ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬದ ಮೇಲೊಂದು ನಿಲುಗಡೆ ತಾಣ ಮಾಡಿ!

ನಗರದ ಎಂಜಿನಿಯರ್‌ ರೂಪಿಸಿದ ನೂತನ ಪಾರ್ಕಿಂಗ್‌ ತಂತ್ರಜ್ಞಾನ
Last Updated 3 ಮಾರ್ಚ್ 2015, 19:33 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ದಿನೇ ದಿನೇ ದ್ವಿಚಕ್ರ ವಾಹನಗಳ ಸಂಖ್ಯೆ ಏರುತ್ತ ವಾಹನ ನಿಲುಗಡೆ ಸಮಸ್ಯೆ ಹೆಚ್ಚುತ್ತ ತೀವ್ರ ಸ್ವರೂಪ ಪಡೆಯು­ತ್ತಿರುವ ಹೊತ್ತಿನಲ್ಲಿಯೇ ನಗರ ಮೂಲದ ಎಂಜಿನಿಯರೊಬ್ಬರು ರೂಪಿಸಿದ ನೂತನ ಪಾರ್ಕಿಂಗ್‌ ತಂತ್ರಜ್ಞಾನವನ್ನು ಅಳವಡಿಸಿ­ಕೊಳ್ಳಲು ಮಾಲ್ಡೀವ್ಸ್ ಸರ್ಕಾರ ಒಪ್ಪಿಗೆ ನೀಡಿದೆ.

1950 ದ್ವಿಚಕ್ರ ವಾಹನ ಮತ್ತು 490 ಕಾರುಗಳಿಗೆ ನಿಲುಗಡೆ ಮಾಡುವ ಪಾರ್ಕಿಂಗ್‌ ತಂತ್ರಜ್ಞಾನಗಳನ್ನು ಪ್ರತ್ಯೇಕವಾಗಿ ರೂಪಿಸುವಂತೆ ಮಾಲ್ಡೀವ್ಸ್‌ನ ಮಾಲೆ ಸಿಟಿ ಕೌನ್ಸಿಲ್‌ ನಗರದ ಎಂಜಿನಿಯರ್‌ ಎಚ್.ರಾಜಸಿಂಹ ಅವರಿಗೆ ಬೇಡಿಕೆ ಇಟ್ಟಿತ್ತು. ನಿಗದಿತ ಪ್ರಮಾಣದ ಸ್ಥಳದಲ್ಲಿ  ಗರಿಷ್ಠ ಸಂಖ್ಯೆಯ ವಾಹನಗಳನ್ನು ನಿಲ್ಲಿಸುವಂತಹ ನಿಲ್ದಾಣವನ್ನು ರೂಪಿಸುವುದು ಆ ಬೇಡಿಕೆಯ ಪ್ರಮುಖ ಅಂಶವಾಗಿತ್ತು.
ಅದನ್ನು ಸವಾಲಾಗಿ ಸ್ವೀಕರಿಸಿದ ರಾಜಸಿಂಹ ಅವರು ತಮ್ಮದೇ ಆದ ಕಲ್ಪನೆಯ ಮೂಸೆಯಲ್ಲಿ ವಿನ್ಯಾಸಗೊಳಿಸಿದ ಪಾರ್ಕಿಂಗ್‌ ಸಂಕೀರ್ಣದ ನೀಲನಕ್ಷೆ ಮಾಲ್ಡೀವ್ಸ್‌ ಸರ್ಕಾರದ ಮನಗೆದ್ದಿದೆ.

ಕೇವಲ 10x15 ಚದರಡಿ  ಪ್ರದೇಶದಲ್ಲಿ   80 ಅಡಿ ಎತ್ತರದ ಕಂಬಗಳ ಮೇಲೆ ನಿರ್ಮಾಣ­ವಾಗುವ ಈ ಪಾರ್ಕಿಂಗ್‌ ಸಂಕೀರ್ಣದಲ್ಲಿ ಕನಿಷ್ಠ 80 ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಹುದಾಗಿದೆ. ‘ರಸ್ತೆ ಮೇಲಿನ ಕೇವಲ ಐದಡಿ ಜಾಗ ಕಬಳಿಸುವ ಈ ಕಂಬದ ಮೇಲಿನ ನಿಲುಗಡೆ ತಾಣ­ವನ್ನು ಮಹಾತ್ಮಾ ಗಾಂಧಿ ರಸ್ತೆಯಂತಹ ಪ್ರದೇಶ­ಗಳಲ್ಲಿ ಕೂಡ ಯಾವುದೇ ಪ್ರತ್ಯೇಕ ಜಾಗದ ಅವಶ್ಯಕತೆ ಇಲ್ಲದೇ ಸುಲಭವಾಗಿ ನಿರ್ಮಿಸ­ಬಹುದು’ ಎನ್ನುತ್ತಾರೆ ರಾಜಸಿಂಹ.

‘ಮೆಟ್ರೊ ನಿಲ್ದಾಣ ಸಮೀಪದಲ್ಲಿ ಲಭ್ಯ­ವಾಗುವ ಸ್ಥಳದಲ್ಲಿ ಈ ಮಾದರಿ ಸಂಕೀರ್ಣವನ್ನು ಸುಲಭವಾಗಿ ನಿರ್ಮಿಸಬಹುದು. ರಸ್ತೆಯಲ್ಲಿ ಕಂಬ ನೆಟ್ಟರೂ ಪಾದಚಾರಿಗಳು ನಿಲ್ದಾಣದ ಕೆಳಗೆ ಯಾವುದೇ ತೊಂದರೆ ಇಲ್ಲದೆ ನಡೆ­ದಾಡಬಹುದು. ಈ ವಿನ್ಯಾಸಕ್ಕಾಗಿ ನಾನು ಪೇಟೆಂಟ್ ಪಡೆದಿರುವೆ’ ಎಂದು ತಿಳಿಸಿದರು.

ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆ: ಈ ಹೊಸ ವಿನ್ಯಾಸದ ಪಾರ್ಕಿಂಗ್‌ ಸಂಕೀರ್ಣದಲ್ಲಿನ ವ್ಯವಸ್ಥೆಯು ಈಗಾಗಲೇ ಮಾಲ್‌ಗಳಲ್ಲಿ ಪ್ರಚ­ಲಿತ­ದಲ್ಲಿರುವ ನಾಲ್ಕು ಚಕ್ರಗಳ ವಾಹನಗಳ ಸ್ವಯಂಚಾಲಿತ ಪಾರ್ಕಿಂಗ್‌ ವ್ಯವಸ್ಥೆಯನ್ನು ಹೊಲುತ್ತದೆ. ಈ ಸಂಕೀರ್ಣದಲ್ಲಿ ದ್ವಿಚಕ್ರ ವಾಹ­ನ­ವನ್ನು ನಿಲುಗಡೆ ಮಾಡಲು ಬಯಸುವವರು ಮೊದಲು ನಿಲ್ದಾಣದಲ್ಲಿರುವ ವಿದ್ಯುನ್ಮಾನ ಯಂತ್ರದಲ್ಲಿ ಟೋಕನ್‌ ಪಡೆದು, ನಿಲ್ದಾಣದ ನಿಗದಿತ ಜಾಗ­ದಲ್ಲಿ ವಾಹನ ನಿಲ್ಲಿಸಬೇಕು. ಆಗ ವಿಶೇಷ ತಂತ್ರಾಂಶ­ದಿಂದ ಕಾರ್ಯನಿರ್ವಹಿಸುವ ಯಂತ್ರ ವಾಹನವನ್ನು ಮೇಲೆತ್ತಿ ಸಂಕೀರ್ಣ­ದಲ್ಲಿ ಖಾಲಿ ಇರುವ ಸ್ಥಳದಲ್ಲಿ ನಿಲ್ಲಿಸುತ್ತದೆ.

ತಮ್ಮ ವಾಹನವನ್ನು ಪಡೆಯಲು ಇಚ್ಛಿಸುವ ಬಳಕೆದಾರ ಈ ಮೊದಲು ಪಡೆದ ಟೋಕನನ್ನು ವಿದ್ಯುನ್ಮಾನ ಯಂತ್ರದಲ್ಲಿ ಹಾಕಿದರೆ ಸಾಕು. ಕೂಡಲೇ ಆತನ ವಾಹನ ಸಂಕೀರ್ಣದಿಂದ ನೆಲದ ಮೇಲೆ ಇಳಿಯುತ್ತದೆ. ‘ಸಂಪೂರ್ಣವಾಗಿ ಸ್ವಯಂಚಾಲಿತವಾದ ಈ ವ್ಯವಸ್ಥೆ  ಸ್ವಲ್ಪ ದುಬಾರಿ ಎನಿಸುತ್ತದೆ.

ದ್ವಿಚಕ್ರ­ವಾಹನಗಳ ಪಾರ್ಕಿಂಗ್‌ ಸಂಕೀರ್ಣವೊಂದನ್ನು ನಿರ್ಮಿಸಲು ಸುಮಾರು ₹ 2 ಕೋಟಿ ತಗಲು­ತ್ತದೆ. ಆದರೆ, ಈ ಬಂಡವಾಳವನ್ನು ಜಾಹೀರಾತುಗಳ ಆದಾಯದಿಂದ ಹಿಂಪಡೆಯಬಹುದು’ ಎಂದು ರಾಜಸಿಂಹ ಹೇಳುತ್ತಾರೆ. ‘ಸ್ವಯಂ ಪ್ರೇರಣೆಯಿಂದ ಮುಂದೆ ಬರುವ ಬಂಡವಾಳದಾರರಿಗೆ ಅಥವಾ ಸರ್ಕಾರ ಮನಸು ಮಾಡಿದರೆ ಇದು ಪಾರ್ಕಿಂಗ್‌ ಸಮಸ್ಯೆ ಬಗೆ­ಹರಿಸುವ ದಿಕ್ಕಿನಲ್ಲಿ ಅನುಕೂಲಕರವಾದ ಆಯ್ಕೆ­ಯಾಗಲಿದೆ’ ಎನ್ನುವುದು ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT