ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣಿವೆ ಯುವತಿಯ ಸಾಧನೆ ಶಿಖರ...

Last Updated 4 ಸೆಪ್ಟೆಂಬರ್ 2015, 19:41 IST
ಅಕ್ಷರ ಗಾತ್ರ

ನಾಗರಿಕ ಸೇವಾ ಪರೀಕ್ಷೆ ಪಾಸು ಮಾಡಿದ ಕಾಶ್ಮೀರದ ಮೊದಲ ಯುವತಿ ರುವೇದಾ ಸಲಮ್, ಐಪಿಎಸ್‌ ಹುದ್ದೆಗೇರಿದ ಕಾಶ್ಮೀರದ ಚೊಚ್ಚಲ ಮುಸ್ಲಿಂ ಮಹಿಳೆಯೂ ಹೌದು. ಮಾಜಿ ಕೆಎಎಸ್‌ ಅಧಿಕಾರಿಯಾದ ಇವರು, ಸದ್ಯ ಐಎಎಸ್‌ ಅಧಿಕಾರಿಣಿ.

‘ನಾನು ಐಎಎಸ್‌ ಅಧಿಕಾರಿ ಆಗಬೇಕು ಎಂದು ಅಪ್ಪ ಚಿಕ್ಕಂದಿನಿಂದಲೂ ಆಗಾಗ ಹೇಳುತ್ತಿದ್ದರು. ನಾನೂ ಏನಾದರೂ ಆಗಬೇಕು ಎಂದುಕೊಂಡಾಗ ನೆನಪಾಗಿದ್ದೂ ಅದೇ. ಅದುವೇ ಪ್ರೇರಣೆ ಆಯಿತು. ಐಎಎಸ್‌ ಮಾಡಲು ನಿರ್ಧರಿಸಿ, ಅದನ್ನೇ ಗುರಿಯಾಗಿಸಿಕೊಂಡು ಮುನ್ನಡೆದೆ’

–ಇದು ಮಾಜಿ ಐಪಿಎಸ್‌ ಹಾಗೂ ಹಾಲಿ ಐಎಎಸ್‌ ಅಧಿಕಾರಿಣಿ ರುವೇದಾ ಸಲಮ್ ಅವರು ಸಂದರ್ಶನವೊಂದರಲ್ಲಿ ಹೇಳಿದ ಮಾತುಗಳಿವು.

ರುವೇದಾ, ನಾಗರಿಕ ಸೇವಾ ಪರೀಕ್ಷೆ ಪಾಸು ಮಾಡಿದ ಕಾಶ್ಮೀರದ  ಮೊದಲ ಯುವತಿ; ಐಪಿಎಸ್‌ ಹುದ್ದೆಗೇರಿದ್ದ ಕಾಶ್ಮೀರದ ಚೊಚ್ಚಲ ಮುಸ್ಲಿಂ ಮಹಿಳೆ. ಇದೆಲ್ಲ ಹೆಗ್ಗಳಿಕೆ ಅವರ ಸತತ ಹಾಗೂ ಕಠಿಣ ಪರಿಶ್ರಮಕ್ಕೆ ಸಂದ ಫಲ. ಮೇರು ಸಾಧನೆಯ ಹಾದಿಯಲ್ಲಿ ವಿರಮಿಸದೇ ಮುನ್ನಡೆದವರು‌ರುವೇದಾ ಸಲಮ್.‌ ಹೌದು. 2009ರಲ್ಲಿ ಎಂಬಿಬಿಎಸ್‌ ಪದವಿ ಮುಗಿಸಿದ ಅವರು, ಅದೇ ವರ್ಷ  ಕೆಎಎಸ್‌ (ಕಾಶ್ಮೀರ ಆಡಳಿತ ಸೇವೆ) ಪರೀಕ್ಷೆ ಬರೆದರು. ಎರಡೂವರೆ ವರ್ಷಗಳ ಬಳಿಕ ರಾಜ್ಯಕ್ಕೆ 25ನೇ ರ‍್ಯಾಂಕ್‌ ಗಳಿಸಿದರು.

ಕೆಎಎಸ್‌ ಅಧಿಕಾರಿಯಾಗಿ ಕೆಲಸ ಮಾಡುತ್ತಲೇ, ಯುಪಿಎಸ್‌ಸಿ ನಡೆಸುವ  ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಂಡು ಅರ್ಹತೆಯನ್ನೂ  ಗಿಟ್ಟಿಸಿದರು. ಆದರೆ, ರ‍್ಯಾಂಕಿಂಗ್ ಆಧಾರದಲ್ಲಿ ಐಪಿಎಸ್‌ ಹುದ್ದೆ ದೊರೆಯಿತು. ಹೈದರಾಬಾದ್‌ನಲ್ಲಿ ತರಬೇತಿ ಮುಗಿಸಿ ತಮಿಳುನಾಡು ಕೇಡರ್‌ ಅಧಿಕಾರಿಯಾಗಿ ಕರ್ತವ್ಯ  ಆರಂಭಿಸಿದರು. ಅದರೊಟ್ಟಿಗೇ  ಚಿಕ್ಕಂದಿನಿಂದಲೂ ಅಪ್ಪ ಕಟ್ಟಿಕೊಡುತ್ತಿದ್ದ ಕನಸನ್ನು ಜತನದಿಂದ ಕಾಪಿಟ್ಟು, ಪೋಷಿಸಿದರು. 2014ರಲ್ಲಿ ಮತ್ತೆ ಐಎಎಸ್‌ ತೆಗೆದುಕೊಂಡು, ಸುಧಾರಿತ ರ‍್ಯಾಂಕಿಂಗ್‌ನಲ್ಲಿ ಪಾಸಾದರು.  ಈ ಮೂಲಕ ಅಪ್ಪನ ಆಸೆ, ಕಟ್ಟಿದ ಕನಸು ಈಡೇರಿದೆ. ಸದ್ಯ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದಲ್ಲಿ ರುವೇದಾ ಎ.ಸಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಷ್ಟೇಲ್ಲವೂ ಸಾಧ್ಯವಾಗಿದ್ದು ವರ್ಷಗಳ ‘ಕಡು’ ತಪಸ್ಸಿನ ಫಲವಾಗಿ.  ಏಕೆಂದರೆ, ಇವರು ಕಾಶ್ಮೀರದವರು. ಹಿಮವನ್ನೇ ಹೋಲುವ ಸ್ವಚ್ಛ ಬಿಳುಪಿನ ಬಣ್ಣದ ರುವೇದಾ, ದಿನ ಬೆಳಗಾದರೆ ಸದಾ ಗುಂಡಿನ ಸದ್ದು, ಪ್ರತಿಭಟನೆಯ ಕೂಗು ಮೊಳಗುವ ಕುಪ್ವಾರ ಜಿಲ್ಲೆಯೊಂದರ ಪುಟ್ಟ ಗ್ರಾಮದವರು. ತಂದೆ ಸಲಾಮುದ್ದೀನ್‌ ಬಜದ್. ದೂರದರ್ಶನದಲ್ಲಿ ಉಪ ಮಹಾ ನಿರ್ದೇಶಕ ಆಗಿದ್ದವರು. ಈಗ ನಿವೃತ್ತಿ ಹೊಂದಿದ್ದಾರೆ. ತಾಯಿಯ ಹೆಸರು ರೋಷನ್‌ ಅರಾ ಖಾನ್. ಮುಖ್ಯೋಪಾಧ್ಯಾಯಿನಿ.

ಸವಾಲುಗಳು....
ಸಾಧನೆಯ ದಾರಿಯಲ್ಲಿ ರುವೇದಾ ಎದುರಿಸಿದ ಸವಾಲುಗಳ ಪಟ್ಟಿಯೂ ದೊಡ್ಡದಿದೆ. ಸದಾ ಕೇಳಿ ಬರುವ ಬಂದ್, ಪ್ರತಿಭಟನೆಗಳು.. ಯಾವಾಗಲೂ ಪ್ರಕ್ಷುಬ್ಧ ಸನ್ನಿವೇಶದಂಥ ವಾತಾವರಣ. ಇದೆಲ್ಲವೂ  ಪ್ರತ್ಯಕ್ಷ ಸವಾಲುಗಳು. ಇದರೊಟ್ಟಿಗೆ ಎದುರಾಗುತ್ತಿದ್ದಿದ್ದು ಮದುವೆ ಟೀಕೆ...

ಬಲ್ಲವರು, ಬಂಧುಗಳು, ಸಂಬಂಧಿಕರಿಂದ ಮದುವೆ ಮಾಡುವಂತೆ ಟೀಕಾ ಸ್ವರೂಪದ ಸಲಹೆಗಳು ಕೇಳಿ ಬರುತ್ತಿದ್ದವು. ಅವುಗಳಿಗೆ ಗುರಾಣಿಯಾಗಿ ರಕ್ಷಿಸಿದ ಶ್ರೇಯವನ್ನು ರುವೇದಾ ತಮ್ಮ ತಂದೆ–ತಾಯಿಗೆ ನೀಡುತ್ತಾರೆ.  ಇನ್ನು, ಕೆಎಎಸ್‌, ಐಎಎಸ್ ಪರೀಕ್ಷೆ ಪಾಸು ಮಾಡಿದರೂ ರುವೇದಾ  ಯಾವುದೇ ಕೋಚಿಂಗ್‌ ಪಡೆದವರಲ್ಲ. ಸೂಕ್ತ ಹಾಗೂ ಸಮಯಕ್ಕೆ ಸರಿಯಾಗಿ ಪಾಠೋಪಕರಣವೇ ದೊರಕುವುದು ದುಸ್ತರವಾಗಿತ್ತು. 

‘ಐಎಎಸ್‌ ತೆಗೆದುಕೊಂಡಾಗ ಕೆಎಎಸ್‌ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದೆ.  ದೆಹಲಿ ಅಥವಾ ಇನ್ನಾವುದೇ ಮೆಟ್ರೋಪಾಲಿಟನ್‌ ನಗರಕ್ಕೆ ತೆರಳಿ ತರಬೇತಿ ಪಡೆಯುವುದು ಅಸಾಧ್ಯವಾಗಿತ್ತು. ಕೆಲಸ ಹೆಚ್ಚಿರುತ್ತಿತ್ತು. ಅದಾಗ್ಯೂ, ಪುಸ್ತಕಗಳನ್ನು ಕಚೇರಿಗೇ ಕೊಂಡೊಯ್ಯುತ್ತಿದ್ದೆ. ಅಲ್ಲಿ ಗಳಿಗೆ–ನಿಮಿಷಗಳ ವಿರಾಮ ಸಿಕ್ಕಾಗಲೆಲ್ಲವೂ ಪುಸ್ತಕ ತೆರೆಯುತ್ತಿದ್ದೆ’ ಎಂದು ನೆನಪಿಕೊಳ್ಳುತ್ತಾರೆ ರುವೇದಾ.
ನಂಬಿಕೆ, ಶಿಸ್ತು ಬಹಳ ಮುಖ್ಯ...

‘ನಿಮ್ಮ ಸಾಮರ್ಥ್ಯಗಳಲ್ಲಿ ನೀವು ನಂಬಿಕೆ ಇಡಿ. ಅದು ಗುರಿ ಸಾಧಿಸಲು ಬೇಕಾದ ಖಚಿತಾಭಿಪ್ರಾಯ ಹಾಗೂ ದೃಢನಿಷ್ಠೆಯನ್ನು ನೀಡುತ್ತದೆ.  ಶಿಸ್ತು ಕೂಡ ಮುಖ್ಯ. ಹಲವು ಬಗೆಯ ಚಂಚಲತೆಗಳನ್ನು ಮೀರಲು ಅದು ನೆರವಾಗುತ್ತದೆ. ಯಾವುದೇ ಸಾಧನೆಯಲ್ಲಿ  ನಿರ್ದಿಷ್ಟ ಉದ್ದೇಶಕ್ಕೆ ಬದ್ಧರಾಗಿರುವುದು ಹಾಗೂ ಗುರಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವುದು ಎಲ್ಲಕ್ಕಿಂತಲೂ ಮುಖ್ಯ’ ಎನ್ನುತ್ತಾರೆ ಅವರು.

ರಾಜ್ಯ–ಗಡಿಯ ಹಂಗಿಲ್ಲ...
ಕಾಶ್ಮೀರದಿಂದ ನಾಗರಿಕ ಸೇವೆಗೆ ಆಯ್ಕೆಯಾದ ರುವೇದಾ ಅವರಿಗೆ  ತಮಿಳುನಾಡು ಕೇಡರ್ ಸಿಕ್ಕಾಗ ಸ್ವತಃ ರುವೇದಾ ಸೇರಿದಂತೆ ಅವರ ಕುಟುಂಬ, ಕಾಶ್ಮೀರ ಕಣಿವೆಯ ಜನತೆಗೆ ನಿರಾಶೆಯಾಗಿತ್ತು. ಆದರೆ, ಚೆನ್ನೈಗೆ ಬಂದು ಅವರು ಬದಲಾದರು.

ಕಾಶ್ಮೀರ ಹಾಗೂ ಚೆನ್ನೈ ನಡುವಣ ವಾತಾವರಣಕ್ಕೆ ಅಪಾರ ವ್ಯತ್ಯಾಸವಿದೆ. ‘ಮನುಕುಲದ ಸೇವೆಯೇ ನನ್ನ ಕರ್ತವ್ಯ  ಎಂಬುದು ಅರಿವಾಗಿದೆ. ಯಾವ ರಾಜ್ಯಕ್ಕೆ ನಿಯೋಜಿಸಿದರೂ ಚಿಂತೆಯಿಲ್ಲ’  ಎನ್ನುತ್ತಾರೆ ಕಳೆದ 7–8 ತಿಂಗಳು  ತಮಿಳುನಾಡಿನಲ್ಲಿ  ಎಸಿಪಿಯಾಗಿ ಕೆಲಸ ಮಾಡಿದ ರುವೇದಾ.

ಫಿಟ್‌ನೆಸ್‌ ಬಿಡಲ್ಲ....
ಐಎಎಸ್ ಅಧಿಕಾರಿಯಾದ ಬಳಿಕವೂ ನಾನು ಫಿಟ್‌ನೆಸ್‌ಗೆ ಗಮನ ನೀಡುವೆ. ಐಪಿಎಸ್‌ನಿಂದ ದೊರೆತ ಕೊಡುಗೆ ಇದು ಎನ್ನುವ ರುವೇದಾ, ಯೋಗ ತುಂಬಾನೇ ಮುಖ್ಯ ಅಂತಾರೆ.

‘ಸ್ಥಿರ ಜೀವನ ನನ್ನ ವೈಯಕ್ತಿಕ ಕನಸು’ ಎನ್ನುವ ರುವೇದಾ, ಕೆಲಸ–ಕುಟುಂಬದ ನಡುವೆ ತೋಲನ ಕಾಯ್ದುಕೊಳ್ಳಲು ಬಯಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT