ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟರ್ ಭದ್ರತೆಗೆ ‘ಝೀಬ್ರಾ’ ತಂತ್ರಾಂಶ

Last Updated 30 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಝೀಬ್ರಾ ತಂತ್ರಜ್ಞಾನದಲ್ಲಿ ಫಿಟ್‌ನೆಸ್‌ ಸಾಧನವನ್ನು ಹೋಲುವ,  ವೇಗೋತ್ಕರ್ಷಮಾಪಕ, ಪರಿಭ್ರಮಣ ದರ್ಶಕ (ಜೈರೋಸ್ಕೋಪಿಕ್) ಹಾಗೂ ರೇಡಿಯೊ ವ್ಯವಸ್ಥೆ ಹೊಂದಿರುವ ವಿಶೇಷ ಬಗೆಯ ಬ್ರಾಸ್ಲೆಟ್‌ ಅನ್ನು ಕಂಪ್ಯೂಟರ್‌ ಬಳಕೆದಾರನು ಮುಂಗೈಯಲ್ಲಿ ಧರಿಸಬೇಕಾಗುತ್ತದೆ. ಬಳಕೆದಾರನು ಕಂಪ್ಯೂಟರ್ ಜೊತೆಗೆ ‘ಸಂವಹನ’ದಲ್ಲಿ ತೊಡಗಿದಾಗ  ವಿಶೇಷ ಬ್ರಾಸ್ಲೆಟ್‌ ಆತನ ಮುಂಗೈ ಚಲನವಲನ ದಾಖಲಿಸಿ, ಸಂಸ್ಕರಿಸಿ  ಕಂಪ್ಯೂಟರಿಗೆ ರವಾನಿಸುತ್ತದೆ.

ಅದೊಂದು ಕಾಲವಿತ್ತು. ಅಪ್ಪ ಮಾಡಿದ ಆಸ್ತಿಯ ಬಹುಭಾಗ ಸ್ವಿಸ್‌ ಬ್ಯಾಂಕ್‌ನಲ್ಲಿ ಭದ್ರವಾಗಿದೆ.  ಆದರೆ, ಕೀಲಿಕೈ ಅರ್ಥಾತ್‌ ಪಾಸ್‌ವರ್ಡ್‌ ಬಹಳ ರಹಸ್ಯವಾಗಿದೆ. ಅಪ್ಪ ಕೊನೆಯುಸಿರೆಳೆಯುವಾಗ ಅವರು ಯಾರಿಗೆ ಪಾಸ್‌ವರ್ಡ್‌ ಹೇಳುತ್ತಾರೋ  ಅವರಿಗೇ ಆ ಸಂಪತ್ತು ಒಲಿಯುತ್ತದೆ.... ಒಂದೊಮ್ಮೆ ಅಪ್ಪ ಪಾಸ್‌ವರ್ಡ್‌ ಹೇಳದೆ ಸತ್ತರೆ?

ಹೀಗೊಂದು ದುಗುಡ, ಆತಂಕ ಕುಟುಂಬ ವರ್ಗದ ಸಮಸ್ಯೆಯಾಗಿರುತ್ತಿತ್ತು. ಪ್ರಮುಖವಾಗಿ ಮಕ್ಕಳದು. ಇದೀಗ ಕಾಲ ಬದಲಾಗಿದೆ, ಪರಿಸ್ಥಿತಿಯೂ ಬದಲಾಗಿದೆ. ಇನ್ನೊಬ್ಬರ  ಪಾಸ್‌ವರ್ಡ್‌ ಅರಿಯುವುದು ಬಿಡಿ. ಸ್ವಂತ ಪಾಸ್‌ವರ್ಡ್‌ಗಳನ್ನು ಯಾರೂ ಹ್ಯಾಕ್‌ (ಕಳವು) ಮಾಡದಿದ್ದರೇ ಸಾಕು ಎಂಬಂಥ ಸ್ಥಿತಿ.

ಅದೇ ಭಯದಲ್ಲಿ ಪದೇ ಪದೇ ಪಾಸ್‌ವರ್ಡ್‌ಗಳನ್ನು ಬದಲಿಸುವ ಗೋಜು. ಬಳಿಕ ಅದನ್ನು ನೆನಪಿಟ್ಟುಕೊಳ್ಳುವ ಗೊಂದಲ. ಇದರ ನಡುವೆ ಊಟದ ಸಮಯದಲ್ಲಿ, ಕಚೇರಿಯಿಂದ ಮನೆಗೆ ಹಿಂದಿರುಗುವ ಆತುರದಲ್ಲಿ  ಕಂಪ್ಯೂಟರ್‌ ಲಾಗ್ಔಟ್‌ ಮಾಡದೇ   ಹೋಗುವುದು ಅಸಹಜವೇನಲ್ಲ.  ಅದೇ ಸಂದೇಹ– ಕೊರಗು ಮರುದಿನ ಕಚೇರಿಗೆ ಬರುವವರೆಗೂ ಇರುತ್ತದೆ! ಒಂದು ವೇಳೆ ಶಿಫ್ಟ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರಂತೂ ಸಮಸ್ಯೆ ಇನ್ನೂ ಗಂಭೀರ. ಏಕೆಂದರೆ ಇದು ‘ಭದ್ರತೆ’ಯ ವಿಷಯ.

ಆದರೆ ಇನ್ನು ಮುಂದೆ ನಿಮ್ಮ ಚಿಂತೆ– ದುಗುಡ ನಿವಾರಿಸುವಂತಹ ತಂತ್ರಾಂಶವೊಂದು ಆವಿಷ್ಕಾರಗೊಂಡಿದೆ.  ಬ್ರಾಸ್ಲೆಟ್‌ ಆಧಾರಿತ ಭದ್ರತಾ ವ್ಯವಸ್ಥೆಯೊಂದು ನೀವು ಕಂಪ್ಯೂಟರ್  ಅನ್ನು ಲಾಗ್‌ಔಟ್‌ ಮಾಡದೇ ಹೋದಾಗ ಇನ್ನೊಬ್ಬರು ಅದನ್ನು ಅನಧಿಕೃತವಾಗಿ ಬಳಸದಂತೆ ತಡೆಯುತ್ತದೆ. ಅದುವೇ ಝೀಬ್ರಾ (ZEBRA –ಝೀರೊ ಎಫರ್ಟ್‌ ಬೈಲ್ಯಾಟ್ರಲ್‌ ರಿಕರಿಂಗ್ ಅಥೆಂಟಿಕೇಷನ್‌) ಎಂಬ ತಂತ್ರಜ್ಞಾನ. ಅಮೆರಿಕದ ಡಾರ್ಟ್‌ಮೌತ್‌ ಕಾಲೇಜಿನ ಸಂಶೋಧಕ ಶಿರಾಂಗ್‌ ಮರೆ ಎಂಬವರು ಇದನ್ನು ಅಭಿವೃದ್ಧಿಪಡಿಸಿದ್ದಾರೆ.
ಸಾಮಾನ್ಯವಾಗಿ ಕಂಪ್ಯೂಟರ್‌ ಬಳಕೆದಾರರನ್ನು ಪ್ರಮಾಣೀಕರಿಸಲು  ಪಾಸ್‌ವರ್ಡ್‌, ಬೆರಳಚ್ಚು ಹೀಗೆ ವಿವಿಧ ಮಾದರಿಗಳನ್ನು ಬಳಸಲಾಗುತ್ತದೆ. ಆದರೆ ಅವು ಕಂಪ್ಯೂಟರ್‌ ಲಾಗ್‌ಆನ್‌ ವೇಳೆ ಮಾತ್ರ ಸಹಕಾರಿ!

ಕೆಲಸ ಮುಗಿಸಿ ಹೋಗುವಾಗ ಲಾಗ್‌ಔಟ್‌ ಮಾಡುವ ಜವಾಬ್ದಾರಿ ಬಳಕೆದಾರರ ಮೇಲಿರುತ್ತದೆ. ಆದರೆ ಬಹುತೇಕ   ಬಳಕೆದಾರರು ಕಂಪ್ಯೂಟರ್‌ ಲಾಗ್‌ಔಟ್‌ ಮಾಡದೇ ತೆರಳುವುದು ಭದ್ರತೆಗೆ ಆತಂಕವೇ ಸರಿ ಎನ್ನುತ್ತಾರೆ  ತಂತ್ರಜ್ಞರು. ಕಂಪ್ಯೂಟರ್‌ ಭದ್ರತೆಯನ್ನು ಬಲಪಡಿಸುವಲ್ಲಿ ಝಿಬ್ರಾ ಉಪಯೋಗಕಾರಿ ಎಂಬುದು ಅವರ ವಿವರಣೆ.

ಝೀಬ್ರಾ ತಂತ್ರಜ್ಞಾನದಲ್ಲಿ ಫಿಟ್‌ನೆಸ್‌ ಸಾಧನವನ್ನು ಹೋಲುವ,  ವೇಗೋತ್ಕರ್ಷಮಾಪಕ, ಪರಿಭ್ರಮಣ ದರ್ಶಕ (ಜೈರೋಸ್ಕೋಪಿಕ್) ಹಾಗೂ ರೇಡಿಯೊ ವ್ಯವಸ್ಥೆ ಹೊಂದಿರುವ ವಿಶೇಷ ಬಗೆಯ ಬ್ರಾಸ್ಲೆಟ್‌ ಅನ್ನು ಕಂಪ್ಯೂಟರ್‌ ಬಳಕೆದಾರನು ಮುಂಗೈಯಲ್ಲಿ ಧರಿಸಬೇಕಾಗುತ್ತದೆ.

ಬಳಕೆದಾರನು ಕಂಪ್ಯೂಟರ್ ಜೊತೆಗೆ ‘ಸಂವಹನ’ದಲ್ಲಿ ತೊಡಗಿದಾಗ  ವಿಶೇಷ ಬ್ರಾಸ್ಲೆಟ್‌ ಆತನ ಮುಂಗೈ ಚಲನವಲನ ದಾಖಲಿಸಿ, ಸಂಸ್ಕರಿಸಿ  ಕಂಪ್ಯೂಟರಿಗೆ ರವಾನಿಸುತ್ತದೆ. ಹೀಗೆ ಬ್ರಾಸ್ಲೆಟ್‌ನಿಂದ ಬರುವ ಸಂಜ್ಞೆಯನ್ನು ಕೀಬೋರ್ಡ್‌ ಹಾಗೂ ಮೌಸ್‌ ಮೂಲಕ ಬಳಕೆದಾರ ಈ ಮೊದಲೇ ದಾಖಲಿಸಿದಂಥ ಸಂಜ್ಞೆಯೊಂದಿಗೆ ಕಂಪ್ಯೂಟರ್ ಹೋಲಿಸಿ ನೋಡುತ್ತದೆ. ಹೋಲಿಕೆ ಸರಿಯಾದರೆ ಮಾತ್ರವೇ  ಬಳಕೆದಾರನಿಗೆ ಮುಂದುವರಿಯುವ ಅವಕಾಶ. ಇಲ್ಲವಾದರೆ ಇಲ್ಲ.

ಅಲ್ಲದೇ ಒಂದು ವೇಳೆ, ನಿರ್ದಿಷ್ಟ ಬಳಕೆದಾರ ಕಂಪ್ಯೂಟರನ್ನು ಬಿಟ್ಟು ತೆರಳಿದ್ದು,  ಆತನ ಸ್ಥಾನದಲ್ಲಿ ಬೇರೊಬ್ಬ ವ್ಯಕ್ತಿ ಬಳಕೆಗೆ ಮುಂದಾದರೆ  ಒಂದು ನಿಮಿಷದೊಳಗೆ ಝೀಬ್ರಾ ಅದನ್ನು ಗ್ರಹಿಸಬಲ್ಲದು ಎನ್ನುತ್ತಾರೆ ತಜ್ಞರು. ಅಲ್ಲದೇ ಪರೀಕ್ಷಾರ್ಥ ಪ್ರಯೋಗದಲ್ಲಿ ಸರಿಯಾದ ಬಳಕೆದಾರರನ್ನು ಗುರುತಿಸುವಲ್ಲಿ ಝೀಬ್ರಾ ಶೇಕಡ 85 ರಷ್ಟು ನಿಖರವೆಂದು ಸಾಬೀತಾಗಿದೆ. ಜೊತೆಗೆ ಎಲ್ಲಾ ತೊಡಕುಗಳನ್ನು ಕೇವಲ 11 ಸೆಕೆಂಡ್‌ಗಳಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ  ಎಂಬುದು ಅವರ ವಿವರಣೆ.

ಮತ್ತೊಂದೆಡೆ ಬಳಕೆದಾರರ ಸಾಮೀಪ್ಯ  ಆಧರಿಸಿದ, ಕೀಲಿಮಣೆ ಬಳಕೆಯ ಶೈಲಿ, ಬಯೊಮೆಟ್ರಿಕ್ಸ್‌   ಆಧರಿಸಿದ ಹಲವು ಭದ್ರತಾ ಮಾದರಿಗಳಿವೆ. ಆದರೆ ಅವುಗಳಿಂತಲೂ ಝಿಬ್ರಾ ತಂತ್ರಜ್ಞಾನ ಕಂಪ್ಯೂಟರ್‌ಗಳಿಗೆ ಉತ್ತಮ ಭದ್ರತೆ ಒದಗಿಸಬಲ್ಲದು ಎಂದು ಪ್ರತಿಪಾದಿಸುವ ಸಂಶೋಧಕರು, ‘ಇದೀಗ ಡೆಸ್ಕ್‌ಟಾಪ್‌ ಕಂಪ್ಯೂಟರ್‌ಗಳ ಮೇಲೆ ಮಾತ್ರವೇ ಗಮನ ಹರಿಸಿದ್ದೇವೆ. ಮುಂದೆ  ಈ ತಂತ್ರಜ್ಞಾನವನ್ನು ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಹಾಗೂ ಮೊಬೈಲ್‌ಗಳಿಗೆ ವಿಸ್ತರಿಸುವ ಯೋಚನೆಯಿದೆ’ ಎನ್ನುತ್ತಾರೆ.

ಅದಾಗ್ಯೂ ಝೀಬ್ರಾ ಮಾದರಿ  ಪ್ರಾಥಮಿಕ ಭದ್ರತಾ ವ್ಯವಸ್ಥೆಯಲ್ಲ. ಇಲ್ಲಿ ಎಂದಿನಂತೆ ಯೂಸರ್‌ ಹಾಗೂ ಪಾಸ್‌ವರ್ಡ್‌ ಬಳಕೆಯಾಗುತ್ತದೆ. ಅಂದರೆ ಒಬ್ಬ ವ್ಯಕ್ತಿ ಎಂದಿನಂತೆ ಲಾಗಿನ್ ಆದ ನಂತರ ಬೇರೊಬ್ಬರು ಆತನ ಕಂಪ್ಯೂಟರ್ ಬಳಕೆಗೆ ಮುಂದಾದಾಗ ಬ್ರಾಸ್ಲೆಟ್‌ ಮೂಲಕ ಸಿಗುವ ಸಂಜ್ಞೆ ಆಧರಿಸಿ ಝಿಬ್ರಾ ಆತ ಅಧಿಕೃತ ಬಳಕೆದಾರನೋ ಅಲ್ಲವೋ ಎಂಬುದನ್ನು  ಪತ್ತೆ ಮಾಡಿ ಹೆಚ್ಚಿನ ಅನಾಹುತ ತಡೆಯಬಹುದಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT