ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕಲಿಯಲಾಗದು, ಇಂಗ್ಲಿಷ್‌ ಬರದು!

ಭಾಷೆ ಕಲಿಕೆ ಬಿಕ್ಕಟ್ಟು
Last Updated 23 ಜನವರಿ 2015, 19:46 IST
ಅಕ್ಷರ ಗಾತ್ರ

ವ್ಯಕ್ತಿಯ ಬೌದ್ಧಿಕ, ಮಾನ­­ಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಬೆಳ­ವಣಿ­ಗೆಯಲ್ಲಿ ಭಾಷೆಯ ಪಾತ್ರ ಬಹಳ ಮಹ­ತ್ವದ್ದು. ಹುಟ್ಟಿದಾರಭ್ಯ ಸಹ­ಜ­ವಾಗಿ ಲಭಿಸುವ ಭಾಷೆಯಲ್ಲಿ ಮಗು ಈ ಪ್ರಬುದ್ಧತೆಯನ್ನು ಪಡೆ­ಯುತ್ತದೆ. ಈ ಪ್ರಥಮ ಭಾಷೆ ನಾಡಿನ ವ್ಯಾವಹಾರಿಕ ಪರಿಸರದಲ್ಲಿ ಎಷ್ಟು ಉಪ­ಯೋಗಿ ಎನ್ನುವುದರ ಆಧಾರದ ಮೇಲೆ ಆ ವ್ಯಕ್ತಿ ಮುಂದೆ ಸಾಮಾಜಿಕ ಯಶಸ್ಸನ್ನು ಗಳಿ­ಸುತ್ತಾ ಹೋಗುತ್ತಾನೆ.

ಆ ಕಾರಣಕ್ಕಾಗಿಯೇ ರಾಜ್ಯಭಾಷೆಯಲ್ಲದ ಅಲ್ಪಸಂಖ್ಯಾತ (ಉದಾ: ಉರ್ದು, ಲಂಬಾಣಿ, ಬ್ಯಾರಿ, ತುಳು ಇತ್ಯಾದಿ) ಭಾಷೆಯ ಮಕ್ಕಳು, ಮನೆಯ ವ್ಯವಹಾರದ ಮಟ್ಟಿಗೆ ಬಳಕೆಯಾಗುವ ಅದೇ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರೆ, ಅಷ್ಟರ ಮಟ್ಟಿಗೆ ರಾಜ್ಯದ ಮುಖ್ಯವಾಹಿನಿಯಲ್ಲಿ ಸಶಕ್ತವಾಗಿ ಬೆರೆಯುವಲ್ಲಿ ಹಿಂದೆ ಉಳಿಯುತ್ತಾರೆ. ಆದ್ದರಿಂದಲೇ ರಾಜ್ಯದ (ಎಂದರೆ ಕನ್ನಡ) ಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಎಲ್ಲರಿಗೂ ಸಿಗಬೇಕು ಎಂಬುದು ಹೆಚ್ಚು ತಾರ್ಕಿಕವಾಗಿದೆ.

ರಾಜ್ಯದಲ್ಲಿನ ಅಲ್ಪಸಂಖ್ಯಾತ ಭಾಷಿಗರು ಬಹುಮಟ್ಟಿಗೆ ತಮ್ಮ ಭಾಷೆಯ ಜೊತೆಗೆ  ಕನ್ನಡದಲ್ಲೂ ಅಷ್ಟೇ ಪರಿಣತಿ ಪಡೆದಿರುವುದು ಇಲ್ಲಿ ಒಂದು ಸಹಜ ಅನುಕೂಲವೇ ಆಗಿದೆ.   

ಇಂಗ್ಲಿಷೂ ಬೇಕು: ವ್ಯಕ್ತಿಯ ಮೂಲ ಶಿಕ್ಷಣ ನಂತರದ ವಿಸ್ತೃತ ಬೆಳವಣಿಗೆಗೆ ಇಂಗ್ಲಿಷ್ ಭಾಷೆಯೂ ಬೇಕು. ಆದರೆ, ಕೇವಲ ವ್ಯಾವ­ಹಾರಿಕ ಸಂವಹನಕ್ಕಾಗಿ ಬೇಕಾಗಬಹು­ದಾದ ಇಂಗ್ಲಿಷ್ ಭಾಷೆಯನ್ನು ಶಿಕ್ಷಣ ಮಾಧ್ಯಮ­ವನ್ನಾಗಿ ಅಳವಡಿಸಿ­ಕೊಳ್ಳು­ವುದರಲ್ಲಿ ಕೆಲವು ಅಪಾಯಗಳಿವೆ. ಪ್ರಥಮ ಭಾಷೆಯ ನೆರ­ವಿನಿಂದ ಮಕ್ಕಳಲ್ಲಿ ಅನಾ­ಯಾ­ಸವಾಗಿ ಮತ್ತು ಶೈಕ್ಷ­ಣಿಕ ಪ್ರಯತ್ನಗಳಿಂದ ಆಗಬ­ಹು­ದಾದ ಬೌದ್ಧಿಕ, ಮಾನಸಿಕ, ಭಾವನಾತ್ಮಕ ಬೆಳವಣಿಗೆ ಇಂಗ್ಲಿಷ್ ಮಾಧ್ಯಮದ ಮೂಲಕ ಸಾಧ್ಯ­ವಾಗುವುದಿಲ್ಲ. ಮನೆಯ/ನಾಡಿನ ಸಂಸ್ಕೃತಿ­ಯಲ್ಲಿ ಜೀವಂತ­ವಿಲ್ಲದ ಇಂಗ್ಲಿಷ್‌ನ ಮೂಲಕ ಪ್ರಾಥಮಿಕ ಶಿಕ್ಷಣ ಪಡೆದ ಮಕ್ಕಳು ತಮ್ಮ ನಾಡಿನಲ್ಲಿಯೇ ಪರಕೀಯರಾಗುತ್ತಾರೆ.

ಅವರು ಇನ್ಯಾರದೋ ಲಾಭಕ್ಕಾಗಿ ದುಡಿ­ಯುವ ಉತ್ತಮ ನೌಕರರಾಗಿ ಸಿದ್ಧರಾಗ­ಬಹುದೇ (ಅದೂ ಅನುಮಾನ) ವಿನಃ ನಾಡಿನ ಉತ್ತಮ ನಾಗರಿಕರಾಗುವ ಸಾಧ್ಯತೆ ಕಡಿಮೆ.  ಆದ್ದರಿಂದ ಪ್ರಾಥಮಿಕ ಶಿಕ್ಷಣವನ್ನು ಮನೆಯ ಅಥವಾ ತಕ್ಷಣದ ನೆರೆಹೊರೆಯ ಭಾಷೆಯಾದ ಕನ್ನಡದಲ್ಲಿ ನೀಡುತ್ತಾ, ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಕಲಿಯುವುದು ಹೆಚ್ಚು ಜಾಣತನ.

ಕನ್ನಡವೂ ಬರದು...
ಆದರೆ, ಯಾವುದೇ ಮಾಧ್ಯಮದಲ್ಲಿ ಓದುತ್ತಿರಲಿ ಬಹುತೇಕ ಮಕ್ಕಳಿಗೆ ಕನ್ನಡವೂ ಸರಿಯಾಗಿ ಬರದು, ಇಂಗ್ಲಿಷ್‌ನ ಮೇಲೂ ಪ್ರಭುತ್ವ ಸಾಲದು ಎಂಬ ಅಳಲು ವ್ಯಾಪಕವಾಗಿ ಕೇಳಿಬರುತ್ತಿದೆ. ಇದಕ್ಕೆ ಭಾಷಾ ಕಲಿಕೆ ಮತ್ತು ಬೋಧನೆಯಲ್ಲಿರುವ ದೋಷಗಳೇ ಮುಖ್ಯ ಕಾರಣ. ತಂದೆ ತಾಯಂದಿರ ಪರಿಶ್ರಮ ಮತ್ತು ಮನೆಯ ವಾತಾವರಣದಿಂದ ಕೆಲವು ಮಕ್ಕಳು ಉತ್ತಮ ಭಾಷಾ ಕೌಶಲ ಬೆಳೆಸಿಕೊಳ್ಳಲು ಸಾಧ್ಯ; ಆದರೆ ಅಂತಹ ವಾತಾವರಣ ಸಿಗುವುದು ಅಪರೂಪ. ಸಾಮಾನ್ಯವಾಗಿ ಮಕ್ಕಳಿಗೆ ಉತ್ತಮ ಭಾಷಾ ಪರಿಣತಿ ಮುಖ್ಯವಾಗಿ ಶಿಕ್ಷಣ ವ್ಯವಸ್ಥೆಯಿಂದಲೇ ಒದಗಬೇಕಾಗುತ್ತದೆ.

ಹೀಗಿವೆ ಹಂತಗಳು: ಯಾವುದೇ ಭಾಷೆಯ ಕಲಿಕೆಯಲ್ಲಿ ಇರುವ ನೈಜ ಹಂತಗಳು  ಆಲಿಸುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದು. ಇದು ಸರಿಯಾದ ಕ್ರಮ. ಪರಿಸರದ ಭಾಷೆಯಲ್ಲಿ ಇದು ಸಹಜವಾಗಿಯೇ ಆಗಿರುತ್ತದೆ. ಮಗು ಸುಮಾರು ಐದಾರು ವರ್ಷ ಕನ್ನಡವನ್ನು ಕೇಳಿ ಅರ್ಥ ಮಾಡಿಕೊಳ್ಳುವ, ಸಮಯ, ಸಂದರ್ಭ, ಅಗತ್ಯಕ್ಕೆ ತಕ್ಕಂತೆ ನಿರರ್ಗಳವಾಗಿ ಮಾತ­ನಾಡುವ ಕೌಶಲವನ್ನು ಅರಗಿಸಿಕೊಂಡಿರುತ್ತದೆ. ಶಾಲೆಗೆ ಹೋದ ನಂತರ ಓದುವುದು ಮತ್ತು ಬರೆಯುವುದನ್ನು ಕಲಿಯುತ್ತದೆ.

ಇಲ್ಲಿಯೂ ಸರಾಗವಾಗಿ ಸಾಕಷ್ಟು ಓದುವುದನ್ನು ಕಲಿತ ನಂತರ ಆ ಸಾಮರ್ಥ್ಯದ ನೆರವಿನಿಂದ ಬರೆಯು­ವುದನ್ನು ಕಲಿಸಬೇಕು. ಆದರೆ   ನಾವು ಮೊದಲಿಗೇ ಅತ್ಯಂತ ಕೃತ್ರಿಮವಾಗಿ ಅ, ಆ, ಇ, ಈ ಎಂದು ಬರೆಯುವುದರಿಂದಲೇ ಆರಂಭಿಸು­ವುದನ್ನು ಇನ್ನೂ ಬಿಟ್ಟಿಲ್ಲ.

ಮೂಲಭೂತ ಕನ್ನಡ ಭಾಷಾ ಕೌಶಲಗಳು ತುಸು ಅಭ್ಯಾಸವಾದ ನಂತರ ಶಿಕ್ಷಣದ ಮುಂದಿನ ಹಂತಗಳಲ್ಲಿ ಭಾಷೆಯ ವ್ಯಾವ­ಹಾರಿಕ ಬಳಕೆ, ವಿವಿಧ ಮಾಧ್ಯಮಗಳಲ್ಲಿ ಬಳಕೆ, ಸಂವಹನ ಕೌಶಲ, ಭಾಷಾ ವೈವಿಧ್ಯ, ಆಡಳಿತ/ ತಾಂತ್ರಿಕ ಕನ್ನಡ, ವ್ಯಕ್ತಿ ವಿಕಸನದಲ್ಲಿ ಭಾಷೆ... ಹೀಗೆ ಹಂತಹಂತವಾಗಿ ಭಾಷೆ ಮತ್ತು ಸಂವಹನದ  ಸಾಮರ್ಥ್ಯಗಳನ್ನು ಕಲಿಸುವ ಪ್ರಯತ್ನ ಆಗುತ್ತಿಲ್ಲ. ನಮ್ಮ ಶಿಕ್ಷಕರಿಗೆ ಈ ಮಾದರಿಯಲ್ಲಿ ಜೀವನೋಪಯೋಗಿಯಾಗಿ ಕನ್ನಡವನ್ನು ಕಲಿಸುವ ತರಬೇತಿ/ ಸಾಮರ್ಥ್ಯ ಇಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಅದರ ಉದ್ದೇಶವೂ ಅಡಕವಾಗಿಲ್ಲ. 

ಇಂಗ್ಲಿಷ್ ಕೇಳುವಂತಿಲ್ಲ: ಇನ್ನು ಇಂಗ್ಲಿಷ್ ಕಲಿಕೆಯ ಸ್ಥಿತಿ ಇನ್ನೂ ಕೆಟ್ಟದಾಗಿದೆ. ಕನ್ನಡ ಕಲಿಯುವಾಗ ಮಕ್ಕಳು ಶಾಲೆಯನ್ನು ಸೇರುವ ಮುಂಚೆಯೇ ಆಲಿಸುವ ಮತ್ತು ಮಾತನಾಡುವ ಕೌಶಲಗಳನ್ನು ಕಲಿತೇ ಬಂದಿರುತ್ತಾರೆ. ಅಲ್ಲಿಂದ ಮುಂದುವರಿದು ಓದುವ, ಬರೆಯುವ ಕೌಶಲಗಳನ್ನು ಕಲಿಯುತ್ತಾರೆ. ಆದರೆ ಇಂಗ್ಲಿಷ್ ಕಲಿಸುವ ಸಂದರ್ಭದಲ್ಲಿ ಭಾಷಾ ಕೌಶಲಗಳ ಕೊನೆಯಲ್ಲಿ ಬರುವ ‘ಬರೆಯುವುದ’ರಿಂದಲೇ ಆರಂಭಿಸಲಾಗುತ್ತದೆ. ಹೀಗೆ ಇಲ್ಲಿಯೂ ಭಾಷಾ ಕಲಿಕೆಯ ಎಲ್ಲ ಸಹಜ ತತ್ವ ಮತ್ತು ತಂತ್ರಗಳನ್ನು ಗಾಳಿಗೆ ತೂರಲಾಗುತ್ತದೆ.

ಎಲ್ಲಕ್ಕೂ ಮೂಲಭೂತವಾದ ಆಲಿಸುವ ಮತ್ತು ಮಾತನಾಡುವ ಕೌಶಲಗಳಿಗೆ ಮಹತ್ವ ನೀಡಿ ಕಲಿಸುವುದೇ ಇಲ್ಲ. ಆದ್ದರಿಂದ ಹತ್ತು ವರ್ಷ ಕಲಿತರೂ ನಮ್ಮ ಇಂಗ್ಲಿಷ್ ಸಾಮರ್ಥ್ಯ ದುರ್ಬಲವಾಗಿಯೇ ಇದ್ದು, ವ್ಯಾವಹಾರಿಕ ಪ್ರಯೋಜನಕ್ಕೆ ಬರುವುದಿಲ್ಲ. ಪರಿಸರದ ಭಾಷೆಯು ನಿತ್ಯ ಜೀವನದಲ್ಲಿ ನಮ್ಮ ಎಲ್ಲ ಅಗತ್ಯಗಳನ್ನೂ ಪೂರೈಸುವಂತೆ, ಇಂಗ್ಲಿಷ್ ಭಾಷೆ ಬಹುತೇಕರನ್ನು ಬದುಕಿನ ಭಾಗವಾಗಿ ‘ಆವರಿಸಿರುವುದಿಲ್ಲ’. ಹೀಗಾಗಿ ಅದನ್ನು ಕೃತ್ರಿಮವಾಗಿ, ಪ್ರಯತ್ನ ಪೂರ್ವಕವಾಗಿ ಕಲಿಯಬೇಕಾಗುತ್ತದೆ.

ಸಮಾಧಾನದ ಸಂಗತಿಯೆಂದರೆ, ನಾವು ಕನ್ನಡವನ್ನು ಚೆನ್ನಾಗಿ ಕಲಿತು, ವಿವಿಧ ಸನ್ನಿವೇಶ­ಗಳಲ್ಲಿ ಸಮರ್ಥವಾಗಿ ಮಾತನಾಡುವುದು, ಓದಿ, ಬರೆಯುವುದು ಮಾಡುತ್ತಿದ್ದರೆ ಈ ಮೂಲಭೂತ ‘ಭಾಷಾ ಸಾಮರ್ಥ್ಯ’ದ ಆಧಾರದ ಮೇಲೆ ಇಂಗ್ಲಿಷ್‌ನಂಥ ಇತರ ಭಾಷೆಗಳನ್ನು ಕಲಿಯುವುದು ಹೆಚ್ಚು ಸುಲಭವಾಗುತ್ತದೆ (ಕಲಿಕೆ/ ಬೋಧನೆಯ ವಿಧಾನವೂ ಪೂರಕವಾಗಿರಬೇಕು). ಹೀಗಾಗಿ ಶಾಲಾ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ನೀಡುತ್ತಲೇ, ಕನ್ನಡವನ್ನೂ ‘ಭಾಷಾ ಕೌಶಲ’ವನ್ನಾಗಿ ಕಲಿಸುತ್ತಾ ಹೋಗಬೇಕು; ಮುಂದೆ ಐದನೇ ತರಗತಿಯಿಂದ ಇಂಗ್ಲಿಷ್‌ನ್ನು ಒಂದು ಭಾಷೆಯನ್ನಾಗಿ ಸೇರಿಸಬೇಕು. ಭಾಷೆಯನ್ನು ಕಲಿಸುವ ವಿಧಾನದಲ್ಲಿ ಅದನ್ನೂ ಕಲಿಸಬೇಕು.

ಭಾಷೆಯನ್ನು ಕಲಿಸುವಲ್ಲಿ ‘ಮೈಕ್ರೊ ಅಪ್ರೋಚ್’ ಎಂಬ ಒಂದು ಆಧುನಿಕ ಮತ್ತು ಬಹಳ ಪರಿಣಾಮಕಾರಿಯಾದ ವಿಧಾನ ಬಹಳ ವರ್ಷಗಳಿಂದ ಪ್ರಚಲಿತವಿದೆ. ಇದನ್ನು ಅಳವಡಿಸಿಕೊಂಡು ನಾನು ಮತ್ತು ನನ್ನ ಹಾಗೆ ಭಾಷೆಯನ್ನು ಕಲಿಸುವ ಅನೇಕ ಮಂದಿ  ಕನ್ನಡೇತರರಿಗೆ ಕನ್ನಡವನ್ನು ಕಲಿಸಿದ್ದೇವೆ. ಅವರು ಕಡಿಮೆ ಅವಧಿಯ ತರಬೇತಿ ಕ್ರಮಗಳಲ್ಲಿ ಸಮರ್ಥವಾಗಿ ಕನ್ನಡವನ್ನು ಕಲಿತಿದ್ದಾರೆ. ಹಲವರು ಕನ್ನಡದಲ್ಲಿ ಉತ್ತಮ ಆಡಳಿತ ನಡೆಸಿದ್ದಾರೆ. ಕೆಲವರು ಕನ್ನಡ ಕಾದಂಬರಿ, ನಾಟಕಗಳನ್ನು ತಮ್ಮ ತಮ್ಮ ಭಾಷೆಗೆ ಭಾಷಾಂತರಿಸಿದ್ದಾರೆ. ನಾಡಿನ ಸಾಮಾಜಿಕ ವಾತಾವರಣದಲ್ಲಿ ನೈಜವಾಗಿ ಬೆರೆತಿದ್ದಾರೆ.

ಇದೇ ವಿಧಾನವನ್ನು ಅನುಸರಿಸಿದರೆ ಇಂಗ್ಲಿಷ್ (ಅಥವಾ ಇನ್ಯಾವುದೇ ವಿದೇಶಿ) ಭಾಷೆಯನ್ನೂ ಅಗತ್ಯ ಆಧರಿಸಿ ಕಡಿಮೆ ಅವಧಿಯಲ್ಲಿ ಕಲಿಸಬಹುದು. ದೇಶದಲ್ಲಿ ಇಂಗ್ಲಿಷ್ ಭಾಷೆಯನ್ನು ಅಗತ್ಯಾಧಾರಿತ ರೀತಿಯಲ್ಲಿ ಕಲಿಸುವ ಅನೇಕ ಅಧಿಕೃತ ಸಂಸ್ಥೆಗಳಿವೆ.

ಭಾಷಾ ಕಲಿಕೆಯಲ್ಲಿ ಇಂಟರ್‌ನೆಟ್‌ ಮತ್ತು ಇತರ ಧ್ವನಿದೃಶ್ಯ ಮಾಧ್ಯಮಗಳ ಸಮರ್ಥ ಬಳಕೆಯಾಗುತ್ತಿದೆ. ಶಾಲಾ ಶಿಕ್ಷಣದ ಹೊರ ತಾಗಿಯೂ, ಅದರ ಹೊರಗೂ ಅಗತ್ಯಾಧಾರಿತ ಆಡುಮಾತಿನ ಇಂಗ್ಲಿಷ್‌ ಕಲಿಸುವ ಕೇಂದ್ರಗಳನ್ನು ಸರ್ಕಾರವೇ ತೆರೆಯಬೇಕು; ಈಗಿರುವ ಇಂಥ ಸಂಸ್ಥೆಗಳ ಪಠ್ಯಕ್ರಮವನ್ನು ಹೆಚ್ಚು ಪರಿಣಾಮಕಾರಿ ಆಗಿಸಿ, ಮನ್ನಣೆ ನೀಡಬೇಕು. ಸಾರ್ವಜನಿಕರೂ, ವೃತ್ತಿಪರರೂ ಇಂಗ್ಲಿಷ್‌ ಕಲಿಯಲು ಇದು ನೆರವಾಗುತ್ತದೆ.

ಈಗಿರುವ ಒಂದೇ ಸಮಸ್ಯೆಯೆಂದರೆ, ಶಿಕ್ಷಣದಲ್ಲಿ ಭಾಷೆಯ ಕಲಿಕೆ ಮತ್ತು ಭಾಷೆಯಲ್ಲಿ ಶಿಕ್ಷಣದ ಕಲಿಕೆ (ಭಾಷೆ ಮತ್ತು ಭಾಷಾ ಮಾಧ್ಯಮ).
ಇದಕ್ಕೆ ಕಾರಣವೆಂದರೆ ಇವುಗಳ ನಡುವಿನ ವ್ಯತ್ಯಾಸ ಮತ್ತು ಮಹತ್ವವನ್ನು ಶಿಕ್ಷಣ ಇಲಾಖೆಯ ತಜ್ಞರು ಅರಿಯದಿರುವುದು, ಅರಿತಿದ್ದರೂ ಅನುಸರಿಸದೇ ಇರುವುದು, ಸಾಹಿತಿಗಳು, ಸಿನಿಮಾ ಕಲಾವಿದರು, ಕನ್ನಡಾಭಿ­ಮಾನಿಗಳು, ಕನ್ನಡ ಹೋರಾಟಗಾರರು ಎಲ್ಲರೂ ಶಿಕ್ಷಣ ತಜ್ಞರಂತೆ ಆಗಿರುವುದು, ಭಾಷಾ ವಿಜ್ಞಾನಿಗಳು ಸಹ ಭಾರತೀಯ ಭಾಷಾ ಸಂಸ್ಥೆಯಂಥ ಅಧಿಕೃತ ಕೇಂದ್ರಗಳನ್ನು ಮೂಲೆಗುಂಪು ಮಾಡಿರುವುದೇ ಆಗಿದೆ. 
-(ಲೇಖಕರು ಭಾಷೆ ಮತ್ತು ಸಂವಹನ ತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT