ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣಿನ ಅಂದಕ್ಕೆ...

ಬೆಡಗು –ಬೆರಗು
Last Updated 24 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಹೆಣ್ಣು ಕಮಲ ನಯನೆ. ಮಾದಕ ನೋಟ ಹೆಣ್ಣಿನ ಕಣ್ಣೋಟ. ಮನದ ಭಾವನೆಗಳನ್ನು ನೋಟದ ಮೂಲಕ ಹೊರಸೂಸುವ ಅದ್ಭುತ ಶಕ್ತಿ ಕಣ್ಣಿಗಿದೆ. ನಟಿ ಐಶ್ವರ್ಯಾ ವಿಶ್ವಸುಂದರಿ ಪಟ್ಟಕ್ಕೇರಿದ್ದು ತನ್ನ ಸುಂದರ ನೀಲಿ ಕಣ್ಣಿನಿಂದಲೇ. 

ಕಣ್ಣಿನ ಅಲಂಕಾರ ದೊಡ್ಡ ವಿಷಯವಲ್ಲ. ಆದರೆ, ಕಣ್ಣನ್ನು ಸಂರಕ್ಷಿಸುವುದು ದೊಡ್ಡ ಕೆಲಸ. ಪಂಚೇಂದ್ರಿಯಗಳಲ್ಲಿ ಕಣ್ಣು ಅತ್ಯಂತ ಸೂಕ್ಷ್ಮ ಅಂಗ. ಕಣ್ಣಿನ ಅಲಂಕಾರಕ್ಕೆ ಬಳಸುವ ವಸ್ತುಗಳೆಲ್ಲವೂ ರಾಸಾಯನಿಕದಿಂದ ಕೂಡಿರುವಂತದ್ದು. ಮಲಗುವ ಮುನ್ನ ಕಣ್ಣಿನ ಅಲಂಕಾರ ಸಂಪೂರ್ಣವಾಗಿ ಸ್ವಚ್ಛಗೊಳಿಸಿಯೇ ಮಲಗಬೇಕು.

ಕಾಲಕ್ಕೆ ತಕ್ಕಂತೆ ಕಣ್ಣಿನ ಅಲಂಕಾರವೂ ಬದಲಾಗಿದೆ. ಇಂದು ನಾವು ಕ್ಯಾಟ್‌ ಐ, ಓಪನ್‌ ವಿಂಗ್ಸ್‌, ಸಿಂಗಲ್‌, ಸೋ ತಿಕ್‌, ಕ್ರಿಯೇಟೀವ್‌ ವಿಂಗ್ಸ್‌, ಸ್ಮೋಕಿ ಐ ಎಂದು ಹಲವು ಬಗೆಗಳನ್ನು ಕಾಣಬಹುದು.

‘ಯುವತಿಯರು ಪಾರ್ಟಿ ಮತ್ತು ನೈಟ್‌ ಐ ಮೇಕಪ್‌ಗಳಿಗೆ ಬೇಡಿಕೆ ಇಡುತ್ತಾರೆ. ಇನ್ನು ಮದುವೆಯಂತಹ ಸಂದರ್ಭಗಳಲ್ಲಿ ಟ್ರೆಡಿಷನಲ್‌ ಐ ಮೇಕಪ್‌ಗೆ ಮಾರು ಹೋಗುತ್ತಾರೆ’ ಎನ್ನುತ್ತಾರೆ ಬ್ಯೂಟಿಷಿಯನ್‌ ಸುಧಾ.

ಚರ್ಮಕ್ಕೆ ಹೊಂದುವ ಅಲಂಕಾರವಿರಲಿ
‘ಯುವತಿಯರ ಚರ್ಮ ಕೋಮಲವಾಗಿರುತ್ತದೆ. ಅವರಿಗೆ ಐ ಮೇಕಪ್‌ ಮಾಡುವುದು ಸುಲಭ. ವಯಸ್ಸಾದವರಿಗೆ ಹಾಗಾಗುವುದಿಲ್ಲ. ಚರ್ಮ ಸುಕ್ಕುಗಟ್ಟಿರುತ್ತದೆ. ಇನ್ನು ಕೆಲವರಿಗೆ ಕಣ್ಣಿನ ಸುತ್ತ ಕಪ್ಪು ವರ್ತುಲವಿರುತ್ತದೆ. ಅಂಥವರಿಗೆ ಐ ಬೇಸ್‌ನಿಂದ ಮುಖದ ವರ್ಣಕ್ಕೆ ಕಣ್ಣಿನ ಚರ್ಮ ಹೊಂದಿಕೊಳ್ಳುವಂತೆ ಮಾಡಿ ಅಲಂಕಾರ ಮಾಡಬೇಕಾಗುತ್ತದೆ’ ಎನ್ನುತ್ತಾರೆ ವಿ ಬ್ಯೂಟಿ ಕೇರ್‌, ಬ್ಯೂಟಿಷಿಯನ್‌ ಸುಧಾ ಎ.
ಕಣ್ಣಿನ ಆಲಂಕಾರಕ್ಕೆ ಆದಷ್ಟೂ ಬ್ರಾಂಡೆಡ್‌ ಮೇಕಪ್‌ ಸಾಮಗ್ರಿಗಳನ್ನು ಬಳಸುವುದು ಸೂಕ್ತ.

ಕಣ್ಣಿನ ಅಲಂಕಾರಕ್ಕೂ ಮೊದಲು ಅನುಸರಿಸಬೇಕಾದ ಕ್ರಮಗಳು
*ತ್ವಚೆಯನ್ನು ಸ್ವಚ್ಛಗೊಳಿಸಿ: ಮೇಕಪ್‌ ಆರಂಭಿಸುವ ಮೊದಲು ಫೇಸ್‌ವಾಷ್‌ನಿಂದ ಮುಖವನ್ನು ತೊಳೆದುಕೊಳ್ಳಬೇಕು. ಅದರಲ್ಲೂ ಹಿಂದಿನ ದಿನ ಹಚ್ಚಿಕೊಂಡ ಮಸ್ಕರಾ ಮತ್ತು ಐಲೈನರ್‌ ಉಳಿದಿದ್ದರೆ ಕಣ್ಣಿನ ಸುತ್ತ ತಣ್ಣನೆ ನೀರು ಅಥವಾ ಒದ್ದೆ ಹತ್ತಿಯಿಂದ ಸ್ವಚ್ಛಗೊಳಿಸಬೇಕು. ಕಣ್ಣು ರೆಪ್ಪೆಗಳ ಮೇಲೆ ಮಾಯಿಶ್ಚರೈಸರ್‌ ಹಚ್ಚಬೇಡಿ. ಕಣ್ಣಿನ ಸುತ್ತ ಬೇಸ್‌ ಅನ್ನು ಹಚ್ಚುವುದರಿಂದ ಚರ್ಮ ಮೃದುವಾಗುತ್ತದೆ.

*ಕಣ್ಣಿನ ಸುತ್ತ ಕಪ್ಪು ಕಲೆ ಇರುವವರು ತ್ವಚೆಗೆ ಮಾಡಿಕೊಳ್ಳುವ ಮೇಕಪ್‌ ಅನ್ನೇ  ಕಣ್ಣಿನ ಸುತ್ತವೂ ಮಾಡಿಕೊಂಡು ಕಪ್ಪು ವರ್ತುಲಗಳು ಕಾಣದಂತೆ ಕಾನ್‌ಕ್ಲಿಯರ್‌ ಬ್ರಶ್‌ಗಳಿಂದ ಬೇಸ್‌ ಅನ್ನು ನಯವಾಗಿ ಹದಗೊಳಿಸಿ. ಪೌಡರನ್ನು ಕಣ್ಣಿನ ಸುತ್ತ ಹಚ್ಚಿಕೊಳ್ಳಬೇಕು.

*ನಂತರ ನಿಮ್ಮ ಉಡುಪಿನ ವರ್ಣಕ್ಕೆ ಅನುಗುಣವಾದ ಐ ಶಾಡೋಗಳನ್ನು ಲೈಟ್‌ ಆಗಿ ಹಚ್ಚಿಕೊಳ್ಳಿ. ಪಾರ್ಟಿಗೆ ಹೋಗುತ್ತಿದ್ದಲ್ಲಿ ಮೂರು ಬಣ್ಣಗಳನ್ನು ಸಹ ಬಳಸಬಹುದು.

*ಇದಾದ ನಂತರ ಐಲೈನರ್‌ ಹಚ್ಚಿಕೊಳ್ಳಿ. ಪೆನ್ಸಿಲ್‌ ಐಲೈನರ್‌ ಮತ್ತು ವೆಟ್‌ ಐಲೈನರ್‌ಗಳನ್ನು ಕಣ್ಣಿನ ರೆಪ್ಪೆ ಬುಡದಲ್ಲಿ ಹಚ್ಚಿಕೊಳ್ಳಿ. ಒಂದು ಬಾರಿ ಲೈನ್‌ ಎಳೆದ ಮೇಲೆ ಮತ್ತೆ ಬುಡದಿಂದ ಇನ್ನೊಮ್ಮೆ ಲೈನ್‌ ಎಳೆಯಿರಿ. ಆಗ ಕಣ್ಣು ದೊಡ್ಡದಾಗಿ ಅಂದವಾಗಿ ಕಾಣುತ್ತದೆ.

*ಮಸ್ಕರಾ ಹಚ್ಚಿಕೊಳ್ಳುವ ಮೊದಲು ಕಣ್ಣು ರೆಪ್ಪೆಗಳನ್ನು ಒಮ್ಮೆ ಒರೆಸಿಕೊಳ್ಳಿ. ಏಕೆಂದರೆ ಪೌಡರ್‌ ರೆಪ್ಪೆಗಳ ಮೇಲೆ ಕೂತಿರುತ್ತದೆ. ಮಸ್ಕರಾ ಬಳಸಲು ರೆಪ್ಪೆಗಳು ಸುರುಳಿಯಾಗಿದ್ದರೆ ಇನ್ನೂ ಉತ್ತಮ. ಇಂದು ರೆಪ್ಪೆ ಸುರುಳಿಯಾಗಿಸುವ ಸಲಕರಣೆ ಲಭ್ಯವಿದೆ. ಇದರಿಂದ ರೆಪ್ಪೆಗಳನ್ನು ಐದು ಸೆಕೆಂಡ್‌ಗಳ ಕಾಲ ಹಿಡಿದಿಟ್ಟರೆ ರೆಪ್ಪೆಗಳು ಸುರುಳಿಯಾಗುತ್ತವೆ. ಮಸ್ಕರಾವನ್ನು ಕಣ್ಣಿನ ರೆಪ್ಪೆಗಳಿಗೆ ಮೇಲ್ಮುಖವಾಗಿ ತೀಡಬೇಕು. ಒಂದು ಕೋಟ್‌ ಅಥವಾ ಎರಡು ಕೋಟ್‌ಗಳನ್ನು ಹಚ್ಚಬಹುದು. ಅವಶ್ಯ ಎನಿಸಿದಲ್ಲಿ ಕೆಳ ರೆಪ್ಪೆಗಳಿಗೂ ಮಸ್ಕರಾವನ್ನು ಹಚ್ಚಬಹುದು.

ಮತ್ತಷ್ಟು ಟಿಪ್ಸ್‌ಗಳು
ಅಲಂಕಾರ ಮಾಡಿಕೊಂಡು ಅಭ್ಯಾಸ ಇಲ್ಲದವರು, ಕಾರ್ಯಕ್ರಮಕ್ಕೆ ತೆರಳುವ ಹಿಂದಿನ ದಿನಗಳಲ್ಲೇ ಒಮ್ಮೆ ಅಭ್ಯಾಸ ನಡೆಸುವುದು ಒಳಿತು. ಉತ್ತಮ ಆಕಾರದ ಹುಬ್ಬುಗಳು ಕಣ್ಣಿನ ಅಂದವನ್ನು ಹೆಚ್ಚಿಸುತ್ತದೆ. ಕಣ್ಣಿನ ಅಲಂಕಾರಕ್ಕೆ ಸೂಕ್ತ ಎನಿಸುವ ಸಣ್ಣ ಬ್ರಶ್‌ಗಳ ಕಿಟ್‌ ಇರಲಿ. ರೆಪ್ಪೆಗಳು ಸುರಳಿಯಾಗಿ ಕಾಣಲು ನಕಲಿ ರೆಪ್ಪೆಗಳ ಬಳಕೆ ಮಾಡಬಹುದು.

*ನಂತರ ಕಾಡಿಗೆಯನ್ನು ಕೆಳಗಿನ ಮತ್ತು ಮೇಲಿನ ರೆಪ್ಪೆಗಳ ಬುಡದಲ್ಲಿ ಹಚ್ಚಿದರೆ ಕಣ್ಣು ಸುಂದರವಾಗುವುದರ ಜೊತೆಗೆ ಒಳ್ಳೆಯ ಆಕಾರದಲ್ಲಿ ಕಾಣುತ್ತದೆ. ಜೊತೆಗೆ ಬಿಳಿ ಐಲೈನರ್‌ ಒಳಗಣ್ಣಿಗೆ ಹಚ್ಚಿದರೆ ಕಣ್ಣು ದೊಡ್ಡದಾಗಿ ಕಾಣುತ್ತದೆ. ಮಲಗುವ ಮುನ್ನ ಕಣ್ಣಿನ ಅಲಂಕಾರವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮಲಗುವುದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

ಕಣ್ಣಿನ ಅಲಂಕಾರಕ್ಕೆ ಅವಶ್ಯಕವಾದ ವಸ್ತುಗಳು
*ಮೇಕಪ್‌ ರಿಮೂವರ್‌
*ಮಾಯಿಶ್ಚರೈಸರ್‌
*ಪೌಡರ್‌, ಐಶಾಡೋ
* ಐಲೈನರ್‌
*ರೆಪ್ಪೆಗಳ ಕರ್ಲರ್‌
*ಮಸ್ಕರಾ
*ನಕಲಿ ರೆಪ್ಪೆ (ಅಗತ್ಯವಿದ್ದಲ್ಲಿ)
*ಪ್ರೀಮಿಯರ್‌ (ಅಗತ್ಯವಿದ್ದಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT