ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮರೆ ಕಡತಗಳು ಸದಸ್ಯರ ಬಳಿ ಪತ್ತೆ !

Last Updated 1 ಅಕ್ಟೋಬರ್ 2014, 10:23 IST
ಅಕ್ಷರ ಗಾತ್ರ

ಕುಷ್ಟಗಿ: ಪುರಸಭೆಯಲ್ಲಿ 2010 ರಿಂದ 2012ರ ಅವಧಿಯಲ್ಲಿ ವಿವಿಧ ಕಾಮಗಾರಿಗಳ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಹಣ ದುರ್ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿವೆ ಎಂದು ವರದಿಯಾಗಿದ್ದ ಹಳೆಯ ಕಡತಗಳು ಈಗ ಒಂದೊಂದಾಗಿ ಪತ್ತೆಯಾಗುತ್ತಿವೆ.

ಈ ಹಳೆ ಕಡತಗಳ ಪೈಕಿ ಕೆಲವಕ್ಕೆ ಹಿಂದೆಯೇ ಹಣ ಪಾವತಿಯಾಗಿರುವುದನ್ನು ದಾಖಲೆಗಳು ಸಾರುತ್ತಿ­ದ್ದರೂ ಮತ್ತೆ ಹಣ ಪಾವತಿಸುವಂತೆ ಕೋರಿ ಅದೇ ಕಡತಗಳನ್ನು ಪುರಸಭೆಗೆ ಮತ್ತೆ ಸಲ್ಲಿಸಲಾಗಿದೆ. ಅಲ್ಲದೇ ಈ ಕಡತಗಳನ್ನು ಪುರಸಭೆ ಕೆಲ ಸದಸ್ಯರೇ ಖುದ್ದಾಗಿ ಸಲ್ಲಿಸಿದ್ದು ಬಿಲ್‌ ಪಾವತಿಗೆ ಒತ್ತಡ ಹೇರುತ್ತಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

ಹಿಂದಿನ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ₨ 9 ಕೋಟಿ ದುರ್ಬಳಕೆಯಾಗಿರುವುದನ್ನು ಜಿಲ್ಲಾಡಳಿತ ಪತ್ತೆಹಚ್ಚಿ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಿತ್ತು. ಹಣ ದುರ್ಬಳಕೆಗೆ ಸಂಬಂಧಿಸಿ­ದಂತೆ ಈಗಾಗಲೇ ಎರಡು ಬಾರಿ ವಿಶೇಷ ಲೆಕ್ಕಪತ್ರ ತನಿಖೆ ನಡೆಸಲಾಗಿತ್ತು. ಆದರೆ ಹಣ ಖರ್ಚಾಗಿದ್ದರೂ ಅವುಗಳಿಗೆ ಸಂಬಂಧಿಸಿದ ವಿವರಗಳನ್ನು ಒಳಗೊಂಡ ಕಡತಗಳು ನಾಪತ್ತೆಯಾಗಿವೆ ಎಂದು ಪುರಸಭೆ ಅಧಿಕಾರಿಗಳೇ ತನಿಖೆ ವೇಳೆ ವರದಿ ಸಲ್ಲಿಸಿದ್ದರು.

ಆದರೆ ಕಣ್ಮರೆಯಾದ ಕಡತಗಳೇ ಈಗ ಪತ್ತೆಯಾಗಿ­ರು­ವುದು ಅಷ್ಟೇ ಅಲ್ಲದೇ, ಹಣ ಪಾವತಿಯಾಗಿ­ರುವ ಕಡತಗಳ ಬಿಲ್‌ಗಳಿಗೂ ಮತ್ತೆ ಹಣ ಪಾವತಿಸುವಂತೆ ಪುರಸಭೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿ­ರು­ವುದು ಸಂದೇಹಕ್ಕೆ ಎಡೆ ಮಾಡಿಕೊಟ್ಟಿದೆ. ಕಣ್ಮರೆ­ಯಾ­ಗಿದ್ದ ಕಡತಗಳು ಹಣ ಪಾವತಿಗೆ ಪುರಸಭೆಗೆ ಸಲ್ಲಿಕೆ­ಯಾ­ಗಿದ್ದು ಈ ಬಗ್ಗೆ ಪರಿಶೀಲನೆ ನಡೆಸಲಾಗು­ತ್ತಿದೆ ಎಂದು ಜಿಲ್ಲಾ ಅಭಿವೃದ್ಧಿ ಕೋಶದ ಮೂಲಗಳು ತಿಳಿಸಿವೆ.

‘ಕೆಲ ಹಳೆಯ ಕಡತಗಳು ಕಚೇರಿಯಲ್ಲೇ ಪತ್ತೆಯಾ­ಗಿವೆ. ಅವುಗಳಿಗೆ ಈ ಹಿಂದೆ ಹಣ ಪಾವತಿಯಾಗಿದೆಯೇ ಅಥವಾ ಈಗಲೂ ಹಣ ಪಾವತಿಸಬಹುದೇ ಎಂಬು­ದನ್ನು ಪರಿಶೀಲಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದೇನೆ. ಇಂಥ ಕಡತಗಳನ್ನು ಯಾರ ಬಳಿಯಾದರೂ ಕಂಡರೆ ಕ್ರಮ ಜರುಗಿಸುತ್ತೇವೆ. ಅಲ್ಲದೇ ಅವುಗಳ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಮಾಡುವುತ್ತೇವೆ’ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾದೇವ ಭೀಸೆ ಹೇಳಿದರು.

ಪತ್ತೆಯಾದ ಕಡತಗಳ ವಿವರ
2011–12 ರಲ್ಲಿ ಸಾಮಗ್ರಿ ಸರಬರಾಜು ಹೆಸರಿನಲ್ಲಿ ಪಟ್ಟಣದ ಮಂಜುನಾಥ ಆಗ್ರೋ ಏಜೆನ್ಸಿ ಕಡತಕ್ಕೆ ಸಂಬಂಧಿಸಿದ ₨ 2,88,762 ಹಣವನ್ನು (ಖಜಾನೆ ಚೆಕ್‌ ನಂ–183466) 2011ರ ಅ.27ರಂದು ಪಾವತಿಸಲಾಗಿತ್ತು. ಜಿಲ್ಲಾಡಳಿತ ತನಿಖೆ ನಡೆಸುವಾಗ ಈ ಕಡತ ನಾಪತ್ತೆಯಾಗಿತ್ತು. ಆದರೆ ಇದೇ ಕಡತ ಕೆಲ ದಿನಗಳ ಹಿಂದಷ್ಟೇ ಪತ್ತೆಯಾಗಿದ್ದು ಮತ್ತೆ ಅಷ್ಟೂ ಮೊತ್ತದ ಹಣ ಪಾವತಿಸುವಂತೆ ರಾಜಕಾರಣಿಗಳು ಒತ್ತಡ ಹೇರುತ್ತಿದ್ದಾರೆ ಎಂಬುದು ಗೊತ್ತಾಗಿದೆ.

ಅದೇ ರೀತಿ 2010–11ನೇ ವರ್ಷದಲ್ಲಿ ಸಾಮಗ್ರಿ ಖರೀದಿಗೆ ಸಂಬಂಧಿಸಿದ ಗದಗ ಮೂಲದ ಸಿದ್ದ­ರಾಮೇಶ್ವರ ಟ್ರೇಡಿಂಗ್‌ ಕಂಪೆನಿಯ ₨ 2,26,709 ಹಾಗೂ ₨ 1,24,509 ಮೊತ್ತದ ಎರಡು ಬಿಲ್‌ಗಳನ್ನು ಹಣ ಪಾವತಿಗಾಗಿ ಸಲ್ಲಿಸಲಾ­ಗಿದ್ದು ಈ ಬಿಲ್‌ಗಳಿಗೆ ಸಂಬಂಧಿಸಿದ ಹಣ ಪಾವತಿಸ­ಲಾಗಿ­ದೆಯೇ ಎಂಬ ಬಗ್ಗೆ ಪರೀಶೀಲಿಸಲಾಗುತ್ತಿದೆ ಎಂದು ಪುರಸಭೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT