ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡ್ಲೆಗುದ್ದು:ಹೊಲದಲ್ಲಿ ಶಾಸನಪತ್ತೆ

ಸಂಶೋಧಕ ಡಾ.ಬಿ.ರಾಜಶೇಖರಪ್ಪ ವಿವರಣೆ
Last Updated 3 ಜೂನ್ 2015, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕಿನ ಹಿರೇಗುಂಟನೂರು ಹೋಬಳಿ ವ್ಯಾಪ್ತಿಯ ಕಡ್ಲೆಗುದ್ದು ಗ್ರಾಮದಲ್ಲಿ ಇತ್ತೀಚೆಗೆ 14ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಆರಂಭದ ಕಾಲಕ್ಕೆ ಸೇರಿದ ನಡುಗನ್ನಡದ ಶಿಲಾಶಾಸನ ಪತ್ತೆಯಾಗಿದೆ.

ಹುಚ್ಚಪ್ಪಳ ಬಸವರಾಜಪ್ಪ ಎಂಬುವವರ ಹೊಲದಲ್ಲಿ ಕಳೆದ ವರ್ಷ, ಉಳುವ ಸಂದರ್ಭದಲ್ಲಿ ಈ ಶಾಸನ ಪತ್ತೆಯಾಗಿತ್ತು. ಚಿತ್ರದುರ್ಗದ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅವರು ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿದ್ದಾಗ ಗ್ರಾಮಸ್ಥರು ಈ ಶಾಸನ ತೋರಿಸಿದ್ದರು.
ಕಲ್ಲಿನ ಮೇಲಿದ್ದ ಅಕ್ಷರಗಳನ್ನು ಓದಿದ ಡಾ.ರಾಜಶೇಖರಪ್ಪ, ಇದು 14ನೇ ಶತಮಾನದ, ವಿಜಯನಗರ ಕಾಲದ ನಡುಗನ್ನಡ ಶಾಸನ ಎಂಬುದನ್ನು ಖಚಿತಪಡಿಸಿದ್ದಾರೆ.

ಶಾಸನದಲ್ಲಿರುವ ಮಾಹಿತಿ: ಈ ಶಾಸನ ಕ್ರಿ.ಶ.1355ರ ಕಾಲದ್ದು. ವಿಜಯನಗರದ 1ನೇ ಬುಕ್ಕರಾಯನ ಕಾಲದಲ್ಲಿ, ಆತನ ಸಂಬಂಧಿ ಚಿಮತುರಕಲ್ಲು (ಚಿತ್ರದುರ್ಗ) ನಾಡಿನ ಪ್ರಾಂತಾಧಿಪತಿ ಮಲ್ಲಿನಾಥ ಒಡೆಯ, ಕಲ್ಲಗವುಡನ ಮಗ ಸಿರುಪಗವುಡ ಎಂಬುವನಿಗೆ ಕಡಲೆಯಗುದ್ದು ಗ್ರಾಮವನ್ನು ಕೊಡುಗೆಯಾಗಿ ಕೊಟ್ಟಿದ್ದಾನೆ. ಆ ಗ್ರಾಮದ ಭೂಮಿಯಿಂದ ಬರುವ ಆದಾಯವನ್ನು (ತೆರಿಗೆ) ಬಿಟ್ಟಿದ್ದು, ಅದನ್ನು ಅವರು ಆಚಂದ್ರಾರ್ಕವಾಗಿ ಅನುಭವಿಸುವಂತೆ ದೊರೆ ಮಲ್ಲಿನಾಥ ಒಡೆಯ ಈ ಶಾಸನದಲ್ಲಿ ತಿಳಿಸಿದ್ದಾನೆ.

ಕಡ್ಲೆಗುದ್ದು ಊರು ಮತ್ತು ಹೆಸರು ತುಂಬ ಪ್ರಾಚೀನ ಎಂಬುದಕ್ಕೆ ಆ ಶಾಸನ ಸಾಕ್ಷಿಯಾಗಿದೆ ಎಂದು ರಾಜಶೇಖರಪ್ಪ ಶಾಸನದಲ್ಲಿರುವ ಮಾಹಿತಿಯನ್ನು ‘ಪತ್ರಿಕೆ’ಗೆ ವಿವರಿಸಿದ್ದಾರೆ.

ಈ ಹೊಸ ಶಾಸನದ ಜೊತೆಗೆ ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಹಳೆಯದೊಂದು ಶಿಲಾ ಶಾಸನವಿದೆ.   ಜೊತೆಗೆ, ಗ್ರಾಮದಲ್ಲಿ ಇತ್ತೀಚೆಗೆ ತಾಮ್ರಶಾಸನವೂ ಲಭ್ಯವಾಗಿದೆ. ಅವರೆಡರಲ್ಲಿರುವ ಮಾಹಿತಿ ಪ್ರಕಾರ, ಚಿತ್ರದುರ್ಗದ ದೊರೆ ಇಮ್ಮಡಿ ಮೆದಕೇರಿನಾಯಕನು ಆ ಗ್ರಾಮವನ್ನು ಒಂದು ಅಗ್ರಹಾರವಾಗಿ ಬಾಗೂರು ಮೂಲದ ಬ್ರಾಹ್ಮಣ ಪುಟ್ಟಣ್ಣನ ಮಗ ತಿಮ್ಮಪ್ಪ ಎಂಬುವನಿಗೆ ನೀಡಿದ್ದು, ವಂಶಪಾರಂಪರ್ಯವಾಗಿ ಅದನ್ನು ಅನುಭವಿಸಿಕೊಂಡು ಬರಬಹು­ದಾಗಿ ಶಾಸನದಲ್ಲಿ ಉಲ್ಲೇಖಿಸಲಾಗಿದೆ ಎಂದು ರಾಜಶೇಖರಪ್ಪ ತಿಳಿಸಿದ್ದಾರೆ.

ಈ ಶಾಸನದ ವಿವರ ಸಂಗ್ರಹಿಸುವಲ್ಲಿ ಯುವ ಸಾಹಿತಿ ಇಂದುಶೇಖರ್, ಗ್ರಾಮ ಸ್ಥರಾದ ಅಣ್ಣಪ್ಪ ಸ್ವಾಮಿ, ಹನುಮಂತಪ್ಪ ಮತ್ತಿತರರು ರಾಜಶೇಖರಪ್ಪ ಅವರಿಗೆ ನೆರವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT