ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಠೀರವ ಸ್ಟುಡಿಯೊದಲ್ಲಿ ಅಭಿಮಾನಿಗಳ ಪುಳಕ

ಡಾ.ರಾಜ್‌ ಕುಮಾರ್‌ ಜನ್ಮದಿನಾಚರಣೆ
Last Updated 24 ಏಪ್ರಿಲ್ 2015, 20:11 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕಂಠೀರವ ಸ್ಟುಡಿಯೊ ಆವರಣದಲ್ಲಿ ಇರುವ ಡಾ.ರಾಜ್‌ ಸ್ಮಾರಕದಲ್ಲಿ ಶುಕ್ರವಾರ ನಡೆದ ಡಾ. ರಾಜ್‌ ಕುಮಾರ್‌ ಅವರ 87ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಸಾವಿರಾರು ಅಭಿಮಾನಿಗಳು ಕಣ್ತುಂಬಿಕೊಂಡರು.

ಕಾರ್ಯಕ್ರಮಕ್ಕೆ ಅಭಿಮಾನಿಗಳ ಸಮೂಹವೇ ಹರಿದು ಬಂದಿತ್ತು.  ಸ್ಮಾರಕದ ಹತ್ತಿರದಲ್ಲೇ ನಿಂತು ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಅಸಂಖ್ಯಾತ ಮಂದಿ ಬೆಳಿಗ್ಗೆಯಿಂದಲೇ ಕಾದು ನಿಂತಿದ್ದರು. ಇನ್ನೊಂದೆಡೆ  ರಕ್ತದಾನ ಮಾಡಲು ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಸೇರಿದ್ದರು.

ಮತ್ತೊಂದೆಡೆ, ಕಿಕ್ಕಿರಿದಿದ್ದ ಅಭಿಮಾನಿ­ಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು. ಡಾ.ರಾಜ್‌ ಅವರ ಕುಟುಂಬವರ್ಗದವರು ಹಾಗೂ ಅಭಿಮಾನಿಗಳು ರಾಜ್‌ ಅವರ ಮನೆಯಲ್ಲಿ  ಪೂಜೆ ಸಲ್ಲಿಸಿ ಬಳಿಕ ರಾಜ್‌ ಸ್ಮಾರಕಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ರಾಜ್‌ ಸಮಾಧಿಯನ್ನು ಹೂಗಳಿಂದ ಶೃಂಗರಿಸಲಾಗಿತ್ತು.

ಪತ್ನಿ ಪಾರ್ವತಮ್ಮ ರಾಜ್‌ ಕುಮಾರ್‌, ಪುತ್ರರಾದ ಶಿವರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ ಕುಮಾರ್‌, ಪುನೀತ್‌ ರಾಜ್‌ ಕುಮಾರ್‌, ಮೊಮ್ಮಗ ವಿನಯ್‌ ರಾಜ್‌ ಕುಮಾರ್‌ ಸೇರಿದಂತೆ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು.

ಹುಟ್ಟುಹಬ್ಬದ ಅಂಗವಾಗಿ ಈ ವರ್ಷವೂ ರಕ್ತದಾನ, ಅನ್ನಸಂತರ್ಪಣೆ ಹಾಗೂ ಆರೋಗ್ಯ ತಪಾಸಣೆ ಕಾರ್ಯಕ್ರಮಗಳು ನಡೆದವು.
ರಾಜ್‌ ಗೀತೆಗಳ ಗಾಯನ ನಡೆಯಿತು. ನೂರಾರು ಅಭಿಮಾನಿಗಳು ರಕ್ತದಾನ ಮಾಡಿದರು.

ಹೂಗಳಿಂದ ಅಲಂಕರಿಸಿದ್ದ ರಾಜ್‌ ಸ್ಮಾರಕಕ್ಕೆ ಹೆಲಿಕಾಪ್ಟರ್‌ ಮೂಲಕ ಪುಷ್ಪಾರ್ಚನೆ ಮಾಡಲಾಯಿತು. ರಾಜ್‌ ಪ್ರತಿಮೆಯ ಮುಂಭಾಗದಲ್ಲಿ ಪಾರ್ವತಮ್ಮ ರಾಜ್‌ ಕುಮಾರ್‌ ಬೇವಿನ ಸಸಿ ನೆಟ್ಟರು.

ಅಣ್ಣಾವ್ರ ಅಭಿಮಾನಿ ಬಳಗ ಸೇವಾ ಸಂಸ್ಥೆಯ ವತಿಯಿಂದ ಕುಂಬಳಗೋಡಿನಲ್ಲಿರುವ ಪುನೀತ್‌ ಫಾರಂನಲ್ಲಿ ಡಾ. ರಾಜ್ ಅವರ ತಾಯಿ ಸಮಾಧಿಯಿಂದ ರಥಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಬಳಿಕ ರಾಜ್‌ ಸಮಾಧಿ ಬಳಿ ಗಿಡಗಳನ್ನು ನೆಡಲಾಯಿತು.

ಹುಟ್ಟುಹಬ್ಬದ ಅಂಗವಾಗಿ ಅಂತರರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಮಲ್ಲೇಶ್ವರದ ಸೇವಾಸದನದಲ್ಲಿ ಹಳೆಯ ಕನ್ನಡ ಚಲನಚಿತ್ರ ಗೀತೆಗಳಿಗೆ ಭರತನಾಟ್ಯ ಸಂಯೋಜಿತ ಪ್ರದರ್ಶನ ಏರ್ಪಡಿಸಲಾಗಿತ್ತು.

‘ರಾಜ್‌ ಕಲಾರತ್ನ’
ಬೆಂಗಳೂರು: ರಂಗಭೂಮಿಯಿಂದ ಕಲಾ ಸೇವೆಯನ್ನು ಆರಂಭಿಸಿ ಚಲನಚಿತ್ರ ರಂಗದಲ್ಲಿ ಮನೋಜ್ಞ ಆಭಿನಯದ ಮೂಲಕ ಚಿತ್ರರಸಿಕರ ಮನ ಸೂರೆಗೊಂಡ ಡಾ.ರಾಜ್ ಕುಮಾರ್ ನಾಡು ಕಂಡ ಮಹಾನ್ ಕಲಾರತ್ನ ಎಂದು ಶಾಸಕ ಎಂ.ಸತೀಶ್ ರೆಡ್ಡಿ ಹೇಳಿದರು.

ಬೊಮ್ಮನಹಳ್ಳಿಯಲ್ಲಿ ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಏರ್ಪಡಿಸಿದ್ದ ಡಾ.ರಾಜ್ ಜನ್ಮದಿನದ ಸಂಭ್ರಮ ಉದ್ಘಾಟಿಸಿ ಮಾತನಾಡಿದರು. 

ಅಖಿಲ ಕರ್ನಾಟಕ ರಾಜ್‌ ಕುಮಾರ್‌  ಅಭಿಮಾನಿಗಳ ಸಂಘದ ಅಧ್ಯಕ್ಷ ಬಿ.ಎಲ್.ರಾಜಶೇಖರ್ ಇದ್ದರು. ಬಳಿಕ ಅನ್ನದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT