ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸಿನ ಮನೆ ಕಟ್ಟೋದಕ್ಕೆ ಸೂಕ್ತ ಕಾಲ

Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನೈಋತ್ಯ ಮೂಲೆಯನ್ನು ಸರಿಯಾದ ಮಟ್ಟಕ್ಕೆ ಕಟ್ಟಿದರೆ ಆ ಮನೆಗೆ ಲಕ್ಷ್ಮಿ ಬರುತ್ತಾಳೆ. ಇದೇ ದಿಕ್ಕಿನಿಂದ ಗೋಡೆ ನಿರ್ಮಿಸಿದರೆ ಮನೆಗೆ ಶುಭದ ರಕ್ಷಣೆ ದೊರೆಯುತ್ತದೆ. ಈಶಾನ್ಯದಲ್ಲಿ ಪಾಯ ತೋಡಿದರೆ ಯಾವುದೇ ಅಡೆತಡೆ ಬಾರದು. ಆವರಣ ಗೋಡೆ ನಿರ್ಮಿಸಿದರೆ ಅಷ್ಟ ದಿಕ್ಪಾಲಕರಿಂದ ರಕ್ಷಣೆ ದೊರೆಯುತ್ತದೆ...

ಮನೆ ಕಟ್ಟಲು ಆರಂಭಿಸುವ ಮುನ್ನ  ವಾಸ್ತುತಜ್ಞರು ಹೇಳುವ ಮಾತಿದು.
ವಾಸ್ತು ಪ್ರಕಾರ ಈ ಅಂಶಗಳೆಲ್ಲ ಅಗತ್ಯವಿದ್ದರೂ, ಮನೆ ಕಟ್ಟಲು ಅಡಿಪಾಯ ಹಾಕುವ ಮುನ್ನ ತಿಳಿದುಕೊಳ್ಳಲೇ ಬೇಕಾದ ವಿಷಯವೊಂದಿದೆ.
ಅದೆಂದರೆ, ಯಾವ ಕಾಲದಲ್ಲಿ ಮನೆ ಆರಂಭಿಸಬೇಕು? ಎಂಬ ಪ್ರಶ್ನೆ. ಬೇಸಿಗೆ, ಮಳೆಗಾಲ ಅಥವಾ ಚಳಿಗಾಲದಲ್ಲಿ ಮನೆ ಕಟ್ಟಲು ಆರಂಭಿಸಬೇಕೇ? ಎಂಬ ಅಂಶವೇ ಇಲ್ಲಿ ಬಹಳ ಮುಖ್ಯವಾಗಿರುತ್ತದೆ.

ರಾಜ್ಯದ ಎಲ್ಲ ಭಾಗಗಳಲ್ಲೂ ಮಳೆ ಹಾಗೂ ಬಿಸಿಲಿನ ಪ್ರಮಾಣ ಒಂದೇ ತೆರನಾಗಿ ಇರುವುದಿಲ್ಲ. ಬಯಲು ಸೀಮೆ, ಕರಾವಳಿಗೆ ಹೋಲಿಸಿದಾಗ ಮಲೆನಾಡಿನಲ್ಲಿ ಬಿಸಿಲು ಕಮ್ಮಿ, ಮಲೆನಾಡಿನ ಮಳೆಗೆ ಹೋಲಿಸಿದರೆ, ಬೆಂಗಳೂರು, ಮೈಸೂರು ಭಾಗಗಳಲ್ಲಿ ಬೀಳುವ ಮಳೆ ಪ್ರಮಾಣ ಕಡಿಮೆ.

ಅದೇ ರೀತಿ, ಈ ಬಾರಿ ಇಷ್ಟೇ ಪ್ರಮಾಣದಲ್ಲಿ ಮಳೆ ಬೀಳುತ್ತದೆ, ಬಿಸಿಲಿನ ಝಳ ಇಷ್ಟೇ ಇರುತ್ತದೆ, ಇದೇ ದಿನ ಮಳೆ ಆರಂಭವಾಗುತ್ತದೆ ಎಂಬ
ಹವಾಮಾನ ಇಲಾಖೆ ಲೆಕ್ಕಾಚಾರವೂ ಎಷ್ಟೋ ಬಾರಿ ತಲೆಕೆಳಗಾಗುವುದೂ ಇದೆ. ಆದ್ದರಿಂದ ಹೀಗೆ, ಇದೇ ಕಾಲದಲ್ಲಿ ಮನೆ ನಿರ್ಮಾಣ ಆರಂಭಿಸಿ, ಅದನ್ನು ಇದೇ ಕಾಲದಲ್ಲಿ ಮುಂದುವರಿಸಿ ಎಂದು ಒಟ್ಟಾರೆಯಾಗಿ ಹೇಳುವುದು ಕಷ್ಟಕರವೇ. ನಿಮ್ಮ ಪ್ರದೇಶದ ಹವಾಗುಣಕ್ಕೆ ಅನುಗುಣವಾಗಿ ಯಾವ ಕಾಲದಲ್ಲಿ ಮನೆ ಆರಂಭ ಮಾಡಬೇಕು ಎಂಬ ಬಗ್ಗೆ ಈ ಕ್ಷೇತ್ರದಲ್ಲಿ ಪಳಗಿರುವ ತಜ್ಞರು ಹೇಳಿರುವ ಮಾಹಿತಿ ಇಲ್ಲಿದೆ.

ಮಳೆಗಾಲದಲ್ಲಿ ಹೇಗೆ?
ಮನೆ ಎಂದಾಕ್ಷಣ ಪ್ರಮುಖ ‘ಬೇಕು’ಗಳ ಪಟ್ಟಿಯಲ್ಲಿ ನೀರಿಗೆ ಅಗ್ರಸ್ಥಾನ. ನೀರು ಇಲ್ಲದ ಕಾಂಕ್ರಿಟ್‌ ನಿರ್ಮಿತ ಮನೆ ಊಹಿಸಿಕೊಳ್ಳುವುದು ಕಷ್ಟಸಾಧ್ಯ. ಅದಕ್ಕಾಗಿಯೇ ಹಲವು ಮಂದಿ ಮನೆ ಕಟ್ಟಲು ಮಳೆಗಾಲವನ್ನು ಆಯ್ದುಕೊಳ್ಳುತ್ತಾರೆ. ಮಳೆಗಾಲದಲ್ಲಿ ಮಳೆ ಚೆನ್ನಾಗಿ ಬರುವ ಕಾರಣ, ನೀರಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಎನ್ನುವುದು ಅವರ ಸಮರ್ಥನೆ.

ಆದರೆ ಮಳೆ ಆರಂಭದ ತಿಂಗಳು ಅರ್ಥಾತ್‌ ಜೂನ್‌, ಜುಲೈ ತಿಂಗಳಿನಲ್ಲಿ ಮಳೆ ನಿರ್ಮಾಣ ಆರಂಭ ಸಲ್ಲದು. ಅದರಲ್ಲೂ ಮಲೆನಾಡು ಪ್ರದೇಶಗಳಲ್ಲಿ ಈ ತಿಂಗಳಲ್ಲಿ ಅಬ್ಬರದ ಮಳೆ ಸುರಿಯುತ್ತದೆ. ಬೆಂಗಳೂರು, ಮೈಸೂರು ಭಾಗಗಳಲ್ಲಿ, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಈ ಪರಿಯ ಅಬ್ಬರ ಇರುವುದಿಲ್ಲ. ಆದರೆ ಮುನ್ಸೂಚನೆ ನೀಡದೇ ಧಾರಾಕಾರ ಮಳೆ ಬೀಳುವ ಸಂಭವವನ್ನೂ ತಳ್ಳಿಹಾಕುವಂತಿಲ್ಲ. ಆದ್ದರಿಂದ ಆ ತಿಂಗಳುಗಳಲ್ಲಿ ಮನೆ ನಿರ್ಮಾಣ ಆರಂಭ ಮಾಡದಿದ್ದರೆ ಒಳಿತು.

ಜೂನ್‌ ಕಳೆದರೂ ಮಳೆ ಆರಂಭವಾಗಿಲ್ಲ ಎಂದು (ಈ ಬಾರಿಯಾದಂತೆ) ತಳಪಾಯಕ್ಕೆ  ಭೂಮಿ ಅಗೆಯಲು ಆರಂಭಿಸಿಬಿಟ್ಟೀರಿ ಎಚ್ಚರ!
ಒಂದು ವೇಳೆ ದುರಾದೃಷ್ಟಕ್ಕೆ ಎರಡೂ ತಿಂಗಳ ಮಳೆ ಒಟ್ಟಾಗಿ ಸೇರಿ ಬಂದುಬಿಟ್ಟರೆ ಕಥೆ ಅಷ್ಟೇ. ಸಂಗ್ರಹಿಸಿಟ್ಟ ಮರಳು, ಸಿಮೆಂಟ್‌ ಎಲ್ಲವೂ ಮಳೆ ಪಾಲಾಗುತ್ತವೆ.

ಸಿಮೆಂಟ್‌, ಮರಳು ಎಲ್ಲವನ್ನೂ ಸಂಗ್ರಹಿಸಿಟ್ಟುಕೊಂಡು ಮಳೆಯಿಂದ ರಕ್ಷಿಸಿಕೊಳ್ಳಲು ಗೋದಾಮು ಇದೆಯಲ್ಲ ಎಂದು ನೀವಂದುಕೊಳ್ಳಬಹುದು. ಆದರೆ ಗೋಡೆ ಕಟ್ಟುವಾಗ ಮಳೆ ಬಂದರೆ? ಎರಡು ಇಟ್ಟಿಗೆ  ಬ್ಲಾಕ್‌ಗಳ ಮಧ್ಯೆ ಹಾಕುವ ‘ಸಿಮೆಂಟ್‌ ಮಾರ್ಟರ್‌’ಗೆ ಅಗತ್ಯಕ್ಕಿಂತ ಅಧಿಕ ನೀರು ಹೋಗಿ ಹಸಿಯಾಗಿದ್ದ ಗೋಡೆ ಇನ್ನಷ್ಟು ಒದ್ದೆಯಾಗಿ, ಬೀಳುವ ಸಾಧ್ಯತೆಗಳು ಇರುತ್ತವೆ. ಇನ್ನು, ಗೋಡೆಗಳ ಮೇಲೆ ಮಾಡಿರುವ ಪ್ಲಾಸ್ಟರಿಂಗ್‌ಗೆ ಮಳೆ ಬಿದ್ದರೆ ಪ್ಲಾಸ್ಟರ್‌ ಮಾಡುವ ಸಂದರ್ಭದಲ್ಲಿ ಹಾಕಿದ ಸಿಮೆಂಟ್‌ ಮಿಶ್ರಣ ಮಳೆ ನೀರಿನ ಪಾಲಾಗುತ್ತದೆ.

ಇವೆಲ್ಲ ಕಷ್ಟ ಆಗಬಾರದು ಎಂದರೆ ಕೊನೆಯ ಪಕ್ಷ ತಾರಸಿ ಹಾಕುವವರೆಗಾದರೂ ಮಳೆ ಬರಬಾರದು ಎನ್ನುವುದು ಮೈಸೂರಿನ ಆರ್ಕಿಟೆಕ್ಟ್ ಎಂ.ಜಯರಾಮ್‌ ಪಾಟೀಲ್‌ ಅವರ ಅನುಭವದ ಮಾತು. ‘ಮಲೆನಾಡಿನಲ್ಲಿ ಸೆಪ್ಟೆಂಬರ್‌ ನಂತರ ಮಳೆ ಕಡಿಮೆಯಾಗುವ ಕಾರಣ ಆಗ ಅಲ್ಲಿ ಮನೆ ನಿರ್ಮಾಣ ಆರಂಭಿಸಬಹುದು. ಬಯಲುಸೀಮೆಯಲ್ಲಿ ಮಳೆಯ ಅಭಾವ. ಹಾಗೆಯೇ ಮೈಸೂರು, ಬೆಂಗಳೂರಿನಲ್ಲಿ ಮಳೆಯ ಪ್ರಮಾಣ ಕಡಿಮೆ. ಅಲ್ಲಿ ಯಾವ ಕಾಲದಲ್ಲಾದರೂ ಆರಂಭಿಸಬಹುದು. ಒಟ್ಟಿನಲ್ಲಿ ಮಳೆ ಕಡಿಮೆ ಇರುವ ಕಾಲ ನೋಡಿಕೊಳ್ಳಬೇಕು.  ಜೂನ್‌, ಜುಲೈ ತಿಂಗಳಿನಲ್ಲಿ ಸಾಮಾನ್ಯವಾಗಿ ಮಳೆ ಎಲ್ಲೆಡೆ ಬೀಳುವ ಕಾರಣ, ಈ ತಿಂಗಳು ಪಾಯ ತೋಡುವ ಸಾಹಸಕ್ಕೆ ಕೈ ಹಾಕದಿದ್ದರೆ ಒಳಿತು. ಪ್ಲಾಸ್ಟರಿಂಗ್‌ ಅಂತೂ ಮಳೆ ಕಡಿಮೆಯಾದ ಮೇಲೆಯೇ ಆರಂಭಿಸಬೇಕು ಎನ್ನುವುದು ಜಯರಾಮ್‌ ಹಾಗೂ ಬೆಂಗಳೂರಿನ ಆರ್ಕಿಟೆಕ್ಟ್‌ ಸರೋಜಿನಿ ಅರುಣಾಚಲ್ ಅವರ ಸಲಹೆ.

ಬೇಸಿಗೆ, ಚಳಿಗಾಲ ಹೇಗೆ?
ಋತುಮಾನಕ್ಕೆ ಅನುಗುಣವಾಗಿ ಬೇಸಿಗೆ, ಮಳೆ, ಚಳಿಗಾಲ ಆರಂಭವಾಗುವ ಮಾತು ಈಗ ದೂರ. ಸಾಮಾನ್ಯವಾಗಿ ನವೆಂಬರ್‌ನಿಂದ ಮಾರ್ಚ್‌ವರೆಗೆ ಚಳಿಗಾಲವೆಂದರೂ ಆಗ ಮಳೆಯಂತೂ ಇದ್ದೇ ಇರುತ್ತದೆ. ಆದರೆ ಮಳೆಯ ತೀವ್ರತೆ ಹೆಚ್ಚಿಗೆ ಇರದಿದ್ದರೆ ಆಗ ಮನೆ ಆರಂಭ ಮಾಡಿದರೆ ತೊಂದರೆ ಇಲ್ಲ. ಒಂದು ವೇಳೆ ಈ ಅವಧಿಯಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿ, ಇದು ಮರಳು, ಜೆಲ್ಲಿ ಮಿಶ್ರಣದ ಮೇಲೆ ಬಿದ್ದರೆ ಸಿಮೆಂಟ್‌ ಹರಿದು ಹೋಗುತ್ತದೆ. ಆಗ ಭಯಪಡುವ ಅಗತ್ಯವಿಲ್ಲ. ಆ ಜಾಗದಲ್ಲಿ ಸಿಮೆಂಟ್‌ ತಿಳಿಯನ್ನು ಚಿಮುಕಿಸಿ ಅದಕ್ಕೆಂದೇ ಇರುವ ಸಲಕರಣೆಯಿಂದ ಕೈಯಾಡಿಸಬೇಕು. ಹೀಗೆ ಮಾಡಿದರೆ ಮೊದಲಿನಂತೆಯೇ ಆಗುತ್ತದೆ.

ಬೇಸಿಗೆಯೇ ಉತ್ತಮ
ಇವೆಲ್ಲ ತೊಂದರೆ ಬೇಡವೇ ಬೇಡ ಎನ್ನುವುದಾದರೆ ಬೇಸಿಗೆ ಕಾಲದಲ್ಲಿ ನಿರ್ಮಾಣ ಕಾರ್ಯ ಆರಂಭಿಸುವುದು ಒಳಿತು ಎನ್ನುವುದು ತಜ್ಞರ ಕಿವಿಮಾತು.
ಆಗ ತಳಪಾಯಕ್ಕೆ ಭೂಮಿ ಅಗೆಯುವುದು, ಗೋಡೆ ಕಟ್ಟುವುದು, ಸ್ಲ್ಯಾಬ್‌ (ತಾರಸಿಗೆ ಕಾಂಕ್ರಿಟ್‌) ಹಾಕುವುದು ಎಲ್ಲ ಮುಗಿಯುವ ಹೊತ್ತಿಗೆ ಮಳೆಗಾಲ ಆರಂಭಗೊಂಡರೂ ಆನಂತರದ ದಿನಗಳಲ್ಲಿ ಮನೆಯ ಒಳಾಂಗಣದ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು ಎನ್ನುತ್ತಾರೆ ಅವರು.

‘ಮಾರ್ಚ್ ಏಪ್ರಿಲ್‌ನಲ್ಲಿ ಮನೆ ನಿರ್ಮಾಣದ ಕೆಲಸಗಳನ್ನು ಆರಂಭಿಸಿ ಮುಂದಿನ ಮಾರ್ಚ್ ಏಪ್ರಿಲ್ ಒಳಗೆ ಮುಗಿಸು ವುದು ಜಾಣನಡೆ. ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮನೆಯ ಪಾಯ ಹಾಕಿ ಒಂದು ಮಳೆಗಾಲ ಕಳೆದ ಮೇಲೆ ಮುಂದಿನ ಕೆಲಸ ಮಾಡುವುದು ರೂಢಿ’ ಎನ್ನುತ್ತಾರೆ ಬೆಂಗಳೂರಿನ 3D ಚಿತ್ರಕ ಮನು ಎಚ್‌.ಎಸ್‌.ಹೆಗ್ಗೋಡು.

‘ಒಂದು ವೇಳೆ, ಕಾಂಕ್ರಿಟ್‌ ಹಾಕಿದ ಒಂದು ಗಂಟೆ ನಂತರ ಸಾಮಾನ್ಯವಾಗಿ ಮಳೆ ಬಿದ್ದರೆ ಹೆದರುವ ಅಗತ್ಯವಿಲ್ಲ. ಅಷ್ಟರಲ್ಲಿ ಸಿಮೆಂಟ್‌ ಒಣಗಿರುತ್ತದೆ. ಏನೂ ಸಮಸ್ಯೆ ಆಗುವು ದಿಲ್ಲ. ಜೋರಾಗಿ ಮಳೆ ಬರಬಾರದು ಅಷ್ಟೇ’ ಎನ್ನುತ್ತಾರೆ ದಾವಣಗೆರೆಯ ಆರ್ಕಿಟೆಕ್ಟ್‌ ಅರುಣ್‌ ಕುಮಾರ್‌ ಆರ್‌.ಟಿ.
ಮಳೆಗಾಲದಲ್ಲಿ ಸಿಮೆಂಟ್‌ ಮಿಶ್ರಣ ಶೀಘ್ರದಲ್ಲಿ ಗಟ್ಟಿಗೊಳ್ಳುವ ರಾಸಾಯನಿಕಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇದನ್ನೂ ಜತೆಗೆ ಬಳಕೆ ಮಾಡಿದರೆ, ಮಳೆಯ ಪ್ರಮಾಣ ಕಡಿಮೆಯಿದ್ದರೆ ಅದರಿಂದ ಬಚಾವಾಗಬಹುದು ಎನ್ನುವುದು ತಜ್ಞರ ಅನುಭವದ ನುಡಿ.

ಪ್ರಕೃತಿ ನಮಗೆ ನೇರವಾಗಿ ಕೊಡುತ್ತಿರುವ ಶಕ್ತಿ ಎಂದರೆ ಮಳೆ  ಮತ್ತು ಬಿಸಿಲು. ಮನೆ ಕಟ್ಟುವಾಗ ಮಾತ್ರವಲ್ಲದೇ, ಭವಿಷ್ಯದಲ್ಲಿಯೂ ಇವೆರಡನ್ನು ನಾಜೂಕಾಗಿ ಬಳಸಿದಷ್ಟೂ ಮಾನವಕುಲಕ್ಕೆ ಲಾಭದಾಯಕ ಎನ್ನುವ ಬುದ್ಧಿಮಾತು ಹೇಳುತ್ತಾರೆ ಮನು ಹೆಗ್ಗೋಡು.

ವಸಂತ ಕಾಲ ಬಂದಾಗ...

‘ಒಂದೊಂದು ಪ್ರದೇಶದ ಸ್ಥಿತಿ ಗತಿಗಳಿಗೆ ತಕ್ಕಂತೆ ಮನೆ ನಿರ್ಮಾಣದ ಕಾಲ ಪ್ರತ್ಯೇಕವಾಗಿ ಇದೆ ಎಂಬುದು ನಿಜ. ಆದರೆ ವಸಂತ ಕಾಲ ಬಂದಾಗ... ಎನ್ನುವ ಹಾಡಿನಂತೆ ಮನೆ ಕಟ್ಟಲು ಆರಂಭಿಸುವುದು ಕೂಡ ಇದೇ (ಅಂದರೆ ಮಾರ್ಚ್ ಏಪ್ರಿಲ್‌ ವೇಳೆ) ಸಮಯ ಹೆಚ್ಚು ಸೂಕ್ತ.

ತಳಪಾಯಕ್ಕೆ ಭೂಮಿ ಅಗೆಯುವುದು ಮನೆ ನಿರ್ಮಾಣ ಕಾರ್ಯದ ಮೊದಲ ಹಂತ. ಈ ಕಾರಣದಿಂದ ಆ ಸಮಯದಲ್ಲಿ ಮಳೆ ಬರಬಾರದು. ಮಾರ್ಚ್ ಕೊನೆಯ ದಿನಗಳಲ್ಲಿ ಮಣ್ಣಿನ ಕೆಲಸ ಮುಗಿದರೆ ಮಳೆ ಆರಂಭವಾಗುವ ಮೊದಲೇ ಮನೆಯ ಮೊದಲ ಛಾವಣಿ ಮುಗಿದಿರುತ್ತದೆ.

ಸಣ್ಣ ಪ್ರಮಾಣದ ಮಳೆ ಇದ್ದಲ್ಲಿ ಸಿಮೆಂಟ್ ಕೆಲಸಕ್ಕೆ ಅನುಕೂಲ. ಅಂದರೆ ತುಂತುರು ಮಳೆಯ ತಂಪಾದ ವಾತಾವರಣ ಸಿಮೆಂಟ್ ಕ್ಯೂರಿಂಗ್‌ಗೆ ಸಹಾಯ ಮಾಡುತ್ತದೆ.

ಕೆಲವೊಮ್ಮೆ ಮಳೆಯಿಂದ ಕೆಲವು ಅನನುಕೂಲಗಳೂ ಇರುತ್ತವೆ! ಮಳೆಗಾಲದಲ್ಲಿ ಯಾವ ಸಮಯದಲ್ಲಿ ಹುಚ್ಚು ಮಳೆ ಬರುತ್ತದೆ ಎನ್ನುವುದನ್ನು ತಿಳಿಯಲು ಆಗುವುದಿಲ್ಲ. ಮನೆ ನಿರ್ಮಾಣಕ್ಕೆ ಅಗತ್ಯವಾದ ಸಿಮೆಂಟ್, ಮರಳು ಮುಂತಾದವುಗಳನ್ನು ಸಂಗ್ರಹಿಸಿ ಇಡುವುದು ತುಂಬಾ ಕಷ್ಟ. ಒಮ್ಮೆ ಜೋರಾದ ಮಳೆ ಬಂತೆಂದರೆ ಸಂಗ್ರಹಿಸಿ ಇಟ್ಟ ಮರಳೆಲ್ಲಾ ಚರಂಡಿ ಪಾಲಾಗಿ ಹೋಗುತ್ತದೆ. ಸಿಮೆಂಟ್ ಚೀಲಗಳೂ ಸಹ ಇಟ್ಟಲ್ಲೇ ಗಟ್ಟಿ ಆಗಿ ಕೆಲಸಕ್ಕೇ ಬಾರದಂತಾಗುತ್ತವೆ.

ಮಳೆಗಾಲಕ್ಕಿಂತ ಬಿರುಬೇಸಿಗೆಯಲ್ಲೇ ಮನೆ ನಿರ್ಮಾಣದ ಕೆಲಸ ಹುರುಪಿನಿಂದ ಸಾಗೋದು. ಪ್ಲಾಸ್ಟರಿಂಗ್, ಮರಗೆಲಸ, ಪೇಂಟ್‌ ಮುಂತಾದ ಫಿನಿಷಿಂಗ್‌ ಕೆಲಸಗಳನ್ನು ಮಳೆಗಾಲ ಕಳೆದ ಮೇಲೆ ಮಾಡುವುದು ಸೂಕ್ತ.
- ಮನು ಎಚ್‌.ಎಸ್‌.ಹೆಗ್ಗೋಡು (3DD ಚಿತ್ರಕ)

ಗುಣಧರ್ಮ, ನಂಬಿಕೆಯೂ ಮುಖ್ಯ

ಯಾವ ಕಾಲ ಒಳ್ಳೆಯದು ಎನ್ನುವುದು ಎಷ್ಟು ಮುಖ್ಯವೋ ಆ ಕಾಲದಲ್ಲಿ ಮನೆ ಕಟ್ಟುವ ಪೂರ್ವದಲ್ಲಿ ಅಲ್ಲಿನ ಮಣ್ಣಿನ ಗುಣಧರ್ಮವನ್ನೂ, ಅಲ್ಲಿಯ ಹವಾಗುಣಗಳನ್ನೂ ನೋಡಿಕೊಳ್ಳಬೇಕಾಗುತ್ತದೆ. ಕೆಂಪು ಮಣ್ಣಿದ್ದರೆ ಮನೆ ನಿರ್ಮಾಣಕ್ಕೆ ಸೂಕ್ತ. ಆದರೆ ಕಪ್ಪು ಮಣ್ಣು ಇದ್ದರೆ ಅಡಿಪಾಯ ಹೆಚ್ಚಿಗೆ ಹಾಕಬೇಕು. ಮಳೆ ಅಧಿಕ ಇರುವ ಪ್ರದೇಶಗಳಲ್ಲಿ ಬೇಸಿಗೆ ಕಾಲದಲ್ಲಿ ಮನೆ ನಿರ್ಮಾಣ ಆರಂಭಿಸಿದರೆ, ಬಿಸಿಲು ಅತ್ಯಧಿಕ ಇರುವ ಬಳ್ಳಾರಿ, ವಿಜಾಪುರ ಮೊದಲಾದ ಉತ್ತರ ಕರ್ನಾಟಕದ ಭಾಗಗಳಲ್ಲಿ ನವೆಂಬರ್‌, ಡಿಸೆಂಬರ್‌ ತಿಂಗಳಿನಲ್ಲಿ ನಿರ್ಮಾಣ ಕಾರ್ಯ ಆರಂಭಿಸುವುದು ಉತ್ತಮ.

ಹೆಂಚಿನ ಮನೆಗಳನ್ನು ಕಟ್ಟುವ ಆಲೋಚನೆ ಇದ್ದರಂತೂ ಮಳೆಗಾಲದಲ್ಲಿ ಮನೆ ನಿರ್ಮಾಣ ಕೆಲಸವನ್ನು ಆರಂಭಿಸಲೇ ಬಾರದು. ಹಾಗೆಯೇ ಇನ್ನೊಂದು ವಿಷಯ.  ‘ಬಾಣಸಿಗರು ಹೆಚ್ಚಿದಷ್ಟೂ ಆಹಾರ ಕೆಡುತ್ತದೆ’ ಎಂಬ ಗಾದೆಮಾತು ಮನೆ ಕಟ್ಟಿಸುವವರಿಗೂ ಅನ್ವಯ ಆಗುತ್ತದೆ. ಒಬ್ಬರೇ ಎಂಜಿನಿಯರ್‌ ಮೇಲೆ ನಂಬಿಕೆ ಇಡಿ. ಒಂದೊಂದು ಹಂತಕ್ಕೆ ಒಬ್ಬೊಬ್ಬ ಎಂಜಿನಿಯರ್‌ ಅನ್ನು ಕರೆಸಿ ಸಲಹೆ ಪಡೆದುಕೊಂಡರೆ ಯೋಗ್ಯ ಕಾಲದಲ್ಲಿ ಮನೆ ಆರಂಭಿಸಿದರೂ ಅದು ಹಾಳಾಗುವುದು ಖಂಡಿತ.
ಅರುಣ್‌ ಕುಮಾರ್‌ ಆರ್‌.ಟಿ, ಕ್ರಿಯೇಟಿವ್‌ ಕನ್ಸಲ್ಟೆಂಟ್ ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT