತದ  ಈ ಸಾಧನೆ ಇಂದಿನ ಯುವಜನತೆಗೂ ಹೊಸ ಸ್ಫೂರ್ತಿ ನೀಡುವಂತಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT