ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ ಜ್ಯೋತಿಗೆ ಹೆಚ್ಚಿನ ಭದ್ರತೆ

Last Updated 29 ಜುಲೈ 2016, 23:30 IST
ಅಕ್ಷರ ಗಾತ್ರ

ರಿಯೊ ಡಿ ಜನೈರೊ (ಎಎಫ್‌ಪಿ): ದಕ್ಷಿಣ ರಿಯೊದ ಆಂಗ್ರ ಡೊಸ್‌ ರಿಯೆಸ್‌ ಬಳಿ ಬುಧವಾರ ಒಲಿಂಪಿಕ್ಸ್‌ ಜ್ಯೋತಿ ಹಾದು ಹೋಗುವ ಮಾರ್ಗದಲ್ಲಿ  ಕೆಲವರು ಗಲಾಟೆ ಮಾಡಿರುವುದರಿಂದ ಎಚ್ಚೆತ್ತುಕೊಂಡಿರುವ ಬ್ರೆಜಿಲ್ ಸರ್ಕಾರ ಜ್ಯೋತಿ ಸಾಗುವ ಮಾರ್ಗದಲ್ಲಿ ಭದ್ರತೆ ಹೆಚ್ಚಿಸಲು ನಿರ್ಧರಿಸಿದೆ.

‘ಒಲಿಂಪಿಕ್ಸ್‌ ಜ್ಯೋತಿಯನ್ನು  ತಡೆಯುವುದು ಅಕ್ಷಮ್ಯ ಅಪರಾಧ. ಅಂತಹವರನ್ನು ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಜತೆಗೆ ಜ್ಯೋತಿ ಸಾಗುವ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲಾಗಿದೆ’ ಎಂದು  ರಿಯೊ ಡಿ ಜನೈರೊ ರಾಜ್ಯ ಭದ್ರತಾ ಕಾರ್ಯದರ್ಶಿ ಜೋಸ್‌ ಮರಿಯಾನೊ ಬೆಲ್‌ಟ್ರೇಮ್‌   ತಿಳಿಸಿದ್ದಾರೆ.

‘ಜ್ಯೋತಿ  ದೇಶದ 300 ನಗರಗಳ ಮೂಲಕ ಸಾಗಿ ಆಗಸ್ಟ್‌ 5ರಂದು ಒಲಿಂಪಿಕ್ಸ್‌ ನಡೆಯುವ ಮರಾಕಾನ ಕ್ರೀಡಾಂಗಣದಲ್ಲಿ ಬಂದು ಸೇರಲಿದೆ. ವೇತನ ಹೆಚ್ಚಿಸಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು  ಕೆಲವರು ಆಂಗ್ರ ಡೊಸ್‌ ರಿಯೆಸ್‌ ಬಳಿ ಪ್ರತಿಭಟನೆ ನಡೆಸುತ್ತಿದ್ದರು.

ಆ ಮಾರ್ಗದಲ್ಲಿ ಜ್ಯೋತಿ ಸಾಗಿ ಬಂದಿದ್ದರಿಂದ ಪ್ರತಿಭಟನಾ ನಿರತರು ಜ್ಯೋತಿ ತಡೆದು ಗಲಾಟೆ ಮಾಡಿದ್ದಾರೆ.  ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ರಷ್ಯಾದ 16 ಕುಸ್ತಿಪಟುಗಳು ಕಣಕ್ಕೆ
ಕಾರ್ಸಿಯೆರ್‌–ಸರ್‌–ವೆವೆ, ಸ್ವಿಟ್ಜರ್‌ಲೆಂಡ್‌ (ಎಎಫ್‌ಪಿ): ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದ ರಷ್ಯಾದ 17 ಕುಸ್ತಿಪಟುಗಳ ಪೈಕಿ  16 ಮಂದಿ ಪೈಲ್ವಾನರು  ರಿಯೊ ಒಲಿಂಪಿಕ್ಸ್‌ನ ಅಖಾಡದಲ್ಲಿ ಸೆಣಸಲಿದ್ದಾರೆ. ಯುನೈಟೆಡ್‌ ವರ್ಲ್ಡ್ ರೆಸ್ಲಿಂಗ್‌ (ಯುಡಬ್ಲ್ಯುಡಬ್ಲ್ಯು) 16 ಮಂದಿ ಪೈಲ್ವಾನರಿಗೆ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿ ಯಲು ಹಸಿರು ನಿಶಾನೆ ತೋರಿದೆ.

ವಿಶ್ವ ಚಾಂಪಿಯನ್‌ಷಿಪ್‌ನ 55 ಕೆ.ಜಿ. ಫ್ರೀಸ್ಟೈಲ್‌ ವಿಭಾಗದಲ್ಲಿ ಎರಡು ಬಾರಿ ಚಿನ್ನ ಗೆದ್ದಿದ್ದ ವಿಕ್ಟರ್‌ ಲೆಬೆಡೆವ್‌ ಅವರು ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾಗಿರುವ ಕಾರಣ ಅವರ ರಿಯೊ ಹಾದಿ ಮುಚ್ಚಿದೆ.

‘ರಿಯೊಗೆ ಈಗಾಗಲೇ ಅರ್ಹತೆ ಗಳಿಸಿದ್ದ 17 ಕುಸ್ತಿಪಟುಗಳ ಪೈಕಿ 16 ಮಂದಿ ಉದ್ದೀಪನಾ ಮದ್ದು ಸೇವಿಸಿಲ್ಲ ಎಂಬುದನ್ನು ವಾಡಾ ಖಚಿತಪಡಿಸಿದೆ. ಹೀಗಾಗಿ ಅವರಿಗೆ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯಲು ಅವಕಾಶ ನೀಡಲಾಗಿದೆ. ವಿಕ್ಟರ್‌ ಅವರು ಮದ್ದು ಸೇವಿಸಿದ್ದು ಸಾಬೀತಾಗಿರುವ ಕಾರಣ ಅವರನ್ನು ಕೂಟದಿಂದ ಹೊರಗಿಡಲಾಗಿದೆ’ ಎಂದು ಯುಡಬ್ಲ್ಯುಡಬ್ಲ್ಯು ತಿಳಿಸಿದೆ.

‘ರನ್‌ ಫಾರ್‌ ರಿಯೊ’ಗೆ ಭರದ ಸಿದ್ಧತೆ
ನವದೆಹಲಿ ವರದಿ: ಯುವ ಸಮು ದಾಯದಲ್ಲಿ ಒಲಿಂಪಿಕ್ಸ್‌ ಬಗೆಗೆ ಆಸಕ್ತಿ ಬೆಳೆಸುವ ಉದ್ದೇಶದಿಂದ  ಭಾನುವಾರ ನಡೆಸಲು ಉದ್ದೇಶಿಸಿರುವ ‘ರನ್‌ ಫಾರ್‌ ರಿಯೊ’ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, 20 ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳು ಭಾಗವಹಿಸುವ ನಿರೀಕ್ಷೆ ಇದೆ.
ಮೇಜರ್‌ ಧ್ಯಾನಚಂದ್‌ ಕ್ರೀಡಾಂಗಣ ದಲ್ಲಿ ಆರಂಭವಾಗುವ ಈ ಓಟ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಅಂತ್ಯವಾಗಲಿದೆ.

ಇದೇ ವೇಳೆ ಪ್ರಧಾನಿ ಮೋದಿ ಅವರು ಭಾರತೀಯ ಕ್ರೀಡಾ ಪ್ರಾಧಿಕಾರ ಹೊರ ತಂದಿರುವ ‘ಇಂಡಿಯನ್‌ ಒಲಿಂಪಿಕ್‌ ಜರ್ನಿ’ ಎಂಬ ಹೊತ್ತಿಗೆಯನ್ನು ಬಿಡುಗಡೆ ಮಾಡಲಿದ್ದಾರೆ. ದೂರದರ್ಶನ ಈ ಕಾರ್ಯಕ್ರಮವನ್ನು  ನೇರಪ್ರಸಾರ ಮಾಡಲಿದೆ.

‘ದೇಶದ ಯುವ ಸಮುದಾಯದಲ್ಲಿ ಒಲಿಂಪಿಕ್ಸ್‌ ಬಗೆಗೆ ಆಸಕ್ತಿ ಬೆಳೆಸುವ ಹಾಗೂ ಈ ಬಾರಿಯ ಕೂಟದಲ್ಲಿ ರಾಷ್ಟ್ರ ವನ್ನು ಪ್ರತಿನಿಧಿಸಿರುವ ಕ್ರೀಡಾಪಟುಗಳ ಬಗೆಗೆ ಮಾಹಿತಿ ನೀಡುವ ಉದ್ದೇಶ ದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಇದರಲ್ಲಿ 20 ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಕ್ರೀಡಾ ಸಚಿವ ವಿಜಯ್‌ ಗೋಯಲ್‌ ತಿಳಿಸಿದ್ದಾರೆ.

ಸಿಬಿಐ ತನಿಖೆಗೆ ಯಾದವ್‌ ಒತ್ತಾಯ
ನವದೆಹಲಿ ವರದಿ:
ಕುಸ್ತಿಪಟು ನರಸಿಂಗ್‌ ಪಂಚಮ್‌ ಯಾದವ್‌ ಅವರ ಉದ್ದೀಪನಾ ಮದ್ದು ಸೇವನೆ ಪ್ರಕರಣ ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಿಬಿಐ ತನಿಖೆಗೆ ವಹಿಸಬೇಕೆಂದು  ಜೆಡಿಯು ರಾಜ್ಯಸಭೆ ಸದಸ್ಯ ಶರದ್‌ ಯಾದವ್‌ ಒತ್ತಾಯಿಸಿದ್ದಾರೆ.

‘ನರಸಿಂಗ್‌ ಅವರ ಏಳಿಗೆಯನ್ನು ಸಹಿಸದವರು ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ಅವರನ್ನು ಸಿಲುಕಿಸಿದ್ದಾರೆ. ನರಸಿಂಗ್‌ ಅವರು ಈ ಬಾರಿ ದೇಶಕ್ಕೆ ಪದಕ ಗೆದ್ದುಕೊಡಬಲ್ಲ ಸಾಮರ್ಥ್ಯ ಹೊಂದಿದ್ದರು. 

ತಾವು ಸೇವಿಸುವ ಆಹಾರದಲ್ಲಿ ಮದ್ದು ಬೆರೆಸಿರುವ ಸಾಧ್ಯತೆ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸುವ ಮೂಲಕ  ಅವರಿಗೆ ನ್ಯಾಯ ಒದಗಿಸಿ ಕೊಡಬೇಕು’ ಎಂದು ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT