ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲ್ಲದ ಮದುವೆ ಮಾಡಿಸಹೊರಟಾಗ...

Last Updated 27 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ನೂರು ಸುಳ್ಳು ಹೇಳಿ ಒಂದು ಮದುವೆ ಮಾಡಿಸು ಎಂಬ ಮಾತನ್ನು ನೀವೆಲ್ಲ ಕೇಳಿರುತ್ತೀರಿ. ಹೇಗೋ ತೇಪೆ ಹಾಕಿ ಮದುವೆ ಮಾಡಿದರಾಯಿತು ಆನಂತರ ಎಲ್ಲವೂ ಸರಿಹೋಗುತ್ತದೆ ಎನ್ನುವ ಮಾತು ಯಾಕೋ ಇತ್ತೀಚೆಗೆ ಸರಿ ಹೋಗುತ್ತಿಲ್ಲ.

ಒಬ್ಬ ತಂದೆ ತನ್ನ ಮಗನ ಮದುವೆಯ ಆಹ್ವಾನ ಪತ್ರಿಕೆಗಳನ್ನು ಪರಿಚಯಸ್ಥರಿಗೆ ಹಂಚಿ ನಂತರ ಆ ಜನರಿಗೇ ಅನಿವಾರ್ಯ ಕಾರಣಗಳಿಂದ ನನ್ನ ಮಗನ ಮದುವೆ ರದ್ದಾಗಿದೆ, ದಯವಿಟ್ಟು ಕ್ಷಮಿಸಿ! ಎಂದು ಪತ್ರ ಬರೆಯುವ ಪ್ರಸಂಗ ಬಂದರೆ ಹೇಗೆ? ಹೌದು ಇದು ಸತ್ಯ.

ನನ್ನ ದೂರದ ಸಂಬಂಧಿಕರೊಬ್ಬರು ತಮ್ಮ ಮಗಳನ್ನು ನನಗೆ ಕೊಟ್ಟು ಮದುವೆ ಮಾಡಬೇಕೆಂದು ಹಲವಾರು ವರ್ಷಗಳಿಂದ ಅದೇ ಊರಲ್ಲಿದ್ದ ನನ್ನ ಸ್ನೇಹಿತನಿಗೆ ಬಾರಿ ಬಾರಿ ವಿಚಾರಿಸುತ್ತಿದ್ದರು. ಆದರೆ ನಾನು ಅದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಯಾರಿಗೆ ಗೊತ್ತು ಮುಂದೊಂದು ದಿನ ನನ್ನ ಮದುವೆ ಅವಳೊಂದಿಗೇ ನಿಶ್ಚಯವಾಗುತ್ತೆಂದು? ತಂದೆ-ತಾಯಿ, ಹಿರಿಯರು, ಸ್ನೇಹಿತರ ಮಾತುಕೇಳಿ ಹಾಗು ಇದರ ಬಗ್ಗೆ ಕೂಲಂಕಷವಾಗಿ ಯೋಚಿಸಿ ನಿರ್ಧಾರ ಮಾಡಿಕೊಂಡು, ಹುಡುಗಿಗೆ ಒಪ್ಪಿಗೆ ಇದೆಯೋ ಇಲ್ಲವೋ ಎಂದು ನೇರವಾಗಿ ಹುಡುಗಿಗೆ ಕೇಳಿದ ನಂತರವಷ್ಟೇ ನಾನೂ ಈ ಮದುವೆ ಒಪ್ಪಿಗೆ ಸೂಚಿಸಿದೆ.

ನಿಶ್ಚಿತಾರ್ಥ ಮುಗಿದು ಮನೆಗೆ ಬಣ್ಣ ಹಚ್ಚಿಸಿ, ರಿಸಪ್ಷನ್‌ಗಾಗಿ ಹಾಲ್ ಕೂಡ ಬುಕ್ ಮಾಡಲಾಗಿತ್ತು.
ಮದುವೆಗೆ ಬೇಕಾದ ಬಟ್ಟೆ, ಆಭರಣ ಮುಂತಾದವುಗಳ ಖರೀದಿಯೂ ಆಗಿತ್ತು. ನಿಶ್ಚಿತಾರ್ಥವಾದ ನಂತರ 3-4 ತಿಂಗಳು ಅವಳನ್ನು ನನ್ನೊಂದಿಗೆ ಸರಿಯಾಗಿ ಮಾತನಾಡಲೂ ಅವಳ ಪೋಷಕರು ಬಿಡುತ್ತಿರಲಿಲ್ಲ, ಮಾತನಾಡಿದರೂ ಅವಳು ತಂದೆಯ ಮುಂದೇ ಕುಳಿತು ಮಾತನಾಡಬೇಕಿತ್ತು. ಕಾರಣ ಕೇಳಿದರೆ ಚಿಕ್ಕವಳು, ಹೆದರಿಕೆ ಎಂದೆಲ್ಲ ಹೇಳುತ್ತಿದ್ದರು. ಮದುವೆಗೆ ಕೆಲ ದಿನಗಳು ಬಾಕಿ ಇರುವಾಗ ಅವಳು ನನ್ನೊಂದಿಗೆ ಫೋನ್‌ನಲ್ಲಿ ಮಾತನಾಡುವಾಗ ನಿನಗೆ ಮದುವೆ ಇಷ್ಟವಿದೆಯೋ ಇಲ್ಲವೋ? ಎಂದು ಕೇಳಿದ ತಕ್ಷಣ ಆಕಡೆಯಿಂದ ಆಗಲೇ ಕಲ್ಯಾಣ ಮಂಟಪ, ಅಡುಗೆಯ ವ್ಯವಸ್ಥೆ, ಲಗ್ನ ಪತ್ರಗಳೂ ಪ್ರಿಂಟ್ ಆಗಿವೆ, ಈಗ ಹೀಗೆಂದರೆ ಹೇಗೆ? ಎಂದಳು. ನನಗೆ ಪರಮಾಶ್ಚರ್ಯ! ನಾನು ಹಾಗೇ ಸುಮ್ಮನೆ ಒಂದು ಮಾತು ಹೇಳಿದ್ದಕ್ಕೆ ಆಕೆಯೊಳಗೆ ಅಡಗಿದ ಮದುವೆ ಇಷ್ಟವಿರದ ವಿಷಯ ಏನೋ ಸುಟ್ಟ ವಾಸನೆಯಂತೆ ನನಗೆ ತಾಕಿತು.

ಆಕೆಯ ಪೋಷಕರು ಆಕೆಯ ಮಾತು ಕೇಳದಿದ್ದಕ್ಕೆ ಪೋಷಕರ ಭಂಡ ಧೈರ್ಯಕ್ಕೆ ಉತ್ತರಿಸಲು ಕೊನೆಯ ಗಳಿಗೆಯವರೆಗೂ ಸುಮ್ಮನಿದ್ದು ಮದುವೆಯ ದಿನ ಪರಾರಿಯಾಗುವುದು ಅಥವಾ ಅಲ್ಲಗಳೆಯುವುದು ಅವಳ ಯೋಜನೆಯಾಗಿತ್ತು. ನನ್ನ ಅದೃಷ್ಟ ಚೆನ್ನಾಗಿತ್ತು ಬಚಾವಾದೆ! ಇಷ್ಟೆಲ್ಲದಕ್ಕೆ ಕಾರಣ ಅವಳ ತಂದೆ-ತಾಯಿ ಮತ್ತು ನನ್ನ ಸಂಬಧಿಗಳು ಎಂದು ತಿಳಿದು ತುಂಬಾ ದು:ಖವಾಯಿತು. ಕೊನೆಗೆ ಮದುವೆಗೆ ಕೇವಲ ಹತ್ತು ದಿನಗಳು ಬಾಕಿ ಇರುವಾಗ ನಾವಾಗೇ ಕೂಲಂಕಷವಾಗಿ ವಿಚಾರಿಸಿದಾಗ ಆ ಹುಡುಗಿಗೆ ಈ ಮದುವೆ ಇಷ್ಟವೇ ಇಲ್ಲ! ಪೋಷಕರ ಒತ್ತಾಯದ ಮೇರೆಗೆ ಬಲವಂತದ ಒಪ್ಪಿಗೆ ಎಂದು ತಿಳಿದು ಆಘಾತವಾಯಿತು. ಆದರೆ ಆಕೆಯ ತಂದೆ ಹೇಗಾದರೂ ಮಾಡಿ ಈ ಮದುವೆ ಮಾಡಿ ಮುಗಿಸಬೇಕು ಎಂದು ಹಟಕ್ಕೆ ಬಿದ್ದರು. ಆದರೆ ಆ ಊರಿನ ಹಿರಿಯರೇ ಹುಡುಗಿಗೇ ಇಷ್ಟವಿಲ್ಲ ಎಂದ ಮೇಲೆ ನಾವೇನು ಮಾಡುವುದು ಎಂದು ಹಿಂಜರಿದರು. 

ನನ್ನ ಸ್ನೇಹಿತ ಹಾಗು ನನ್ನ ಪೋಷಕರು ಈ ಬಲವಂತದ ಮದುವೆ ಬೇಡ ಎಂದು ಹೇಳಿ ಸಮಜಾಯಿಷಿ ಹೇಳಿ ಮದುವೆ ರದ್ದು ಪಡಿಸಿದೆವು.  ಆದರೆ ಆ ಹುಡುಗಿಯೂ ಸ್ವಲ್ಪ ಧೈರ್ಯ ಮಾಡಿ ಈ ಮದುವೆಯನ್ನು ಸಾಕಷ್ಟು ಮೊದಲೇ ನಿರಾಕರಿಸಿದ್ದರೆ ಎರಡೂ ಕುಟುಂಬದವರಿಗೆ ಇಷ್ಟು ತೊಂದರೆಗಳಾಗುತ್ತಲೇ ಇರಲಿಲ್ಲ.  ನೆಮ್ಮದಿಯೂ ಕೆಡುತ್ತಿರಲಿಲ್ಲ. ಆ ಹುಡುಗಿಗೆ ಪೋಷಕರ ಒತ್ತಡವಿರಬಹುದು ಆದರೆ ಹೇಗಾದರೂ ಮದುವೆ ಇಷ್ಟವಿರದ ವಿಷಯವನ್ನು ನನಗೆ ಹೇಳಬಹುದಿತ್ತಲ್ಲವೇ? ತನ್ನ ತಂದೆಯ ಒತ್ತಡಕ್ಕೆ ಮಣಿದು ಅವರ ಮೇಲೆ ಸೇಡು ತೀರಿಸಿಕೊಳ್ಳಲು ಮದುವೆಯ ದಿನ ಬಂಧುಗಳ ಮುಂದೆ ಅಲ್ಲಗಳೆದು ಅವಮಾನ ಮಾಡುವ ದುರುದ್ದೇಶ ಹೊಂದಿದ್ದಳು. ಆದರೆ ಇದರಿಂದ ಬಡಪಾಯಿ ಆ ಹುಡುಗನ ಪಾಡೇನು? ಅವನು ಮಾಡಿದ ತಪ್ಪಾದರೂ ಏನು?

ಇಂದು ಎಲ್ಲರೂ ಚೆನ್ನಾಗಿರುವುದಕ್ಕೆ ಕಾರಣ ನಿನಗೆ ಈ ಮದುವೆ ಇಷ್ಟವಿದೆಯಾ? ಎಂಬ ಪ್ರಶ್ನೆ ಎಲ್ಲರ ಬಾಳನ್ನೂ ಹಸನಾಗಿಸಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT