ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಗೆಟ್ಟ ಪ್ರಶ್ನೆಗೆ ನೆಮ್ಮದಿಯ ಉತ್ತರ

ಬೆಳ್ಳಂದೂರಿನಲ್ಲಿ ‘ಪ್ರಜಾವಾಣಿ’ ‘ಜನ­ಸ್ಪಂದನ’ ಕಾರ್ಯಕ್ರಮ: ಜನಸಾಮಾನ್ಯರ ಅಹವಾಲು, ಆಕ್ರೋಶ
Last Updated 18 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೀರ್ಘಕಾಲದಿಂದ ಅನೇಕ ಸಮಸ್ಯೆಗಳಿಂದ ನಲುಗಿದ್ದ ಅವರೆಲ್ಲ ಬದಲಾವಣೆಯ ದೊಡ್ಡ ಕನಸು ಹೊತ್ತು ಅಲ್ಲಿಗೆ ಬಂದಿದ್ದರು. ಆಕ್ರೋಶದಿಂದಲೇ ತೂರಿ ಬಿಟ್ಟ ಅವರ ಪ್ರಶ್ನೆಗಳಿಗೆ, ಕಾಲಮಿತಿಯಲ್ಲಿ ಪರಿಹಾರದ ಭರವಸೆ ದೊರೆಯುತ್ತಿದ್ದಂತೆ ನಿರಾಳತೆಯಿಂದ ಅವರೆಲ್ಲ ನಗುಮೊಗದಿ ಮರಳಿದರು.

ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಳ್ಳಂದೂರಿನಲ್ಲಿ (ವಾರ್ಡ್‌ –150) ಶನಿವಾರ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಆಯೋಜಿಸಿದ್ದ ‘ಜನ­ಸ್ಪಂದನ’ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು. ಕಾರ್ಯಕ್ರಮದಲ್ಲಿ ದೊಡ್ಡ ಕನ್ನಳ್ಳಿ ನಿವಾಸಿ ಸಿ.ಎಸ್‌.ಕೃಷ್ಣನ್‌ ಅವರು, ‘ಸ್ವಾಮಿ, ನಮ್ಮ ಬಡಾವಣೆಯಲ್ಲಿ ನೀರಿಲ್ಲ, ಬೀದಿದೀಪವಿಲ್ಲ, ರಸ್ತೆ ಚೆನ್ನಾಗಿಲ್ಲ, ಉದ್ಯಾನವಿಲ್ಲ, ತ್ಯಾಜ್ಯವನ್ನು ಸರಿಯಾಗಿ ಎತ್ತೋದಿಲ್ಲ, ಇನ್ನು ಬೀದಿನಾಯಿಗಳ ಹಾವಳಿಯಂತೂ ಮೀತಿ ಮೀರಿದೆ. ನಮ್ಮನ್ನು ಪ್ರತ್ಯೇಕಿಸಿ ಕಡೆಗಣಿಸಬೇಡಿ. ದಯವಿಟ್ಟು ನಮಗೆ ಮೂಲಸೌಕರ್ಯ ಒದಗಿಸಿಕೊಡಿ’ ಮನವಿ ಮಾಡಿಕೊಂಡರು.

ವೇದಿಕೆ ಮೇಲಿದ್ದ ಶಾಸಕ ಅರವಿಂದ ಲಿಂಬಾವಳಿ ಅವರು, ‘ಮುಂದಿನ ವಾರವೇ ನಿಮ್ಮ ಬಡಾವಣೆಗೆ ನಾನೇ ಭೇಟಿ ನೀಡಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇನೆ’ ಎಂದು ಕೃಷ್ಣನ್‌ ಅವರಿಗೆ ಅಭಯ ನೀಡಿದರು. ಜನಸ್ಪಂದನದಲ್ಲಿ ನಾಗರಿಕರು  ಸ್ಥಳೀಯ ಜನಪ್ರತಿನಿಧಿ ಮತ್ತು ಅಧಿಕಾರಿಗಳಿಗೆ ಕುಡಿಯುವ ನೀರಿನ ಸಮಸ್ಯೆ, ತ್ಯಾಜ್ಯ ವಿಲೇವಾರಿ, ಬೀದಿ ನಾಯಿ ಕಾಟ, ಪೋಸ್ಟರ್‌ ಹಾವಳಿ, ಒಳಚರಂಡಿ ಸಮಸ್ಯೆ, ಪಾದಚಾರಿ ಮಾರ್ಗ, ಸರ್ವಿಸ್‌ ರಸ್ತೆ ತೊಂದರೆ, ಸಂಚಾರ ದಟ್ಟಣೆ ಸೇರಿದಂತೆ ಅನೇಕ ವಿಷಯಗಳ ಕುರಿತು ಕುಂದುಕೊರತೆಗಳನ್ನು ಹೇಳಿಕೊಂಡರು.

ಕಾರ್ಯಕ್ರಮದಲ್ಲಿ ಕೆಲ ಅಧಿಕಾರಿಗಳು ನಾಗರಿಕರ ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಬಗೆಹರಿಸುವ ಭರವಸೆ ನೀಡಿದರು.  ಅಧಿಕಾರಿಯೊಬ್ಬರಿಗೆ ‘ಸಾರ್ವಜನಿಕವಾಗಿ ಸುಳ್ಳು ಹೇಳಬೇಡಿ’ ಎಂದು ತರಾಟೆಗೆ ತೆಗೆದುಕೊಂಡ ಶಾಸಕ ಲಿಂಬಾವಳಿ ಅವರು ಒಂದು ಸಂದರ್ಭದಲ್ಲಿ ಪೊಲೀಸ್‌ ಇನ್‌ಸ್ಪೆಕ್ಟರ್‌ ರಾಘವೇಂದ್ರ ಅವರಿಗೆ ‘ರೀ ಸ್ವಾಮಿ, ನಿಮ್ಮ ವ್ಯಾಪ್ತಿಯ ಸ್ಥಳದ ಪರಿಚಯವೇ ನಿಮಗಿಲ್ಲವೆ? ನೀವು ಪೊಲೀಸ್‌ ಅಧಿಕಾರಿಗಳಾ. ನಿಮ್ಮಂತವರ ವರ್ತನೆಗಳಿಂದಲೇ ಜನರಿಗೆ ಪೊಲೀಸರ ಬಗ್ಗೆ ತಪ್ಪು ಕಲ್ಪನೆ ಬರುವುದು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶೇ 10 ರಷ್ಟು ಅನುದಾನ ನೀಡಿ: ‘ಕಳೆದ 7–8 ವರ್ಷಗಳ ಹಿಂದೆ ಬಿಬಿಎಂಪಿ ವ್ಯಾಪ್ತಿಗೆ ಸೇರಿಕೊಂಡ ಬೆಳ್ಳಂದೂರು ನಿಧಾನಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿ ಕುಡಿಯುವ ನೀರು  ಮತ್ತು ಸಂಚಾರ ದಟ್ಟಣೆ ಸಮಸ್ಯೆಗಳು ಪ್ರಮುಖವಾಗಿವೆ. ಜತೆಗೆ ಕೆಲ ಮೂಲ ಸೌಕರ್ಯಗಳ ಕೊರತೆ ಕೂಡ ಇದೆ. ಅವುಗಳನ್ನು ಬಗೆಹರಿಸಲು ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳೆಲ್ಲರೂ ಶ್ರಮಿಸುತ್ತಿದ್ದೇವೆ’ ಎಂದು ಲಿಂಬಾವಳಿ  ಹೇಳಿದರು.

‘ಅತಿ ದೊಡ್ಡ ವ್ಯಾಪ್ತಿ ಹೊಂದಿರುವ ಬೆಳ್ಳಂದೂರು ವಾರ್ಡ್‌ಗೆ ಹೆಚ್ಚಿನ ಅನುದಾನದ ಅಗತ್ಯವಿದೆ. ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚಿನ ಕಂದಾಯ ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ ಸಂದಾಯವಾಗುತ್ತದೆ. ಕಂದಾಯದ ಶೇ 10 ರಷ್ಟು ಅನುದಾನವನ್ನು ಈ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ನೀಡಬೇಕೆಂದು ನಾನು ಮುಖ್ಯಮಂತ್ರಿ, ಉಸ್ತುವಾರಿ ಸಚಿವರು, ಮೇಯರ್‌ ಅವರಿಗೆ ಒತ್ತಾಯಿಸುತ್ತಲೇ ಬಂದಿದ್ದೆನೆ’ ಎಂದು ತಿಳಿಸಿದರು.

‘ಅತಿಕ್ರಮಣ ಮತ್ತು ಕಲುಷಿತ ನೀರಿನಿಂದ ನಲುಗುತ್ತಿರುವ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳನ್ನು ಹೂಳು ತೆಗೆಸಿ ಪುನರುಜ್ಜೀವನಗೊಳಿಸುವ ಚಿಂತನೆ ಇದೆ. ಅದಕ್ಕಾಗಿ ಕೇಂದ್ರ ನಗರಾಭಿವೃದ್ಧಿ ಇಲಾಖೆ ಕೂಡ ಆರ್ಥಿಕ ಸಹಾಯ ನೀಡಲು ಮುಂದೆ ಬಂದಿದೆ. ಇದೀಗ ಕೇಂದ್ರಕ್ಕೆ  ಬಿಡಿಎ ಈ ಕುರಿತು ಪ್ರಸ್ತಾವ ಸಲ್ಲಿಸುವ ಕಾರ್ಯ ಬಾಕಿ ಇದೆ’ ಎಂದರು.

‘ಅನುದಾನದ ಕೊರತೆ ಮತ್ತು ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಅಸಹಕಾರದಿಂದಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ. ಮುಂಬರುವ ದಿನಗಳಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಭರವಸೆ ನೀಡುತ್ತೇನೆ.  ಈ ವೇದಿಕೆಯಲ್ಲಿರುವ ಅಧಿಕಾರಿಗಳು ಕೂಡ ಇಲ್ಲಿ ಕೇಳಿ ಬಂದಿರುವ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಬಗೆಹರಿಸಬೇಕು’ ಎಂದು ತಿಳಿಸಿದರು.

ಬೆಳ್ಳಂದೂರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ದೂರವಾಣಿ ಸಂಖ್ಯೆ: ಅರವಿಂದ ಲಿಂಬಾವಳಿ, ಶಾಸಕ –9844108999, ಹರೀಶ್‌ ನಾಯ್ಕ್‌, ತಹಶೀಲ್ದಾರ್‌– 9845923449, ರಾಘವೇಂದ್ರ, ಪೊಲೀಸ್‌ ಇನ್‌ಸ್ಪೆಕ್ಟರ್‌ – 9480801626, ಕೆ.ರವಿಶಂಕರ್‌, ಟ್ರಾಫಿಕ್‌ ಇನ್‌ಸ್ಪೆಕ್ಟರ್‌– 9480801824, ವೆಂಕಟೇಶ್ವರ, ಬೆಸ್ಕಾಂ ಸಹಾಯಕ ಎಂಜಿನಿಯರ್‌ –9449840478, ಮಂಜುನಾಥ್‌, ಬೆಸ್ಕಾಂ ಸಹಾಯಕ ಎಂಜಿನಿಯರ್‌ –9449844826, ಎಂ.ವೆಂಕಟೇಶ್ವರಪ್ಪ, ಬಿಬಿಎಂಪಿ ಕಾರ್ಯನಿವಾಹಕ ಎಂಜಿನಿಯರ್‌ –9480683079, ಕೊದಂಡ ರೆಡ್ಡಿ, ಬಿಬಿಎಂಪಿ ಸಹಾಯಕ ಕಾರ್ಯನಿವಾಹಕ ಎಂಜಿನಿಯರ್‌ –9480685238, ಎಸ್‌.ನವೀನ್‌, ಸಹಾಯಕ ಎಂಜಿನಿಯರ್‌ ಜಲಮಂಡಳಿ –9686566948, ನರಸಿಂಹ ಮೂರ್ತಿ, ಜಲಮಂಡಳಿ ವಾಟರ್‌ ಇನ್‌ಸ್ಪೆಕ್ಟರ್‌ – 9986988338

ಮೊದಲು ಕನ್ನಡ ಕಲಿಯಿರಿ
ಜನಸ್ಪಂದನದಲ್ಲಿ ಅನೇಕ ಅಪಾರ್ಟ್‌ಮೆಂಟ್‌ ನಿವಾಸಿಗಳು ಇಂಗ್ಲಿಷ್‌ನಲ್ಲಿ ಸಮಸ್ಯೆಗಳನ್ನು ಹೇಳಿಕೊಂಡರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯರು ‘ಹತ್ತಾರು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದರೂ ಇವರು ಕನ್ನಡ ಕಲಿತಿಲ್ಲ. ಮೊದಲು ಕನ್ನಡ ಕಲಿಯಲು ಹೇಳಿ, ನಂತರ ಸೌಲಭ್ಯಗಳನ್ನು ಕೇಳಲಿ’ ಎಂದು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯರ ಸಮಸ್ಯೆಗಳೇನು?
ರಸ್ತೆ ಇಲ್ಲ
9 ಅಡಿಯಷ್ಟಿದ್ದ ದೊಡ್ಡಮ್ಮ ದೇವಿ ದೇವಸ್ಥಾನದ ರಸ್ತೆಯನ್ನು 30 ಅಡಿಗೆ ವಿಸ್ತರಣೆ ಮಾಡುವುದಕ್ಕಾಗಿ ಅಗತ್ಯವಿದ್ದ ಜಮೀನು ಬಿಟ್ಟುಕೊಡುವುದಾಗಿ 2 ವರ್ಷದ ಹಿಂದೆ ರಸ್ತೆಯ ಎರಡು ಬದಿಯ ಜಮೀನುಗಳ ಮಾಲೀಕರು ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದರು. ಎಡಭಾಗದಲ್ಲಿದ್ದ ತೆಂಗಿನ ಮರಗಳನ್ನು ಕಡಿದು ಹಾಕಲಾಯಿತು. ಬಲಭಾಗದಲ್ಲಿದ್ದ ಶೆಡ್‌ಗಳನ್ನು ತೆರವುಗೊಳಿಸಲಾಯಿತು. ಈವರೆಗೆ ಅಲ್ಲಿ ಒಳಚರಂಡಿ, ಕುಡಿಯುವ ನೀರು, ರಸ್ತೆ ಯಾವುದೇ ಸೌಕರ್ಯ ಒದಗಿಸಿಲ್ಲ. ಬಲಗಡೆ ಮತ್ತೆ ಶೆಡ್‌ಗಳು ತಲೆ ಎತ್ತುತಿವೆ. ಮಳೆಗಾಲದಲ್ಲಿ ಜನರಿಗೆ ತುಂಬಾ ತೊಂದರೆಯಾಗುತ್ತಿದೆ.
ಹರೀಶ್‌ ಬಾಬು, ಬೆಳ್ಳಂದೂರು

ನುಣಿಚಿಕೊಳ್ಳುವ ಅಧಿಕಾರಿಗಳು
ನಮ್ಮ ಪ್ರದೇಶದಲ್ಲಿ ಒಳಚರಂಡಿ ಸಮಸ್ಯೆ ಇದೆ. ಈ ಕುರಿತು ದೂರು ನೀಡಿದರೆ ಜಲಮಂಡಳಿ ಅಧಿಕಾರಿಗಳು ಅದು ಬಿಬಿಎಂಪಿಗೆ ಸಂಬಂಧಪಡುತ್ತದೆ ಎಂದು ಹೇಳುತ್ತಾರೆ. ಬಿಬಿಎಂಪಿಯವರನ್ನು ಕೇಳಿದರೆ ಜಲಮಂಡಳಿಯತ್ತ ಬೆರಳು ತೋರುತ್ತಾರೆ.    ಇದಕ್ಕೆ ಯಾರು ಹೊಣೆ.
ಎಚ್‌.ಎಲ್‌.ಸೋಮಶೇಖರ್‌, ಅಂಬಲಿಪುರ

ಶೌಚಾಲಯವಾದ ಸಮುದಾಯ ಭವನ
ನಮ್ಮ ಕಾಲೋನಿ­ಯಲ್ಲಿ ಕೆಲ ತಿಂಗಳ ಹಿಂದೆ ₨50 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗಿದೆ. ಅದರ ಕಾರ್ಯ ಅಪೂರ್ಣಗೊಂಡು ಅದು ಬಯಲು ಶೌಚಾಲಯವಾಗಿ ಮಾರ್ಪಟ್ಟು ಜನರಿಗೆ ಉಪಯೋಗವಿಲ್ಲದಂತಾಗಿದೆ.
ವಜ್ರಪ್ಪ, ದೊಡ್ಡಕನ್ನಳ್ಳಿ ಕಾಲೋನಿ

ಕೆರೆ ದುರ್ವಾಸನೆ
ಪುಟ್‌ಪಾತ್‌ಗಳು ಸರಿಯಾಗಿಲ್ಲ. ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಲು ಭಯವಾಗುತ್ತದೆ. ಬೆಳ್ಳಂದೂರು ಕೆರೆಯಂತೂ ದುರ್ವಾಸನೆ ಬೀರುತ್ತದೆ.
ರಶ್ಮಿ, ಬೆಳ್ಳಂದೂರು

ರಾಜಕಾಲುವೆ ಒತ್ತುವರಿ ತೆರವುಗೊಳಿಸಿ
ಬೆಳ್ಳಂದೂರು, ವರ್ತೂರು ಮತ್ತು ಅಂಬಲಿಪುರ ಕೆರೆಗಳು ಸೇರಿದಂತೆ ಈ ಭಾಗದಲ್ಲಿ ಅನೇಕ ಕಡೆಗಳಲ್ಲಿ ರಾಜ ಕಾಲುವೆ ಅತಿಕ್ರಮಣ ಮಾಡಲಾಗಿದೆ. ಕೂಡಲೇ ಒತ್ತುವರಿಯನ್ನು ತೆರವುಗೊಳಿಸಿ.
ವಾಸುದೇವ ರೆಡ್ಡಿ,ಬೆಳ್ಳಂದೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT