ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡೆಯರ ಆಡಳಿತ ಜನಪ್ರತಿನಿಧಿಗಳಿಗೆ ಆದರ್ಶವಾಗಲಿ

ವಿಚಾರಸಂಕಿರಣದಲ್ಲಿ ಪ್ರೊ.ಪಿ.ವಿ.ನಂಜರಾಜೆ ಅರಸು ಅಭಿಮತ
Last Updated 30 ಸೆಪ್ಟೆಂಬರ್ 2014, 9:56 IST
ಅಕ್ಷರ ಗಾತ್ರ

ಹೊಸದುರ್ಗ: ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ರೂಪಿಸಿರುವ ಭಾರತದ ಸಂವಿಧಾನ ಮೈಸೂರು ಒಡೆಯರ ಸಾಧನೆಯ ನಕಲಾಗಿದೆ ಎಂದು ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜೆ ಅರಸು ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಪಟ್ಟಣದ ಅಶೋಕ ವಾಚನಾಲಯ ಮತ್ತು ಮನರಂಜನಾ ಕೇಂದ್ರದ ವತಿಯಿಂದ ಸೋಮವಾರ ಆಯೋಜಿಸಿದ್ದ ‘ಕನ್ನಡ ನಾಡಿಗೆ ಮೈಸೂರು ಯದು ವಂಶದ ಅರಸರ ಕೊಡುಗೆಗಳು’ ವಿಷಯ ಕುರಿತ ವಿಚಾರಸಂಕಿರಣದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಮೈಸೂರು ಒಡೆಯರು ಜನಪರ ಕಾಳಜಿಯನ್ನು ಇಟ್ಟುಕೊಂಡು ಆಗಿನ ಕಾಲದಲ್ಲಿ ಮಾಡಿರುವ ನೂರಾರು ಯೋಜನೆಗಳ ಮೌಲ್ಯ ಇಂದಿಗೂ ಮಾದರಿಯಾಗಿದೆ. ದೀನದಲಿತರ, ವಿಧವೆಯರ, ಭಿಕ್ಷುಕರ, ಶೋಷಿತರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಸಾಕಷ್ಟು ಶ್ರಮಿಸಿದ್ದಾರೆ. ಇಂತವರ ಇತಿಹಾಸವನ್ನು ಇಂದಿನ ಚುನಾಯಿತ ಪ್ರತಿನಿಧಿಗಳು ಸರಿಯಾಗಿ ಅರ್ಥೈಸಿಕೊಂಡು, ಮೈಸೂರು ಒಡೆಯರ ಆದರ್ಶದಂತೆ ಆಡಳಿತ ನಡೆಸಿದಲ್ಲಿ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಗ್ರಾಮೀಣಾಭಿವೃದ್ಧಿಯ ಹಿತ ದೃಷ್ಟಿಯಿಂದ, ಮೈಸೂರು ಒಡೆಯರು ಆಡಳಿತ ನಡೆಸಿದ್ದಾರೆ. ಆಗಿನ ಕಾಲದಲ್ಲಿಯೇ ಗ್ರಾಮ ಹಾಗೂ ಪ್ರಜಾ ಪ್ರತಿನಿಧಿ ಸಭೆಗಳನ್ನು ಸ್ಥಾಪನೆ ಮಾಡಿ, ಅಲ್ಲಿನ ಸಮಸ್ಯೆಗಳ ನಿವಾರಣೆಗೆ ಪೂರಕವಾದ ಆಡಳಿತ ನೀಡಿದ್ದಾರೆ. ಆದರೆ, ಈಗಿನ ಜನಪ್ರತಿನಿಧಿಗಳು ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಶ್ರಮಿಸುತ್ತಿರುವುದು ವಿಷಾದನೀಯ ಸಂಗತಿ ಎಂದರು.

ಮೈಸೂರು ಒಡೆಯರು ಸಹಕಾರಿ ಸಂಘಗಳನ್ನು ಸ್ಥಾಪಿಸಿ, ಕೃಷಿ ಚಟುವಟಿಕೆಗಳಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ನೀಡುವ ಮೂಲಕ ರೈತರ ಅಭಿವೃದ್ಧಿಗೆ ಹೆಚ್ಚು ಶ್ರಮಿಸಿದ್ದಾರೆ. ಇತಿಹಾಸ ಅಧ್ಯಯನ ವ್ಯಕ್ತಿ ಪೂಜೆಗೆ ಆದ್ಯತೆ ನೀಡಬಾರದು. ಬದಲಾಗಿ ವ್ಯಕ್ತಿಯ ವ್ಯಕ್ತಿತ್ವ ತಿಳಿಯುವುದಕ್ಕೆ ಹೆಚ್ಚು ಪ್ರಾದಾನ್ಯತೆ ಕೊಡಬೇಕು.  ಅದನ್ನು ಅರಿತು ಶಿಕ್ಷಕರು ಇತಿಹಾಸದ ಆಳವಾದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಶಾಸಕ ಬಿ.ಜಿ.ಗೋವಿಂದಪ್ಪ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಮೈಸೂರು ಒಡೆಯರು ಸಾಮಾಜಿಕ ಚಿಂತನೆಯ ಹಿನ್ನೆಲೆಯಲ್ಲಿ ನಮ್ಮ ನಾಡಿಗೆ ನೀಡಿರುವ ಕೊಡುಗೆ ಅಪಾರವಾಗಿದೆ.  ಇದನ್ನು ಇಂದಿನ ಯುವಜನಾಂಗ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಪಟ್ಟಣದ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಗೋ.ತಿಪ್ಪೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾಂಶುಪಾಲ ಪ್ರೊ.ಕೆ.ಬಿ.ವೆಂಕಟರಮಣರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪುರಸಭಾ ಅಧ್ಯಕ್ಷೆ ಯಶೋದಮ್ಮ ರಂಗಪ್ಪ, ಸದಸ್ಯರಾದ ದಾಳಿಂಬೆ ಗಿರೀಶ್‌, ಜುಂಜಪ್ಪ, ನಾಗರತ್ನಾ ಶಿವಕುಮಾರ್‌, ಬಿ.ಜಿ.ವೆಂಕಟೇಶ್‌, ಬೊಮ್ಮಲಿಂಗಪ್ಪ, ಪ್ರೊ.ಪರಮೇಶ್ವರಪ್ಪ, ಅಶೋಕ್‌ಕುಮಾರ್‌, ತಿಮ್ಮಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT