ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐರಿಷ್ ಮಹಿಳೆ ಮೇಲೆ ಅತ್ಯಾಚಾರ ಯತ್ನ

ನಗರ ರೈಲು ನಿಲ್ದಾಣದಲ್ಲಿ ಹಾಡಹಗಲೇ ಘಟನೆ: ವೃದ್ಧನ ಬಂಧನ
Last Updated 17 ಏಪ್ರಿಲ್ 2014, 20:15 IST
ಅಕ್ಷರ ಗಾತ್ರ

ಬೆಂಗಳೂರು: ಐರಿಷ್‌ ದೇಶದ ಮಹಿಳೆ ಮೇಲೆ ವೃದ್ಧನೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ನಗರ ರೈಲು ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ಗುರುವಾರ ಹಾಡಹಗಲೇ ನಡೆದಿದೆ. ಘಟನೆ ನಡೆದ ಅರ್ಧ ತಾಸಿನಲ್ಲೇ ಆರೋಪಿ ಕಾಶೀನಾಥ್ (61) ಎಂಬಾತನನ್ನು ಬಂಧಿಸುವಲ್ಲಿ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.

‘ಐರಿಷ್‌ ದೇಶದ ಮಹಿಳೆ ಮೇಲೆ ಕಾಶೀನಾಥ್‌ ಎಂಬಾತ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆತನನ್ನು ಬಂಧಿಸಿರುವ ಪೊಲೀಸರು, ಮಹಿಳೆಯನ್ನು ಕೆ.ಸಿ.ಜೆನರಲ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜ್ವರ ಹಾಗೂ ಅಸ್ವಸ್ಥತೆಯಿಂದ ಬಳಲುತ್ತಿರುವ ಆ ಮಹಿಳೆಗೆ ಚಿಕಿತ್ಸೆ ಮುಂದುವರಿದಿದ್ದು, ಹೇಳಿಕೆ ದಾಖಲಿಸಿಕೊಳ್ಳಲಾಗಿದೆ’ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.

ದೇಶವ್ಯಾಪಿ ಪ್ರವಾಸದ ಯೋಜನೆ ರೂಪಿಸಿಕೊಂಡಿದ್ದ ಮಹಿಳೆ, ವಾರದ ಹಿಂದೆ ಭಾರತಕ್ಕೆ ಬಂದಿದ್ದರು. ಮಂಗಳವಾರ ಹಂಪಿಗೆ ಹೋಗಿದ್ದ ಅವರು, ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಗುರುವಾರ ಬೆಳಿಗ್ಗೆ ನಗರ ರೈಲು ನಿಲ್ದಾಣಕ್ಕೆ ಬಂದಿಳಿದರು. ಸಂಜೆ 5.30ಕ್ಕೆ ಅವರು ಕೇರಳದ ಎರ್ನಾಕುಲಂಗೆ ತೆರಳಲು ಟಿಕೆಟ್‌ ಕಾಯ್ದಿರಿಸಿದ್ದರು ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.

‘ಆರೋಪಿ ಕಾಶೀನಾಥ್‌ ಮೂಲತಃ ದಾವಣಗೆರೆಯವನು. ಆತ ಆಗಾಗ್ಗೆ ರೈಲಿನಲ್ಲಿ ನಗರಕ್ಕೆ ಬಂದು ಹೋಗುತ್ತಿದ್ದ. ಬೆಳಿಗ್ಗೆ 10.30ಕ್ಕೆ ನಗರ ರೈಲು ನಿಲ್ದಾಣಕ್ಕೆ ಬಂದ ಆತ, ಈ ಮಹಿಳೆಯನ್ನು ನೋಡಿದ್ದಾನೆ. ಅವರ ಬಳಿ ಹೋಗಿ ಹವಾನಿಯಂತ್ರಿತ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾನೆ. ನೆರವಾಗುವ ನೆಪದಲ್ಲಿ ಅವರೊಟ್ಟಿಗೆ ಕೊಠಡಿಗೆ ಹೋದ ಆರೋಪಿ, ಆ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ವಿಶ್ರಾಂತಿ ಕೊಠಡಿಗೆ ಬಂದ ವೃದ್ಧ, ಶಾಲು ಹೊದಿಸುವ ಸೋಗಿನಲ್ಲಿ ಹತ್ತಿರ ಬಂದ. ಆಗ ಆತನನ್ನು ಬೈಯ್ದು ಕೊಠಡಿಯಿಂದ ಹೊರಗೆ ಕಳುಹಿಸಿದೆ. ಕೆಲವೇ ಕ್ಷಣಗಳಲ್ಲಿ ಪುನಃ ವಾಪಸ್‌ ಬಂದ ಆತ, ನಿದ್ರೆ ಮಾಡುತ್ತಿದ್ದ ನನ್ನನ್ನು ತಬ್ಬಿಕೊಂಡ. ಗಾಬರಿಗೊಂಡು ಚೀರಿಕೊಳ್ಳುತ್ತಿದ್ದಂತೆಯೇ ಕೊಠಡಿಯಿಂದ ಓಡಿ ಹೋದ’ ಎಂದು ಮಹಿಳೆ ಹೇಳಿಕೆ ನೀಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಹಿಳೆಯ ಚೀರಾಟ ಕೆಳಿದ ಕೆಲ ಪ್ರಯಾಣಿಕರು ಅವರ ಬಳಿ ತೆರಳಿ ಮಾಹಿತಿ ಪಡೆದಿದ್ದಾರೆ. ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಹಾಗೂ ರೈಲ್ವೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಆರೋಪಿಯ ಚಹರೆ ಬಗ್ಗೆ ಮಾಹಿತಿ ಪಡೆದ ಸಿಬ್ಬಂದಿ, ನಿಲ್ದಾಣದಲ್ಲೇ ಇದ್ದ ಕಾಶೀನಾಥ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಗೃಹ ಇಲಾಖೆ ಮೆಚ್ಚುಗೆ
ಮಹಿಳೆ ಗೌರವಕ್ಕೆ ಧಕ್ಕೆ ಉಂಟು ಮಾಡಿದ ಆರೋಪಿಯನ್ನು ಅರ್ಧ ತಾಸಿನಲ್ಲೇ ಬಂಧಿಸಿದ ರೈಲ್ವೆ ಪೊಲೀಸರ ಕಾರ್ಯಕ್ಷಮತೆಗೆ ಗೃಹ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ.

ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ, ರಾಜ್ಯ ರೈಲ್ವೇ ಇಲಾಖೆಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಇತರೆ ಕಾರ್ಯಗಳಿಗೆ ನಿಯೋಜನೆಗೊಂಡಿದ್ದ ಸಿಬ್ಬಂದಿ, ಘಟನೆ ನಡೆದ ಅರ್ಧ ತಾಸಿನಲ್ಲೇ ಸ್ಥಳಕ್ಕೆ ಬಂದು ಆರೋಪಿಯನ್ನು ಬಂಧಿಸಿದ್ದಾರೆ. ಅವರ ಕಾರ್ಯವೈಖರಿ ನಿಜಕ್ಕೂ ಹೆಮ್ಮೆ ತಂದಿದೆ ಎಂದು ಗೃಹ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT