ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸಿನಿಂದ ವಾಸ್ತವದತ್ತ...

Last Updated 20 ನವೆಂಬರ್ 2014, 19:30 IST
ಅಕ್ಷರ ಗಾತ್ರ

‘ಲೂಸಿಯಾ’ ಗುಳಿಗೆ ನೀಡಿ ಪ್ರೇಕ್ಷಕನನ್ನು ಮರುಳು ಮಾಡಿದವರು ನಿರ್ದೇಶಕ ಪವನ್ ಕುಮಾರ್‌. ಅವರೀಗ ‘C10H14N2’ ಹೆಸರಿನ ಶಕ್ತಿಶಾಲಿ ಮದ್ದಿನೊಂದಿಗೆ ಮರಳಿದ್ದಾರೆ. ಈ ನೆಪದಲ್ಲಿ ‘ಸಿನಿಮಾ ರಂಜನೆ’ ಜೊತೆ ಅವರು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

*‘C10H14N2’ ಮತ್ತೆ ಪ್ರೇಕ್ಷಕನನ್ನು ಗೊಂದಲಕ್ಕೆ ಸಿಕ್ಕಿಸುವ ಯತ್ನವೇ?
ಇಲ್ಲ. ಇದು ತುಂಬಾ ಸರಳ ಕಥೆ. ‘ಲೂಸಿಯಾ’ದಂತೆ ನಾನ್‌ ಲೀನಿಯರ್‌ ಆಗಿಲ್ಲ. ಕಥೆ ತಂಬಾಕಿನ ಹಿನ್ನೆಲೆಯದು. ಶೀರ್ಷಿಕೆಯನ್ನು ‘ಸಿಗರೇಟ್‌’ ಅಥವಾ ‘ಹೊಗೆ’ ಎಂದು ಇಡಬಹುದು. ಆದರೆ ‘C10H14N2’ ಎಂದರೆ ಜನರೂ ಏನಿದು ಎಂದು ಅರ್ಥ ಹುಡುಕುತ್ತಾರೆ. ಶೀರ್ಷಿಕೆ ಆಸಕ್ತಿದಾಯಕವೂ ಆಗಿರಬೇಕಲ್ಲ. ಸಿನಿಮಾ ಶುರುವಾದ ಬಳಿಕ ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಶೀರ್ಷಿಕೆ ಸ್ವರೂಪ ತುಸು ಬದಲಾಗಲಿದೆ. ತಂಬಾಕು ಕಂಪೆನಿಯಲ್ಲಿ ಕೆಲಸ ಮಾಡುವ ಮೂವರ ಮೇಲೆ ಸಿನಿಮಾ ಸಾಗುತ್ತದೆ. ತಂಬಾಕು ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ನೇರವಾಗಿ ಹೇಳುವುದಿಲ್ಲ. ತಂಬಾಕು ಕಂಪೆನಿಗಳ ಪರ ಅಥವಾ ವಿರುದ್ಧವೂ ಅಲ್ಲ. ಆದರೆ ಅದರಲ್ಲೊಂದು ಸಂದೇಶ ಇರಲಿದೆ. ಅದನ್ನು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಪ್ರೇಕ್ಷಕನಿಗೇ ಬಿಟ್ಟಿದ್ದು. ಉಳಿದಂತೆ ಸಿನಿಮಾ ಪ್ರೇಕ್ಷಕನಿಗೆ ಸುಲಭವಾಗಿ ತಲುಪುತ್ತದೆ. ಮನರಂಜನೆ, ಥ್ರಿಲ್ಲರ್‌, ಆ್ಯಕ್ಷನ್‌ ಅಂಶಗಳೂ ಇವೆ. ಸಂಪೂರ್ಣವಾಗಿ ಕಾರ್ಪೋರೆಟ್‌ ಹಿನ್ನೆಲೆ ಹೊಂದಿರುವುದರಿಂದ ಬೆಂಗಳೂರಿನಲ್ಲಿಯೇ ಚಿತ್ರೀಕರಣ ನಡೆಯಲಿದೆ.

*ತಂಬಾಕು ಕಥನ ಎಂದರೆ, ಸತ್ಯ ಘಟನೆಗಳ ಪ್ರೇರಣೆ ಇದೆಯೇ?
ಸತ್ಯ ಘಟನೆಗಳಿಲ್ಲ, ಆದರೆ ವಾಸ್ತವಗಳಿವೆ. ಒಂದಷ್ಟು ಮಾಹಿತಿಗಳನ್ನು ಕಲೆಹಾಕಿ ಕಾಲ್ಪನಿಕ ಕಥೆಯೊಳಗೆ ಬೆರೆಸಿದ್ದೇನೆ. ‘ಲೂಸಿಯಾ’ ಫಿಕ್ಷನಲ್‌ ಚಿತ್ರ. ಅದರಲ್ಲಿಯೂ ವೈಜ್ಞಾನಿಕ ಅಂಶಗಳಿದ್ದವು. ಇದರಲ್ಲಿ ವೈಜ್ಞಾನಿಕ ಅಂಶಗಳು ಇನ್ನೂ ಹೆಚ್ಚು. 

*ಚಿತ್ರತಂಡದ ಆಯ್ಕೆ?
ತಾಂತ್ರಿಕ ವಿಭಾಗದಲ್ಲಿ ‘ಲೂಸಿಯಾ’ ತಂಡವೇ ಇರಲಿದೆ. ರಕ್ಷಿತ್‌ ಶೆಟ್ಟಿ ಅಥವಾ ಧನಂಜಯ್‌ ಥರದ ಗುರ್ತಿಸಿಕೊಂಡ ಹೊಸಬರು ಕಥೆಗೆ ಹೊಂದಿಕೆಯಾಗುತ್ತಾರೆ. ಅದರ ವಿಚಾರದಲ್ಲಿ ಇನ್ನೂ ಮಾತುಕತೆ ನಡೆದಿದೆ. ಇಲ್ಲಿ ಹೀರೊ ಪಾತ್ರ ಎಂದಿಲ್ಲ. ಮೂರು ಪಾತ್ರಗಳಿಗೂ ಪ್ರಾಮುಖ್ಯವಿದೆ. ಆದರೆ ಡೇಟ್ಸ್‌ ಹೊಂದಾಣಿಕೆ ಮತ್ತು ಬಜೆಟ್‌ ಮಿತಿ ಎರಡೂ ಇಲ್ಲಿ ಮುಖ್ಯವಾಗುವುದರಿಂದ ಇನ್ನೂ ತಾರಾಬಳಗದ ಹುಡುಕಾಟ ನಡೆಯುತ್ತಿದೆ.

*4ಅನಿವಾರ್ಯವೆಂದು ಪ್ರೇಮಕಥೆಯನ್ನು ತಂದಿರುವುದೇ?
ಇಲ್ಲ. ಅದನ್ನು ಬಯಸುವ ಪ್ರೇಕ್ಷಕ ವರ್ಗವೇ ಇದೆ. ಒತ್ತಡದಿಂದ ಪ್ರೇಮಕಥೆಯನ್ನು ಅಳವಡಿಸಲು ಆಗುವುದಿಲ್ಲ. ಭಾರತೀಯ ಸಿನಿಮಾಗಳಲ್ಲಿ ಅದು ಸ್ವಾಭಾವಿಕವಾಗಿಯೇ ಸೇರಿಕೊಳ್ಳುತ್ತದೆ. ಅದು ಸಿನಿಮಾದ ಒಂದು ಭಾಗ.  

*‘ಲೂಸಿಯಾ’ ಸಿನಿಮಾ ಕುರಿತಂತೆ ನಿಮ್ಮ ನಿರೀಕ್ಷೆಗಳು ಈಡೇರಿದವೇ?
ಇಲ್ಲ. ವ್ಯವಹಾರದ ವಿಚಾರದಲ್ಲಿಯೂ ಚೆನ್ನಾಗಿಯೇ ಗಳಿಕೆಯಾಗಿದೆ. ಸಿನಿಮಾ ಮಾಡುವಾಗಲೇ ‘ಸಿ ಸೆಂಟರ್‌’ ಪ್ರೇಕ್ಷಕರನ್ನು ಸೆಳೆಯುವುದಿಲ್ಲ ಎಂಬ ಅರಿವಿತ್ತು. ರಾಷ್ಟ್ರಮಟ್ಟದಲ್ಲಿ ನಮ್ಮ ಕನ್ನಡ ಚಿತ್ರರಂಗವನ್ನು ಕೆಟ್ಟದಾಗಿ ನೋಡುತ್ತಾರೆ. ಇವರಿಂದ ಏನೂ ಮಾಡಲು ಆಗುವುದಿಲ್ಲ ಎಂದು ಹೀಯಾಳಿಸುತ್ತಾರೆ. ಈ ಕಾರಣದಿಂದಲೇ ಕನ್ನಡ ಚಿತ್ರವೊಂದು ಸದ್ದು ಮಾಡಬೇಕು ಎಂಬ ಗುರಿ ಮೂಡಿತ್ತು. ಅದು ಈಡೇರದಿದ್ದರೆ ಸೋಲು ಎನಿಸುತ್ತಿತ್ತೇನೋ. ಎಲ್ಲರಿಗೂ ಅರ್ಥವಾಗಿರಲಿಕ್ಕಿಲ್ಲ ಎಂದುಕೊಂಡಿದ್ದರೂ, ಅದು ಕೂಡ ಸಾಧ್ಯವಾಗಿದೆ. ಆಟೊ, ಟ್ಯಾಕ್ಸಿ ಚಾಲಕರು, ಅಂಗಡಿಗಳ ಮಾಲೀಕರು, ಶಾಲಾ ಮಕ್ಕಳು ಹೀಗೆ ಎಲ್ಲಾ ವರ್ಗದವರೂ ಸಿನಿಮಾ ನೋಡಿದ್ದಾರೆ. ಅರ್ಥ ಮಾಡಿಕೊಂಡು ಮಾತನಾಡಿದ್ದಾರೆ.

*ಹೊಸ ಚಿತ್ರಕ್ಕಾಗಿ ಕ್ರೌಡ್‌ ಫಂಡಿಂಗ್‌ ಹೇಗೆ ಸಾಗಿದೆ?
ಶೇ 50ರಷ್ಟು ಆಗಿದೆ. ಇನ್ನೂ ಅಷ್ಟೇ ಪಾಲು ಬಾಕಿ ಇದೆ. ಚಿತ್ರಕ್ಕೆ ಅಂದಾಜು ರೂ3 ಕೋಟಿ ಬೇಕು. ಕ್ರೌಡ್‌ಫಂಡಿಂಗ್‌ನಲ್ಲಿ ಎರಡು ರೀತಿಯಿದೆ. ಜನರು ತಮ್ಮದೊಂದು ಕಾಣಿಕೆ ಎಂದು ನೀಡುತ್ತಿರುವುದು. ಅದು ರೂ250 ನಿಂದ ಶುರುವಾಗುತ್ತದೆ. ಇದುವರೆಗೆ ಈ ರೀತಿ ಸಂಗ್ರಹವಾಗಿರುವುದು ರೂ11 ಲಕ್ಷ ಮಾತ್ರ. ಉಳಿದಂತೆ ಸುಮಾರು ಒಂದೂವರೆ ಕೋಟಿ ರೂಪಾಯಿಯಷ್ಟು ನಮ್ಮ ಸಹ ನಿರ್ಮಾಣ ತಂಡದಿಂದಲೇ ಆಗಿದೆ. ‘ಲೂಸಿಯಾ’ಕ್ಕೆ ಹಣ ಹಾಕಿದವರು, ಅವರ ಸ್ನೇಹಿತರು ಹೀಗೆ ಸುಮಾರು 50 ಮಂದಿಯ ‘ಆಡಿಯನ್ಸ್‌’ ಬಳಗ ಸಂಗ್ರಹಿಸಿರುವ ಮೊತ್ತವೇ ಹೆಚ್ಚು. ‘ಲೂಸಿಯಾ’ ಅತಿ ಕಡಿಮೆ ಬಜೆಟ್‌ನ ಚಿತ್ರ. ಅದರಲ್ಲಿ ಸಿನಿಮಾ ಬಿಡುಗಡೆ ಮತ್ತು ಪ್ರಚಾರದ ಅಂಶಗಳಿರಲಿಲ್ಲ. ಹೀಗಾಗಿ ಬಿಡುಗಡೆ ವೇಳೆ ತುಸು ಸಮಸ್ಯೆಯಾಗಿತ್ತು. ಆದರೆ ಈ ಚಿತ್ರದ ಬಜೆಟ್‌ನಲ್ಲಿ ಶೇ 20ರಷ್ಟು ಪ್ರಚಾರ ಮತ್ತು ಬಿಡುಗಡೆಗೆಂದೇ ಮೀಸಲಿಡಲು ಯೋಚಿಸಲಾಗಿದೆ. ಅಲ್ಲದೆ, ಚಿತ್ರದಲ್ಲಿ ಪಾತ್ರಗಳೂ ಹೆಚ್ಚಿರುವುದರಿಂದ, ಬಜೆಟ್‌ ಕೂಡ ಹೆಚ್ಚು ಬೇಕು. ಬಜೆಟ್‌ ಮಿತಿಯಲ್ಲಿಯೇ ಎಲ್ಲವನ್ನೂ ಹೊಂದಿಸುವುದು ಸವಾಲಿನ ಕೆಲಸ. ಇನ್ನು ಸ್ವಲ್ಪ ಸಂಗ್ರಹವಾದರೆ ಸಿನಿಮಾ ಪ್ರಾರಂಭಿಸಬಹುದು. ಮುಂದೆ ಗುರಿ ತಲುಪುವಷ್ಟು ಸಂಗ್ರಹವಾಗಬಹುದು. ಜನ ಕಡಿಮೆ ಅಥವಾ ಹೆಚ್ಚಿನ ಬಜೆಟ್‌ ಎಂದು ನೋಡಲು ಬರುವುದಿಲ್ಲ. ಆದರೆ ನೋಡುವಾಗ ಚೆನ್ನಾಗಿ ಕಾಣಿಸಬೇಕು. ಆ ಕಾರಣಕ್ಕೆ ಬಜೆಟ್‌ ಹೆಚ್ಚು ಬೇಕು.

*ಕ್ರೌಡ್‌ ಫಂಡಿಂಗ್‌ ಅಂತರ್ಜಾಲ ಬಳಕೆದಾರರನ್ನು ಮಾತ್ರ ಒಳಗೊಳ್ಳುತ್ತದೆ. ಸಾಮಾನ್ಯ ಜನರೂ ಹಣ ತೊಡಗಿಸಲು ಅವಕಾಶ ಬೇಕಲ್ಲವೇ?
ನಿರಂತರವಾಗಿ ಅಂತರ್ಜಾಲ ಬಳಸುವ, ಸಿನಿಮಾ ನಂಟು ಹೊಂದಿರುವ ಜನರಿಗೇ ಕ್ರೌಡ್‌ಫಂಡಿಂಗ್‌ ಕಾರ್ಯವಿಧಾನವನ್ನು ಅರ್ಥಮಾಡಿಸುವುದು ಕಷ್ಟ. ಹೆಚ್ಚಿನವರು ನಾನು ರೂ5000 ಬಂಡವಾಳ ಹೂಡಿದರೆ ಎಷ್ಟು ಲಾಭ ಬರುತ್ತದೆ ಎಂದು ಯೋಚಿಸುತ್ತಾರೆ. ಇದು ಒಳ್ಳೆಯ ಸಿನಿಮಾದಲ್ಲಿ ಹಣ ಹೂಡುವ ಕೆಲಸವಷ್ಟೇ, ಲಾಭ ನಿರೀಕ್ಷಿಸುವಂತಿಲ್ಲ. ಅವರು ನೀಡಿದ ಹಣಕ್ಕೆ ಪ್ರತಿಯಾಗಿ ರಿವಾರ್ಡ್‌ ನೀಡಬಹುದಷ್ಟೇ. ‘ಲೂಸಿಯಾ’ದಲ್ಲಿ ಡಿವಿಡಿ ನೀಡಿದ್ದೆವು. ಈಗ ರೂ250 ಕೊಟ್ಟವರಿಗೆ ಸಿನಿಮಾ ಬಿಡುಗಡೆಯಾದ ಮೂರು ವಾರದ ಬಳಿಕ ಡೌನ್‌ಲೋಡ್‌ ಮಾಡಿಕೊಳ್ಳಲು ಲಿಂಕ್‌ ನೀಡುತ್ತೇವೆ. ಸಿನಿಮಾ ನೋಡಲು ನೀಡುವ ಹಣವನ್ನು ಮೊದಲೇ ನೀಡುತ್ತೀರಷ್ಟೇ. ಅದರಿಂದ ಸಿನಿಮಾ ಮತ್ತಷ್ಟು ಚೆನ್ನಾಗಿ ಮೂಡಿಬರುತ್ತದೆ. ಅದು ನಮ್ಮ ಜನರಿಗೆ ಅರ್ಥವಾಗುವುದಿಲ್ಲ. ನನಗೇನು ಲಾಭ ಎಂದುಕೊಳ್ಳುವ ಜನರು ಇರುವವರೆಗೂ ನಮ್ಮ ಕನ್ನಡದಲ್ಲಿ ಈ ಬಗೆಯ ಪ್ರಯೋಗಗಳು ಸಾಧ್ಯವಾಗುವುದಿಲ್ಲ. ಇಂಗ್ಲಿಷ್‌ನಲ್ಲಿ ಇದು ಹಳೆಯದಾದ ಮಾದರಿ. ಅಲ್ಲದೆ ಹಣದ ವರ್ಗಾವಣೆಯೂ ಒಂದು ಸಮಸ್ಯೆಯಾಗಿದೆ. ಇದನ್ನು ಹೂಡಿಕೆ ಎಂದು ಕರೆಯುವಂತಿಲ್ಲ. ಸರ್ಕಾರದ ನಿಯಮವೂ ಇದೆ ಮತ್ತು ಅದು ಸೂಕ್ತವಾಗಿಯೂ ಇದೆ. ಇದನ್ನು ಬಳಸಿಕೊಂಡು ಕೆಲವರು ವಂಚಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಒಂದು ಒಳ್ಳೆಯ ಸಿನಿಮಾಕ್ಕೆ ಹಣ ನೀಡುತ್ತಿದ್ದೇವೆ ಎಂಬ ಮನೋಭಾವ ಬಂದರೆ ನಮ್ಮ ಕನ್ನಡ ಸಿನಿಮಾಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT