ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸ್‌ಕ್ರೀಂಗಾಗಿ ಮಾರಾಮಾರಿ: ಮುರಿದ ಮದುವೆ

ಘರ್ಷಣೆ ತಡೆದ ಮೂವರು ಪೊಲೀಸರಿಗೆ ಗಾಯ
Last Updated 28 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಲಖನೌ: ವರದಕ್ಷಿಣೆಯ ಕಾರಣಕ್ಕೋ, ವಧು –ವರರಿಗೆ ಇಷ್ಟವಿಲ್ಲದ ಕಾರಣಕ್ಕೋ ಮದುವೆಗಳು ಕೊನೆ ಕ್ಷಣದಲ್ಲಿ ಮುರಿದು ಬಿದ್ದ ಘಟನೆಗಳನ್ನು ಕೇಳಿದ್ದೇವೆ. ಆದರೆ, ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ವಿಲಕ್ಷಣ ಕಾರಣಕ್ಕೆ ಮದುವೆ ಮುರಿದಿದೆ. ಕಾರಣ ಇಷ್ಟೇ. ವಿವಾಹ ಸಮಾರಂಭದಲ್ಲಿ ಐಸ್ ಕ್ರೀಂ ಖಾಲಿಯಾಗಿದ್ದು!

ಅತಿಥಿಗಳಿಗೆ ಐಸ್‌–ಕ್ರೀಂ ಸಿಗದಿರುವ ವಿಷಯದಲ್ಲಿ ವಧು ಮತ್ತು ವರನ ಕಡೆಯವರ ನಡುವೆ ಘರ್ಷಣೆಯೂ ನಡೆಯಿತು. ಜಗಳ ನಿಲ್ಲಿಸುವುದಕ್ಕಾಗಿ ಸ್ಥಳೀಯ ಪೊಲೀಸರೂ ಮಧ್ಯಪ್ರವೇಶಿಸಿದರು. ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಮೂಲಗಳು  ತಿಳಿಸಿವೆ. ಮಥುರಾ ಜಿಲ್ಲೆಯ ರಾಯ ಎಂಬಲ್ಲಿ ಬುಧವಾರ ಈ ಘಟನೆ ನಡೆದಿದೆ.

ನಡೆದಿದ್ದೇನು?: ಮದುಮಗ ಮತ್ತು ಮದುಮಗಳು ಪರಸ್ಪರ ಹಾರ ಬದಲಾಯಿಸಿಕೊಂಡ ನಂತರ, ಗಂಡಿನ ಕಡೆಯ ಅತಿಥಿಗಳು ಭೋಜನ ವ್ಯವಸ್ಥೆ ಮಾಡಿರುವವರ ಬಳಿಯಲ್ಲಿ (ಕೇಟರರ್‌) ಐಸ್‌– ಕ್ರೀಂ ಲಭ್ಯವಿಲ್ಲ ಎಂದು ದೂರಿದರು. ಇದಕ್ಕೆ ಸ್ಪಷ್ಟನೆ ನೀಡಿದ ಊಟದ ವ್ಯವಸ್ಥೆ ಮಾಡಿದವರು, ‘ನಾವು ಸಾಕಷ್ಟು ಐಸ್‌–ಕ್ರೀಂಗಳನ್ನು ತಂದಿದ್ದೆವು. ಆದರೆ ವಧುವಿನ ಕಡೆಯವರು ಎಲ್ಲವನ್ನೂ ತಿಂದು ಮುಗಿಸಿದ್ದಾರೆ’ ಎಂದು ಹೇಳಿದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇದು ವಧು ಮತ್ತು ವರನ ಕಡೆಯವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ನಂತರ ಎರಡೂ ಕಡೆಯವರು ಕೈ–ಕೈ ಮಿಲಾಯಿಸುವ ಹಂತಕ್ಕೆ ತಲುಪಿ, ಹೊಡೆದಾಡಲು ಆರಂಭಿಸಿದರು. ಘರ್ಷಣೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ಹೊಡೆದಾಟವನ್ನು ನಿಲ್ಲಿಸಿದರು. ಘಟನೆಯ ನಂತರ ಮದುವೆ ಮುಂದುವರಿಯಲು ಹುಡುಗನ ಕಡೆಯವರು ಅವಕಾಶ ನೀಡಲಿಲ್ಲ. ಕೊನೆಗೆ ಮದುವೆಯನ್ನೇ ರದ್ದುಪಡಿಸಬೇಕಾಯಿತು ಎಂದು ಮೂಲಗಳು ತಿಳಿಸಿವೆ. 

ಪ್ರಕರಣ ದಾಖಲು: ಎರಡೂ ಕಡೆಯವರು ದೂರು ನೀಡಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಧು ಮತ್ತು ವರನ ಕಡೆಯವರ ನಡುವೆ ಸಂಧಾನ ನಡೆಸಿ, ಮುರಿದು ಬಿದ್ದ ಮದುವೆಯನ್ನು ಇನ್ನೊಂದು ದಿನ ನಡೆಸಲು ಪ್ರಯತ್ನಗಳು ಸಾಗಿವೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT