ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ರೂಮಿನಲ್ಲಿ ಸ್ನೇಹದ ನೆನಪುಗಳು

Last Updated 28 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ವಿಷ್ಣು, ಅಂಬಿ ಕೈಲಿ ಕೆಲವು ಸಿನಿಮಾಗಳಿದ್ದಾಗ ನನಗೆ ಯಾವ ಚಿತ್ರಗಳೂ ಇರಲಿಲ್ಲ. ಆಗ ನಾನು ಅವರ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಗಳಿಗೆ ಹೋಗುತ್ತಿದ್ದೆ. ಅವರ ಜೊತೆಯಲ್ಲಿ ಇರುವುದು ಅನಿವಾರ್ಯ ಎನ್ನುವ ಸ್ಥಿತಿ ಇತ್ತು. ನಾವು ಅಷ್ಟು ಗಳಸ್ಯ ಕಂಠಸ್ಯ. ಹಾಗಂತ ನಾನು ಸುಮ್ಮನೆ ಇರುತ್ತಿರಲಿಲ್ಲ. ಅವರ ಜೊತೆ ಇದ್ದಾಗಲೂ ಕಥೆಯ ಸಿದ್ಧತೆ ಮಾಡಿಕೊಳ್ಳುತ್ತಾ ಇದ್ದೆ.

ವಿಷ್ಣು ಅಂತೂ ನಾನು ಪುರುಸೊತ್ತಾಗಿದ್ದರೆ ಬಿಡುತ್ತಲೇ ಇರಲಿಲ್ಲ.‘ಸಹೋದರರ ಸವಾಲ್’, ‘ಕಳ್ಳ ಕುಳ್ಳ’ ಮತ್ತು ‘ಬಂಗಾರದ ಗುಡಿ’ ಸಿನಿಮಾಗಳ ಚಿತ್ರೀಕರಣ ನಡೆದಾಗ ನಾನು ಅವರ ಜೊತೆ ಹೋಗಿದ್ದೆ. ವಿಷ್ಣು ಆ ಸಿನಿಮಾಗಳ ನಾಯಕನಾದರೆ, ಅಂಬಿ ಖಳನ ಪಾತ್ರಗಳನ್ನು ನಿರ್ವಹಿಸಿದ್ದ. ವಿಷ್ಣು, ಅಂಬಿ ಆ ಸಿನಿಮಾಗಳ ಚಿತ್ರೀಕರಣಕ್ಕೆಂದು ಹೋದಾಗ ನನ್ನನ್ನೂ ಕರೆದುಕೊಂಡು ಹೋಗಿದ್ದರು.

ವಿಷ್ಣು ಸಂಸಾರಸ್ಥ ಆಗಿದ್ದುದರಿಂದ ಅವನ ರೂಮ್‌ನಲ್ಲಿ ಹೆಚ್ಚಾಗಿ ಇರುತ್ತಿರಲಿಲ್ಲ. ಅಂಬಿ ರೂಮ್‌ನಲ್ಲೇ ನನ್ನ ವಾಸ. ಅಂಬಿ ಹೊರಗೆ ಎಲ್ಲಾದರೂ ಹೋದರೆ ನನಗೆ ಅನುಕೂಲ ಮಾಡಿಕೊಟ್ಟೇ ಹೋಗುತ್ತಿದ್ದುದು. ಕಾರು, ಊಟ, ಗುಂಡು ಎಲ್ಲವನ್ನೂ ಒದಗಿಸಿಕೊಟ್ಟೇ ಅವನು ಚಿತ್ರೀಕರಣಕ್ಕೆ ತೆರಳುತ್ತಾ ಇದ್ದದ್ದು. ಭಾರತಿ ಅವರು ವಿಷ್ಣು ಜೊತೆಯಲ್ಲಿ ಇಲ್ಲ ಎಂದರೆ ಮಾತ್ರ ಅವನ ರೂಮ್‌ಗೆ ಶಿಫ್ಟ್ ಆಗುತ್ತಿದ್ದೆ. ನಾವು ಮೂರೂ ಜನ ರಾತ್ರಿ ಸ್ವಲ್ಪ ಗುಂಡು ಹಾಕಿ, ಒಳ್ಳೆಯ ಊಟ ಮಾಡಿ ಒಂದೇ ರೂಮ್‌ನಲ್ಲ ಮಲಗಿದ ದಿನಗಳೂ ಇವೆ.

ಅಂಬಿ ಎಲ್ಲೇ ಹೋದರೂ ಅಲ್ಲಿಗೆ ಅವನ ದೊಡ್ಡ ಸ್ನೇಹಿತರ ದಂಡು ಬರುತ್ತಿತ್ತು. ಅವನಿಗೆ ಅದ್ಯಾವ್ಯಾವ ಊರುಗಳಲ್ಲಿ ಸ್ನೇಹಿತರಿದ್ದರೋ? ಹೋದಕಡೆಯೆಲ್ಲಾ ಜನವೋ ಜನ. ಅವರೆಲ್ಲಾ ತಂತಮ್ಮ ಮನೆಗಳಿಂದ ವಿಧವಿಧವಾದ ಸ್ಥಳೀಯ ಊಟಗಳನ್ನು ತರುತ್ತಿದ್ದರು. ಒಂದು ಸಲವಂತೂ ಆರೇಳು ಕ್ಯಾರಿಯರ್ ಊಟ ಬಂದದ್ದನ್ನು ಕಂಡು ನಾನು ಸೋಜಿಗಗೊಂಡಿದ್ದು ಉಂಟು. ಅಂಬಿ ಸ್ನೇಹಿತರಲ್ಲಿ ಅನೇಕರು ಅವನಂತೆಯೇ ದೊಡ್ಡ ಮನಸ್ಸಿನವರು.

ಆ ಸ್ನೇಹಿತರಿಗೆಲ್ಲಾ ಅಂಬಿ ಜೊತೆ ಇಸ್ಪೀಟ್ ಆಡುವ ಹವ್ಯಾಸ. ಸುಮಾರು ದೂರದಿಂದ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಗಳಿಗೆ ರಾತ್ರಿ ಹೊತ್ತು ಬಂದು, ಬೆಳಗಿನ ಜಾವದವರೆಗೆ ಇಸ್ಪೀಟ್ ಆಡಿ ಖುಷಿಯಿಂದ ಹೋಗುತ್ತಾ ಇದ್ದರು.ಒಮ್ಮೆ ನಾವು ಕೆಮ್ಮಣ್ಣುಗುಂಡಿ ಬೆಟ್ಟದ ಗೆಸ್ಟ್ ಹೌಸ್‌ನಲ್ಲಿ ಸುಮಾರು ೧೫ ದಿನಗಳ ಕಾಲ ಇದ್ದೆವು. ನಮ್ಮ ‘ನಾಗರಹೊಳೆ’ ಸಿನಿಮಾ ನಿರ್ಮಾಪಕರು ಚಿಕ್ಕಮಗಳೂರು ಕಾಫಿ ಎಸ್ಟೇಟ್‌ನವರು. ನಾವು ಮೂರೂ ಜನ ಅಲ್ಲಿರುವ ವಿಷಯ ಅವರಿಗೆ ಗೊತ್ತಾಯಿತು.

ಬಾಲಾಜಿ ಸಿಂಗ್ ಜೊತೆ ಬಂದು, ಸಂಜೆಯಿಂದ ಬೆಳಗಿನವರೆಗೆ ಇಸ್ಪೀಟ್ ಆಡಿ ಹೋಗುತ್ತಿದ್ದರು. ನಾನು, ವಿಷ್ಣು ಆಟ ಆಡುತ್ತಿರಲಿಲ್ಲ. ಪ್ರೇಕ್ಷಕರಷ್ಟೆ. ಅಂಬಿಗೆ ಸಪೋರ್ಟ್ ಮಾಡುತ್ತಾ ಆಟದ ವರಸೆಗಳನ್ನೆಲ್ಲಾ ಗಮನಿಸುತ್ತಾ ಕೂರುತ್ತಿದ್ದೆವು. ಆಟವಾಡಲು ಬರುತ್ತಿದ್ದ ಕೆಲವರು ತಂತಮ್ಮ ಎಸ್ಟೇಟ್‌ಗೆ ಅಂಬಿಯನ್ನು ಕರೆಯುತ್ತಿದ್ದರು. ಬೇಟೆ ಆಡಲು ಹೋಗೋಣ ಎಂದು ಪುಸಲಾಯಿಸುತ್ತಿದ್ದರು. ಅಂಬಿ ಎಲ್ಲಕ್ಕೂ ರೆಡಿ. ಪಾಪ ವಿಷ್ಣು ಬೇಗ ಎದ್ದು ಯೋಗ ಮಾಡಿ, ನನ್ನನ್ನೂ ಎಬ್ಬಿಸಿ ಸೂರ್ಯ ನಮಸ್ಕಾರ ಮಾಡು ಎಂದು ಗೋಳುಹೊಯ್ದುಕೊಳ್ಳುತ್ತಿದ್ದ.ನಾನು ಬಂದಿರುವುದು ಕಥೆ ಬರೆಯೋದಿಕ್ಕೆ. ಶೂಟಿಂಗ್ ಏನೂ ಇಲ್ಲ.



ಇನ್ನೂ ಸ್ವಲ್ಪ ಹೊತ್ತು ಮಲಗಬೇಕು ಎಂದು ನಾನು ಹೊದಿಕೆಯೊಳಗೇ ಉಳಿಯುತ್ತಿದ್ದೆ. ಆದರೂ ವಿಷ್ಣು ನನ್ನನ್ನು ಬಿಡುತ್ತಾ ಇರಲಿಲ್ಲ. ಒಮ್ಮೊಮ್ಮೆ ವಿಷ್ಣು, ಅಂಬಿ ರೂಮ್‌ಗೆ ಹೋಗಿ ಅವನನ್ನು ಎಬ್ಬಿಸಿ, ಯೋಗ ಮಾಡು ಎಂದು ಹೇಳುತ್ತಿದ್ದ. ಅಂಬಿ ಸುತರಾಂ ಒಪ್ಪುತ್ತಿರಲಿಲ್ಲ. ಅವನಿಗೆ ಯೋಗ ಅಪಥ್ಯ. ಆದರೆ, ಆಟಗಳಲ್ಲಿ ಅವನು ಮುಂದು. ಕ್ರಿಕೆಟ್, ಬ್ಯಾಡ್ಮಿಂಟನ್ ಆಟಗಳಲ್ಲಿ ಅವನು ಪಳಗಿದ್ದ. ಬ್ಯಾಡ್ಮಿಂಟನ್ ಹಾಗೂ ಟೆನಿಸ್‌ನಲ್ಲಿ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ, ಅವರ ಜೊತೆ ಆಡಿ ಅವರನ್ನೇ ಸೋಲಿಸುತ್ತಿದ್ದ.

ನಾವು ರೂಮ್‌ನಲ್ಲಿ ಒಟ್ಟಿಗೆ ಇದ್ದಾಗ ಆ ಸಿನಿಮಾ ನಿರ್ಮಾಪಕರು, ನಿರ್ದೇಶಕರು ಬಂದು ಅಲ್ಲಿಯೇ ಇರುತ್ತಿದ್ದರು. ಮರುದಿನದ ಚಿತ್ರೀಕರಣ, ವಸ್ತ್ರ ಮೊದಲಾದ ವಿಷಯಗಳ ಬಗೆಗೆ ಮಾತನಾಡಿ ಬೇಗ ಮಲಗುವಂತೆ ಸೂಚಿಸಿ ಹೊರಡುತ್ತಿದ್ದರು. ಮರುದಿನ ಶೂಟಿಂಗ್ ದೂರದ ಸ್ಥಳದಲ್ಲಿ ಇದ್ದರಂತೂ ಬೇಗ ಹೊರಡಬೇಕಿತ್ತು. ಅದ್ದರಿಂದ ಅವರು ಎಲ್ಲರಿಗೂ ಮೊದಲೇ ತಿಳಿಸಿ ಪ್ಲಾನ್ ಮಾಡುತ್ತಿದ್ದರು. ಕೆ.ಎಸ್.ಆರ್. ದಾಸ್, ವಿ. ಸೋಮಶೇಖರ್ ಹಾಗೂ ಕೆ.ಎಸ್.ಎಲ್. ಸ್ವಾಮಿ (ರವಿ) ಎಲ್ಲರೂ ಚರ್ಚೆ ನಡೆಸಿದ ಮೇಲೆ ನಮ್ಮನ್ನು ಗುಮಾನಿಯಿಂದ ನೋಡುತ್ತಿದ್ದರು.

ನಾವು ಮೂರು ಜನ ಗಲಾಟೆ ಮಾಡುತ್ತಾ ರಾತ್ರಿ ತಡವಾಗಿ ಮಲಗುತ್ತೇವೆ ಎಂಬ ಅನುಮಾನ ಅವರಿಗೆ. ಎಲ್ಲಾ ನಿರ್ದೇಶಕರು ನನಗೆ ಚೆನ್ನಾಗಿ ಗೊತ್ತಿದ್ದರಿಂದ, ಇಬ್ಬರೂ ನಟರನ್ನು ಬೇಗ ಮಲಗಿಸಿ ಬಿಡು ಎಂದು ಕಿವಿಮಾತು ಹೇಳುತ್ತಿದ್ದರು. ಬೆಳಿಗ್ಗೆ ಬೇಗ ಎಬ್ಬಿಸುವ ಜವಾಬ್ದಾರಿಯನ್ನೂ ನನಗೆ ಕೊಟ್ಟಿದ್ದರು. ವಿಷ್ಣುವಿಗೆ ಕೆಲಸದ ವಿಷಯದಲ್ಲಿ ಬಹಳ ಶ್ರದ್ಧೆ. ಅಂಬಿಯ ಸ್ಟೈಲ್ ಬೇರೆ. ‘ರೀ... ನಿಮಗೆ ಎಷ್ಟು ಹೊತ್ತಿಗೆ ಬೇಕು ಹೇಳ್ರೀ... ಅಷ್ಟು ಹೊತ್ತಿಗೆ ಕರೆಕ್ಟ್ ಆಗಿ ಅಲ್ಲಿ ಇರುತ್ತೀನಿ’ ಅಂತ ದಬಾಯಿಸಿ ಕಳುಹಿಸುತ್ತಿದ್ದ. ಊರಿನಿಂದ ಬರುತ್ತಿದ್ದ ಸ್ನೇಹಿತರ ಜೊತೆ ಕಾರ್ಡ್ಸ್ ಆಡಿ ಅಂಬಿ ಸಾಕಷ್ಟು ದುಡ್ಡು ಗೆಲ್ಲುತ್ತಿದ್ದ.

ಒಮ್ಮೆ ನಾವು ಶಿಮ್ಲಾಗೆ ಶೂಟಿಂಗ್‌ಗೆ ಹೋಗಿದ್ದೆವು. ವಿಷ್ಣು ಕೂಡ ಅಲ್ಲಿಯೇ ಇದ್ದ. ಭಾರತಿಯವರು ಕೂಡ ಬಂದಿದ್ದರು. ಅದು ‘ಬಂಗಾರದ ಗುಡಿ’ ಚಿತ್ರದ ಶೂಟಿಂಗ್. ವಿಷ್ಣು ಬಿಡಬೇಕಲ್ಲ; ನನ್ನನ್ನೂ ಕರೆದುಕೊಂಡು ಹೊರಟ. ತನ್ನ ರೂಮ್‌ನಲ್ಲಿಯೇ ನನಗೆ ಎಕ್ಸ್‌ಟ್ರಾ ಬೆಡ್ ಹಾಕಿಕೊಟ್ಟಿದ್ದ. ಆ ಸಿನಿಮಾ ನಿರ್ಮಾಪಕ ಪ್ರಕಾಶ ರಾವ್. ತೆಲುಗಿನಲ್ಲಿ ದೊಡ್ಡ ಹೆಸರು ಮಾಡಿದ್ದರು. ಬಹಳ ಶಿಸ್ತಿನ ಮನುಷ್ಯ. ತೆಲುಗಿನಲ್ಲಿ ಅನೇಕ ಸಿನಿಮಾಗಳನ್ನು ನಿರ್ಮಿಸಿ, ಅದ್ದೂರಿ ನಿರ್ಮಾಪಕ ಎಂದು ಹೆಸರು ಮಾಡಿದ್ದರು.

ಅಡುಗೆಯ ವಿಷಯದಲ್ಲಿ ಅವರು ಕಟ್ಟುನಿಟ್ಟಿನ ವ್ಯಕ್ತಿ. ಉತ್ತರ ಭಾರತಕ್ಕೆ ಚಿತ್ರೀಕರಣಕ್ಕೆಂದು ಹೋದರೂ ಇಲ್ಲಿಂದಲೇ ಅಡುಗೆ ಭಟ್ಟರನ್ನು ಕರೆದುಕೊಂಡು ಹೋಗುತ್ತಿದ್ದರು. ಬೆಳಿಗ್ಗೆ ಮೂರು ಗಂಟೆಗೆ ಅಡುಗೆ ಭಟ್ಟರನ್ನು ಎಬ್ಬಿಸಿ ಕಾಫಿ ಮಾಡಿಸುತ್ತಿದ್ದರು. ಫ್ಲಾಸ್ಕ್‌ಗೆ ಕಾಫಿ ಹಾಕಿಕೊಂಡು, ತಾವೇ ಅದನ್ನು ರೂಮ್‌ಗಳಲ್ಲಿ ಇದ್ದ ಚಿತ್ರತಂಡದವರಿಗೆ ಹೋಗಿ ಕೊಡುತ್ತಿದ್ದರು. ಎಲ್ಲರೂ ಬೇಗ ಎದ್ದು ಶೂಟಿಂಗ್‌ಗೆ ಸರಿಯಾದ ಸಮಯಕ್ಕೆ ಸಿದ್ಧರಾಗಲಿ ಎನ್ನುವುದು ಅವರ ಉದ್ದೇಶವಾಗಿತ್ತು.ನಾಲ್ಕು ಗಂಟೆಗೆಲ್ಲಾ ಎಲ್ಲರ ರೂಮುಗಳಿಗೂ ಅವರು ಕಾಫಿ ತರುತ್ತಿದ್ದರು.

ಅವರೇ ಖುದ್ದಾಗಿ ಬಂದು ಎಬ್ಬಿಸಿದರೆ ಏಳದೇ ಇರುವುದು ಸಾಧ್ಯವೇ? ಅಂಬಿಗೆ ಇದು ಸ್ವಲ್ಪ ಕಸಿವಿಸಿ. ಮೂರು ಗಂಟೆವರೆಗೆ ಇಸ್ಪೀಟ್ ಆಡಿ ಮಲಗಿರುತ್ತಿದ್ದ ಅವನಿಗೆ ನಾಲ್ಕು ಗಂಟೆಗೆ ಏಳುವುದು ಹೇಗೆ ತಾನೆ ಸಾಧ್ಯ? ಅಂಬಿ ಮೆಲ್ಲಗೆ ಬಂದು ವಿಷ್ಣು ರೂಮ್‌ನಲ್ಲಿ ನನ್ನ ಜೊತೆ ಮಲಗುತ್ತಿದ್ದ. ವಿಷ್ಣು ಎದ್ದು ರೆಡಿಯಾದ ಮೇಲೆ ಅವನನ್ನು ನಾನು ಎಬ್ಬಿಸುತ್ತಿದ್ದೆ. ಐದೇ ನಿಮಿಷದಲ್ಲಿ ಸ್ನಾನ ಮಾಡಿ, ಚಕ್ಕನೆ ಸಿದ್ಧನಾಗಿ ಶೂಟಿಂಗ್‌ಗೆ ಹೋಗುತ್ತಿದ್ದ. ಕೆಲಸಕ್ಕೂ ತೊಂದರೆಯಾಗಬಾರದು, ತನ್ನ ಆಸಕ್ತಿಗಳಿಗೂ ತಣ್ಣೀರೆರಚಬಾರದು ಎನ್ನುವ ಮನಸ್ಥಿತಿ ಅಂಬಿಯದ್ದು. ಅವನ ಸ್ಟೈಲೇ ಒಂದು ತರಹ.

ಮುಂದಿನ ವಾರ: ಸ್ನೇಹ ಸಂಬಂಧದ ಮುಂದುವರಿದ ಕಥನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT