ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣ ಮುಂದೆ ಗುರಿ ಇರಲು...

Last Updated 25 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಮೈಕ್‌ ಹಡ್ಸನ್‌
‘ಮನುಷ್ಯನಾಗಿ ಹುಟ್ಟಿದ ಮೇಲೆ ದೇಶ ಸುತ್ತ ಬೇಕು ಇಲ್ಲ, ಕೋಶ ಓದಬೇಕು’ ಎಂಬ ಮಾತು ಈಗಲೂ ಚಾಲ್ತಿಯಲ್ಲಿದೆ. ಎಲ್ಲರಿಗೂ ದೇಶ ಸುತ್ತುವುದಾಗಲಿ ಅಥವಾ ಕೋಶ ಓದುವುದಾಗಲಿ ಸಾಧ್ಯವಾಗುವುದಿಲ್ಲ ಬಿಡಿ. ಆದರೆ ರೊಮೇನಿಯಾ ದೇಶದ ಯುವಕನೊಬ್ಬ ದೇಶ ಸುತ್ತ ಬೇಕು ಎಂಬ ಹಟಕ್ಕೆ ಬಿದ್ದು ಯುರೋಪ್‌ ಖಂಡವನ್ನು ಸುತ್ತಿ ಪತ್ರಕರ್ತನಾಗಿ ರೂಪಾಂತರಗೊಂಡ ಕಥೆ ಇದು.

ಎಲೆಕ್ಟ್ರಾನಿಕ್ಸ್‌ ಸಿಸ್ಟಂ ಎಂಜಿನಿಯರಿಂಗ್‌ ಓದಿದ್ದ ಮೈಕ್‌ ಕಾರ್ಪೊರೇಟ್‌ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಇಪ್ಪತ್ತೈದನೇ ವಯಸ್ಸಿಗೇ ದೇಶ ಸುತ್ತುವ ಕನಸು ಕಂಡರು. ಕೈ ತುಂಬಾ ಸಂಬಳ ಬರುವ ಕೆಲಸಕ್ಕೆ ರಾಜೀನಾಮೆ ನೀಡಿದರು. ಹಳೆಯದೊಂದು ವ್ಯಾನ್‌ ಖರೀದಿಸಿ ಅದನ್ನು ಪುಟ್ಟ ಮನೆಯಾಗಿ ಮಾರ್ಪಡಿಸಿದರು. ಆ ವ್ಯಾನ್‌ನಲ್ಲಿ ಏಕಾಂಗಿಯಾಗಿ ಯುರೋಪ್‌ ಪ್ರವಾಸಕ್ಕೆ ತೆರಳಿದರು. ಬ್ರಿಟನ್‌, ಸ್ಪೇನ್, ಹಂಗೇರಿ, ಸ್ಲೊವೇಕಿಯಾ, ಸ್ವಿಟ್ಜರ್‌ಲೆಂಡ್‌ ದೇಶಗಳನ್ನು ವ್ಯಾನ್‌ ಮೂಲಕವೇ ಸುತ್ತಿದರು.

ಗ್ರೀಕ್‌ ದೇಶದ ಪ್ರವಾಸ ಮೈಕ್‌ಗೆ ಅಪಾರ ಹೆಸರು ತಂದುಕೊಟ್ಟಿತು. ವಿಶ್ವ ಆರ್ಥಿಕ ಮುಗ್ಗಟ್ಟಿಗೆ ಮೊದಲ ಬಲಿಪಶುವಾಗಿ ಸಾಲದ ಸುಳಿಯಲ್ಲಿ ಸಿಲುಕಿರುವ ಗ್ರೀಕ್‌ನ ಸಾಮಾನ್ಯ ಜನರ ತಳಮಳ, ಸಮಸ್ಯೆಗಳನ್ನು ಮೈಕ್‌ ಅಕ್ಷರಗಳಲ್ಲಿ ಚಿತ್ರಿಸಿ ವಿಶ್ವದ ಗಮನ ಸೆಳೆದರು. ಇದು ಮೊದಲು ‘ದಿ ಬೆಸ್ಟ್‌ ಥಿಂಗ್ಸ್‌ ನೆವರ್‌ ಪ್ಲಾನ್ಡ್‌’ ಬ್ಲಾಗ್‌ನಲ್ಲಿ ಬೆಳಕು ಕಂಡಿತು. ನಂತರ ಇದನ್ನು ‘ದಿ ಗಾರ್ಡಿಯನ್‌’ ಪತ್ರಿಕೆಯವರು ಧಾರಾವಾಹಿಯಾಗಿ ಪ್ರಕಟಿಸಿದರು.

ಇದೀಗ ಪುಸ್ತಕ ರೂಪದಲ್ಲಿ ಹೊರ ಬಂದಿರುವ ಈ ಕೃತಿ ಯುರೋಪ್‌ನಲ್ಲಿ ಅತಿ ಹೆಚ್ಚು ಮಾರಾಟವಾದ (2014) ಪುಸ್ತಕವಾಗಿದೆ. ಲಂಡನ್‌ ಚಳಿಯನ್ನು ಮೆಟ್ಟಿ ಹಂಗೇರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಮೈಕ್‌ ಗಾರ್ಡಿಯನ್‌ ಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ‘ಜೀವನಪರ್ಯಂತ ಯಂತ್ರಗಳ ಮುಂದೆ ಯಂತ್ರಗಳಾಗಿ ಕೆಲಸ ಮಾಡಬೇಕಿದ್ದ ನಾನು ಇಂದು ಲೇಖನಿ ಹಿಡಿದು ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ’ ಎನ್ನುತ್ತಾರೆ ಮೈಕ್‌.

ಸಚಿನ್‌ ಮತ್ತು ಗೆಳೆಯರು
ಇಂದು ಈವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪೆನಿಗಳಿಗೆ ಭಾರಿ ಬೇಡಿಕೆ ಇದೆ. ಬಂಡವಾಳ ಇಲ್ಲದೇ ಹಣಗಳಿಸುವ ಸುಲಭ ವಿಧಾನವಿದು.

ಉತ್ತರ ಪ್ರದೇಶದ ಸಚಿನ್‌ ಶರ್ಮಾ ಮತ್ತು ಗೆಳೆಯರು ‘ಟೌನ್‌ಸ್ಕ್ರಿಪ್ಟ್‌’ ಎಂಬ ಈವೆಂಟ್‌ ಮ್ಯಾನೇಜ್‌ಮೆಂಟ್‌ ಆ್ಯಪ್‌ ಸಿದ್ಧಪಡಿಸಿದ್ದಾರೆ. ಕಳೆದ ಜನವರಿಯಲ್ಲಿ ಲೋಕಾರ್ಪಣೆಗೊಂಡ ಈ ಆ್ಯಪ್‌ ಮೂಲಕ ಒಂದೂವರೆ ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ಈವೆಂಟ್‌ ಕಂಪೆನಿಗಳು ಅಥವಾ ಸಂಸ್ಥೆಗಳಿಗೆ ಸೇವೆ ನೀಡಿದ್ದಾರೆ. ಆ ಮೂಲಕ ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ.

ಸಚಿನ್‌ ಕಾನ್ಪುರದ ಐಐಟಿಯಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದು ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ ಸಚಿನ್‌ ಟೌನ್‌ಸ್ಕ್ರಿಪ್ಟ್‌ ತಂಡ ಕಟ್ಟಿದ್ದಾರೆ. ಈ ತಂಡದಲ್ಲಿ 9 ಜನ ಯುವ ಸದಸ್ಯರಿದ್ದು, ಅವರೆಲ್ಲ ವಿವಿಧ ಸಾಫ್ಟ್‌್‌ವೇರ್‌ ಕಂಪೆನಿಗಳಲ್ಲಿ ಉದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದಾರೆ. ‘ಟೌನ್‌ಸ್ಕ್ರಿಪ್ಟ್‌’ ಇವರಿಗೆ ಪಾರ್ಟ್‌ ಟೈಮ್‌ ಕೆಲಸವಷ್ಟೆ.

‘ಟೌನ್‌ಸ್ಕ್ರಿಪ್ಟ್‌’ ಆ್ಯಪ್‌ ನಿರ್ವಹಣೆ ಮಾಡಲು ಪ್ರತ್ಯೇಕ ತಂಡವಿದೆ. ಆಂಡ್ರಾಯಿಡ್‌ ಮತ್ತು ವಿಂಡೋಸ್‌ ಮೊಬೈಲ್‌ ಆ್ಯಪ್‌ ಮೂಲಕ ಈವೆಂಟ್‌ ಕಂಪೆನಿಗಳು ಮಾಹಿತಿ ಪಡೆಯಬಹುದು. ಕಾರ್ಯಕ್ರಮದ ಯೋಜನೆ, ರೂಪುರೇಷೆ, ಖರ್ಚು ವೆಚ್ಚದ ಯೋಜನಾ ವರದಿಯನ್ನು ಟೌನ್‌ಸ್ಕ್ರಿಪ್ಟ್‌ ತಯಾರಿಸಿಕೊಡುತ್ತದೆ. ಕಾರ್ಯಕ್ರಮಕ್ಕೆ ಅವಶ್ಯವಿರುವ ಸಾಮಗ್ರಿಗಳು, ಕೇಟರಿಂಗ್‌, ವೇದಿಕೆ ಅಲಂಕಾರ, ಇತ್ಯಾದಿಗಳ ಮಾಹಿತಿ ಈ ಆ್ಯಪ್‌ನಲ್ಲಿ ದೊರೆಯುತ್ತವೆ.

ಈವೆಂಟ್‌ ಮ್ಯಾನೇಜ್‌ಮೆಂಟ್‌ಗೆ ಹೆಚ್ಚಿನ ಹಣ ತೊಡಗಿಸಬೇಕಾಗಿಲ್ಲ. ಕಚೇರಿ ಮತ್ತು ಮೊಬೈಲ್‌ ಆ್ಯಪ್‌ ತಯಾರಿಸಲು ಬೇಕಾಗುವಷ್ಟು ಬಂಡವಾಳ ಸಾಕು. ‘ನಾವು ಹತ್ತು ಲಕ್ಷ ರೂಪಾಯಿ ಬಂಡವಾಳ ತೊಡಗಿಸಿ ಕಂಪೆನಿ ಆರಂಭಿಸಿದ್ದೇವೆ. ಕಾರ್ಯಕ್ಷಮತೆ, ಚುರುಕುತನ, ಸ್ವಚ್ಛತೆ, ಸಮಯಪಾಲನೆ ಪಾಲಿಸಿದರೆ ಖಂಡಿತವಾಗಿಯೂ ಈ ಕ್ಷೇತ್ರದಲ್ಲಿ ಯಶಸ್ವಿಯಾಗಬಹುದು’ ಎನ್ನುತ್ತಾರೆ ಸಚಿನ್‌. www.townscript.com

ಬಿಎಸ್‌ಜಿ ತಂಡ
ಇಂದು ಸಾಮಾಜಿಕ ಜಾಲತಾಣಗಳು ಪ್ರಬಲ ಮಾಧ್ಯಮಗಳಾಗಿ ಬೆಳೆಯುತ್ತಿವೆ. ವಿಶ್ವದ ಶೇ 50ರಷ್ಟು ಯುವಕರು ವಿವಿಧ ಸಾಮಾಜಿಕ ಜಾಲತಾಣಗಳ ಅಕೌಂಟ್‌ ಹೊಂದಿದ್ದಾರೆ. ಹಾಗೆ ಶೇ 92ರಷ್ಟು ಉತ್ಪಾದನಾ ಉದ್ಯಮಗಳು, ಕಂಪೆನಿಗಳು ಸಾಮಾಜಿಕ ಜಾಲತಾಣಗಳಿಗೆ ಜಾಹೀರಾತು ನೀಡುತ್ತಿದ್ದಾರೆ. ಇದರಿಂದ ಜಾಗತಿಕವಾಗಿ ಟಿವಿ ವಾಹಿನಿಗಳು ಮತ್ತು ವೃತ್ತಪತ್ರಿಕೆಗಳಿಗೆ ಜಾಹೀರಾತು ನೀಡುವುದು ಕಡಿಮೆಯಾಗುತ್ತಿದೆ ಎಂದು ಅಮೆರಿಕದ ವಿಶ್ವ ವ್ಯಾಪಾರ ಸಂಸ್ಥೆಯ ವರದಿ ಹೇಳುತ್ತದೆ.

ವಿಶ್ವದಾದ್ಯಂತ ನೂರಾರು ಸಾಮಾಜಿಕ ಜಾಲತಾಣಗಳು ಕಾರ್ಯನಿರ್ವಹಿಸುತ್ತಿವೆ. ವ್ಯಕ್ತಿಯೊಬ್ಬ ಘಟನೆಯೊಂದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಲಭವಾಗಿ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಬಹುದು. ಹಾಗಾಗಿ ಒಬ್ಬರು ನಾಲ್ಕೈದು ಜಾಲತಾಣಗಳ ಅಕೌಂಟ್‌ಗಳನ್ನು ಸಾಮಾನ್ಯವಾಗಿ ಹೊಂದಿರುತ್ತಾರೆ. ಇವುಗಳನ್ನು ಏಕಕಾಲದಲ್ಲೇ ನಿರ್ವಹಣೆ ಮಾಡುವುದು ಕಷ್ಟ. ಉದಾಹರಣೆಗೆ ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟ್ರಾಡ್ಯಾಂ ಅಕೌಂಟ್‌ ಇರುವ ವ್ಯಕ್ತಿ ಏಕಕಾಲದಲ್ಲೇ ಈ ಮೂರು ಅಕೌಂಟ್‌ಗಳಿಗೆ ಬರಹ ಅಥವಾ ಚಿತ್ರವನ್ನು ಪೋಸ್ಟ್‌ ಮಾಡಲು ಸಾಧ್ಯವಿಲ್ಲ.

ಪ್ರತ್ಯೇಕವಾಗಿ ಆಯಾ ಜಾಲತಾಣಗಳಿಗೆ ಹೋಗಿ ಪೋಸ್ಟ್‌ ಮಾಡಬೇಕಾಗುತ್ತದೆ. ಈ ಸಮಸ್ಯೆಯನ್ನು ಭಾರತದ ಮೂವರು ಯುವಕರು ಬಗೆಹರಿಸಿದ್ದು ರಿಮ್‌ (rime)ಎಂಬ ಹೊಸ ಅಪ್ಲಿಕೇಷನ್‌. ಇದರ ಮುಖಾಂತರ ಏಕಕಾಲದಲ್ಲಿ ಹತ್ತಾರು ಸಾಮಾಜಿಕ ಜಾಲತಾಣಗಳನ್ನು ನಿರ್ವಹಣೆ ಮಾಡಬಹುದು. ಭಾನು ಪ್ರತಾಪ್‌ ಸಿಂಗ್‌, ಸುಭಾಜಿತ್‌ ಸಹಾ ಮತ್ತು ಗಿರೀಶ್‌ ಕುಮಾರ್‌ (ಬಿಜಿಎಸ್‌) ತಂಡ ರಿಮ್‌ ಆ್ಯಪ್‌ ಆವಿಷ್ಕರಿಸಿದೆ.

ಈ ಮೂವರು ಸಾಫ್ಟ್‌ವೇರ್‌ ತಂತ್ರಜ್ಞರು. ಐಬಿಎಂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಸಾಮಾಜಿಕ ಜಾಲತಾಣಗಳ ಬಳಕೆದಾರರು ಉಪಯೋಗಿಸಬಹುದು. ಈಗಾಗಲೇ 1000 ಬಳಕೆದಾರರು ಬಳಸುತ್ತಿರುವ ಈ ಆ್ಯಪ್‌ ಖರೀದಿಸಲು ಹಲವಾರು ಕಂಪೆನಿಗಳು ಮುಂದೆ ಬಂದಿವೆ ಎನ್ನುತ್ತಾರೆ ಭಾನು ಪ್ರತಾಪ್‌ ಸಿಂಗ್‌. www.rime.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT