ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತಲಲ್ಲಿ ಕಂಡ ಕನಸು ನಂಬುವವನು ನಾನು...

Last Updated 27 ಮೇ 2016, 2:41 IST
ಅಕ್ಷರ ಗಾತ್ರ

ಚಿತ್ರ ಮುಗಿದ ಬಳಿಕವೂ ಪ್ರೇಕ್ಷಕ ‘ಸ್ಟನ್‌’ ಆಗಿ ಕುಳಿತಿರುತ್ತಾನೆ. ಈ ಸಿನಿಮಾ ನೀಡುವ ಅಚ್ಚರಿ, ಹೊಸ ಲೋಕದ ಅನುಭವ ಹಾಗಿರಲಿದೆ. 61 ವರ್ಷದ ಮುದುಕ ಮತ್ತು 19ರ ಯುವತಿಯ ನಡುವೆ ಲಿಫ್ಟ್‌ ಒಂದರಲ್ಲಿ ಅರಳುವ ಪ್ರೀತಿಯ ಕಥೆ ಇದು.

ಇದು ಮಾಮೂಲಿ ಪ್ರೇಮಕಥಾನಕಗಳಿಗಿಂತ ಭಿನ್ನ. ಹಳೆಯ ಸಿನಿಮಾಗಳಲ್ಲಿ ಕಾಣುವ ಯಾವ ಅಂಶವೂ ಇಲ್ಲಿಲ್ಲ. ಗೊಳೋ ಎಂದು ಅಳುವ ದೃಶ್ಯಗಳಿಲ್ಲ, ಅಬ್ಬರದ ನಗು ಇಲ್ಲ.

ನಾಯಕ–ನಾಯಕಿಯ ಜಗಳಗಳಿಲ್ಲ. ಡ್ಯುಯೆಟ್‌ ಹಾಡುಗಳೂ ಇಲ್ಲ. ಆದರೂ ಪ್ರೇಕ್ಷಕರನ್ನು ಸಿನಿಮಾ ಹಿಡಿದಿಡುತ್ತದೆ. ಕಥೆಯ ಕಾರಣಕ್ಕೆ ಮಾತ್ರವಲ್ಲ, ತಾಂತ್ರಿಕತೆಯ ಕಾರಣಕ್ಕೂ. ಇಲ್ಲಿ ಕಥೆ ಎರಡು ಬಗೆಯಲ್ಲಿ ಸಾಗುತ್ತದೆ. ಒಂದು ಲಿಫ್ಟ್‌ನ ಒಳಗೆ– 90 ನಿಮಿಷದ ಕಥೆ ಲಿಫ್ಟ್‌ನಲ್ಲಿಯೇ ಸಾಗುತ್ತದೆ.

ಇನ್ನು ಧ್ವನಿಗಳ ಮೂಲಕ ಕಥೆಯ ಮತ್ತೊಂದು ಆಯಾಮ ಮುಂದುವರೆಯುತ್ತದೆ. ಸಿನಿಮಾದಲ್ಲಿ ಇರುವುದು ಮುದುಕ ಮತ್ತು ಯುವತಿಯ ಎರಡೇ ಮುಖ್ಯ ಪಾತ್ರಗಳು.ಅನುಭವ ಮತ್ತು ಮುಗ್ಧತೆಯ ರೂಪಗಳವು. ಉಳಿದಂತೆ ಬಂದು ಹೋಗುವ ಕೆಲವು ಪಾತ್ರಗಳ ನಡುವೆ, ಬಣ್ಣದ ಕಾಗದ ಮತ್ತು ಪೇಂಟಿಂಗ್‌ಗಳು ಮುಖ್ಯ ಪಾತ್ರಗಳಾಗುತ್ತವೆ.

61ರ ಮುದುಕನಲ್ಲಿ ತುಂಟತನವಿಲ್ಲ. ತನ್ನ ವಯಸ್ಸಿಗೆ ತಕ್ಕುದಾದ ತೂಕದ ಮಾತುಗಳಿರುತ್ತವೆ. 19ರ ಯುವತಿ ಆತನ ಪ್ರೀತಿಯಲ್ಲಿ ಬೀಳುವುದು ಈ ಕಾರಣಕ್ಕಾಗಿಯೇ. ಇಲ್ಲಿ ಕಾಣುವ ಪಾತ್ರ ಮತ್ತು ಸನ್ನಿವೇಶಗಳನ್ನು ಈ ಹಿಂದೆ ಯಾವ ಸಿನಿಮಾದಲ್ಲಿಯೂ ನೋಡಿರಲು ಸಾಧ್ಯವಿಲ್ಲ.

ಸಂದರ್ಭಗಳ ಮೇಲೆಯೇ...
ಇಲ್ಲಿ ನಾನು ಹೇಗಿರುವೆನೋ ಹಾಗೆಯೇ ಇರಬೇಕಿತ್ತು. ಅಭಿನಯಕ್ಕೆ ಸಿದ್ಧತೆ ಬೇಕಿರಲಿಲ್ಲ. ಅದನ್ನು ನಾನು ಯಾವತ್ತೂ ಮಾಡಿಕೊಂಡೂ ಇಲ್ಲ. ಪಾತ್ರಕ್ಕೆ ಸಿದ್ಧತೆ ಬೇಕಿತ್ತು. 61ರ ವಯಸ್ಸಿನ ವ್ಯಕ್ತಿಯ ಭಾಷೆಯ ಶೈಲಿ ಬೇಕಿತ್ತು. ಇಲ್ಲಿ ಎಲ್ಲವೂ ನಡೆಯುವುದು ಸಂದರ್ಭ ಮತ್ತು ಸನ್ನಿವೇಶಗಳ ಮೇಲೆಯೇ. ನಮ್ಮ ಆಗಿನ ಪರಿಸ್ಥಿತಿಯಂತೆ ಮನಸು ವರ್ತಿಸುತ್ತದೆ. ಹಾಗೆಯೇ ಇದು. ಇದು ಹೇಗೋ ಆಕಸ್ಮಿಕವಾಗಿ ಹುಟ್ಟಿದ ಕಿಡಿ.

ನಾನು ಮಾಡಬೇಕು ಎಂದು ಕನಸು ಕಾಣುವುದಿಲ್ಲ. ಕಿಡಿ ಹುಟ್ಟಿದಾಗ ಕನಸು ಬೆಳೆಸುತ್ತೇನೆ. ಹುಟ್ಟಿದ್ದನ್ನು ಬಿಡುವ ಜಾಯಮಾನವಲ್ಲ. ಅದನ್ನು ಬೆಳೆಸಿದೆ. ಎಲ್ಲವೂ ತಾನಾಗಿಯೇ ರೂಪ ಪಡೆದುಕೊಂಡವು. ಸಿನಿಮಾ ಆಯಿತು. ನಾನು ಅಂದುಕೊಂಡಂದ್ದನ್ನು ಪರದೆ ಮೇಲೆ ಕಾಣಿಸುವುದೇ ಕನಸು. ಈ ಕನಸನ್ನು ನೆರವೇರಿಸುವುದೇ ನನಗಿದ್ದ ಸವಾಲು. ಸಂದರ್ಭಗಳೇ ಅದನ್ನು ಸಾಕಾರಗೊಳಿಸಿದವು. ಅಂದಿನ ಪರಿಸ್ಥಿತಿಯಂತೆ ಮನಸು ಕೆಲಸ ಮಾಡುತ್ತದೆ. ಹೀಗಾಗಿ ಈ ಚಿತ್ರ ‘ಡಿಸೈನ್ಡ್‌ ಬೈ ರವಿಚಂದ್ರನ್‌’– ರಿಟನ್‌ ಆ್ಯಂಡ್‌ ನರೇಟೆಡ್‌ ಬೈ ಮೈಂಡ್‌. ಫ್ರೇಮ್ಸ್‌ ಬೈ ಐಸ್‌.

ಕಥೆಯಲ್ಲಿಯೂ ಸಂದರ್ಭ 61ರ ವಯಸ್ಸಿನವನನ್ನು ಪ್ರೀತಿಯಲ್ಲಿ ಬೀಳಿಸುತ್ತದೆ. ಅದು ಸಾವಿಗೂ ಸಮೀಪವಿರುತ್ತದೆ. ಆದರೆ ಸಾವು ಕೂಡ ಪ್ರೀತಿಯನ್ನು ನೋಡಿ ತಲೆ ಬಾಗುತ್ತದೆ. ವಾಸ್ತವ ಜಗತ್ತಿಗೆ ಮರಳಿದಾಗ 19 (ಯುವತಿ) ಬದಲಾಗುತ್ತದೆ, 61 (ವೃದ್ಧ) ಬದಲಾಗುವುದಿಲ್ಲ. ಅಲ್ಲಿಂದ ಅದು ಬೇರೆಯದೇ ಹೊಸ ಕಥೆಗಳಿಗೆ ಹೊರಳುತ್ತದೆ.

ಸತ್ಯವೇ ತತ್ವ
ರವಿಚಂದ್ರನ್‌ ಇತ್ತೀಚೆಗೆ ಫಿಲಾಸಫಿಯ ಮಾತುಗಳನ್ನಾಡುತ್ತಿದ್ದಾರೆ ಎನ್ನುತ್ತಾರೆ. ಆದರೆ ಸತ್ಯವೇ ಫಿಲಾಸಫಿ. ನಿಜ ಮಾತನಾಡಿದರೆ ತತ್ವಶಾಸ್ತ್ರದಂತೆ ಕಾಣಿಸುತ್ತದೆ. ಈ ಹಿಂದೆಯೂ ಹೀಗೆಯೇ ಮಾತನಾಡುತ್ತಿದ್ದೆ. ಆಗ ತಮಾಷೆ ಮತ್ತು ವ್ಯಂಗ್ಯ ಹೆಚ್ಚಿರುತ್ತಿತ್ತು. ಆಗಿನ ಮಾತುಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ನನ್ನನ್ನು ಆಗ ನೋಡುತ್ತಿದ್ದ ರೀತಿಯೇ ಬೇರೆ, ಈಗ ನೋಡುತ್ತಿರುವ ರೀತಿಯೇ ಬೇರೆ.

ನೂರು ಕೋಟಿ ದಾಟಿ...
‘ಈ ಸಿನಿಮಾ ನೂರು ಕೋಟಿ ರೂಪಾಯಿ ಗಳಿಸುತ್ತದೆ’ ಎಂದೆ. ಇದನ್ನು ಸಿದ್ಧತೆ ಮಾಡಿಕೊಂಡು ಅಥವಾ ಯೋಜನೆ ಹಾಕಿ ಹೇಳಿದ್ದಲ್ಲ. ಈ ಮಾತು ಹೇಗೆ ಹೊರ ಬಂತು ಎಂಬುದೂ ಗೊತ್ತಿಲ್ಲ. ಎಷ್ಟೋ ಮಂದಿ ಇದನ್ನು ದುರಹಂಕಾರ ಎಂದು ಕರೆದರು. ಕತ್ತಲಲ್ಲಿ ಕಂಡ ಕನಸನ್ನು ನಂಬುವವನು ನಾನು, ಮನಸಿಗೆ ಬಂದದ್ದನ್ನು ನಂಬದೆಯೇ ಇರುತ್ತೇನೆಯೇ? ಹಿಂದಿ, ತೆಲುಗು ಹೀಗೆ ಬೇರೆ ಭಾಷೆಗಳಿಗೆ ಹೋದರೆ ನೂರಲ್ಲ, ಐನೂರು ಕೋಟಿಯೂ ಗಳಿಸಬಹುದು.

ಎಲ್ಲಾ ಭಾಷೆಗೂ ಸಿನಿಮಾ ಹೋಗಬೇಕು. ಯಾರೂ ಬೇಡ ಎನ್ನುವುದಂತೂ ಇಲ್ಲವಲ್ಲ. ‘ಪ್ರೇಮಲೋಕ’ವನ್ನು ಎಲ್ಲ ಭಾಷೆಯವರೂ ನೋಡಲಿಲ್ಲವೇ? ಹಾಗೆಯೇ ಇದನ್ನೂ ನೋಡುತ್ತಾರೆ. ಸಿನಿಮಾ ಬಿಡುಗಡೆ ವಿಳಂಬವಾದಾಗ ಅನೇಕರು, ‘ಹಣ ಖಾಲಿಯಾಗಿದೆ, ಗೊಂದಲದಲ್ಲಿ ಇದ್ದಾರೆ’ ಎಂದು ಹೇಳಿದರು. ಆದರೆ ಹಣದ ಕೊರತೆ ಇರಲಿಲ್ಲ, ಗೊಂದಲವಂತೂ ಇರಲೇ ಇಲ್ಲ. ನಾನು ಅಂದುಕೊಂಡಂತೆ ಸಿನಿಮಾ ಬರಬೇಕಿತ್ತು. ಆ ಕಾರಣದಿಂದ ತಡವಾಯಿತು.

ಹೊಸ ಅನುಭವ
‘ಅಪೂರ್ವ’ ನನಗೆ ಹೊಸ ಅನುಭವ ನೀಡಿದೆ. ಹೊಸತನ್ನು ಕಲಿಸಿದೆ. ಈ ಚಿತ್ರದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದ್ದೇನೆ. ಇಡೀ ಕಥೆ ಸಂಗೀತದೊಂದಿಗೆ ಪಯಣಿಸುತ್ತದೆ.

ಸಂಗೀತವಿಲ್ಲದೆ ಸಿನಿಮಾವಿಲ್ಲ. ಕೆಲವು ಸನ್ನಿವೇಶ ಬದಲಿಸಬೇಕಾದಾಗ ಅದಕ್ಕೆ ತಕ್ಕಂತೆ ಸಂಗೀತವನ್ನೂ ಬದಲಿಸಿದ್ದೇನೆ. ಒತ್ತಡದಲ್ಲಿ ಕೆಲಸ ಮಾಡುವವನು ನಾನು. ಆದರೆ ಈ ಸಿನಿಮಾಕ್ಕೆ ಎಂದೂ ಒತ್ತಡ ಹಾಕಿಕೊಂಡು ಕೆಲಸ ಮಾಡಿಲ್ಲ. ಸರಿ ಬಾರದಿದ್ದಾಗ ತಲೆ ಕೆಡಿಸಿಕೊಳ್ಳದೆ ಅಲ್ಲಿಗೇ ಬಿಟ್ಟಿದ್ದೇನೆ. ಇಲ್ಲಿ ಪದೇ ಪದೇ ಚಿತ್ರೀಕರಣ ಮಾಡಿಲ್ಲ. ಸರಿ ಹೊಂದದ ದೃಶ್ಯಗಳನ್ನು ಬದಲಿಸಿದ್ದೇನೆ. ಹೆಚ್ಚಿನ ಸಮಯ ಕಳೆದಿದ್ದು ಎಡಿಟಿಂಗ್ ಮೇಜಿನ ಮೇಲೆ.

ಅಂದಹಾಗೆ, ಇಲ್ಲಿನವು ನನಗೆ ಪ್ರಯೋಗಗಳೇ ಹೊರತು ಪ್ರೇಕ್ಷಕರಿಗಲ್ಲ. ಪ್ರಯೋಗಗಳು ಕಾಣಿಸುವುದೂ ಇಲ್ಲ. ಮನಸಾರೆ, ಹೃದಯದಿಂದ ಸಿನಿಮಾ ನೋಡಿ, ‘ಅಪೂರ್ವ’ ಇಷ್ಟವಾಗುತ್ತದೆ.

ಅಭಿಮಾನಿಗಳು ಮೆಚ್ಚುತ್ತಾರೆ ಎಂದು ಅದೇ ಫೈಟ್‌, ಡ್ಯುಯೆಟ್‌ನ ಸಿನಿಮಾ ಮಾಡಲು ಆಗುವುದಿಲ್ಲ. ಹೊಸತನ್ನು ನೀಡಬೇಕು. ನಮ್ಮ ಕನಸನ್ನು ಅವರಿಗೆ ತಲುಪಿಸಬೇಕು. ಅವರನ್ನು ಇಷ್ಟಪಡುವಂತೆ ಮಾಡುವುದು ಸಿನಿಮಾಕರ್ತೃಗಳ ಜವಾಬ್ದಾರಿ.

ಧ್ವನಿಗಳ ಕಥೆ
ಏನೋ ಹೊಸತನ ನೀಡಬೇಕು ಎಂದೆನಿಸಿದಾಗ ಹೊಳೆದದ್ದು ಸುದೀಪ್‌ ಹೆಸರು. ಸುದೀಪ್‌ ಧ್ವನಿ ನೀಡಿದಾಗ ಇಡೀ ಸಿನಿಮಾದಲ್ಲಿ ಒಂದು ಪಾಸಿಟಿವ್‌ನೆಸ್‌ ಆವರಿಸಿತು.ಸುದೀಪ್ ಮತ್ತು ರವಿಶಂಕರ್‌ ಒಂದು ದೃಶ್ಯದಲ್ಲಿ ಬಂದು ಹೋಗುತ್ತಾರೆ. ರಂಗಾಯಣ ರಘು, ಪ್ರಕಾಶ್‌ ರೈ, ತಾರಾ ಮುಂತಾದವರ ಧ್ವನಿಗಳು ಕಥೆಗಳನ್ನು ಹೇಳುತ್ತಾ ಹೋಗುತ್ತವೆ. ಅವರು ತೆರೆಯ ಮೇಲೆ ಬರುವುದಿಲ್ಲ.

ಸಾಹಿತ್ಯದ ವಿಚಾರದಲ್ಲಿ ನಾನು ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳುವುದಿಲ್ಲ. ನನ್ನ ಹಿಂದಿನ ಸಾಹಿತ್ಯದೊಂದಿಗೆ ಹೋಲಿಸುತ್ತೇನೆ. ಆ ವಿಚಾರದಲ್ಲಿ ಸುಧಾರಿಸಿದ್ದೇನೆ.

ಈಗಿನ ಹಾಡುಗಳಲ್ಲಿ ಸಾಹಿತ್ಯ ಕೇಳಿಸುವುದಿಲ್ಲ. ಆದರೆ ಇಲ್ಲಿನ ಹಾಡುಗಳಲ್ಲಿ ಪ್ರತಿ ಪದವೂ ಕೇಳಿಸುತ್ತದೆ. ಹಾಡುಗಳೂ ಕಥೆ ಹೇಳುತ್ತವೆ. ಇಷ್ಟು ದಿನ ನನ್ನ ಹಾಡಿಗೆ ನೀವು ಕಿವಿ ಕೊಡುತ್ತಿರಲಿಲ್ಲ. ಈಗ ಕಿವಿಯ ಹತ್ತಿರದಲ್ಲಿಯೇ ಇಟ್ಟುಕೊಳ್ಳುವಿರಿ. ಇಲ್ಲಿ ಸಾಹಿತ್ಯ ಕೇಳಿದಾಗಲೇ ಕಥೆಯೂ ಅರ್ಥವಾಗುತ್ತದೆ. ಪ್ರತಿಯೊಂದರಲ್ಲಿಯೂ ಹೊಸತನ್ನು ಕಾಣುವ ಅಂಶಗಳು ಪ್ರತಿ ಫ್ರೇಮಿನಲ್ಲಿಯೂ ಇರುತ್ತದೆ.

ಸಂಭ್ರಮದ ಹುಟ್ಟುಹಬ್ಬ
ಈ ಬಾರಿಯದು ನನ್ನ ಪಾಲಿಗೆ ಅತ್ಯಂತ ಸಂಭ್ರಮದ ಜನ್ಮದಿನಾಚರಣೆ. ಪ್ರತಿ ಬಾರಿಯೂ ಯಾವುದಾದರೂ ಒತ್ತಡ ಇರುತ್ತಿತ್ತು. ಮನಃಪೂರ್ವಕವಾಗಿ ಆಚರಿಸಲು ಆಗುತ್ತಿರಲಿಲ್ಲ. ಆದರೆ ಈ ಸಲ ಹುಟ್ಟುಹಬ್ಬವನ್ನು ಆಚರಿಸಲು ಬಯಸಿದ್ದೇನೆ. ನನಗೆ ತೃಪ್ತಿ ಕೊಡುವ ಸಿನಿಮಾ ಮಾಡಿದ್ದೇನೆ. ಜನರಿಗೆ ಖಂಡಿತಾ ಇಷ್ಟವಾಗುತ್ತದೆ. ಇದಕ್ಕಿಂತ ಸಂಭ್ರಮದ ಗಳಿಗೆ ಬೇರೊಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT