ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತೆ ಹೇಳುವ ಚಿತ್ರಗಳು ‘ದಿ ಶಾಟ್‌’

Last Updated 29 ಮೇ 2016, 19:30 IST
ಅಕ್ಷರ ಗಾತ್ರ

ವೆಂಕಟಪ್ಪ ಆರ್ಟ್‌ ಗ್ಯಾಲರಿಯಲ್ಲಿ ನಡೆಯುತ್ತಿರುವ ‘ದಿ ಶಾಟ್‌’ ಛಾಯಾಚಿತ್ರಗಳ ಪ್ರದರ್ಶನದಲ್ಲಿರುವ ಯುವ ಛಾಯಾಗ್ರಾಹಕರ  ವಿವಿಧ ಬಗೆಯ ಚಿತ್ರಗಳು ವೀಕ್ಷಕರನ್ನು ಆಕರ್ಷಿಸುತ್ತಿವೆ. ಕೊಡಗಿನ ಕವಯತ್ರಿ, ನೃತ್ಯ ಕಲಾವಿದೆಯೂ ಆಗಿರುವ ಹವ್ಯಾಸಿ ಛಾಯಾಗ್ರಾಹಕಿ ರೇಖಾ ಗಣೇಶ್‌ ಭಾರದ್ವಾಜ್‌, ಫ್ಲಾಷ್‌ ಬಳಸದೆ  ಸಹಜ ಬೆಳಕಿನಲ್ಲಿ ಚಿತ್ರ ತೆರೆಯುವುದರಲ್ಲಿ ಆಸಕ್ತರು.

ಕಾಣೆಯಾದ ವ್ಯಕ್ತಿಗಳು, ಜಾನುವಾರುಗಳ ಪತ್ತೆಗಾಗಿ  ಹರಕೆ ಹೊತ್ತು  ಮಣ್ಣಿನ ಮುಖವಾಡವನ್ನು ದೇವರಿಗೆ ಒಪ್ಪಿಸುವ ಪದ್ಧತಿ ಕೊಡಗಿನ ಒಂದು ಭಾಗದಲ್ಲಿದೆ. ಹೀಗೆ ಹರಕೆಯಾಗಿ ಬಂದ ಮಣ್ಣಿನ ಮುಖವಾಡಗಳ ರಾಶಿಯನ್ನು ರೇಖಾ ಅವರು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ತಮ್ಮ ವ್ಯಥೆಯನ್ನು ನೋಡುಗರ ಜೊತೆ ಹೇಳಿಕೊಳ್ಳವಂತಿದೆ ಆ ಚಿತ್ರ. ಮೈಸೂರು ಮೂಲದ ಮೆಕ್ಯಾನಿಕಲ್‌ ಎಂಜಿನಿಯರ್‌ ಗಣೇಶ್‌ ಶಂಕರ್‌ ಅವರಿಗೆ  ಬೀದಿಯ ಚಿತ್ರಗಳನ್ನು ತೆಗೆಯುವುದೆಂದರೆ ಪ್ರೀತಿ.

ಮುಂಗಾರು ಆರಂಭದ ಕಾಲದಲ್ಲಿ ಡಾರ್ಜಿಲಿಂಗ್‌ನ ಗುಹೂ ರೈಲು ನಿಲ್ದಾಣದಲ್ಲಿ ಸುರಿಯುವ ಮಳೆಯಲ್ಲಿ ಕಾರ್ಮೋಡದ ಹಿನ್ನಲೆಯಲ್ಲಿ ಅವರು ತೆಗೆದಿರುವ ಕಪ್ಪು ಬಿಳುಪಿನ ಛಾಯಾಚಿತ್ರ ಹತ್ತಾರು ಬಿಂಬಗಳನ್ನು ಮನಸಿನಲ್ಲಿ ಮೂಡಿಸುತ್ತಿದೆ. 2011ರಲ್ಲಿ ಮುಂಬೈಯ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ದಿನದರ್ಶಿಕೆಯಲ್ಲಿ  ಇವರ ಛಾಯಾಚಿತ್ರವೊಂದನ್ನು ಬಳಸಿಕೊಳ್ಳಲಾಗಿದೆ.

ಬೆಂಗಳೂರು ಮೂಲದ ಛಾಯಾಗ್ರಾಹಕ ಕವೀರ್‌ ರೈ 16ರ ವಯಸಿನಲ್ಲಿಯೇ ಕ್ಯಾಮೆರಾ ಹಿಡಿದವರು. 2010ರಲ್ಲಿ ನ್ಯಾಷನಲ್‌ ಜಿಯಾಗ್ರಫಿಕ್‌ ಮೊಮೆಂಟ್‌ ಅವಾರ್ಡ್‌ ಪಡೆದಿದ್ದಾರೆ. 2015ರಲ್ಲಿ ನ್ಯಾಷನಲ್‌ ಜಿಯಾಗ್ರಫಿಯ  ಆನ್‌ಲೈನ್‌ ಎಡಿಷನ್‌ನಲ್ಲಿ ಇವರು ತೆಗೆದ ಛಾಯಾಚಿತ್ರ ಪಕಟಗೊಂಡಿದೆ. ಪ್ರದರ್ಶನದಲ್ಲಿರುವ  ನಾಸಿಕ್‌ನ ಗೋದಾವರಿಯ ಉಗಮ ಸ್ಥಾನದಲ್ಲಿ ನೀರು ಹೊತ್ತು ಬರುವ ಮಹಿಳೆಯ ಕಪ್ಪು ಬಿಳುಪು ಚಿತ್ರ ಆಕರ್ಷಕವಾಗಿದೆ.

ಬೆಂಗಳೂರಿನ ಎಂಜಿನಿಯರ್‌ ಕಾರ್ತಿಕ್‌ ವನ್ಯಜೀವಿ ಛಾಯಾಗ್ರಹಣದಲ್ಲಿ ಹೆಚ್ಚು ಆಸಕ್ತರು. ಸಾಕ್ಷ್ಯಚಿತ್ರ, ಸಿನೆಮಾದಲ್ಲೂ ದುಡಿದಿರುವ ಇವರ ಛಾಯಾಚಿತ್ರಗಳಲ್ಲಿ ಸೃಜನಶೀಲತೆ  ಎದ್ದು ಕಾಣುತ್ತದೆ. ಹಳ್ಳಿಯ ಜನಜೀವನವನ್ನು ಕೇಂದ್ರವಾಗಿಟ್ಟುಕೊಂಡು ಇವರು ಚಿತ್ರಗಳನ್ನು ತೆಗೆದಿದ್ದಾರೆ. ಉಲ್ಲಾಸ್‌ ದೇವನೂರು ಅವರಿಗೆ ಗ್ರಾಮೀಣ ಬದುಕಿನ ಕುರಿತು ಹೆಚ್ಚು ಕಾಳಜಿ.

ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗೆ ಅನೇಕ ಸಾಕ್ಷ್ಯಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಮೈಸೂರು ಸುತ್ತಮುತ್ತಲ ಗ್ರಾಮೀಣ ಜನಜೀವನವನ್ನು ಬಿಂಬಿಸುವ ಚಿತ್ರಗಳನ್ನು ದಿ ಶಾಟ್‌ ಪ್ರದರ್ಶನದಲ್ಲಿ ಕಾಣಬಹುದು. ಮೊಹಮದ್‌ ಒಮರ್‌ ಅವರು ಗೋವಾದ ಕಡಲ ಕಿನಾರೆಯಲ್ಲಿ ಸೆರೆಹಿಡಿದ ಚಿತ್ರಗಳು, ಶ್ರುತಿ ಆರಾಧ್ಯ, ಅಮಿತ್‌ ಪಾಟೀಲ್‌  ಅವರ  ಚಿತ್ರಗಳೂ ಪ್ರದರ್ಶನದಲ್ಲಿವೆ. ಈ ಪ್ರದರ್ಶನ ಮೇ 31ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT