ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವರು ಮೀನುಗಾರರು ಚೆನ್ನೈಗೆ

Last Updated 21 ನವೆಂಬರ್ 2014, 8:50 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಮಾದಕ ವಸ್ತುಗಳ ಕಳ್ಳಸಾಗಣೆ ಆಪಾದನೆಯಡಿ ಶ್ರೀಲಂಕಾದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿ, ಬಳಿಕ ಬಿಡುಗಡೆಯಾಗಿರುವ ಐವರು ಭಾರ­ತೀಯ ಮೀನುಗಾರರು ಚೆನ್ನೈಗೆ ಮರಳಿದ್ದಾರೆ.

ಶ್ರೀಲಂಕಾದಿಂದ ಬಿಡುಗಡೆಗೊಂಡ ಬಳಿಕ ಗುರುವಾರ ರಾತ್ರಿ 1 ಗಂಟೆ ಸುಮಾರಿಗೆ ಏರ್‌ ಇಂಡಿಯಾ ವಿಮಾನದ ಮೂಲಕ ಐವರು ಮೀನುಗಾರರು ಚೆನ್ನೈಗೆ ಬಂದಿಳಿದರು.

ತಮಿಳುನಾಡಿನ ಸಚಿವರಾದ ಬಿ.ವಲರಮತಿ, ಡಾ.ಎಸ್‌.ಸುಂದರರಾಜ್‌ ಮತ್ತು ಕೆ.ಎ.ಜಯಪಾಲ್‌ ಸೇರಿದಂತೆ ಹಲವರು ಮೀನುಗಾರರನ್ನು ಬರಮಾಡಿಕೊಂಡರು.

ಬಿಡುಗಡೆಗೊಂಡಿರುವ ಮೀನುಗಾರರಾದ ಎಮರ್ಸನ್‌, ಪಿ. ಅಗಸ್ಟಸ್‌, ಆರ್‌. ವಿಲ್ಸನ್‌, ಕೆ. ಪ್ರಸತ್‌ ಮತ್ತು ಜೆ. ಲಾಂಗ್ಲೆಟ್‌ ಅವರು ಶುಕ್ರವಾರ ತಮಿಳುನಾಡು ಮುಖ್ಯಮಂತ್ರಿ ಪನೀರ್‌ಸೆಲ್ವಂ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಬಿಡುಗಡೆಗೊಂಡ ಮೀನುಗಾರರು ಕೊಲಂಬೊದಿಂದ ತಿರುಚಿರಾಪಳ್ಳಿ ವಿಮಾನ ನಿಲ್ದಾಣಕ್ಕೆ ಬರಬಹುದೆಂಬ ನಿರೀಕ್ಷೆಯಿಂದ ಅವರ ಕುಟುಂಬ ಸದಸ್ಯರು ಗುರುವಾರ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರು. ಆದರೆ, ಹಿರಿಯ ಅಧಿಕಾರಿಗಳು ಕೊಲಂಬೊದಿಂದ ನೇರವಾಗಿ ದೆಹಲಿಗೆ ಬರುವಂತೆ ಮೀನುಗಾರರಿಗೆ ಸೂಚಿಸಿದ್ದರು. ಹೀಗಾಗಿ ಕುಟುಂಬ ಸದಸ್ಯರು ನಿರಾಶೆಯಿಂದ ರಾಮೇಶ್ವರಕ್ಕೆ ಹಿಂದಿರುಗಬೇಕಾಯಿತು.

2011ರಲ್ಲಿ ಉತ್ತರ ಜಾಫ್ನಾದ ಕಡಲಲ್ಲಿ ಶ್ರೀಲಂಕಾ ನೌಕಾಪಡೆಯು ತಮಿಳು­­ನಾಡು ಮೂಲದ ಐವರು ಮೀನು­ಗಾ­­ರರನ್ನು ಬಂಧಿಸಿದ್ದರು. ಬಳಿಕ ಆರೋಪ ಸಾಬೀತಾ­ಗಿದೆ ಎಂದು ಹೇಳಿದ್ದ ಕೊಲಂಬೊ ಹೈಕೋರ್ಟ್ ನ್ಯಾಯ­ಮೂರ್ತಿ ಪ್ರೀತಿ ಪದ್ಮನ್ ಸುರ­ಸೇನಾ ಅವರು ಅ.30ರಂದು ಐವರಿಗೂ ಗಲ್ಲು ಶಿಕ್ಷೆ ವಿಧಿಸಿದ್ದರು.

ಗಲ್ಲು ಶಿಕ್ಷೆ ತೀರ್ಪು ಹೊರ ಬೀಳುತ್ತಿದ್ದಂತೆಯೇ ತಮಿಳುನಾಡಿನ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ರಾಮೇಶ್ವರದ ಬಳಿ ಸಾಕಷ್ಟು ಜನರು ಪ್ರತಿಭಟನೆ ನಡೆಸಿದ್ದರು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಭಾರತ ಸರ್ಕಾರ ನವೆಂಬರ್ 11 ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜಪಕ್ಸೆ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಮಾತುಕತೆ ಫಲಪ್ರದವಾಗಿ ಮೀನುಗಾರರ ಬಿಡುಗಡೆಗೆ ರಾಜಪಕ್ಸೆ ಸಮ್ಮತಿಸಿದ್ದರು.

61 ಮೀನುಗಾರರು ಪಾಕ್‌ ಬಲೆಗೆ
ಕರಾಚಿ (ಪಿಟಿಐ):
ಸಮುದ್ರ ಗಡಿ ಮೀರಿದ ಆರೋಪದ ಮೇಲೆ ಸುಮಾರು 61 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಪೊಲೀಸರು ಬಂಧಿಸಿದ್ದಾರೆ.

ದೇಶದ ಸಮುದ್ರ ಗಡಿ ದಾಟಿದ ಆಪಾದನೆ ಮೇಲೆ 11 ದೋಣಿಗಳಲ್ಲಿದ್ದ ಸುಮಾರು 61 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ. ಬಂಧಿತರನ್ನು ಕರಾಚಿಯ ಡಾಕ್ಸ್‌ನ ಠಾಣೆಯಲ್ಲಿಡಲಾಗಿದೆ ಎಂದು ಪಾಕ್‌ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ದಕ್ಷಿಣ ಭಾಗದ ಸಿಂಧ್‌ ಹಾಗೂ ಗುಜರಾತ್‌ ಭಾಗದಲ್ಲಿ ಉಭಯ ದೇಶಗಳ ಮೀನುಗಾರರು ಅಚಾತುರ್ಯದಿಂದ ಸಮುದ್ರ ಗಡಿ ದಾಟಿದ ಸಂದರ್ಭದಲ್ಲಿ ಉಭಯ ದೇಶಗಳ ಭದ್ರತಾ ಪಡೆಗಳು ಅಂತಹ ಮೀನುಗಾರರನ್ನು ಸೆರೆ ಹಿಡಿಯುವುದು ಸಾಮಾನ್ಯ ಎಂಬಂತಾಗಿದೆ. ಹೀಗೆ ಬಂಧಿತರಾದ ಮೀನುಗಾರರು ವರ್ಷಗಟ್ಟಲೆ ಕಂಬಿಗಳ ಹಿಂದೆ ಕೊಳೆಯಬೇಕಾಗುತ್ತದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವ ಮುನ್ನ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್‌ ಅವರು 150ಕ್ಕೂ ಹೆಚ್ಚು ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸಿ ಆದೇಶಿಸಿದ್ದರು.

‘ನಮ್ಮ ವಶದಲ್ಲಿದ್ದ ಮೀನುಗಾರರ ಪೈಕಿ ಭಾರತೀಯ ಅಧಿಕಾರಿಗಳು ದೃಢಪಡಿಸಿದ್ದ ಎಲ್ಲ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ’ ಎಂದು ಪಾಕಿಸ್ತಾನ ಹೇಳಿದೆ. ಆದರೆ, ಇನ್ನೂ ಸಾಕಷ್ಟು ಮಂದಿ ಭಾರತೀಯ ಮೀನುಗಾರರು ಪಾಕ್‌ ವಶದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT