ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿಗೆ ನಲುಗುತ್ತಿರುವ ಸ್ವತಂತ್ರನಗರ ಕೆರೆ

ಕೆರೆಯಂಗಳದಿಂದ... 19
Last Updated 23 ಮೇ 2016, 19:47 IST
ಅಕ್ಷರ ಗಾತ್ರ

ಬೆಂಗಳೂರು: ಕೆರೆ ಜಾಗದಲ್ಲಿ ಸುರಿಯಲಾಗಿರುವ ಕಟ್ಟಡ ಅವಶೇಷ, ಅದರ ಪಾತ್ರದಲ್ಲಿ ಬೆಳೆದಿರುವ ಕಳೆ, ಮಲಿನಗೊಂಡ ನೀರಿನಿಂದ ಬರುತ್ತಿರುವ ದುರ್ನಾತ –ಇದು ಕೆ.ಆರ್.ಪುರ ಬಳಿಯ ಸ್ವತಂತ್ರನಗರ ಕೆರೆಯ ಸದ್ಯದ ದುಸ್ಥಿತಿ.

ಕೆ.ಆರ್.ಪುರದ ಬಸವನಪುರದಲ್ಲಿರುವ ಈ ಕೆರೆ  ಸುಮಾರು ಹತ್ತು ಎಕರೆ ಪ್ರದೇಶದಲ್ಲಿ ಈ  ಹರಡಿಕೊಂಡಿದೆ.

ಕೆರೆಯ ಬಹುತೇಕ ಪ್ರದೇಶ ಒತ್ತುವರಿಯಾಗಿದ್ದರೂ ಅದನ್ನು ತೆರವುಗೊಳಿಸಿ, ಕೆರೆ ರಕ್ಷಣೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರುತ್ತಾರೆ ಸ್ಥಳೀಯರು.

ರಾಜಕಾಲುವೆ ಮಾಯ: ‘ಸ್ವತಂತ್ರನಗರ ಕೆರೆಯ ರಾಜಕಾಲುವೆ  ಸೀಗೆಹಳ್ಳಿ ಕೆರೆಯನ್ನು ಸೇರುತ್ತದೆ. ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಅದರ ಮೇಲೆ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ’ ಎಂದು ಸ್ವತಂತ್ರನಗರದ ನಿವಾಸಿ ರವಿಕುಮಾರ್ ದೂರಿದರು. ‘ರಾಜಕಾಲುವೆ ಮತ್ತು ಕೆರೆ ಪ್ರದೇಶದ ಒತ್ತುವರಿ ತೆರವುಗೊಳಿಸುವಂತೆ ಪಾಲಿಕೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ, ಕೆರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಪಾಲಿಕೆ ಅಧಿಕಾರಿಗಳು ನುಣುಚಿಕೊಳ್ಳುತ್ತಾರೆ’ ಎಂದು ಅವರು ಹೇಳಿದರು.

ಮನೆಗಳಿಗೆ ನುಗ್ಗುವ ನೀರು: ‘60 ಅಡಿ ಇರಬೇಕಿದ್ದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವು ಕಾರಣ ಅದರ ಅಗಲ ಕಡಿಮೆಯಾಗಿದೆ. ಮಳೆಗಾಲದಲ್ಲಿ ರಾಜಕಾಲುವೆ ತುಂಬಿ ಹರಿಯುವುದರಿಂದ ಇಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಗ್ರಾಮದ ಸಾವಿತ್ರಮ್ಮ ತಿಳಿಸಿದರು.
‘ಸಣ್ಣ ಮಳೆ ಬಂದರೂ ಸಾಕು ರಾಜಕಾಲುವೆ ತುಂಬಿ ಮನೆಗಳಿಗೆ ನೀರು ನುಗ್ಗುತ್ತದೆ. ನೀರು ಹೊರ ಹಾಕಲು ಹರಸಾಹಸ ಪಡಬೇಕಾಗುತ್ತದೆ. ನಮ್ಮ ಗೋಳು ಯಾರು ಕೇಳುತ್ತಾರೆ’ ಎಂದು ಅಳಲು ತೋಡಿಕೊಂಡರು.

ಮಲಿನಗೊಂಡ ಕೆರೆ ನೀರು: ಕೆರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಅದರ ಪಾತ್ರದಲ್ಲಿ ಬೃಹತ್ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಮಾಡಲಾಗಿದೆ. ಅವುಗಳಿಂದ ತ್ಯಾಜ್ಯ ನೀರನ್ನು ನೇರವಾಗಿ ಕೆರೆಗೆ ಬಿಡಲಾಗುತ್ತಿದೆ ಎಂದು ಗ್ರಾಮದ ರಾಜಶೇಖರ್ ಹೇಳಿದರು.

‘ಕೊಳಚೆ ನೀರು ಸೇರುತ್ತಿರುವುದರಿಂದ ಕೆರೆ ಸಂಪೂರ್ಣವಾಗಿ ಮಲಿನಗೊಂಡಿದೆ. ಇದರಿಂದ ದುರ್ವಾಸನೆ ಬರುತ್ತಿದ್ದು, ಇಲ್ಲಿ ವಾಸ ಮಾಡುವುದೇ ಕಷ್ಟವಾಗಿದೆ. ಅಲ್ಲದೇ ಸೊಳ್ಳೆ, ನೊಣಗಳ ಕಾಟವೂ ಹೆಚ್ಚಾಗಿದೆ’ ಎಂದು ತಿಳಿಸಿದರು.

‘ಕೆರೆ ಆವರಣದಲ್ಲಿ ಕಟ್ಟಡ ಅವಶೇಷ, ಮಣ್ಣು ಸುರಿದು ಮಟ್ಟ ಮಾಡಲಾಗುತ್ತಿದೆ. ನಂತರ ಒಂದೆರಡು ವರ್ಷಗಳ ಬಳಿಕ ಆ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸುತ್ತಾರೆ. ಇದನ್ನು ತಡೆಯಲು ಬಿಬಿಎಂಪಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅವರು ಆರೋಪಿಸಿದರು. ‘ಎರಡು ವರ್ಷಗಳ ಹಿಂದೆ ಜಿಲ್ಲಾಡಳಿತ ಇಲ್ಲಿ ಇಲ್ಲಿನ ಒತ್ತುವರಿ ತೆರವುಗೊಳಿಸಲು ಮುಂದಾಗಿತ್ತು. ಪ್ರಭಾವಿಗಳ ಒತ್ತಡದಿಂದಾಗಿ ಅದು ಅರ್ಧಕ್ಕೆ ನಿಂತಿತು’ ಅವರು ತಿಳಿಸಿದರು.
ಚಿಕ್ಕದೇವಸಂದ್ರ ಕೆರೆ: ಸ್ವತಂತ್ರನಗರ ಕೆರೆಯಿಂದ ಎರಡು ಕಿ.ಮೀ ದೂರದಲ್ಲಿ ಚಿಕ್ಕದೇವಸಂದ್ರ ಕೆರೆ ಇದೆ. ಇದರ ಅಚ್ಚುಕಟ್ಟು ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಚಿಕ್ಕದೇವಸಂದ್ರ ಕೆರೆಯಿಂದ ಸ್ವತಂತ್ರನಗರ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಸಹ ಒತ್ತುವರಿಯಾಗಿದೆ. ಅದರ ಮೇಲೆಯೇ ಕಟ್ಟಡಗಳನ್ನು ನಿರ್ಮಿಸಲಾಗಿದೆ. ರಾಜಕಾಲುವೆ ಈಗ ಸಣ್ಣ ಚರಂಡಿಯಂತಾಗಿದೆ ಎಂದು ಸ್ಥಳೀಯರು ಹೇಳಿದರು.

‘ಕೆರೆ ಅಭಿವೃದ್ಧಿಪಡಿಸುವ ನೆಪದಲ್ಲಿ ಕಾಟಾಚಾರಕ್ಕೆ ಕೆರೆ ಸುತ್ತ ಬೇಲಿ ಹಾಕಲಾಗಿದೆ. ಆದರೆ, ಒತ್ತುವರಿ ತೆರವುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಸ್ಥಳೀಯರು ದೂರಿದರು.

ಪರಿಶೀಲನೆ, ಕ್ರಮ
‘ಸ್ವತಂತ್ರನಗರ ಕೆರೆ ಒತ್ತುವರಿಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಅಲ್ಲದೇ, ಪಾಲಿಕೆ ವ್ಯಾಪ್ತಿಯ ಕೆರೆಗಳ ಪಟ್ಟಿಯಲ್ಲಿ ಈ ಕೆರೆಯ ಹೆಸರು ಇಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು. ಒಂದು ವೇಳೆ ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸಿ, ಅದರ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ (ಕೆರೆಗಳು) ಸತೀಶ್ ಹೇಳಿದರು.

* ಕೆರೆ ಒತ್ತುವರಿ ಮಾಡಿಕೊಂಡು ಆ ಜಾಗದಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಪಾಲಿಕೆ ಮುಂದಾಗಬೇಕು
-ರವಿಕುಮಾರ್, 
ಸ್ವತಂತ್ರನಗರ ನಿವಾಸಿ

* ಕೆರೆ ಪ್ರದೇಶವನ್ನು ಸರ್ವೆ ಮಾಡಿಸಿ, ಸುತ್ತ ತಂತಿ ಬೇಲಿ ಅಳವಡಿಸಬೇಕು. ಅಲ್ಲದೇ, ಕೆರೆಯ ಹೂಳು ತೆಗೆದು ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು
-ರಾಮಚಂದ್ರಪ್ಪ, 
ಸ್ಥಳೀಯ ನಿವಾಸಿ
 

***
ನೀವೂ ಮಾಹಿತಿ ನೀಡಿ

ನಗರದ ಕೆರೆಗಳ ಹಾಗೂ ರಾಜಕಾಲುವೆ ಸುತ್ತ ತಲೆ ಎತ್ತಿರುವ ಕಟ್ಟಡಗಳನ್ನು ನಿರ್ದಾಕ್ಷಿಣ್ಯವಾಗಿ ಕೆಡವಬೇಕು ಎಂದು ಹಸಿರು ನ್ಯಾಯಮಂಡಳಿ ಆದೇಶ ಹೊರಡಿಸಿದೆ. ನಗರದ ಹತ್ತಾರು ಕೆರೆಗಳ ಮೇಲೆ ಭೂಮಾಫಿಯಾಗಳು, ಬಿಲ್ಡರ್‌ಗಳ ಕಣ್ಣು ಬಿದ್ದು ಕೆರೆಗಳು ಮಾಯವಾಗಿವೆ. ಕೆರೆ, ರಾಜಕಾಲುವೆ  ಒತ್ತುವರಿ ಮಾಡಿರುವವರ ಬಗ್ಗೆ ಸಾರ್ವಜನಿಕರು ಪೂರಕ ದಾಖಲೆಗಳೊಂದಿಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಬಹುದು. ಅವುಗಳನ್ನು ಪ್ರಕಟಿಸುತ್ತೇವೆ. ಮಾಹಿತಿ ನೀಡಲು 080–25880607, 25880643, 9916240432, 9740231381 ಸಂಪರ್ಕಿಸಬಹುದು. ವಾಟ್ಸ್ ಆ್ಯಪ್‌ ಮೂಲಕವೂ ದಾಖಲೆ ಕಳಿಹಿಸಬಹುದು
ಇಮೇಲ್‌ ವಿಳಾಸ: bangalore@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT