ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ವಾರ್ಡ್‌ನಲ್ಲಿ 3 ಕೋಟಿ ಸೋರಿಕೆ

ಶಾಂತಿನಗರ ವಾರ್ಡ್‌ನಲ್ಲಿ ತುಂಬಿವೆ ಅನಧಿಕೃತ ಜಾಹೀರಾತು ಫಲಕಗಳು
Last Updated 4 ಸೆಪ್ಟೆಂಬರ್ 2015, 19:44 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜಾಹೀರಾತು ವರಮಾನ ಸೋರಿಕೆಗೆ ಸಂಬಂಧಿಸಿದಂತೆ ಶಾಂತಿನಗರ ವಾರ್ಡ್‌ನಲ್ಲಿ ವಿವರವಾದ ಅಧ್ಯಯನ ನಡೆಸಲಾಗಿದ್ದು, ಅಧ್ಯಯನ ವರದಿ ಪ್ರಕಾರ, ವಾರ್ಷಿಕ ₹ 3 ಕೋಟಿಯಷ್ಟು ಆದಾಯ ಆ ವಾರ್ಡ್‌ನಿಂದ ಸೋರಿಕೆ ಆಗಿದೆ!

ಜಾಹೀರಾತು ವರಮಾನದಲ್ಲಿ ಉಂಟಾಗಿರುವ ನಷ್ಟದ ಕುರಿತು ತನಿಖೆ ನಡೆಸಿದ್ದ ಬಿಬಿಎಂಪಿ ಸಹಾಯಕ ಆಯುಕ್ತ (ಜಾಹೀರಾತು) ಕೆ.ಮಥಾಯ್‌ ಅವರು ಎರಡು ತಿಂಗಳ ಹಿಂದೆ ಆಡಳಿತಾಧಿಕಾರಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ವರದಿ ನೀಡಿದ್ದರು. ಆದರೆ, ‘ವಾರ್ಡ್‌ವೊಂದನ್ನು ಆಯ್ಕೆ ಮಾಡಿಕೊಂಡು ವೈಜ್ಞಾನಿಕ ಅಧ್ಯಯನ ನಡೆಸಿ ವರದಿ ನೀಡಬೇಕು’ ಎಂದು ಆಡಳಿತಾಧಿಕಾರಿ ಆದೇಶಿಸಿದ್ದರು.

ಶಾಂತಿನಗರ ವಾರ್ಡ್‌ ಆಯ್ದುಕೊಂಡು ಅಲ್ಲಿನ ಪ್ರತಿಯೊಂದು ಬೀದಿಯನ್ನು ಬಿಡದಂತೆ ಸಮೀಕ್ಷೆ ನಡೆಸಿ, ಹೋರ್ಡಿಂಗ್‌ಗಳ ಅಳತೆಯನ್ನು ಗಣನೆಗೆ ತೆಗೆದುಕೊಂಡು ಲೆಕ್ಕ ಹಾಕಿರುವ ಮಥಾಯ್‌ ಮತ್ತು ಅವರ ತಂಡದಲ್ಲಿದ್ದ ಅಧಿಕಾರಿಗಳು, ಆ ಒಂದು ವಾರ್ಡ್‌ನಲ್ಲಿ ಜಾಹೀರಾತು ಮೂಲದಿಂದ ಸೋರಿಕೆ ಆಗಿರುವ ಆದಾಯದ ಬಗೆಗೆ ನಾಲ್ಕು ದಿನಗಳ ಹಿಂದೆ ವರದಿ ನೀಡಿದ್ದಾರೆ.

ಪ್ರತಿ ವಾರ್ಡ್‌ನಿಂದ ವಾರ್ಷಿಕ ₹ 3 ಕೋಟಿಯಂತೆ ಲೆಕ್ಕ ಹಾಕಿದರೂ ಕಳೆದ ಎಂಟು ವರ್ಷಗಳಲ್ಲಿ ಬಿಬಿಎಂಪಿಗೆ ಆಗಿರುವ ಆದಾಯ ಸೋರಿಕೆ ₹ 4,752 ಕೋಟಿ. ಮಥಾಯ್‌ ಅವರ ಈ ಹಿಂದಿನ ವರದಿಯಲ್ಲಿ ಉಲ್ಲೇಖಿಸಿದ ಮೊತ್ತಕ್ಕಿಂತ ಹಾನಿ ಪ್ರಮಾಣ ಹೆಚ್ಚಾಗಿದೆ’ ಎಂದು ಬಿಬಿಎಂಪಿ ಜಾಹೀರಾತು ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಧಿಕಾರಿಗಳ ಈ ವಾದವನ್ನು ವಿಜಯಭಾಸ್ಕರ್‌ ಅವರು ಒಪ್ಪಲು ಸಿದ್ಧರಿಲ್ಲ. ‘ಎಲ್ಲ ವಾರ್ಡ್‌ಗಳಲ್ಲಿ ಜಾಹೀರಾತು ಫಲಕಗಳು ಇದೇ ಪ್ರಮಾಣದಲ್ಲಿ ಕಂಡು ಬರುವುದಿಲ್ಲ. ಕೆಲವು ವಾರ್ಡ್‌ಗಳಲ್ಲಿ ಹೋರ್ಡಿಂಗ್‌ಗಳೇ ಇಲ್ಲ. ಜಾಹೀರಾತು ದರದಲ್ಲೂ ವ್ಯತ್ಯಾಸವಿದೆ. ಮುಂಬೈನಂತಹ ವಾಣಿಜ್ಯ ನಗರದಲ್ಲೇ ವಾರ್ಷಿಕ ₹ 150 ಕೋಟಿಯಷ್ಟು ಮಾತ್ರ ವರಮಾನ ಬರುತ್ತದೆ’ ಎಂದು ವಿವರಿಸಿದರು.

‘ಶಾಂತಿನಗರ ವಾರ್ಡ್‌ನಲ್ಲಿ ಜಾಹೀರಾತಿನಿಂದ ವಾರ್ಷಿಕ ₹ 3 ಕೋಟಿ ಆದಾಯ ಬರಲಿದೆ ಎಂಬ ವಿವರ ವರದಿಯಲ್ಲಿದೆ. ಅನಧಿಕೃತ ಜಾಹೀರಾತು ಫಲಕ ಹಾಕಿರುವ ಏಜೆನ್ಸಿಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಆ ಮೊತ್ತವನ್ನು ಸಂಬಂಧಿಸಿದ ಏಜೆನ್ಸಿಗಳಿಂದ ವಸೂಲಿ ಮಾಡಲು ಸೂಚನೆ ನೀಡಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಈ ವಾರ್ಡ್‌ನಲ್ಲಿ ಜಾಹೀರಾತು ಶುಲ್ಕ ಸಂಗ್ರಹಿಸಿದ ಮೇಲೆ ಮಿಕ್ಕೆಲ್ಲ ವಾರ್ಡ್‌ಗಳಲ್ಲಿ ಸಮೀಕ್ಷೆ ನಡೆಸಲು ಯೋಜನೆ ರೂಪಿಸಲಾಗುವುದು’ ಎಂದು ಹೇಳಿದರು.
‘ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಜಾಹೀರಾತು ಮೂಲದಿಂದ ₹ 2 ಸಾವಿರ ಕೋಟಿಯಷ್ಟು ವರಮಾನ ಸೋರಿಕೆಯಾಗಿದೆ’ ಎಂದು ಮಥಾಯ್‌ ಅವರ ಮೊದಲ ವರದಿಯಲ್ಲಿ ತಿಳಿಸಲಾಗಿತ್ತು. ಕಾನೂನು ಘಟಕದ ಲೋಪವನ್ನು ಪ್ರಧಾನವಾಗಿ ಎತ್ತಿ ತೋರಲಾಗಿತ್ತು.

‘ಬಿಬಿಎಂಪಿ ವರಮಾನ ಸೋರಿಕೆಗೆ ಕಾರಣವಾದ ಪ್ರಕರಣವನ್ನು ಸಿಬಿಐ ಇಲ್ಲವೆ ಸಿಐಡಿಯಿಂದ ತನಿಖೆಗೆ ಒಳಪಡಿಸಬೇಕು. ಬಿಬಿಎಂಪಿ ಅನುಭವಿಸಿರುವ ಹಾನಿಗೆ ತಪ್ಪಿತಸ್ಥ ಅಧಿಕಾರಿಗಳನ್ನು ನೇರವಾಗಿ ಹೊಣೆಯಾಗಿಸಬೇಕು’ ಎಂದು ಮೊದಲ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು.
*
ಅಂಕಿ ಅಂಶ
₹ 4,752 ಕೋಟಿ 
ಎಂಟು ವರ್ಷಗಳಲ್ಲಿ ಬಿಬಿಎಂಪಿಗೆ ಆಗಿರುವ ಆದಾಯ ಸೋರಿಕೆ
₹ 2 ಸಾವಿರ ಕೋಟಿ ಎಂಟು ವರ್ಷಗಳ ಅವಧಿಯಲ್ಲಿ ಜಾಹೀರಾತು ಮೂಲದಿಂದ ವರಮಾನ ಸೋರಿಕೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT