ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಗೂ ಹಸಿರು ಹೊರಗೂ ಹಸಿರು!

Last Updated 30 ಮಾರ್ಚ್ 2015, 14:39 IST
ಅಕ್ಷರ ಗಾತ್ರ

ಒಂದು ಕಾಲವಿತ್ತು. ಮನೆ ಅಂದರೆ ನಾಲ್ಕಾರು ಕೋಣೆಗಳಷ್ಟೇ ಅಲ್ಲ; ಮುಂದೆ, ಹಿಂದೆ ಹಾಗೂ ಸುತ್ತಲೂ ಸಾಕಷ್ಟು ಸ್ಥಳಾವಕಾಶ ಇದ್ದೇ ಇರುತ್ತಿತ್ತು. ಆ ಜಾಗದಲ್ಲಿ ತರಹೇವಾರಿ ಹೂವು– ಹಣ್ಣುಗಳ ಗಿಡಗಳನ್ನು ಬೆಳೆಸಲಾಗುತ್ತಿತ್ತು. ಮನೆ ಅಳತೆ ದೊಡ್ಡದಾಗುತ್ತ ಬಂದಂತೆಲ್ಲ, ಸುತ್ತಲಿನ ಜಾಗ ಕಿರಿದಾಗುತ್ತ ಹೋಯಿತು. ಹಾಲ್, ಬೆಡ್‌ರೂಂ, ಕಿಚನ್ ಹಾಗೂ ಬಾಲ್ಕನಿ ಬಿಟ್ಟರೆ ಬೇರೆ ಜಾಗವೇ ಇಲ್ಲ. ವಿವೇಚನೆಯಿಂದ ಬಳಸಿಕೊಂಡರೆ ಅಲ್ಪ ಸ್ಥಳದಲ್ಲೇ ಹತ್ತಾರು ಸಸಿ ಬೆಳೆಸಬಹುದು. ಒಂದಷ್ಟು ಹೆಚ್ಚು ಸ್ಥಳ ನಿಮ್ಮಲ್ಲಿದ್ದರೆ ಮಿನಿ ಉದ್ಯಾನವನ್ನೇ ಸೃಷ್ಟಿಸಬಹುದು.

ಮನೆಯಲ್ಲಿ ಮೊದಲು ಎದುರಾಗುವುದು ಹಾಲ್‌. ಸೋಫಾ ಸೆಟ್, ಟೇಬಲ್, ಟಿ.ವಿ, ಆಡಿಯೋ ಸಿಸ್ಟಮ್‌, ಬುಕ್‌ ಶೆಲ್ಫ್‌ ಇತ್ಯಾದಿ ಇಲ್ಲಿರುತ್ತವೆ. ಇದರ ಮಧ್ಯೆ ಸಿಗುವ ಜಾಗವನ್ನು ಸಸ್ಯಗಳಿಂದ ಅಲಂಕರಿಸಬಹುದು. ‘ಸ್ಪೈಡರ್ ಪ್ಲಾಂಟ್’– ಅಂಥದ್ದೊಂದು ಸಸ್ಯ. ಇದರಲ್ಲಿ ಬರೀ ಎಲೆಗಳು ಇರುತ್ತವೆ. ಒಮ್ಮೊಮ್ಮೆ ಹೂವು ಸಹ ಅರಳುವುದುಂಟು. ಇಂಥದೇ ಇನ್ನೊಂದು ಬಳ್ಳಿ ‘ಅಲ್ಯುಮಿನಿಯಂ ಪ್ಲಾಂಟ್’. ಬಿಸಿಲು ಸಿಗದಿದ್ದರೂ ಚೆನ್ನಾಗಿ ಬೆಳೆಯುವ ಈ ಬಳ್ಳಿಯ ಎಲೆಗಳು ಬಲು ಸುಂದರ. ಹಸಿರು ಎಲೆಗಳ ಮೇಲೆ ಬಿಳಿ ಎಂಬೋಸಿಂಗ್ ಗೋಚರಿಸುತ್ತದೆ. ಕತ್ತಲಲ್ಲಿ ಹೊಳೆಯುವುದು ಇದರ ವಿಶೇಷ. ಫರ್ನ್‌ಗಳನ್ನು ಬಾಟಲಿಯಲ್ಲಿ ಬೆಳೆಸುವುದು ಜನಪ್ರಿಯವಾಗುತ್ತಿದೆ.

ಅಡುಗೆಮನೆಗೆ ಶೋಭೆ
ಅಡುಗೆಮನೆಗೆಂದೇ ವಿಶಾಲವಾದ ಕಿಟಕಿಗಳು ಇರುತ್ತವೆ. ಇದನ್ನು ಬಳಕೆ ಮಾಡಿಕೊಳ್ಳುವುದೇ ಜಾಣತನ. ಕಿಟಕಿಯ ಹೊರಭಾಗಕ್ಕೆ ಚಾಚಿಕೊಂಡಿರುವ (ಎಕ್ಸ್‌ಟೆನ್ಶನ್‌) ಜಾಗದಲ್ಲಿ ಅಗಲವಾದ ಪ್ಲಾಸ್ಟಿಕ್‌ ಕುಂಡಗಳಲ್ಲಿ ರೋಸ್‌ಮೇರಿ, ಅಲೊವೆರಾ, ಮೆಂತ್ಯ, ಔಷಧೀಯ ಮೂಲಿಕೆ, ಲೆಮನ್ ಗ್ರಾಸ್, ಬೇಸಿಲ್ ಬೆಳೆಸಬಹುದು. ದಪ್ಪ ಎಲೆಗಳಿರುವ ಹಾಗೂ ಶೂನ್ಯ ನಿರ್ವಹಣೆಯ ದೊಡ್ಡಪತ್ರೆಯೂ ಈ ಜಾಗಕ್ಕೆ ಹೇಳಿ ಮಾಡಿಸಿದಂಥದು. ಎರಡಿಂಚು ದಪ್ಪ ಮಣ್ಣಿನಲ್ಲಿ ಬೆಳೆಯುವ ಪುದೀನ, ಕೊತ್ತಂಬರಿಯನ್ನು ಕುಂಡಗಳಲ್ಲಿ ಹಾಕಿಕೊಂಡರೆ, ಅಡುಗೆ ಮಾಡುವಾಗ ತಾಜಾ ಹಾಗೂ ಶುದ್ಧ ಸೊಪ್ಪು ತಕ್ಷಣಕ್ಕೆ ಬೇಕೆಂದಾಗ ಸಿಗುತ್ತದೆ.

ಒಂದಷ್ಟು ಮುನ್ನೆಚ್ಚರಿಕೆ...

* ಕೆಲವು ಪ್ರಭೇದಗಳ ಕ್ಯಾಕ್ಟಸ್‌ಗಳು, ಬೋಗನ್‌ವಿಲ್ಲಾದಂಥ ಮುಳ್ಳು ಹೊಂದಿರುವ ಸಸ್ಯಗಳ ಮಕ್ಕಳಿಗೆ ಅಪಾಯ ತಂದೊಡ್ಡಬಹುದು. ಅಂಥ ಸಸ್ಯಗಳಿರುವ ಕುಂಡಗಳನ್ನು ಎತ್ತರದಲ್ಲಿ ಇಡಿ.

* ಅಲರ್ಜಿ ಉಂಟು ಮಾಡುವ ಗಿಡಮರಗಳ ಬಗ್ಗೆ ಮಾಹಿತಿ ಪಡೆದ ಬಳಿಕವಷ್ಟೇ ಬೆಳೆಸಲು ಮುಂದಾಗಿ.

* ಕೆಲವು ಸಸ್ಯಗಳ ಎಲೆ ಅತ್ಯಂತ ಹೆಚ್ಚು ಕಹಿಯಾಗಿರುತ್ತವೆ. ಆ ಬಗ್ಗೆ ಎಚ್ಚರ ವಹಿಸಿ.

ಪುನರ್ಬಳಕೆ
* ಬಳಸಿ ಬೀಸಾಡುವ ವಸ್ತುಗಳ ಪುನರ್ಬಳಕೆಗೆ ಆದ್ಯತೆ ಕೊಡಿ. ಹಳೆಯ ಪ್ಲಾಸ್ಟಿಕ್ ತೊಟ್ಟಿ, ಡಬ್ಬಿ ಇಂಥವುಗಳಲ್ಲಿ ಅಗಲ ಎಲೆಗಳಿರುವ ಸಸ್ಯಗಳನ್ನು ಬೆಳೆಸಿ. ತೊಟ್ಟಿ– ಡಬ್ಬಿ ಕಾಣದಂತೆ ಈ ಸಸ್ಯಗಳು ಬೆಳೆದುಬಿಡುತ್ತವೆ.

* ರೋಸರಿವೈನ್‌ನಂಥ ‘ಫ್ಲೋಯಿಂಗ್ ಪ್ಲಾಂಟ್ಸ್‌’ ಬೆಳಸಲು ದೊಡ್ಡ ಬಾಟಲಿಗಳನ್ನು ಬಳಸಬಹುದು.

* ಖಾಲಿ ಪೇಂಟ್‌ ಡಬ್ಬಿಗಳಲ್ಲಿ ಮಣ್ಣು ಹಾಗೂ ಸಾವಯವ ಗೊಬ್ಬರ ತುಂಬಿ, ಬೇಕೆನಿಸುವ ತರಕಾರಿ ಬೆಳೆದುಕೊಳ್ಳಿ.

ಬಾಲ್ಕನಿಗೆ ತೂಗು ಉದ್ಯಾನ
ಮನೆಯ ಹೊರಭಾಗಕ್ಕೆ ಚಾಚಿರುವ ಬಾಲ್ಕನಿಯಲ್ಲಿ ಬಿಸಿಲು ಹಾಗೂ ಗಾಳಿ ಧಾರಾಳ. ಹೊರನೋಟಕ್ಕೆ ತಕ್ಷಣ ಕಾಣುವ ಈ ಭಾಗವನ್ನು ಹಸಿರಿನಿಂದ ಅಲಂಕರಿಸಿದರೆ, ಮನೆಯ ಸೌಂದರ್ಯ ಹೆಚ್ಚುತ್ತದೆ. ಅದಕ್ಕಾಗಿ ಕೆಲವು ಸುಲಭ ವಿಧಾನಗಳಿವೆ.

ಬಾಲ್ಕನಿ ಭಾಗದಲ್ಲಿ ತಾರಸಿಗೆ ಹುಕ್ಸ್‌ (ಕೊಕ್ಕೆ) ಇರುತ್ತವೆ. ಅಲ್ಲಿಂದ ಗಟ್ಟಿಯಾದ ದಾರಕ್ಕೆ ‘ಹ್ಯಾಂಗಿಂಗ್ ಪಾಟ್’ ಕಟ್ಟಿ, ಅವುಗಳಲ್ಲಿ ಸಸಿ ಬೆಳೆಸಿಕೊಳ್ಳಬಹುದು. ಈ ವಿಧಾನಕ್ಕೆ ‘ತೂಗು ಉದ್ಯಾನ’ (ಹ್ಯಾಂಗಿಂಗ್ ಗಾರ್ಡನ್) ಎಂದೂ, ಅಲ್ಲಿನ ಕುಂಡಗಳಿಂದ ಕೆಳಗೆ ಇಳಿಯುವ ಸಸ್ಯಗಳಿಗೆ ‘ಫ್ಲೋಯಿಂಗ್ ಪ್ಲಾಂಟ್ಸ್‌’ ಎಂದೂ ಕರೆಯುತ್ತಾರೆ. ಈ ಕುಂಡಗಳಲ್ಲಿ ರೋಸರಿ ವೈನ್, ಸ್ಟ್ರಿಂಗ್ ಆಫ್ ಡೀಲ್ಸ್‌, ಸ್ಟ್ರಾಬೆರಿ, ಗೆರೆನಿಯಂಸ್ ಇತ್ಯಾದಿ ಬೆಳೆಸಬಹುದು.

ಬಾಲ್ಕನಿ ಗ್ರಿಲ್‌ಗೆ ಹೊಂದಿಕೊಂಡಂತೆ ಕ್ರೋಟಾನ್ ಬೆಳೆಸಬಹುದು. ಮಳೆಗಾಲ ಅಥವಾ ಚಳಿಗಾಲದಲ್ಲಿ ಮಾತ್ರವೇ ಹೂ ಅರಳಿಸಿ ಬಳಿಕ ಒಣಗಿಹೋಗುವ ಋತುಮಾನದ ಸಸಿಗಳು ನರ್ಸರಿಯಲ್ಲಿ ಸಿಗುತ್ತವೆ. ಅಂಥವುಗಳನ್ನು ತಂದಿಟ್ಟುಕೊಳ್ಳಬೇಕು. ಸ್ಥಳೀಯವಾಗಿ ಸಿಗುವ ಸೇವಂತಿಗೆ, ಬಣ್ಣದ ತುಂಬೆ ಈ ಸಾಲಿಗೆ ಸೇರುತ್ತವೆ. ಹೆಚ್ಚು ಗಾಳಿಯಾಡುವ ಸ್ಥಳ ಇದಾಗಿರುವುದರಿಂದ, ಪನ್ನೀರೆಲೆ, ಮರುಗ, ಪಚ್ಚೆ ತೆನೆ ಸಸ್ಯಕ್ಕೆ ಜಾಗ ಕಲ್ಪಿಸಿದರೆ ಅಲ್ಲಿಂದ ಒಳಬರುವ ಗಾಳಿಯು ಪರಿಮಳವನ್ನೂ ತನ್ನೊಂದಿಗೆ ತರುತ್ತದೆ. ಮಾಸ್ಟಿಕ್ ಗಿಡ– ಇದೊಂದು ಅಲ್ಗೆ ಸಸ್ಯ. ಬಾಲ್ಕನಿ ಮೂಲೆಯಲ್ಲಿ ಕುಂಡವೊಂದರ ಮಧ್ಯೆ ಕಟ್ಟಿಗೆ ತುಂಡು ಇಟ್ಟು ಈ ಸಸ್ಯ ಬೆಳೆಸಬಹುದು. ಬೇಕಿದ್ದರೆ ಇದಕ್ಕೆ ವೀಳ್ಯದೆಲೆ ಅಥವಾ ಬಸಳೆಯನ್ನೂ ಹಬ್ಬಿಸಿಕೊಳ್ಳಬಹುದು.

ಕಿಟಕಿಯೊಳಗೆ ಸ್ವಲ್ಪ ಸ್ಥಳಾವಕಾಶವಿದ್ದರೂ ಅಲ್ಲಿ ಬೆಳೆಸಬಹುದಾದ ಹಲವು ಸುಂದರ ಗಿಡಗಳಿವೆ. ಬಾಟಲಿಯಲ್ಲಿ ಬೆಳೆಯುವ ‘ಮನಿ ಪ್ಲಾಂಟ್’ ಅಂಥವುಗಳಲ್ಲಿ ಹೆಚ್ಚು ಜನಪ್ರಿಯ. ಕಿಟಕಿಯಲ್ಲಿ ಇದನ್ನಿಡಲು ಜಾಗ ಇಲ್ಲವೇ? ಚಿಂತೆ ಬೇಡ. ಅಲ್ಲೆಲ್ಲೋ ಇರುವ ಟೀಪಾಯ್ ಮೇಲೆ ಅದನ್ನಿಡಿ ಅಥವಾ ಮೊಳೆಗೆ ಬಾಟಲಿ ತೂಗು ಹಾಕಿ. ಬಣ್ಣಬಣ್ಣದ ನೀರು, ವಿವಿಧ ವಿನ್ಯಾಸಗಳ ಬಾಟಲಿಯನ್ನು ಬಳಸಿದರೆ ಗೋಡೆಯ ಅಂದ ಹೆಚ್ಚುತ್ತದೆ.

ತಾಜಾ ತರಕಾರಿ ನಿಮ್ಮದಾಗಲಿ!

ತರಕಾರಿ ಬೆಳೆಗೆ ರಾಸಾಯನಿಕ ಬಳಕೆ ಯಥೇಚ್ಛ. ಅದರ ಬದಲಿಗೆ ಮನೆಯಲ್ಲೇ ಬೆಳೆದುಕೊಂಡ ತರಕಾರಿ ಬಳಸುವಂತಿದ್ದರೆ?
‘ಸಾಕಷ್ಟು ಜಾಗ ಇದ್ದರೆ ಮಾತ್ರ ಅದೆಲ್ಲ ಸಾಧ್ಯ’ ಎಂದು ಅಸಹಾಯಕರಾಗಬೇಕಿಲ್ಲ. ಇದ್ದಷ್ಟು ಜಾಗದಲ್ಲೇ ಸಾಧ್ಯವಾದಷ್ಟರ ಮಟ್ಟಿಗೆ ಬೆಳೆದುಕೊಳ್ಳುವ ಜಾಣ ವಿಧಾನಗಳು ಬಂದಿವೆ. ತಾರಸಿಯಲ್ಲಾಗಲೀ, ಮನೆ ಮುಂದಿನ ಬಾಲ್ಕನಿಯಲ್ಲಾಗಲೀ ಬಗೆಬಗೆಯ ತರಕಾರಿ ಬೆಳೆಯಬಹುದು.

ಹಲವು ಸಂಸ್ಥೆಗಳು ಈಗ ಇಂಥ ‘ರೆಡಿಮೇಡ್‌ ಕಿಟ್‌’ಗಳನ್ನು ಆಸಕ್ತರಿಗೆ ಪೂರೈಸುತ್ತಿವೆ. ಪ್ಲಾಸ್ಟಿಕ್‌ ಕುಂಡಗಳು, ಮಣ್ಣು–ಗೊಬ್ಬರದ ಮಿಶ್ರಣ, ಬೀಜ ಹಾಗೂ ಬೆಳವಣಿಗೆ ಪ್ರಚೋದಕಗಳು ಇದರಲ್ಲಿ ಇರುತ್ತವೆ. ಕಿಟ್‌ ತೆರೆದು, ಮಣ್ಣಿನಲ್ಲಿ ಬೀಜ ಬಿತ್ತಿ, ನೀರು ಹಾಕಿದರೆ ಆಯ್ತು! ಕೆಲವೇ ದಿನಗಳಲ್ಲಿ ಶುದ್ಧ ತರಕಾರಿ ಕೊಯ್ಲು ಮಾಡಿಕೊಳ್ಳಬಹುದು. ಮೊದಲಿನ ಹಂತದಲ್ಲಿ ಸುಲಭವಾಗಿ ಸೊಪ್ಪು ಬೆಳೆದುಕೊಳ್ಳಬಹುದು. ಒಂದಷ್ಟು ‘ಅನುಭವ’ ಸಿಕ್ಕ ಬಳಿಕ ತರಕಾರಿ ಕೃಷಿಗೆ ಮುಂದಾಗಬಹುದು.

ಮನೆಗೆ ಬೇಕಾಗುವ ಎಲ್ಲ ತರಕಾರಿಗಳನ್ನೂ ಇದ್ದ ಅಲ್ಪ ಜಾಗದಲ್ಲೇ ಬೆಳೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ಅಂತರ್ಜಾಲದಲ್ಲಿ ರಾಶಿ ರಾಶಿ ಮಾಹಿತಿ ಸಿಗುತ್ತದೆ. ಕೈತೋಟಕ್ಕೆ ಅಗತ್ಯ ಸಾಮಗ್ರಿಗಳನ್ನು ಪೂರೈಸುವ ಅನೇಕ ಸಂಸ್ಥೆಗಳೂ ಇವೆ. ಇದಲ್ಲದೇ ಆಗಾಗ್ಗೆ ನಡೆಯುವ ‘ಸಾವಯವ ಸಂತೆ’, ‘ತರಕಾರಿ ಮೇಳ’ಗಳಿಂದಲೂ ನೆರವು ಪಡೆಯಬಹುದು.

ಬೆಡ್‌ರೂಮಿನ ಮೂಲೆಯಲ್ಲಿ ಸ್ಟೂಲ್ ಮೇಲೆ ಆಸ್ಪರಾಗಸ್ ಮಯೂರಿ, ಕೊಲಿಯೆಟ್ ಕುಂಡಗಳ ಇಡಬಹುದು. ಬಾತ್‌ರೂಮಿನಲ್ಲಿ ನೀರು ಯಾವಾಗಲೂ ಹರಿಯುವುದರಿಂದ, ಈ ತೇವಾಂಶದಲ್ಲಿ ಸುಲಭ ಮತ್ತು ಶೀಘ್ರವಾಗಿ ಬೆಳೆಯುವ ಸಾಕಷ್ಟು ಪ್ರಭೇದಗಳ ಫರ್ನ್‌ಗಳಿವೆ. ಮನೆಯ ಹಾಲ್‌ನಲ್ಲಿಯೋ ಬಾಲ್ಕನಿಯಲ್ಲೋ ಜಾಗ ಸ್ವಲ್ಪ ಹೆಚ್ಚಿಗೆ ಸಿಗುತ್ತದೆ ಎಂದಾದರೆ ಕಬ್ಬಿಣ ಅಥವಾ ಕಟ್ಟಿಗೆ ಸ್ಟ್ಯಾಂಡ್‌ನಲ್ಲಿ ಹೂಕುಂಡ ಇಡಬಹುದು. ಸಸ್ಯಗಳ ಕುರಿತು ಜನರಲ್ಲಿ ಹೆಚ್ಚುತ್ತಿರುವ ಒಲವಿಗೆ ಪೂರಕವಾಗಿ ಮಹಾನಗರಗಳಲ್ಲಿ ವಾರಾಂತ್ಯದ ಅವಧಿಯ ಕಾರ್ಯಾಗಾರ, ಚರ್ಚೆಗಳು ಸಾಕಷ್ಟು ನಡೆಯುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯೇಕ ಗುಂಪುಗಳೂ ಸಕ್ರಿಯವಾಗಿವೆ. ಏನೇ ಮಾಹಿತಿ ಬೇಕಿದ್ದರೂ ಕ್ಷಣಾರ್ಧದಲ್ಲಿ ಸಿಗುವ ಅವಕಾಶ ಈಗ ಲಭ್ಯ. ‘ಮನೆಯಲ್ಲಿ ಜಾಗವೇ ಇಲ್ಲ’ ಎಂದು ಕೈಚೆಲ್ಲಿ ಕೂರುವ ಬದಲಿಗೆ ಇದ್ದ ಸ್ಥಳದಲ್ಲೇ ಏನೆಲ್ಲ ಮಾಡಲು ಸಾಧ್ಯ ಎಂಬುದನ್ನು ತೋರಿಸಲು ನೂರಾರು ದಾರಿಗಳಿವೆ.
ಗಿಡಮರ– ಹೂಬಳ್ಳಿ ಮೇಲೆ ಪ್ರೀತಿ ಇದ್ದರೆ ಅಲ್ಪ ಸ್ಥಳವನ್ನೇ ಆಲಂಕಾರಿಕ ತಾಣವನ್ನಾಗಿ ಮಾಡಲು ಸಾಧ್ಯ ಎಂಬುದನ್ನು ಪ್ರಕೃತಿಪ್ರಿಯರು ತೋರಿಸಿಕೊಟ್ಟಿದ್ದಾರೆ.   

ನಿರ್ವಹಣೆಯೂ ಇರಬೇಕು
ಎಲ್ಲ ಗಿಡಗಳ ಕುಂಡಗಳ ತಳಭಾಗದಲ್ಲಿ ಪ್ಲಾಸ್ಟಿಕ್ ಅಥವಾ ಮಣ್ಣಿನ ಟ್ರೇ ಇಡಲು ಮರೆಯಬೇಡಿ. ಇದರಿಂದ ಎರಡು ಬಗೆಯ ಪ್ರಯೋಜನಗಳಿವೆ. ಸಸ್ಯಗಳಿಗೆ ನೀರನ್ನು ಪದೇ ಪದೇ ಹಾಕುತ್ತಲೇ ಇರಬೇಕಿಲ್ಲ ಹಾಗೂ ಕುಂಡಕ್ಕೆ ಹಾಕಿದ ನೀರು ಹೆಚ್ಚಾದರೂ ಹರಿದು ಮನೆ ಗಲೀಜು ಆಗುವುದಿಲ್ಲ.

* ಹಿತ್ತಲಿನಲ್ಲಿ ಬೆಳೆದ ಗಿಡಗಳಿಗೆ ಗೊಬ್ಬರ ಹಾಕಬಹುದು. ಆದರೆ ಮನೆಯೊಳಗೆ ಬೆಳೆಸಿದ ಸಸ್ಯಗಳಿಗೆ? ಇವುಗಳಿಗೆಂದೇ ದ್ರವರೂಪಿ ಗೊಬ್ಬರ ಲಭ್ಯ. ಸ್ಪ್ರೇಯರ್‌ ಮೂಲಕ ಇದನ್ನು ಸಿಂಪಡಣೆ ಮಾಡಬಹುದು. ಇದರಿಂದ ಸಸ್ಯಗಳ ಮೇಲೆ ಕುಳಿತ ದೂಳು ಹೋಗುತ್ತದೆ ಹಾಗೂ ಗೊಬ್ಬರದ ಸಾರವನ್ನು ಆ ಸಸ್ಯ ಹೀರುತ್ತದೆ.

* ದಪ್ಪ ಎಲೆಗಳುಳ್ಳ ಸಕ್ಕುಲೆಂಟ್‌ ಪ್ಲಾಂಟ್‌ಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸಬಹುದು. ಇವುಗಳಿಗೆ ಹೆಚ್ಚು ನೀರು ಹಾಕುವ ಪ್ರಮೇಯವೇ ಉದ್ಭವಿಸುವುದಿಲ್ಲ. ನೋಡಲು ಸುಂದರ ವಿನ್ಯಾಸ ಇವುಗಳದು.

* ತೀರ ಬೆಳಕಿಲ್ಲದೇ ಇರುವ ಕೋಣೆಯಲ್ಲಿ ಬೆಳೆಯುವ ಸಸ್ಯಗಳನ್ನು ಆಗಾಗ್ಗೆ ಹೊರಗೆ ತಂದು ಒಂದೆರಡು ತಾಸು ಬಿಸಿಲಿನಲ್ಲಿ ಇಡಬೇಕು.

* ದುಂಬಿ, ಪತಂಗಗಳನ್ನು ಆಹ್ವಾನಿಸುವ ಹೂಗಿಡ ಬೆಳೆಸಿ. ಇದು ಮನಕ್ಕೆ ಖುಷಿಯನ್ನೂ ಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT