ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಟ್ಟಂದದ ಅರಿವು

ಬೆಳದಿಂಗಳು
Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ವಿಶ್ಲೇಷಣಾತ್ಮಕವಾಗಿ ಗ್ರಹಿಸುವುದು ಅಂದರೆ ಒಂದು ವಿಷಯವನ್ನು ತುಂಡು ತುಂಡಾಗಿಸಿ ಅದರ ವಿವಿಧ ಭಾಗಗಳನ್ನು ಪ್ರತ್ಯೇಕಿಸಿ ನೋಡುವ ಕ್ರಮವೊಂದಿದೆ. ಇದು ಮನುಷ್ಯನಿಗೆ ದೊರೆತಿರುವ ವರ ಎಂದು ಅನೇಕರು ಭಾವಿಸುತ್ತಾರೆ. ನಮ್ಮ ಅನೇಕ ತತ್ವಶಾಸ್ತ್ರದ ಪ್ರಕಾರಗಳು ಹುಟ್ಟಿದ್ದೇ ಇಂಥದ್ದರಿಂದ ಎಂದು ವಾದಿಸುವವರೂ ಇದ್ದಾರೆ. ಆಧುನಿಕ ವಿಜ್ಞಾನದ ಶಕ್ತಿ ಇರುವುದೂ ಈ ವಿಶ್ಲೇಷಣಾತ್ಮಕ ಗ್ರಹಿಕೆಯಲ್ಲೇ. ಆದರೆ ಇದು ನಿಜಕ್ಕೂ ಶಕ್ತಿಯೇ? ಪ್ರತಿಯೊಂದನ್ನೂ ಒಡೆದು, ಸೀಳಿ ಅಭ್ಯಸಿಸುವುದೇ ಶ್ರೇಷ್ಠವೇ?

ಈ ಪ್ರಶ್ನೆಗಳನ್ನು ಕೇಳಿಕೊಂಡಾಗ ನಮಗೆ ವಿಶ್ಲೇಷಣೆಗಳ ಒಂದು ಮಿತಿ ಅರ್ಥವಾಗುತ್ತದೆ. ಯಂತ್ರವೊಂದನ್ನು ಬಿಚ್ಚಿ ಬಿಡಿಭಾಗಗಳನ್ನು ನೋಡುತ್ತಾ ಹೋಗಬಹುದು. ಯಂತ್ರವನ್ನು ವಿನ್ಯಾಸಗೊಳಿಸಿದಾತ ಅಥವಾ ಯಂತ್ರದ ಬಗ್ಗೆ ಮೊದಲೇ ಅರಿವಿಲ್ಲದವನ ಎದುರು ಬಿಡಿಭಾಗಗಳನ್ನಷ್ಟೇ ಇಟ್ಟರೆ ಅವನಿಗೆ ಏನನ್ನಿಸಬಹುದು. ಇವೆಲ್ಲವೂ ಕೂಡಿಕೊಂಡಾಗ ರೂಪು ಗೊಳ್ಳುವ ಯಂತ್ರವೊಂದರ ಚಿತ್ರ ಅವನ ಮನಸ್ಸಿನಲ್ಲಿ ಬರುವ ಸಾಧ್ಯತೆ ಇದೆಯೇ? ಈ ಪ್ರಶ್ನೆಗೆ ಇಲ್ಲ ಎಂದೇ ಉತ್ತರಿಸಬೇಕಾ ಗುತ್ತದೆ. ಬಹುಶಃ ಇದುವೇ ವಿಶ್ಲೇಷಣಾತ್ಮಕತೆಯ ದೊಡ್ಡ ಮಿತಿ.

ಪರಿಸರ ವಿಜ್ಞಾನ ಒಂದು ಜ್ಞಾನ ಶಾಖೆಯಾಗಿ ಬೆಳೆಯ ತೊಡಗಿದಾಗ ನಿಸರ್ಗವನ್ನು ವಿಶ್ಲೇಷಣಾತ್ಮಕವಾಗಿ ಅರ್ಥ ಮಾಡಿಕೊಳ್ಳುವುದರಲ್ಲಿರುವ ಮಿತಿಗಳು ವಿಜ್ಞಾನಕ್ಕೂ ಅರ್ಥವಾಯಿತು. ಪರಿಣಾಮವಾಗಿ ಹುಟ್ಟಿಕೊಂಡದ್ದೇ ಸಂಶ್ಲೇಷಣಾತ್ಮಕ ವಿಧಾನ. ಇಡೀ ಜೀವಿ ಪರಿಸರವನ್ನು ಒಟ್ಟಾಗಿ ಗ್ರಹಿಸುವ ಬಗೆ. ಹುಲಿಯ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಕ್ರಿಯೆಯಲ್ಲಿ ಹುಲ್ಲೆಗಳು ಇಲ್ಲವಾಗಿರುವುದು ಆ ಹುಲ್ಲೆಗಳಿಗೆ ಬೇಕಿರುವ ಹುಲ್ಲು ಇಲ್ಲವಾಗಿ ರುವುದು ನಗರೀಕರಣ ಹೆಚ್ಚುತ್ತಿರುವುದು ಹೀಗೆ ಪರಿಸರವನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಕ್ರಿಯೆ.

ಇದನ್ನು ಕೇವಲ ವಿಜ್ಞಾನಕ್ಕೆ ಬಿಟ್ಟುಕೊಟ್ಟು ಕುಳಿತುಕೊಳ್ಳಬೇಕಾಗಿಲ್ಲ. ನಮ್ಮ ನಿತ್ಯದ ಬದುಕನ್ನೂ ಇದೇ ಮಾರ್ಗದಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯ. ವಾಸ್ತವದಲ್ಲಿ ಮನುಷ್ಯ ತನ್ನ ಜೀವನವನ್ನು ಅರ್ಥ ಮಾಡಿಕೊಳ್ಳಬೇಕಿರುವುದೇ ಹೀಗೆ. ವಿಶ್ಲೇಷಣೆಗಳೇನಿದ್ದರೂ ಒಂದು ನಿರ್ದಿಷ್ಟ ವಿಚಾರವನ್ನು ಅರ್ಥ ಮಾಡಿಕೊಳ್ಳುವ ಕ್ರಿಯೆಯಷ್ಟೇ. ಬದುಕೆಂದರೆ ಕೇವಲ ಒಂದು ಸಂಗತಿಯಲ್ಲ. ಅದರೊಂದಿಗೆ ಹೆಣೆದುಕೊಂಡಿರುವ ಅನೇಕಾನೇಕ ವಿಚಾರಗಳು. ಆದ್ದರಿಂದ ಇಲ್ಲಿ ಸಂಶ್ಲೇಷಣಾತ್ಮಕ ವಿಧಾನವೇ ಹೆಚ್ಚು ಪರಿಣಾಮಕಾರಿ.

ಈ ಮಾದರಿಯನ್ನು ಅನುಸರಿಸುವುದರಿಂದ ನಾವು ಸೋಲು–ಗೆಲುವು, ಸುಖ–ದುಃಖ, ಶ್ರೀಮಂತಿಕೆ–ಬಡತನ ಮುಂತಾದುವುಗಳನ್ನು ಹೆಚ್ಚು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅರ್ಥಾತ್ ನಮ್ಮ ಬದುಕಿನ ಒಟ್ಟು ಸಂದರ್ಭದಲ್ಲಿಟ್ಟು ಇವುಗಳನ್ನು ಗ್ರಹಿಸುವುದಕ್ಕೆ ಸಾಧ್ಯವಾಗುತ್ತದೆ. ದುಃಖದ ಮೂಲದಲ್ಲಿರುವ ಆಸೆಯನ್ನು ಬುದ್ಧ ವಿವರಿಸುವಾಗ ಹೇಳಿದ್ದೂ ಇದನ್ನೇ. ಆಸೆ ಎಂಬುದು ಅದರಷ್ಟಕ್ಕೇ ಒಂದು ಸಮಸ್ಯೆಯಲ್ಲ. ಅದು ಬದುಕಿನ ಸಂದರ್ಭದಲ್ಲಿ ಹೇಗೆ ವರ್ತಿಸುತ್ತದೆ ಎಂಬುದರ ಮೇಲೆ ಅದರ ದುಃಖ ನಿರ್ಮಾಣ ಶಕ್ತಿಯು ಕಾಣಿಸಿಕೊಳ್ಳುತ್ತದೆ. ಒಂದು ನಿರ್ದಿಷ್ಟವಾದ ಗೆಲುವನ್ನು ನಾವು ಆಶಿಸುತ್ತಿರುವುದಕ್ಕೆ ನಮ್ಮ ಇಡೀ ಬದುಕಿನ ಸಂದರ್ಭದಲ್ಲಿ ಯಾವ ಅರ್ಥವಿದೆ ಎಂಬುದನ್ನು ಆಲೋಚಿಸಿದರೆ ನಾವು ಆ ಪ್ರಯತ್ನವನ್ನೇ ಬಿಟ್ಟು ಬಿಡುವ ಸಾಧ್ಯತೆಯಿಲ್ಲವೇ? ನಮ್ಮ ಗೆಲುವು ಇರುವುದೇ ಇಂಥ ಸಣ್ಣ ಸಣ್ಣ ಗೆಲುವುಗಳ ಆಸೆಯನ್ನು ಮೀರುವುದರಲ್ಲಿ. ಒಂದು ಐಷಾರಾಮಿ ವಸ್ತುವನ್ನು ನಮ್ಮದಾಗಿಸಿಕೊಳ್ಳುವುದಕ್ಕೆ ನಾವು ಮಾಡುವ ಪ್ರಯತ್ನವನ್ನು ಇನ್ನೂ ಅರ್ಥಪೂರ್ಣವಾದ ಯಾವುದಾದರೂ ಕ್ರಿಯೆಯಲ್ಲಿ ತೊಡಗಿಸಿದರೆ ಅದರಿಂದ ಸಿಗುವ ಸಮಾಧಾನ ಇನ್ನೂ ದೊಡ್ಡದಲ್ಲವೇ?

ಇಂಥ ತರ್ಕಗಳ ಕುರಿತಂತೆ ಯೋಚಿಸಲಾರಂಭಿಸಿದ ತಕ್ಷಣ ಲೌಕಿಕರಾದ ಮನುಷ್ಯರೆಲ್ಲರೂ ತಮಗೇನೋ ವೈರಾಗ್ಯ ಆವರಿಸುತ್ತಿದೆ ಎಂದು ಭಾವಿಸುವುದೇ ಹೆಚ್ಚು. ವಾಸ್ತವದಲ್ಲಿ ಇದು ವೈರಾಗ್ಯವಲ್ಲ. ಒಂದು ಬಗೆಯ ಲೆಕ್ಕಾಚಾರದ ಬದುಕು. ಹಣವನ್ನು ಸುಮ್ಮನೇ ನದಿಗೆ ಚೆಲ್ಲುವುದಾದರೂ ಲೆಕ್ಕ ಮಾಡಿಯೇ ಎಸೆಯಬೇಕು ಎಂಬ ಹಳೆಯ ಗಾದೆಯೊಂದಿದೆ. ಇದರ ಅರ್ಥ ಬೇರೇನೂ ಅಲ್ಲ. ನಾವೇನು ಮಾಡುತ್ತಿದ್ದೇವೆ ಎಂಬುದರ ಅರಿವು ನಮಗಿರಬೇಕು. ಸುಮ್ಮನೇ ಭಾವುಕವಾಗಿ ತೆಗೆದುಕೊಂಡು ನಿರ್ಧಾರ ಇದಲ್ಲ ಎಂಬುದನ್ನು ನಾವು ಖಾತರಿ ಪಡಿಸಿಕೊಳ್ಳಬೇಕು. ಯಾವುದಾದರೂ ಶುಭ ಕಾರ್ಯಕ್ಕೆ ಸಂಕಲ್ಪ ಮಾಡುವ ಪ್ರಕ್ರಿಯೆಯೊಂದಿದೆ.  ಅಂದರೆ ಸುಮ್ಮನೆ ಯಾಂತ್ರಿಕವಾಗಿ ಈ ಕ್ರಿಯೆಯಲ್ಲಿ ನಾನು ತೊಡಗಿಕೊಳ್ಳುತ್ತಿಲ್ಲ ಎಂಬುದನ್ನು ಖಾತರಿ ಪಡಿಸಿಕೊಳ್ಳುವುದಕ್ಕಾಗಿಯೇ ಈ ಸಂಕಲ್ಪದ ಪರಿಕಲ್ಪನೆಯಿದೆ. ನಮ್ಮ ಕುರಿತಂತೆ ನಮಗೆ ಇರುವ ಅರಿವೇ ನಮ್ಮನ್ನು ಅನಗತ್ಯವಾದ ದುಃಖಗಳಿಂದ ದೂರವಿಡುತ್ತದೆ. ಇದನ್ನು ಬದುಕು ನಮಗೆ ದಿನವೂ ಹೇಳಿಕೊಡುತ್ತಿರುತ್ತದೆ. ಆದರೆ ನಾವದನ್ನು ಗ್ರಹಿಸುವುದರಲ್ಲಿ ಸೋಲುತ್ತಿರುತ್ತೇವೆ. ಇನ್ನು ಮುಂದೆ ಈ ವಿಷಯದಲ್ಲಿ ನಾವು ಸೋಲುವುದಿಲ್ಲ ಎಂಬುದು ನಮ್ಮ ಸಂಕಲ್ಪವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT