ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲಚಿಪ್ಪಿನಲ್ಲಿ ಕೊರಳ ಮಾಲೆ

ಹವ್ಯಾಸದ ಹಾದಿ
Last Updated 30 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

‘ಪ್ರತಿ ಬಾರಿ ಸಮುದ್ರ ತೀರಕ್ಕೆ ಹೋದಾಗಲೂ ಮರಳು ಹಾಗೂ ಕಪ್ಪೆಚಿಪ್ಪುಗಳಿಂದ ನನ್ನ ಜೇಬನ್ನು ತುಂಬಿಸಿಕೊಳ್ಳದೆ ಮನೆಗೆ ಹಿಂದಿರುಗುತ್ತಿರಲಿಲ್ಲ. ಸಾಮಾನ್ಯ ಚಿಪ್ಪುಗಳು ಎಲ್ಲಾ ಕಡೆ ಸಿಗುತ್ತವೆ. ಆದರೆ ಕೆಲವು ಕಡೆ ಅಪರೂಪದ ವಿಲಕ್ಷಣ ಚಿಪ್ಪುಗಳು ಮರಳಿನೊಳಗೆ ಕಂಡೂ ಕಾಣದಂತೆ ಹೂತಿರುತ್ತವೆ ಮತ್ತು ಅವುಗಳನ್ನು ಎತ್ತಿಕೊಳ್ಳಲಿ ಎಂದು ಕಾಯುತ್ತಿರುತ್ತವೆ.

ಚಿಪ್ಪಿನೊಳಗಿನ ಮುತ್ತನ್ನು ಬೇರ್ಪಡಿಸಿದ ನಂತರ ಚಿಪ್ಪುಗಳನ್ನು ಅಲ್ಲೇ ಎಸೆದು ಹೋಗುತ್ತಾರೆ ಮತ್ತು ಮುತ್ತಿನಂತಹ ಅಮೂಲ್ಯ ರತ್ನಕ್ಕೆ ಚಿಪ್ಪೇ ರಕ್ಷಣೆಯಾಗಿತ್ತು ಎಂಬುದನ್ನು  ಜನ ಮರೆತುಬಿಡುತ್ತಾರೆ’- ಇದು ಕಪ್ಪೆಚಿಪ್ಪುಗಳ ಮೂಲಕ ಆಭರಣ ತಯಾರಿಸುವ ಅಮೃತಾ ಗಿರಿರಾಜ್ ಅವರ ಮಾತು. 

ಅಮೃತಾ ಗಿರಿರಾಜ್‌ ವೃತ್ತಿಯಲ್ಲಿ ಬಟ್ಟೆ ವಿನ್ಯಾಸಕಿ.  ಕಪ್ಪೆಚಿಪ್ಪುಗಳ ಮೂಲಕ ವಿವಿಧ ಆಭರಣಗಳನ್ನು ತಯಾರಿಸತೊಡಗಿದರು. ಚಿಪ್ಪುಗಳಿಗೂ ಮಹತ್ವವಿದೆ, ಅವುಗಳಿಗೆ ಸರಿಯಾದ ಬೆಲೆ ನೀಡಬೇಕು ಹಾಗೂ ಅವುಗಳಿಂದ ಸುಂದರವಾದ ಅಲಂಕಾರಿಕ ವಸ್ತುಗಳನ್ನು ತಯಾರಿಸಬಹುದು  ಎಂಬ ಆಲೋಚನೆಯ ಫಲಶ್ರುತಿ ಇದು.

‘ಸೃಷ್ಟಿ ಸ್ಕೂಲ್ ಆಫ್ ಆರ್ಟ್‌ ಡಿಸೈನ್ ಅಂಡ್‌ ಟೆಕ್ನಾಲಜಿಯಲ್ಲಿ  ಇಂಪ್ಯಾಕ್ಟ್‌ ಏಜ್ಡ್‌ ಎಂಬ ಪ್ರಾಜೆಕ್ಟ್‌ ಇತ್ತು. ಆ ಮೂಲಕ ನಾವು ಭಾರತದ ವಿವಿಧ ರಾಜ್ಯಗಳಿಗೆ ಭೇಟಿ ನೀಡಬೇಕಿತ್ತು. ಒಮ್ಮೆ ನಾನು ಕನ್ಯಾಕುಮಾರಿಗೆ ಹೋದಾಗ ಕಪ್ಪೆಚಿಪ್ಪುಗಳಿಂದ ತಯಾರಾಗುವ ಕಲಾಕೃತಿಗಳಿಗೆ ಹೆಚ್ಚಿನ ಪ್ರಾಮುಖ್ಯ ಸಿಗುತ್ತಿಲ್ಲ ಎನ್ನುವುದು ತಿಳಿಯಿತು. ಕಪ್ಪೆಚಿಪ್ಪುಗಳಿಂದ ಕಲಾಕೃತಿ ಹಾಗೂ ಆಭರಣಗಳನ್ನು ತಯಾರಿಸಲು ಅಲ್ಲಿನ ಕಲಾವಿದರು ಪ್ರಯತ್ನಿಸಿದರೂ ಅವರಿಗೆ ಅದರಿಂದ ಯಾವುದೇ ಲಾಭ ಸಿಗುತ್ತಿಲ್ಲವಂದು ಮನದಟ್ಟಾಯಿತು. 

ಸಮುದ್ರದ ತಟದಲ್ಲಿ ಸಿಗುವ ಚಿಪ್ಪುಗಳಿಂದ ನಾನು ಏನಾದರೂ ಮಾಡಬೇಕು, ಅಲ್ಲಿನ ಮೀನುಗಾರಿಗೆ ಏನಾದರೂ ಸಹಾಯ ಮಾಡಬೇಕು ಎಂದು ಯೋಚಿಸಿದೆ. ಅಲ್ಲಿನವರು ಚಿಪ್ಪುಗಳಿಂದ ಆಭರಣಗಳನ್ನು ತಯಾರಿಸಲು ಆರಂಭಿಸಿದರು. ಅದಕ್ಕೆ ಪ್ರತಿಯಾಗಿ ಆಕೆ ಮೀನುಗಾರಿಗೆ ಹಣವನ್ನು ಕೊಡುತ್ತಿದ್ದರು.

ಸಮುದ್ರದಿಂದ ಚಿಪ್ಪುಗಳನ್ನು ಸಂಗ್ರಹಿಸುವಾಗ ಪರಿಸರಕ್ಕೆ ಯಾವುದೇ ರೀತಿಯ ಹಾನಿ ಯಾಗಿಲ್ಲ ಎನ್ನುವುದನ್ನು ಎಲ್ಲರೂ ಸ್ಪಷ್ಟಪಡಿಸಿಕೊಳ್ಳುತ್ತಾರೆ. ಮೊದಲು ಮೀನುಗಾರರು ಕಪ್ಪೆ ಚಿಪ್ಪುಗಳನ್ನು ತಂದು ಅದನ್ನು ಆ್ಯಸಿಡ್‌ ನಲ್ಲಿ ತೊಳೆದು ಅದರ ಮೂಲ ಹೊಳಪು ಕುಂದುವಂತೆ ಮಾಡುತ್ತಿದ್ದರು . ಆದರೆ ನಾನು ಈಗ ನದಿ ತಟದಲ್ಲಿ ಸಿಗುವ ಚಿಪ್ಪುಗಳನ್ನೇ ಯಥಾವತ್ತಾಗಿ ಆರಿಸಿ ತರುತ್ತೇನೆ’ ಎನ್ನುತ್ತಾರೆ ಅಮೃತಾ.

ವೃತ್ತಿಯಲ್ಲಿ ವಿನ್ಯಾಸಕಿ ಯಾಗಿರುವ ಅಮೃತಾ ಹವ್ಯಾಸ ಕ್ಕಾಗಿ ಕಡಲ ಚಿಪ್ಪುಗಳಿಂದ ನೆಕ್ಲೇಸ್, ಕಿವಿಯೋಲೆ, ಉಂಗುರದಂತಹ ಹಲವು ಬಗೆಯ ಒಡವೆಗಳನ್ನು ತಯಾರಿಸಿದ್ದಾರೆ. ಇವರ ಕೈಯಲ್ಲಿ ಅರಳಿದ ಕಪ್ಪೆಚಿಪ್ಪಿನ ಕಲಾಕೃತಿಗಳು ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಪ್ರದರ್ಶನಗೊಂಡಿವೆ. ‘ಬಟ್ಟೆ ವಿನ್ಯಾಸದ ಮೇಲೆ ನನಗೆ ಒಲವು ಜಾಸ್ತಿ. ಆ ಕಾರಣಕ್ಕಾಗಿ ನಾನು ಸಿಲ್ಕ್‌ ರೂಟ್ ಎಂಬ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದೆ.

ನಂತರ ಸಾಮಾಜಿಕ ಕಾಳಜಿ ಮೂಡಿ ಮೀನುಗಾರೊಂದಿಗೆ ಸೇರಿ ಕಪ್ಪೆಚಿಪ್ಪುಗಳನ್ನು ಸಂಗ್ರಹಿಸಿದೆ. ಮೊದಲು ಬಿಳಿ ಬಣ್ಣದ ಚಿಪ್ಪಿನಲ್ಲಿ ಮಾತ್ರ ಆಭರಣ ತಯಾರಿಸುತ್ತಿದ್ದ ನಾನು ನಂತರದ ದಿನಗಳಲ್ಲಿ ಬೇರೆ ಬೇರೆ ಚಿಪ್ಪಿಗೆ ಆಕ್ರಿಲಿಕ್ ಬಣ್ಣದ ಬಳಿದು ಅದರಿಂದ  ಆಭರಣಗಳನ್ನು ತಯಾರಿಸುತ್ತಿದ್ದೆ.  ಚಿಪ್ಪುಗಳು ನೈಸರ್ಗಿಕ ಸಂಪತ್ತು ಮತ್ತು ಕಪ್ಪೆಚಿಪ್ಪುಗಳು ನಾನು ಉತ್ಪಾದಿಸುವ ವಸ್ತುಗಳಿಗೆ ಹೀರೋಗಳು’ ಎಂದು ಸಂತಸದಿಂದ ನುಡಿಯುತ್ತಾರೆ ಅಮೃತಾ.

‘ನನ್ನ ಆರಂಭದ ದಿನಗಳಲ್ಲಿ ಅಲ್ಲಿನ ಸ್ಥಳೀಯ ಕಲಾವಿದರಿಂದ ಕೆಲ ತಂತ್ರಗಳನ್ನು ಕಲಿತುಕೊಂಡೆ. ನಂತರದ ದಿನಗಳಲ್ಲಿ ನಾನೇ ನನಗೆ ತೋಚಿದ ವಿನ್ಯಾಸಗಳನ್ನು ಹಾಗೂ ತಂತ್ರಗಳನ್ನು ಉಪಯೋಗಿಸಿ ಆಭರಣಗಳನ್ನು ತಯಾರಿಸಲು ಆರಂಭಿಸಿದೆ’ ಎಂದು ತಮ್ಮ ಕಲಿಕಾ ಹಂತವನ್ನು ವಿವರಿಸುತ್ತಾರೆ ಅಮೃತಾ. ಧರಿಸಲು ಯೋಗ್ಯವಾದ ಚಿಕ್ಕ ಚಿಕ್ಕ ಚಿಪ್ಪುಗಳಿಂದಲೇ ಹೆಚ್ಚಾಗಿ ಅಮೃತಾ ಆಭರಣಗಳನ್ನು ತಯಾರಿಸುತ್ತಾರೆ. ಅವರು ತಯಾರಿಸುವ ಆಭರಣಗಳಿಗೆ ಹೆಚ್ಚಾಗಿ ಚೆನ್ನೈನಿಂದ ಚಿಪ್ಪುಗಳು ಬರುತ್ತವೆಯಂತೆ.

‘ನಾನು ಮರೀನಾ ಬೀಚ್, ಬೆಸೆಂಟ್ ನಗರದ ಬೀಚ್‌ಗಳಿಂದ ಚಿಪ್ಪುಗಳನ್ನು ತರುತ್ತಿದ್ದೆ. ಅಲ್ಲಿನ ಚಿಪ್ಪುಗಳಿಗೆ ಕೆಲವೊಮ್ಮ ತುಂಬಾ ಹಣ ಎನಿಸಿದರೆ, ಕೋವಲಂ ಬೀಚ್‌ನಿಂದ ಚಿಪ್ಪುಗಳನ್ನು ತರಿಸಿಕೊಳ್ಳುತ್ತಿದ್ದೆ’ ಎನ್ನುತ್ತಾರೆ ಅಮೃತಾ. ನಿಮ್ಮ ಈ ಹವ್ಯಾಸಕ್ಕೆ ಸ್ಫೂರ್ತಿ ಏನು ಎಂದು ಕೇಳಿದರೆ, ‘ಎಲ್ಲಾ ಕಡೆಗಳಲ್ಲೂ ಸ್ಫೂರ್ತಿ ಇರುತ್ತದೆ. ಮೋಡ, ಎಲೆಗಳು, ಬೆಣಚುಕಲ್ಲು ಎಲ್ಲದರಲ್ಲೂ ವಿನ್ಯಾಸ ಮಾಡಲು ಇಷ್ಟಪಡುತ್ತೇನೆ.  ನಮ್ಮ ಸುತ್ತಮುತ್ತಲಿನ ಪ್ರಕೃತಿಯಲ್ಲಿ ಸಿಗುವ ವಸ್ತುಗಳಿಂದಲೇ ಹೆಚ್ಚಾಗಿ ಕಲಾಕೃತಿಗಳನ್ನು ರಚಿಸಲು ಇಷ್ಟಪಡುತ್ತೇನೆ’ ಎನ್ನುವುದು ಅಮೃತಾ ಮನದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT