ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ ಕೇಳುವ ಸಮಯ...

ಕೇಳಿ ಕಥೆಯ, ಒಂದಲ್ಲ ಆರು!
Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ಕನ್ನಡ ಭಾಷೆಯನ್ನು, ಸಾಹಿತ್ಯವನ್ನು ಜನರಿಗೆ ಇನ್ನಷ್ಟು ಹತ್ತಿರ ಕೊಂಡೊಯ್ಯುವ ವಿನೂತನ ಪ್ರಯತ್ನವೊಂದು ನಡೆಯುತ್ತಿದೆ. ಅದೇ ‘ಕೇಳಿ ಕಥೆಯ’ ಆಡಿಯೊ ಪುಸ್ತಕ. ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿರುವ ಕನ್ನಡ ಕಥನ ಸಾಹಿತ್ಯವನ್ನು ಆಡಿಯೊ ರೂಪದಲ್ಲಿ ಕರ್ಣಪಟಲಕ್ಕೆ ಕೇಳಿಸುವ ಹೊಸ ಪ್ರಯತ್ನವೇ ‘ಕೇಳಿ ಕಥೆಯ’.

ಅಂದಹಾಗೆ ಈ ‘ಕೇಳಿ ಕಥೆಯ’ ಕನ್ನಡದ ಆರು ಮಂದಿ ಕಥೆಗಾರರ ಏಳು ಕಥೆಗಳನ್ನು ಆಡಿಯೊ ರೂಪಕ್ಕೆ ತಂದಿರುವ ವಿಶಿಷ್ಟ ಪ್ರಯತ್ನ. ಆಡಿಯೊ ಪುಸ್ತಕಕ್ಕೆ ದೊಡ್ಡ ಬೇಡಿಕೆ ಇದ್ದರೂ ಕನ್ನಡದಲ್ಲಿ ಈ ರೀತಿಯ ಪ್ರಯತ್ನಗಳು ವಿರಳವಾಗಿ ನಡೆಯುತ್ತಿವೆ. ಆಧುನಿಕ ಬದುಕಿನ ಒತ್ತಡಗಳು, ಸಮಯದ ಅಭಾವ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಆಸಕ್ತಿ, ಅಭಿರುಚಿ ಇದ್ದರೂ ಪುಸ್ತಕಗಳನ್ನು ಓದಲಾಗುತ್ತಿಲ್ಲ ಎನ್ನುವ ಬೇಸರ ಅನೇಕರದ್ದು. ಇಂಥ ಮಂದಿಗೆ ಹಾಗೂ ಕನ್ನಡದ ಹೊಸ ತಲೆಮಾರಿಗೆ ಸಾಹಿತ್ಯದ ಅಭಿರುಚಿ ಬೆಳೆಸುವ ಮತ್ತು ಅನಕ್ಷರಸ್ಥರಿಗೂ ಕಥೆಗಳನ್ನು ತಲುಪಿಸುವ ವಿಶಿಷ್ಟ ಪ್ರಯತ್ನ ‘ಕೇಳಿ ಕಥೆಯದ್ದು’.

ಪೂರ್ಣಚಂದ್ರ ತೇಜಸ್ವಿ ಅವರ ‘ಡೇರ್ ಡೆವಿಲ್ ಮುಸ್ತಫ’, ಜಯಂತ್ ಕಾಯ್ಕಿಣಿ ಅವರ ‘ದಗಡೂ ಪರಬನ ಅಶ್ವಮೇಧ’, ರವಿ ಬೆಳಗೆರೆ ಅವರ ‘ಮಸೀದಿ ಬಿದ್ದ ಮೂರನೇ ದಿನ’, ನಾ. ಡಿಸೋಜಾ ಅವರ ‘ಪುಟ್ಟಜ್ಜಿ ಕಥೆ ಹೇಳು’ ಮತ್ತು ‘ಕೋಗಿಲೆ’, ವಸುಧೇಂದ್ರ ಅವರ ‘ಕೆಂಪು ಗಿಣಿ’ ಮತ್ತು ವಿಕ್ರಮ್ ಹತ್ವಾರ್ ಅವರ ‘ಕಾಯಕವೇ ಕೈಲಾಸ’ ಕಥೆಗಳು ಮೂರು ಗಂಟೆಗಳ ಆಡಿಯೊ ಪುಸ್ತಕದಲ್ಲಿ ಅಡಕವಾಗಿವೆ. ಪ್ರಸಿದ್ಧ ನಟರಾದ ಸುಚೇಂದ್ರ ಪ್ರಸಾದ್, ಪ್ರಕಾಶ್ ರೈ, ಕಿಶೋರ್, ರಕ್ಷಿತ್ ಶೆಟ್ಟಿ, ಗಾಯಕಿ ಎಂ.ಡಿ. ಪಲ್ಲವಿ, ನಿರ್ದೇಶಕ ಟಿ.ಎಸ್‌. ನಾಗಾಭರಣ ಇಲ್ಲಿನ ಕಥೆಗಳಿಗೆ ದನಿಯಾಗಿದ್ದಾರೆ.

ಅಂದಹಾಗೆ, ‘ಕೇಳಿ ಕಥೆಯ’ ಪರಿಕಲ್ಪನೆ ಹುಟ್ಟಿದ್ದು 2013ರಲ್ಲಿ. ಕಲೆ ಮತ್ತು ಸಾಹಿತ್ಯದ ಗೀಳಿಗೆ ಸಿಕ್ಕಿರುವ ಐಟಿ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮಾನ ಮನಸ್ಕ ಗೆಳೆಯರಾದ ಮುಕುಂದ್ ಸೆಟ್ಲೂರ್, ಕಿರಣ್ ಮಂಜುನಾಥ್, ನಿತೇಶ್ ಕುಂಟಾಡಿ, ಸತೀಶ್ ಗೌಡ, ರೂಪ ಲಕ್ಷ್ಮಿ, ಹರೀಶ್ ಮಲ್ಯ, ಪ್ರಮೋದ್ ಪಟಗಾರ್, ಮಾನಸ ಭಾರದ್ವಾಜ್ ಇದರ ರೂವಾರಿಗಳು. 150 ರೂಪಾಯಿ ಬೆಲೆಯ ಈ ಆಡಿಯೊ ಪುಸ್ತಕ ಆಗಸ್ಟ್‌ ಎರಡನೇ ವಾರದಿಂದ ಮಾರುಕಟ್ಟೆಯಲ್ಲಿ ಲಭ್ಯ.

‘ಮಕ್ಕಳಿಗೆ ಒಂದು ಆಡಿಯೊ ಪುಸ್ತಕ ಮಾಡಬೇಕು ಎಂದು ಹೊರಟೆವು. ಆದರೆ ಮಕ್ಕಳು ನೋಡಲು ಟಿ.ವಿ ಚಾನೆಲ್‌ಗಳು ಇವೆ. ಆದ್ದರಿಂದ ಮಕ್ಕಳು ಕನ್ನಡವನ್ನು ಕೇಳುವ ಅಭ್ಯಾಸ ಬೆಳೆಸಿಕೊಳ್ಳಲಿ ಎನ್ನುವ ಕಾರಣಕ್ಕೆ ಈ ಆಡಿಯೊ ರೂಪುರೇಷೆ ಸಿದ್ಧಮಾಡಿಕೊಂಡೆವು. ಸಣ್ಣ ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೂ ಇಷ್ಟವಾಗುವ ಕಥೆಗಳನ್ನು ಬಳಸಿಕೊಳ್ಳಲಾಯಿತು. ವೆಬ್‌ಸೈಟ್‌ಗೆ ಚಾಲನೆ ನೀಡಿದ ಮರುದಿನವೇ 133 ಲೈಕುಗಳು ಮತ್ತು 70ಕ್ಕೂ ಜನರು ಆಡಿಯೊ ಪುಸ್ತಕ ಕೊಳ್ಳಲು ಆರ್ಡರ್‌ ಮಾಡಿದ್ದಾರೆ.

ವಿದೇಶಗಳಿಂದಲೂ ಬೇಡಿಕೆ ಬಂದಿದೆ. ಕಥೆಯ ಹಕ್ಕು ನೀಡಲು ಯಾವ ಕಥೆಗಾರರೂ ನಮ್ಮಿಂದ ಹಣ ತೆಗೆದುಕೊಂಡಿಲ್ಲ. ಕನ್ನಡ ಸಾಹಿತ್ಯವನ್ನು ಓದಿಕೊಳ್ಳದೆ ಒಂದು ತಲೆಮಾರು ಕಳೆದುಹೋಗಿದೆ. ದುಡಿಮೆಗೆ ನಮಗೆ ನಮ್ಮದೇ ಆದ ಕೆಲಸಗಳಿವೆ. ‘ಅವಿರತ’ ಸಂಸ್ಥೆಗಾಗಿಯೂ ಈ ಆಡಿಯೊ ಮಾಡಿಕೊಡುತ್ತಿದ್ದೇವೆ. ಲಾಭಾಂಶವನ್ನು ಗಡಿ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನೆರವು ನೀಡಲು ಬಳಸಿಕೊಳ್ಳಲಾಗುವುದು. ಸುಮಾರು 1000 ಆಡಿಯೊ ಪ್ರತಿಗಳಿಗೆ 70–80 ಸಾವಿರ ರೂಪಾಯಿ ವೆಚ್ಚವಾಗುತ್ತಿದೆ’ ಎಂದು ಕೇಳಿ ಕಥೆಯ ಕುರಿತು ವಿವರಿಸಿದರು ಆಡಿಯೊ ಪುಸ್ತಕದ ರೂವಾರಿಗಳಲ್ಲಿ ಒಬ್ಬರಾದ ಮುಕುಂದ್‌ ಸೆಟ್ಲೂರ್.

ಮುಂದಿನ ದಿನಗಳಲ್ಲಿ ತಮ್ಮ ಈ ಆಡಿಯೊ ಯೋಜನೆಯನ್ನು ವಿಸ್ತರಿಸುವ ನಿಲುವು ಅವರದ್ದು. ‘ಮೊದಲ ಹೆಜ್ಜೆಗೆ ಸಿಕ್ಕುವ ಯಶಸ್ಸು ನೋಡಿ ಮುಂದಿನ ಹೆಜ್ಜೆ ಇಡುವೆವು. ಕರ್ನಾಟದಲ್ಲಿರುವ ಒಬ್ಬ ವ್ಯಕ್ತಿ ಕಥೆಯನ್ನು ಬರೆದು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬಹುದು. ಅದನ್ನು ಅಮೆರಿಕದಲ್ಲಿರುವ ವ್ಯಕ್ತಿ ಓದಿ ಇಷ್ಟಪಟ್ಟು ದನಿಯಲ್ಲಿ ರೆಕಾರ್ಡ್ ಮಾಡಬಹುದು; ಆ ಕಥೆಯನ್ನು ಆಫ್ರಿಕಾದಲ್ಲಿರುವ ಕನ್ನಡಿಗ ಕೇಳಬಹುದು. ಅಮೆರಿಕ ದಲ್ಲಿ ವಾರ್ಷಿಕ 1.2 ಬಿಲಿಯನ್ ಡಾಲರ್ ಆಡಿಯೊ ಪುಸ್ತಕದ ವಹಿವಾಟು ನಡೆಯುತ್ತದೆ’ ಎಂದು ತಮ್ಮ ಮುಂದಿನ ಆಲೋಚನೆಗಳನ್ನು ಹಂಚಿಕೊಂಡರು.  http://kelikatheya.kuntadynithesh.com/index.html ವೆಬ್‌ಸೈಟ್‌ನಲ್ಲಿ ಪೂರ್ಣ ಮಾಹಿತಿ ಪಡೆಯಬಹುದು.

ಓದುಗ ವರ್ಗದ ವಿಸ್ತರಣೆ
‘ತುಂಬಾ ದಿನಗಳಿಂದ ಈ ರೀತಿಯ ಪ್ರಯತ್ನ ನಡೆಯುತ್ತಿದೆ. ಆದರೆ ಆ ಪ್ರಯತ್ನಗಳು ಗಂಭೀರವಾಗಿಲ್ಲ. 2006ರಲ್ಲಿ ನನ್ನ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ಪುಸ್ತಕವನ್ನು ಆಡಿಯೊ ಪುಸ್ತಕದಲ್ಲಿ ನಾನು ತಂದಿದ್ದೆ. ಜಿ.ಎನ್. ಮೋಹನ್ ‘ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ’ ಎನ್ನುವ ಕವಿತೆಗಳನ್ನು ಆಡಿಯೊ ರೂಪದಲ್ಲಿ ತಂದಿದ್ದರು. ಭಾರತೀಯ ಸಂಸ್ಕೃತಿಯಲ್ಲಿ ಕಥೆ ಹೇಳುವುದು ಮತ್ತು ಕೇಳುವುದು ಇದೆ. ಕಥೆ ಬರೆಯುವುದು, ಓದುವುದು ಪಾಶ್ಚಾತ್ಯರ ಪ್ರಯೋಗ. ಹೊಸತಲೆಮಾರಿನ ಹುಡುಗರಿಗೆ ಕನ್ನಡ ಮಾತನಾಡಲು ಬರುತ್ತದೆ. ಆದರೆ ಓದುವುದಕ್ಕೆ ಬರುವುದಿಲ್ಲ. ಅವರು ಕನ್ನಡ ಪುಸ್ತಕಗಳಿಂದ ದೂರವಾಗುತ್ತಿದ್ದಾರೆ. ಅವರಿಗೆ ಈ ಆಡಿಯೊ ಪುಸ್ತಕಗಳು ಅನುಕೂಲವಾಗುತ್ತದೆ. ರೈತರಿಗೆ ಓದಲು ಬರುವುದಿಲ್ಲ, ಆದರೆ ಕನ್ನಡ ಬರುತ್ತದೆ. ಇದು ಅವರಿಗೂ ತಲುಪಬೇಕು. ಗ್ರಾಮಸ್ಥರ ಬಳಿಯೂ ಮೊಬೈಲ್ ಫೋನ್‌ಗಳು ಇರುತ್ತವೆ. ಅವರೂ ಕಥೆಗಳನ್ನು ಕೇಳಲು ಸಾಧ್ಯವಾಗುತ್ತದೆ. ನ್ಯೂಯಾರ್ಕ್‌ನಲ್ಲಿರುವ ನಮ್ಮ ಆಧುನಿಕ ಹುಡುಗ ಕಾರಿನಲ್ಲಿ ಕುಳಿತು ಕಥೆಗಳನ್ನು ಕೇಳಬಹುದು. ಇದರಿಂದ ಹೊಸ ಓದುಗ ವರ್ಗ ಹುಟ್ಟಲು ಸಾಧ್ಯವಾಗುತ್ತದೆ.

ಆಡಿಯೊ ಪುಸ್ತಕಕ್ಕೆ ತಗಲುವ ವೆಚ್ಚ ಕಡಿಮೆ. ಒಂದು ಪುಸ್ತಕಕ್ಕೆ ನೂರು ರೂಪಾಯಿ ಕೊಡಬೇಕಾಗುತ್ತದೆ. ಅದು ಆಡಿಯೊ ರೂಪಕ್ಕೆ ಬಂದರೆ ಕಡಿಮೆ ಹಣದಲ್ಲಿ ತಲುಪುತ್ತದೆ. ಮಾರುಕಟ್ಟೆಯೂ ಇದೆ. ಆಡಿಯೊ ಪುಸ್ತಕಗಳು ಪುಸ್ತಕಗಳ ಅಂಗಡಿಗಳ ಮೂಲಕ ಮಾರಾಟ ಮಾಡದೆ, ಸಂಗೀತ ಸಿ.ಡಿ., ಡಿ.ವಿ.ಡಿ. ಅಂಗಡಿಗಳ ಮೂಲಕ ಮಾರಾಟವಾಗಬೇಕು. ಎಷ್ಟೋ ಜನರಿಗೆ ಕಥೆ ಹೇಳುವುದಕ್ಕೆ ಬರುತ್ತದೆ. ಕಥೆ ಬರೆಯುವುದಕ್ಕೆ ಬರುವುದಿಲ್ಲ. ಅವರಿಗೂ ಇದು ಒಂದು ಅಭಿವ್ಯಕ್ತಿ ಮಾಧ್ಯಮವಾಗುತ್ತದೆ. ಎಲ್ಲರಿಗಿಂತ ಹೆಚ್ಚು ಅನುಕೂಲವಾಗುವುದು ಅಂಧರಿಗೆ. ಬ್ರೈಲ್‌ನಲ್ಲಿ ಪುಸ್ತಕ ಮಾಡಲು ಅಪಾರ ವೆಚ್ಚವಾಗುತ್ತದೆ. ಆದ್ದರಿಂದ ಅವರಿಗೆ ಕೇಳುವ ಅವಕಾಶ ಮಾಡಿಕೊಟ್ಟರೆ ವರದಾನವಾಗುತ್ತದೆ.
–ವಸುಧೇಂದ್ರ, ಕಥೆಗಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT